ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ

ರಾಜ್ಯ ಮುಖಂಡರ ಮನೆ ಬಾಗಿಲು ತಟ್ಟುತ್ತಿರುವ ಆಕಾಂಕ್ಷಿಗಳು, ನೇಮಕಾತಿಯತ್ತ ಎಲ್ಲರ ಚಿತ್ತ
Last Updated 17 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಮಂಡ್ಯ: ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್‌ ಅವರ ಅವಧಿ ಮುಕ್ತಾಯವಾಗಿದ್ದು ಹೊಸ ಆಯ್ಕೆಗೆ ಒತ್ತಡ ಹೆಚ್ಚಾಗುತ್ತಿದೆ. ನೂತನವಾಗಿ ಅಧ್ಯಕ್ಷ ಗಾದಿಗೇರಲು ಮುಖಂಡರಲ್ಲಿ ಪೈಪೋಟಿ ಏರ್ಪಟ್ಟಿದ್ದು ಎಲ್ಲರೂ ರಾಜ್ಯ ಮುಖಂಡರ ಕಚೇರಿ, ಮನೆಗೆ ಎಡತಾಕುತ್ತಿದ್ದಾರೆ.

ಜಿಲ್ಲಾ ಘಟಕದ ಅಧ್ಯಕ್ಷರ ಅವಧಿ ಮೂರು ವರ್ಷ. ಗಂಗಾಧರ್‌ ನೇಮಕವಾಗಿ ಮೂರುವರೆ ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಮುಖಂಡರು ಹೊಸ ಆಯ್ಕೆಗೆ ಒತ್ತಾಯಿಸುತ್ತಿದ್ದಾರೆ. ಸ್ಥಳೀಯ ಮುಖಂಡರಲ್ಲಿ 3–4 ಗುಂಪುಗಳಿದ್ದು ತಮ್ಮ ನಾಯಕರ ಜೊತೆಗೂಡಿ ರಾಜ್ಯ ಮುಖಂಡರಿಗೆ ಒತ್ತಡ ಹಾಕುತ್ತಿದ್ದಾರೆ. ರಾಜ್ಯದ 15 ಜಿಲ್ಲೆಗಳ ಜಿಲ್ಲಾಧ್ಯಕ್ಷರ ಬದಲಾವಣೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಸಿರು ನಿಶಾನೆ ತೋರಿದ್ದು ಅದರಲ್ಲಿ ಮಂಡ್ಯ ಕೂಡ ಇದೆ ಎಂದು ಮೂಲಗಳು ತಿಳಿಸಿವೆ.

ಹಾಲಿ ಅಧ್ಯಕ್ಷ ಸಿ.ಡಿ.ಗಂಗಾಧರ್‌ ಮತ್ತೊಂದು ಅವಧಿಗೆ ಪ್ರಯತ್ನಿಸಿದ್ದು ಕೆಲ ಮಾಜಿ ಶಾಸಕರು ಅವರ ಪರವಾಗಿ ನಿಂತಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಹೊಸ ನೇಮಕಾತಿಗೆ ವೀಕ್ಷಕರು ನೇಮಕಗೊಳ್ಳಬೇಕು, ಆಕಾಂಕ್ಷಿಗಳ ಮನವಿ ಸ್ವೀಕರಿಸಿ, ಕೆಪಿಸಿಸಿ ಕಚೇರಿಗೆ ವರದಿ ಸಲ್ಲಿಸಬೇಕು. ನಂತರ ಹೊಸ ಹೆಸರು ಘೋಷಣೆಯಾಗಬೇಕು. ಸದ್ಯ ಹೊಸ ನೇಮಕಾತಿ ಪ್ರಕ್ರಿಯೆ ಆರಂಭವಾಗದಿದ್ದರೂ ಹಾಲಿ ಅಧ್ಯಕ್ಷರ ಬದಲಾವಣೆಗೆ ಒತ್ತಾಯ ಕೇಳಿ ಬಂದಿದೆ.

ಕೆಪಿಸಿಸಿ ಕಾರ್ಯದರ್ಶಿ ಹಾಲಹಳ್ಳಿ ರಾಮಲಿಂಗಯ್ಯ ಅಧ್ಯಕ್ಷ ಹುದ್ದೆಯ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಈ ಹಿಂದೆ ಅವರಿಗೆ ಹಲವು ಬಾರಿ ಹುದ್ದೆ ಕೈತಪ್ಪಿದ್ದು ಅದನ್ನೇ ಮುಂದಿಟ್ಟುಕೊಂಡು ಒತ್ತಡ ಹಾಕುತ್ತಿದ್ದಾರೆ. 2 ಬಾರಿ ನಗರಸಭೆ ಸದಸ್ಯರಾಗಿ, ಮೈಷುಗರ್‌ ಅಧ್ಯಕ್ಷರಾಗಿ ಅವರು ಕೆಲಸ ಮಾಡಿದ್ದಾರೆ.

‘ಕಳೆದ ಬಾರಿ ನಾನೇ ಅಧ್ಯಕ್ಷ ಎಂಬ ಮಾತು ಕೇಳಿ ಬಂದಿತ್ತು, ಆದರೆ ಕಡೇ ಕ್ಷಣದಲ್ಲಿ ನನ್ನ ಹೆಸರು ಘೋಷಣೆಯಾಗಲಿಲ್ಲ. ಈ ಬಾರಿಯಾದರೂ ಆಯ್ಕೆ ಮಾಡುವಂತೆ ರಾಜ್ಯ ಮುಖಂಡರಿಗೆ ಮನವಿ ಸಲ್ಲಿಸಿದ್ದೇನೆ’ ಎಂದು ರಾಮಲಿಂಗಯ್ಯ ಹೇಳಿದರು.

ಕೆಪಿಸಿಸಿ ಸದಸ್ಯ, ಪರಿಶಿಷ್ಟ ಜಾತಿ ವಿಭಾಗ, ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಡಿ.ಜಯರಾಂ ಕೂಡ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ. ‘ಮುಖಂಡರು ಅವಕಾಶ ನೀಡಿದರೆ ಹಳೇ ಕಾಂಗ್ರೆಸ್ಸಿಗರನ್ನು ಪಕ್ಷಕ್ಕೆ ಕರೆತರುವ ಕೆಲಸ ಮಾಡುತ್ತೇನೆ’ ಎಂದು ಜಯರಾಂ ತಿಳಿಸಿದರು.

ಯುವ ಮುಖಂಡ, ಬಿ.ಇ ಪದವೀಧರ ಎಂ.ಎಸ್‌.ಚಿದಂಬರ್‌ ಕೂಡ ಜಿಲ್ಲಾಧ್ಯಕ್ಷ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‌ ಪಕ್ಷದೊಂದಿಗೆ ಅವರ ಕುಟುಂಬ ಸದಸ್ಯರ ಒಡನಾಟದ ಹಿನ್ನೆಲೆಯಲ್ಲಿ ಹುದ್ದೆ ಕೇಳುತ್ತಿದ್ದಾರೆ. ‘ಕಳೆದ 16 ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇನೆ. ಎಲ್ಲಾ ಕ್ಷೇತ್ರಗಳ ಯುವ ಮುಖಂಡರ ಒಡನಾಟವಿದ್ದು ಪಕ್ಷ ಸಂಘಟಿಸುವ ಗುರಿಯೊಂದಿಗೆ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಯಾಗಿದ್ದೇನೆ’ ಎಂದು ಚಿದಂಬರ್‌ ತಿಳಿಸಿದರು.

ಜಿಲ್ಲಾ ಘಟಕದ ಹಾಲಿ ಕಾರ್ಯದರ್ಶಿ, ವಕ್ತಾರರೂ ಆಗಿರುವ ಸಿ.ಎಂ.ದ್ಯಾವಪ್ಪ ಕೂಡ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿದ್ದಾರೆ. ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ‘ವಿದ್ಯಾರ್ಥಿ ದೆಸೆಯಿಂದಲೂ ಸಂಘಟನೆಯಲ್ಲಿದ್ದೇನೆ. ಪಕ್ಷದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ರಾಜ್ಯ ಮುಖಂಡರು ಅವಕಾಶ ಕೊಟ್ಟರೆ ಪಕ್ಷ ಕಟ್ಟುವ ಕೆಲಸ ಮಾಡುವೆ’ ಎಂದು ದ್ಯಾವಪ್ಪ ಹೇಳಿದರು.

3 ದಿನ ಸಿದ್ದರಾಮಯ್ಯ, ಡಿಕೆಶಿ ರ‍್ಯಾಲಿ

ಜಿಲ್ಲೆಯಲ್ಲಿ ಕಾಂಗ್ರೆಸ್‌ ಸಂಘಟಿಸುವ ಉದ್ದೇಶದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿಪಕ್ಷ ನಾಯಕ ಸಿದ್ದರಾಮಯ್ಯ ಮಾರ್ಚ್‌ 3ರಿಂದ 3 ದಿನ ವಿವಿಧೆಡೆ ರ್‍ಯಾಲಿ ಹಮ್ಮಿಕೊಂಡಿದ್ದಾರೆ.

ಮಾರ್ಚ್‌ 3ರಂದು ಮಳವಳ್ಳಿ, ಶ್ರೀರಂಗಪಟ್ಟಣ, ಮಾರ್ಚ್‌ 4ರಂದು ಮಂಡ್ಯ, ಮದ್ದೂರು, ಪಾಂಡವಪುರ, ಮಾರ್ಚ್‌ 5ರಂದು ನಾಗಮಂಗಲ, ಕೆ.ಆರ್‌.ಪೇಟೆಯಲ್ಲಿ ರ‍್ಯಾಲಿ ನಡೆಯಲಿದೆ. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹುದ್ದೆ ಆಕಾಂಕ್ಷಿಗಳು ಮುಖಂಡರಿಗೆ ಮನವಿ ಸಲ್ಲಿಸುವ ಸಾಧ್ಯತೆ ಇದೆ.

ನಾಯಕನಿಲ್ಲದ ಹಡಗು: ಆರೋಪ

ಒಂದು ಕಾಲಕ್ಕೆ ಮಂಡ್ಯ ಜಿಲ್ಲೆ ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. ಆದರೆ ಈಗ ಮುಖಂಡರ ಇಚ್ಛಾಶಕ್ತಿ ಕೊರತೆಯಿಂದ ಪಕ್ಷ ನಾಯಕನಿಲ್ಲದ ಹಡಗಿನಂತಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 7 ಕ್ಷೇತ್ರದಲ್ಲಿ ಸೋಲು ಕಂಡ ನಂತರ ಪಕ್ಷ ನೆಲ ಕಚ್ಚಿದೆ ಎಂಬ ಆರೋಪ ಕೇಳಿ ಬಂದಿದೆ.

‘ಸ್ಥಳೀಯ ಮುಖಂಡರ ಗುಂಪುಗಾರಿಕೆಯಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತವರು ಪಕ್ಷ ಸಂಘಟನೆಗೆ ಮುಂದಾಗದ ಕಾರಣ ಜಿಲ್ಲೆಯಲ್ಲಿ ಹಿಡಿತ ತಪ್ಪುತ್ತಿದೆ’ ಎಂದು ಮುಖಂಡರೊಬ್ಬರು ಆರೋ‍ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT