ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯವಿವಾಹ: ಸಂತ್ರಸ್ತ ಬಾಲಕಿಯ ಅಪಹರಣ?

ಪ್ರಕರಣ ದಾಖಲು ಮಾಡದ ಅಧಿಕಾರಿಗಳು, ಜಿಲ್ಲೆಯಲ್ಲಿ ಹೆಚ್ಚುತ್ತಲೇ ಇವೆ ಮಕ್ಕಳ ಮದುವೆ
Last Updated 5 ಡಿಸೆಂಬರ್ 2020, 12:08 IST
ಅಕ್ಷರ ಗಾತ್ರ

ಮಂಡ್ಯ: ಬಾಲ್ಯವಿವಾಹ ಪ್ರಕರಣವೊಂದರಲ್ಲಿ ಸಂತ್ರಸ್ತ ಬಾಲಕಿಗೆ ಬಾಲಮಂದಿರಲ್ಲಿ ರಕ್ಷಣೆ ನೀಡಬೇಕು ಎಂದು ಮಕ್ಕಳ ಕಲ್ಯಾಣ ಸಮಿತಿ ಆದೇಶ ನೀಡಿದ್ದರೂ ಆರೋಪಿಗಳು ಬಾಲಕಿಯನ್ನು ಬಲವಂತವಾಗಿ ಗಂಡನಮನೆಗೆ ಕಳುಹಿಸಿದ್ದಾರೆ. ಸಂತ್ರಸ್ತೆಯನ್ನು ಅಪಹರಣ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿದೆ.

ಕೆ.ಆರ್‌.ಪೇಟೆ ತಾಲ್ಲೂಕು, ಶೀಳನೆರೆ ಸಮೀಪದ ಗ್ರಾಮವೊಂದರ 15 ವರ್ಷದ ಬಾಲಕಿಯನ್ನು ಈಚೆಗೆ ಯುವಕನೊಬ್ಬನ ಜೊತೆ ವಿವಾಹ ಮಾಡಲಾಗಿತ್ತು. ಈ ವಿಚಾರ ತಿಳಿದ ವ್ಯಕ್ತಿಯೊಬ್ಬರು ಮಕ್ಕಳ ಸಹಾಯವಾಣಿಗೆ (1098) ಕರೆ ಮಾಡಿ ಬಾಲ್ಯವಿವಾಹದ ಮಾಹಿತಿ ನೀಡಿದ್ದರು. ನಂತರ ಪ್ರಕರಣ ಮಕ್ಕಳ ಕಲ್ಯಾಣ ಸಮಿತಿ ಮೆಟ್ಟಿಲೇರಿತ್ತು.

ಡಿ.4ರಂದು ಸಮಿತಿಯು ವಿಚಾರಣೆ ನಡೆಸಿದಾಗ ಬಾಲ್ಯವಿವಾಹ ನಡೆದಿರುವುದು ಸಾಬೀತಾಗಿತ್ತು. ಬಾಲ್ಯವಿವಾಹಕ್ಕೆ ಕಾರಣರಾದವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು, ಸಂತ್ರಸ್ತೆಗೆ ಬಾಲಕಿಯರ ಬಾಲಮಂದಿರದಲ್ಲಿ ರಕ್ಷಣೆ ಕಲ್ಪಿಸಬೇಕು ಎಂದು ಸಮಿತಿ ಆದೇಶ ನೀಡಿತ್ತು. ತಕ್ಷಣವೇ ಬಾಲಕಿಯನ್ನು ವಶಕ್ಕೆ ಪಡೆಯುವಂತೆ ಬಾಲಮಂದಿರದ ಅಧೀಕ್ಷಕರಿಗೆ ಸೂಚನೆ ನೀಡಲಾಗಿತ್ತು.

ಆದರೆ, ಬಾಲಕಿಯರ ಸಂಬಂಧಿಕರು ಬಾಲಮಂದಿರದ ಅಧೀಕ್ಷಕರು ಹಾಗೂ ರಕ್ಷಕರ ಜಗಳವಾಡಿ, ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ ಬಲವಂತವಾಗಿ ಬಾಲಕಿಯನ್ನು ಗಂಡನಮನೆಗೆ ಕಳುಹಿಸಿದ್ದರು. ಬಾಲಕಿಯ ತಾಯಿ, ದೊಡ್ಡಮ್ಮ ಹಾಗೂ ವರನ ತಂದೆ ಸಿಬ್ಬಂದಿಯ ಜೊತೆ ಜಗಳವಾಡಿ ಕರೆದುಕೊಂಡು ಹೋಗಿದ್ದರು.

ಶಾಸಕರ ಆಪ್ತ ಸಹಾಯಕ ಪ್ರಭಾವ: ವಿಧಾನ ಪರಿಷತ್‌ ಸದಸ್ಯರೊಬ್ಬರ ಆಪ್ತ ಸಹಾಯಕನೊಬ್ಬ ತನ್ನ ಪ್ರಭಾವ ಬಳಸಿ ಸಂತ್ರಸ್ತೆಯನ್ನು ಗಂಡನಮನೆಗೆ ಕಳುಹಿಸಲು ಪ್ರಮುಖ ಪಾತ್ರ ವಹಿಸಿದ್ದಾನೆ. ಆತ ಅಧಿಕಾರಿಗಳಿಗೆ ಬೆದರಿಕೆ ಹಾಕಿ ಅಪಹರಣಕ್ಕೆ ಸಹಾಯ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

‘ಸಮಿತಿಯು ಆದೇಶ ನೀಡಿ 24 ಗಂಟೆ ಕಳೆದರೂ ಅಧಿಕಾರಿಗಳು ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಿಲ್ಲ. ನ್ಯಾಯಿಕ ಸಂಸ್ಥೆಯಾಗಿರುವ ಮಕ್ಕಳ ಕಲ್ಯಾಣ ಸಮಿತಿಯ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಲಾಗಿದೆ. ಅಧಿಕಾರಿಗಳು ಕೂಡಲೇ ಅಪಹರಣ ಪ್ರಕರಣ ದಾಖಲು ಮಾಡಬೇಕು. ಬಾಲ್ಯವಿವಾಹವನ್ನು ರದ್ದು ಮಾಡಬೇಕು’ ಎಂದು ಬಾಲ್ಯವಿವಾಹ ಕುರಿತು ಸಹಾಯವಾಣಿಗೆ ಮಾಹಿತಿ ನೀಡಿದ್ದ ವ್ಯಕ್ತಿ ಒತ್ತಾಯಿಸಿದರು.

‘ಸಮಿತಿ ಆದೇಶ ನೀಡಿದ ನಂತರ ಸಂತ್ರಸ್ತೆಯ ಸಂಬಂಧಿಕರು ಬಲವಂತವಾಗಿ ಕರೆದುಕೊಂಡು ಹೋದರು. ಏರುಧ್ವನಿಯಲ್ಲಿ ಮಾತನಾಡುತ್ತಾ ಜಗಳಕ್ಕೆ ಬಂದರು. ನಾವು ತಡೆಯಲು ಸಾಧ್ಯವಾಗಲಿಲ್ಲ’ ಎಂದು ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ಶೋಭಾ ತಿಳಿಸಿದರು.

ಉಪ ನಿರ್ದೇಶಕ ಭೇಟಿ: ಘಟನೆ ನಡೆದ ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಸ್‌.ರಾಜ್‌ಮೂರ್ತಿ ಶನಿವಾರ ಬಾಲಮಂದಿರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಸಮಿತಿಯ ಆದೇಶ ಉಲ್ಲಂಘಿಸಿ ಬಾಲಕಿಯರನ್ನು ಕರೆದುಕೊಂಡು ಹೋಗಿದ್ದಾರೆ. ಅವರ ವಿರುದ್ಧ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲು ಮಾಡಲಾಗುವುದು. ಬಾಲ್ಯವಿವಾಹಕ್ಕೆ ಕಾರಣರಾದವರ ವಿರುದ್ದ ಎಫ್‌ಐಆರ್‌ ಮಾಡುವಂತೆ ಪೊಲೀಸರನ್ನು ಕೋರಲಾಗುವುದು’ ಎಂದು ಎಸ್‌.ರಾಜಮೂರ್ತಿ ಹೇಳಿದರು.

****

ತಿಂಗಳಲ್ಲಿ 12 ಪ್ರಕರಣ

ಮಂಡ್ಯ ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕಳೆದೊಂದು ತಿಂಗಳಲ್ಲಿ 12 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿವೆ. ನವೆಂಬರ್‌ನಲ್ಲಿ 7, ಕಳೆದ 5 ದಿನದಲ್ಲಿ 5 ಬಾಲ್ಯವಿವಾಹಗಳು ನಡೆದಿವೆ. ಕಳೆದ ಆರು ತಿಂಗಳಲ್ಲಿ 100ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ.

‘ಪೊಲೀಸರು ಹಾಗೂ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆಯಿಂದ ಬಾಲ್ಯವಿವಾಹ ಪ್ರಕರಣ ಹೆಚ್ಚಾಗುತ್ತಿವೆ. ಎಷ್ಟೋ ಪ್ರಕರಣ ವರದಿಯಾಗುತ್ತಿಲ್ಲ. ಹಲವು ಪ್ರಕರಣಗಳನ್ನು ಮಕ್ಕಳ ಕಲ್ಯಾಣ ಸಮಿತಿಯ ಗಮನಕ್ಕೆ ತಾರದೆ ಅಧಿಕಾರಿಗಳು ರಾಜಿಸಂಧಾನದ ಮೂಲಕ ಅಂತ್ಯ ಹಾಡುತ್ತಿದ್ದಾರೆ’ ಎಂದು ವಕೀಲ ರಾಮಯ್ಯ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT