ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌ ಟೂರ್ನಿ: ಹೋಟೆಲ್‌ ಭರ್ತಿ, ವಹಿವಾಟು ಜೋರು

28 ರಾಜ್ಯಗಳಿಂದ ಮಂಡ್ಯಕ್ಕೆ ಬಂದ ಸ್ಪರ್ಧಿಗಳು–ಪೋಷಕರು. ಆಟೊ, ಟ್ಯಾಕ್ಸಿಗಳಿಗೆ ಭರ್ಜರಿ ಬಾಡಿಗೆ
Last Updated 13 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಮಂಡ್ಯ: ನಗರದ ಹೊರವಲಯದ ಅಮರಾವತಿ ಹೋಟೆಲ್‌ನಲ್ಲಿ 34ನೇ ರಾಷ್ಟ್ರೀಯ 12 ವರ್ಷದೊಳಗಿನವರ ಚೆಸ್ ಟೂರ್ನಿ ನಡೆಯುತ್ತಿದ್ದು ನಗರ ಸೇರಿದಂತೆ ಮದ್ದೂರು, ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯ ಹೋಟೆಲ್‌ಗಳೆಲ್ಲವೂ ಭರ್ತಿಯಾಗಿವೆ. ಆಟೊ, ಟ್ಯಾಕ್ಸಿ ವಹಿವಾಟು ಭರ್ಜರಿಯಾಗಿ ನಡೆಯುತ್ತಿದೆ.

ಮಂಡ್ಯ ಚೆಸ್‌ ಅಕಾಡೆಮಿ ಸಾರಥ್ಯ, ತುಮಕೂರು ಚೆಸ್ ಸಂಸ್ಥೆ, ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ ಹಾಗೂ ಅಖಿಲ ಭಾರತ ಚೆಸ್‌ ಸಂಸ್ಥೆ ಸಹಯೋಗದಲ್ಲಿ ಟೂರ್ನಿ ಆಯೋಜನೆಗೊಂಡಿದ್ದು 28 ರಾಜ್ಯಗಳ 377 ಚೆಸ್‌ ಕ್ರೀಡಾಳುಗಳು ಮಂಡ್ಯಕ್ಕೆ ಬಂದಿದ್ದಾರೆ. ಅವರ ಜೊತೆ 600ಕ್ಕೂ ಹೆಚ್ಚು ಪೋಷಕರು ಬಂದಿದ್ದಾರೆ. ಏ.9ರಂದೇ ಆರಂಭವಾಗಿರುವ ಟೂರ್ನಿ ಏ.14ರವರೆಗೆ ನಡೆಯಲಿದೆ.

ಎಲ್ಲರಿಗೂ ಹೋಟೆಲ್‌ಗಳಲ್ಲಿ ತಂಗಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿಕೊಡಲಾಗಿದೆ.ಸಣ್ಣಪುಟ್ಟ ಲಾಡ್ಜ್‌ಗಳೂ ಸೇರಿದಂತೆ ಎಲ್ಲಾ ಹೋಟೆಲ್‌ಗಳು ಚೆಸ್‌ ಸ್ಪರ್ಧಿಗಳು ಹಾಗೂ ಪೋಷಕರಿಂದ ತುಂಬಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಯಾವುದೇ ಹೋಟೆಲ್‌ಗೆ ತೆರಳಿದರೂ ಕೊಠಡಿಗಳು ಖಾಲಿ ಇಲ್ಲದಾಗಿದೆ.

ಜೊತೆಗೆ ಮದ್ದೂರಿನ ಹೋಟೆಲ್‌ಗಳಲ್ಲೂ ಸ್ಪರ್ಧಿಗಳು ತಂಗಿದ್ದಾರೆ. ರಾಜ್ಯ, ರಾಷ್ಟ್ರೀಯ ಚೆಸ್‌ ಸಂಸ್ಥೆಯಿಂದ ಬಂದಿರುವ ತೀರ್ಪುಗಾರರು ಹಾಗೂ ಇತರ ಸಿಬ್ಬಂದಿಯೂ ಹೋಟೆಲ್‌ಗಳಲ್ಲಿ ತಂಗಿದ್ದಾರೆ. ಏ.14ರಂದು ಸಂಜೆ ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ಅಲ್ಲಿಯವರೆಗೂ ಮಕ್ಕಳು, ಪೋಷಕರು ಇಲ್ಲಿ ತಂಗಲಿದ್ದಾರೆ.

ಆಟೊಗಳಿಗೆ ಭರ್ಜರಿ ವಹಿವಾಟು: ವಿವಿಧೆಡೆ ಬೇರೆ ಹೋಟೆಗಳಲ್ಲಿ ತಂಗಿರುವ ಸ್ಪರ್ಧಿಗಳನ್ನು ಟೂರ್ನಿ ನಡೆಯುತ್ತಿರುವ ಸ್ಥಳಕ್ಕೆ ಕರೆದುಕೊಂಡು ಬರಲು, ಮತ್ತೆ ವಾಪಸ್‌ ಕರೆದೊಯ್ಯಲು ಜನರು ಆಟೊ, ಟ್ಯಾಕ್ಸಿಗಳನ್ನು ಬಳಸುತ್ತಿದ್ದಾರೆ. ಹೆಚ್ಚಾಗಿ ಆಟೊ ಬಳಕೆಯಾಗುತ್ತಿದ್ದು ಆಟೊ ಚಾಲಕರಿಗೆ ಭರ್ಜರಿ ವಹಿವಾಟು ನಡೆಯುತ್ತಿದೆ.

ಹೋಟೆಲ್‌ನಿಂದ ಸ್ಪರ್ಧೆಯ ಸ್ಥಳಕ್ಕೆ ಕರೆದುಕೊಂಡು ಬಂದು ಮತ್ತೆ ಕರೆದೊಯ್ಯಲು ಆಟೊ ಚಾಲಕರು ₹ 500 ಪಡೆಯುತ್ತಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಕೋವಿಡ್‌ನಿಂದ ಕಂಗಾಲಾಗಿದ್ದ ಆಟೊ ಚಾಲಕರು ಕಳೆದೊಂದು ವಾರದಿಂದ ಉತ್ತಮ ಬಾಡಿಗೆ ಕಂಡಿದ್ದಾರೆ. ಟ್ಯಾಕ್ಸಿ ಮಾಲೀಕರಿಗೆ ಕೂಡ ಬಾಡಿಗೆ ಸಿಕ್ಕಿದೆ.

ಕೇವಲ ಹೋಟೆಲ್‌, ಆಟೊ, ಟ್ಯಾಕ್ಸಿಗಳಿಗೆ ಮಾತ್ರವಲ್ಲದೇ ಇತರ ಸಣ್ಣಪುಟ್ಟ ರೆಸ್ಟೋರೆಂಟ್‌ಗಳು, ಹೆದ್ದಾರಿ ಸಮೀಪ ಇರುವ ಅಂಗಡಿ, ಬಟ್ಟೆ ಅಂಗಡಿಗಳಲ್ಲಿ ಉತ್ತಮ ವ್ಯಾಪಾರ ನಡೆಯುತ್ತಿದೆ. ರಸ್ತೆ ಬದಿ ಎಳನೀರು, ಕಲ್ಲಂಗಡಿ ಹಣ್ಣು ಮಾರಾಟ ಮಾಡುತ್ತಿರುವ ವರ್ತಕರೂ ಉತ್ತಮ ವಹಿವಾಟು ನಡೆಸಿದ್ದಾರೆ.

ಹೊರರಾಜ್ಯಗಳ ಜನರು ಮಂಡ್ಯದ ಪ್ರವಾಸಿ ತಾಣಗಳು, ದೇವಾಲಯಗಳಿಗೂ ಭೇಟಿ ನೀಡುತ್ತಿದ್ದು ಅಲ್ಲಿಯೂ ವಹಿವಾಟು ಜೋರಾಗಿದೆ. ಕೆಲವರು ಇನ್ನೂ ಒಂದೆರಡು ದಿನ ಉಳಿದು ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳಲಿದ್ದಾರೆ.

‘ಸಕ್ಕರೆ ನಾಡು ಮಂಡ್ಯ ಜಿಲ್ಲೆ ಅತ್ಯಂತ ಸುಂದರ ಪ್ರದೇಶ. ಚೆಸ್‌ ಟೂರ್ನಿಗಾಗಿ ಮಗನನ್ನು ಕರೆದುಕೊಂಡು ಬಂದಿದ್ದೇನೆ. ಟೂರ್ನಿ ಮುಗಿದ ನಂತರ ಕೆಆರ್‌ಎಸ್‌ ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ತವರಿಗೆ ಮರಳುತ್ತೇನೆ’ ಎಂದು ಹಿಮಾಚಲ ಪ್ರದೇಶದ ದೀಪಕ್‌ ತಿಳಿಸಿದರು.

***

ಶಿಸ್ತಿನ ಸಿಪಾಯಿಗಳ ಸಾರಥ್ಯ

ಮಂಡ್ಯ ಚೆಸ್‌ ಅಕಾಡೆಮಿಯ ಮುಖ್ಯಸ್ಥರಾದ ಮಂಜುನಾಥ್‌ ಜೈನ್‌, ಮಾಧುರಿ ಜೈನ್‌ ಸಾರಥ್ಯದಲ್ಲಿ ಅತ್ಯಂತ ಶಿಸ್ತಿನಿಂದ ಟೂರ್ನಿ ಆಯೋಜನೆಗೊಂಡಿದೆ. ಅವರ ಜೊತೆಗೆ ರಾಜ್ಯ ಚೆಸ್‌ ಸಂಸ್ಥೆಯ ಎಂ.ವಿ.ರಾಘವೇಂದ್ರ ಅವರೂ ಎಲ್ಲಾ ವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ.

ಹೊರರಾಜ್ಯಗಳಿಂದ ಬಂದವರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಅಂತರರಾಷ್ಟ್ರೀಯ ಮಟ್ಟದ ಚೆಸ್‌ ಕ್ರೀಡಾಪಟುಗಳಾದ ಮುಂಜುನಾಥ್‌ ಜೈನ್‌– ಮಾಧುರಿ ದಂಪತಿ ಮಂಡ್ಯದಂತಹ ನಗರಕ್ಕೆ ರಾಷ್ಟ್ರೀಯ ಟೂರ್ನಿ ತಂದು ಜಿಲ್ಲೆಗೂ ಕೀರ್ತಿ ತಂದಿದ್ದಾರೆ. ಹಲವು ಅಂತರರಾಷ್ಟ್ರೀಯ ಮಟ್ಟದ ವೆಬ್‌ಸೈಟ್‌ಗಳಲ್ಲಿ ಟೂರ್ನಿ ನೇರ ಪ್ರಸಾರ ಕಾಣುತ್ತಿದೆ.

***

ಕೇಂದ್ರ ಕ್ರೀಡಾ ಸಚಿವರ ಪುತ್ರನೂ ಸ್ಪರ್ಧಿ

ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್‌ ಠಾಕೂರ್‌ ಅವರ ಪುತ್ರ ಉದಯ್‌ ವೀರ್‌ಸಿಂಗ್‌ ಠಾಕೂರ್‌ ಕೂಡ ಚೆಸ್‌ ಟೂರ್ನಿಯಲ್ಲಿ ಸ್ಪರ್ಧಿಯಾಗಿದ್ದಾರೆ. ಸಚಿವರ ಪತ್ನಿ ಶಿಫಾಲಿ ಠಾಕೂರ್‌ ಮಗನೊಂದಿಗೆ ಬಂದು ಅಮರಾವತಿ ಹೋಟೆಲ್‌ನಲ್ಲೇ ತಂಗಿದ್ದಾರೆ. ಯಾವುದೇ ಪೊಲೀಸ್‌ ಭದ್ರತೆ ಪಡೆಯದೇ ಸಾಮಾನ್ಯರಂತೆ ಶಿಫಾಲಿ ಅವರು ನಗರದ ದೇವಾಲಯಗಳಿಗೆ, ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT