ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ ಮುಖಂಡರ ಮಾತಿಗೆ ಜೆಡಿಎಸ್‌ ನಾಯಕರ ಚಪ್ಪಾಳೆ: ಸಿಎಂ ಸಿದ್ದರಾಮಯ್ಯ ಲೇವಡಿ

Published 10 ಮಾರ್ಚ್ 2024, 15:53 IST
Last Updated 10 ಮಾರ್ಚ್ 2024, 15:53 IST
ಅಕ್ಷರ ಗಾತ್ರ

ಮಂಡ್ಯ: ‘ಬಿಜೆಪಿ ಮುಖಂಡರ ಮಾತಿಗೆ ಜೆಡಿಎಸ್‌ ನಾಯಕರು ಚಪ್ಪಾಳೆ ತಟ್ಟುತ್ತಿದ್ದಾರೆ, ಬಿಜೆಪಿಯವರ ನಡೆಗೆ ಜೆಡಿಎಸ್‌ನವರು ತಾಳ ಹಾಕುತ್ತಿದ್ದಾರೆ. ಜನರು ಎಂದಿಗೂ ಈ ಅಪವಿತ್ರ ಮೈತ್ರಿಯನ್ನು ಒಪ್ಪುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ಭಾನುವಾರ ಮಂಡ್ಯ ವಿವಿ ಆವರಣದಲ್ಲಿ ನಡೆದ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು..

‘ಮುಂದಿನ ಜನ್ಮವೊಂದಿದ್ದರೆ ನಾನು ಮುಸ್ಲಿಮನಾಗಿ ಹುಟ್ಟುತ್ತೇನೆ ಎಂದು ಹೇಳಿದ್ದ ಎಚ್‌.ಡಿ.ದೇವೇಗೌಡರು ಈಗ ಕೋಮುವಾದಿ ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ. ಯಡಿಯೂರಪ್ಪ ಅವರು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದರು. ಈಗ ಇಬ್ಬರೂ ಒಂದಾದರೆ ಜನರು ಒಪ್ಪುತ್ತಾರೆಯೇ? ಮುಂದಿನ ಚುನಾವಣೆಯಲ್ಲಿ ಎರಡೂ ಪಕ್ಷಗಳ ಮುಖಂಡರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ’ ಎಂದರು.

‘ಬಿಜೆಪಿ ಹಾಗೂ ಜೆಡಿಎಸ್‌ ಎರಡೂ ಪಕ್ಷಗಳು 113 ಸ್ಥಾನ ಪಡೆದು ಅಧಿಕಾರ ಹಿಡಿದಿಲ್ಲ. ಬಿಜೆಪಿಯವರು ಆಪರೇಷನ್‌ ಕಮಲ ಮಾಡಿ ಅಧಿಕಾರ ಮಾಡಿದ್ದರೆ ಜೆಡಿಎಸ್‌ನವರು ಇನ್ನೊಂದು ಪಕ್ಷದ ಹೆಗಲ ಮೇಲೆ ಕೂತು ಅಧಿಕಾರ ನಡೆಸಿದೆ. ನಾವು ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರುವುದನ್ನು ತಡೆಯಲು ಕುಮಾರಸ್ವಾಮಿ ಮನೆಗೆ ಹೋಗಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಆದರೆ ಅವರು ಅಧಿಕಾರ ಉಳಿಸಿಕೊಳ್ಳಲಿಲ್ಲ’ ಎಂದು ಆರೋಪಿಸಿದರು.

‘ನಾವು ಚುನಾವಣೆ ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ. ಕಳೆದ ವರ್ಷ ಜೂನ್‌ 11ರಂದು ಶಕ್ತಿ ಯೋಜನೆಗೆ ಚಾಲನೆ ನೀಡಿದೆವು. ಇಲ್ಲಿಯವೆರೆಗೂ ಮಂಡ್ಯ ಜಿಲ್ಲೆಯಲ್ಲಿ 4.67 ಕೋಟಿ ಮಹಿಳೆಯರು ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ರಾಜ್ಯದಾದ್ಯಂತ 170 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ’ ಎಂದರು.

‘ಜುಲೈ ತಿಂಗಳಲ್ಲಿ ನಾವು ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿದೆವು. ಕೇಂದ್ರ ಸರ್ಕಾರ ಅಕ್ಕಿ ನೀಡದೇ ನಮ್ಮ ಭರವಸೆ ಈಡೇರಿಸುವುದನ್ನು ತಡೆಯಲು ಪ್ರಯತ್ನ ಮಾಡಿತು. ಆದರೆ ನಾವು ಕೊಟ್ಟ ಮಾತಿನಂತೆ 5 ಕೆ.ಜಿ ಅಕ್ಕಿಯ ಬದಲಾಗಿ ಪ್ರತಿ ತಿಂಗಳು ಹಣ ನೀಡುತ್ತಿದ್ದೇವೆ. ಇಲ್ಲಿಯವರೆಗೂ ಮಂಡ್ಯ ಜಿಲ್ಲೆಯಲ್ಲಿ 4.39 ಲಕ್ಷ ಜನರು ₹ 166 ಕೋಟಿ ಹಣ ಪಡೆದಿದ್ದಾರೆ’ ಎಂದರು.

‘ಬರಗಾಲ, ಬೆಲೆ ಏರಿಕೆಯಿಂದಾಗಿ ಜನರು ಸಂಕಷ್ಟ ಸ್ಥಿತಿ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಅನುಕೂಲವಾಗಿದೆ. ಪ್ರತಿ ಕುಟುಂಬಕ್ಕೆ ತಿಂಗಳಿಗೆ ₹ 5– 6 ಸಾವಿರ ಹಣ ಸಂದಾಯವಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಗಾಗಿ ಬಜೆಟ್‌ನಲ್ಲಿ ₹ 52 ಸಾವಿರ ಕೋಟಿ ಮೀಸಲಿಡಲಾಗಿದೆ’ ಎಂದರು.

‘ಮೈಷುಗರ್‌ ಕಾರ್ಖಾನೆ ಪುನಶ್ಚೇತನಕ್ಕೆ ಸಚಿವ ಚಲುವರಾಯಸ್ವಾಮಿ ಅವರು ₹ 25 ಕೋಟಿ ಕೇಳಿದರು. ಆದರೆ,  ₹ 50 ಕೋಟಿ ಹಣ ನೀಡಿ ಕಾರ್ಖಾನೆ ಅಭಿವೃದ್ಧಿಪಡಿಸಿದೆವು. ಮಂಡ್ಯ ರೈತರ ಜಿಲ್ಲೆಯಾಗಿರುವ ಹಿನ್ನೆಲೆಯಲ್ಲಿ ಚಲುವರಾಯಸ್ವಾಮಿ ಅವರಿಗೆ ಕೃಷಿ ಖಾತೆಯನ್ನೇ ನೀಡಿದ್ದೇವೆ. ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ತೊಂದರೆ ನೀಡಲು ಹಲವರು ಯತ್ನಿಸಿದರು, ಆದರೂ ಅವರು ಎಲ್ಲವನ್ನು ಎದುರಿಸಿ ಕೆಲಸ ಮಾಡುತ್ತಿದ್ದಾರೆ’ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ ‘ಜೈಕಾರ ಹಾಕಿಸಿಕೊಳ್ಳಲು, ಹೂವಿನ ಹಾರ ಹಾಕಿಸಿಕೊಳ್ಳಲು ನಾವು ಇಲ್ಲಿಗೆ ಬಂದಿಲ್ಲ. ಜಿಲ್ಲೆಯ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸರ್ಕಾರ ಬರಲು ಕಾರಣಕರ್ತರಾದ, ಗ್ಯಾರಂಟಿ ಯೋಜನೆ ಜಾರಿಗೆ ಅವಕಾಶ ನೀಡಿದ ಸಾರ್ವಜನಿಕರಿಗೆ ಧನ್ಯವಾದ ಹೇಳಲು ಬಂದಿದ್ದೇವೆ. ಮುಂದೆಯೂ ಕಾಂಗ್ರೆಸ್‌ ಕೈಬಲಪಡಿಸುವಂತೆ ಮನವಿ ಮಾಡಲು ಬಂದಿದ್ದೇವೆ’ಎಂದರು.

‘ದೇವರು 2 ಆಯ್ಕೆ ಕೊಡುತ್ತಾನೆ, ಕೊಟ್ಟು ಹೋಗಬೇಕು, ಇಲ್ಲವೇ ಬಿಟ್ಟು ಹೋಗಬೇಕು. ಹೀಗಾಗಿ ದೇವರು ಕೊಟ್ಟ ಅವಕಾಶದಲ್ಲಿ ಜನ ಸೇವೆ ಮಾಡಬೇಕು. ಮುಂದೆಯೂ ಅವಕಾಶ ನೀಡಿದರೆ ಜನರ ಸೇವೆ ಮಾಡುತ್ತೇವೆ. ಮಂಡ್ಯ ಜಿಲ್ಲೆಗೆ ಕೆ.ವಿ.ಶಂಕರಗೌಡ, ಜಿ.ಮಾದೇಗೌಡ, ಎಸ್‌.ಎಂ.ಕೃಷ್ಣ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಹಾದಿಯಲ್ಲಿಯೇ ನಾವೂ ನಡೆಯುತ್ತೇವೆ’ ಎಂದರು.

‘ನಮ್ಮ ಸರ್ಕಾರ ಬಂದು ಕೇವಲ 8 ತಿಂಗಳಾಗಿದೆ. ಇಲ್ಲಿಯವರೆಗೂ ಜಿಲ್ಲೆಯ ನೀರಾವರಿ ಯೋಜನೆಗಳು, ಕೆರೆ ತುಂಬಿಸುವ ಕಾರ್ಯ, ನಾಲೆಗಳ ಆಧುನೀಕರಣಕ್ಕಾಗಿ ₹ 2 ಸಾವಿರ ಅನುದಾನ ಕೊಟ್ಟಿದ್ದೇವೆ. ಬಿಜೆಪಿ, ಜೆಡಿಎಸ್‌ ಪಕ್ಷಗಳೂ ಅಧಿಕಾರ ನಡೆಸಿವೆ. ಅವರು ಮಂಡ್ಯಕ್ಕೆ ಇಷ್ಟೊಂದು ಹಣ ಕೊಟ್ಟಿದ್ದಾರಾ? ಈ ಕುರಿತು ಜೆಡಿಎಸ್, ಬಿಜೆಪಿ ಮುಖಂಡರು ಬಹಿರಂಗ ಚರ್ಚೆಗೆ ಬರಲಿ’ ಎಂದು ಸವಾಲು ಹಾಕಿದರು.

ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ, ಶಾಸಕರಾದ ಗಣಿಗ ರವಿಕುಮಾರ್‌, ಪಿ.ಎಂ.ನರೇಂದ್ರಸ್ವಾಮಿ, ರಮೇಶ್‌ ಬಂಡಿಸಿದ್ದೇಗೌಡ, ದರ್ಶನ್‌ ಪುಟ್ಟಣ್ಣಯ್ಯ, ಕದಲೂರು ಉದಯ್‌, ಮರಿತಿಬ್ಬೇಗೌಡ, ದಿನೇಶ್‌ ಗೂಳಿಗೌಡ, ಮಧು ಜಿ ಮಾದೇಗೌಡ, ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ, ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್‌.ಶಿವಣ್ಣ, ಮೈಷುಗರ್‌ ಅಧ್ಯಕ್ಷ ಸಿ.ಡಿ.ಗಂಗಾಧರ್‌, ಜಿಲ್ಲಾಧಿಕಾರಿ ಕುಮಾರ ಇದ್ದರು.

‘ಸಿಆರ್‌ಎಸ್‌ ಧರ್ಮರಾಯ ಪಿಎಂಎನ್‌ ಭೀಮ’

‘ಯಶಸ್ವಿಯಾಗಲು ಧರ್ಮರಾಯನ ಧರ್ಮತ್ವ ಇರಬೇಕು ಕರ್ಣನ ಕರುಣೆ ಇರಬೇಕು ಅರ್ಜುನನ ಗುರಿ ಇರಬೇಕು  ಭೀಮನಂತಹ ಬಲ ಇರಬೇಕು ವಿದುರನ ನೀತಿ ಇರಬೇಕು ಕೃಷ್ಣನ ತಂತ್ರ ಇರಬೇಕು. ಇದೇ ರೀತಿ ಮಂಡ್ಯ ಜಿಲ್ಲೆಯಲ್ಲಿ ಸಚಿವ ಚಲುವರಾಯಸ್ವಾಮಿ ಧರ್ಮರಾಯನಂತೆ ಪಿ.ಎಂ.ನರೇಂದ್ರಸ್ವಾಮಿ ಭೀಮನಂತೆ ಕೆಲಸ ಮಾಡುತ್ತಿದ್ದಾರೆ’ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು. ‘ನಾನು ಕಾಂಗ್ರೆಸ್‌ ಅಧ್ಯಕ್ಷನಾಗಿ ಮಾರ್ಚ್‌ 10ಕ್ಕೆ 4 ವರ್ಷವಾಯಿತು. ಮಂಡ್ಯದ ಗಂಡು ಭೂಮಿಯಲ್ಲಿ ನಮ್ಮ ಪಕ್ಷ ಇಂದು ಯಶಸ್ವಿಯಾಗಿದೆ. ವಿಧಾನ ಪರಿಷತ್‌ ವಿಧಾನ ಸಭೆಯಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ. ಇದಕ್ಕಿಂತ ಭಾಗ್ಯ ನಮಗೆ ಇನ್ನೇನು ಬೇಕು? ನಾವು ನಿಮ್ಮ ಋಣ ತೀರಿಸುತ್ತೇವೆ’ ಎಂದರು.

‘ಹೋಗುವವರು ಹೋಗಲಿ ಬಿಡಿ’

ಮುಖ್ಯಮಂತ್ರಿ ಮಾತು ಆರಂಭಿಸುತ್ತಿದ್ದಂತೆ ಜನರು ಊಟಕ್ಕೆ ತೆರಳಲು ಸಿದ್ಧರಾಗುತ್ತಿದ್ದರು. ಆಗ ಸಚಿವ ಚಲುವರಾಯಸ್ವಾಮಿ ಅವರು ಯಾರೂ ಎದ್ದು ಹೋಗದಂತೆ ಪರಿಪರಿಯಾಗಿ ಬೇಡಿಕೊಂಡರು. ‘ಬೆಳಿಗ್ಗೆ ಊಟ ಕೊಟ್ಟಿದ್ದೇವೆ ಮಜ್ಜಿಗೆ ಕೊಟ್ಟಿದ್ದೇವೆ ಮಧ್ಯಾಹ್ನ ಊಟ ಕೊಡುತ್ತೇವೆ ಮುಖ್ಯಮಂತ್ರಿ ಮಾತು ಮುಗಿಸುವವರೆಗೂ ಯಾರೂ ಹೋಗಬೇಡಿ ನಿಮ್ಮ ಕಾಲಿಡಿದು ಬೇಡಿಕೊಳ್ಳುತ್ತೇನೆ’ ಎಂದು ಕೇಳಿಕೊಂಡರು ಆಗ ಮುಖ್ಯಮಂತ್ರಿಗಳು ‘ಹೋಗುವವರು ಹೋಗಲಿ ಬಿಡಿ. ನನ್ನ ಭಾಷಣ ಕೇಳಲು ಇಷ್ಟವಿದ್ದವರು ಕುಳಿತುಕೊಳ್ಳಲಿ ಊಟ ಮಾಡಬೇಕು ಎಂತಿದ್ದರೆ ಹೋಗಲಿ ಬಿಡಿ’ ಎಂದರು. ಆದರೂ ಚಲುವರಾಯಸ್ವಾಮಿ ಅವರು ಜನರಲ್ಲಿ ಮನವಿ ಮಾಡಿ ಕೂರಿಸುವಲ್ಲಿ ಯಶಸ್ವಿಯಾದರು.

ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ
ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT