ಮಂಡ್ಯ: ‘ಗಗನಚುಕ್ಕಿ ಜಲಪಾತೋತ್ಸವ ಎಂಬುದು ಸಂಸ್ಕೃತಿಯ ಪ್ರತೀಕವಾಗಿದ್ದು ಇದಕ್ಕೆ ಅಡ್ಡಿಪಡಿಸುವ ಹೇಳಿಕೆ ನೀಡಿರುವ ಜೆಡಿಎಸ್ ಎಸ್‌ಸಿ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಕೆ.ಅನ್ನದಾನಿ ಅವರ ಮಾತು ಖಂಡನೀಯ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ ಹೇಳಿದರು.
ಬರದಿಂದ ಹಲವು ವರ್ಷ ಗಗನಚುಕ್ಕಿ ಜಲಪಾತೋತ್ಸವ ಮಾಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ಕೆಆರ್‌ಎಸ್ ಜಲಾಶಯ ತುಂಬಿದ್ದು, ಗಗನಚುಕ್ಕಿ ಜಲಪಾತೋತ್ಸವ ಮಾಡಲಾಗುತ್ತಿದೆ. ಇದಕ್ಕೆ ಅಡ್ಡಿಪಡಿಸುವ ಹೇಳಿಕೆ ನೀಡಿ ಅಗ್ಗದ ಪ್ರಚಾರ ತೆಗೆದುಕೊಳ್ಳುವುದನ್ನು ಬಿಟ್ಟು ಮಳವಳ್ಳಿ ಜನರ ಭಾವನೆಗೆ ಬೆಲೆಕೊಟ್ಟು ಕಾರ್ಯಕ್ರಮಕ್ಕೆ ನಿಮ್ಮ ಸಹಕಾರ ಮತ್ತು ಸಲಹೆ ನೀಡಿ ಯಶಸ್ವಿಗೊಳಿಸಿ ಎಂದು ಪತ್ರಿಕಾ ಗೋಷ್ಠಿಯಲ್ಲಿ ಸಲಹೆ ನೀಡಿದರು.
ಶಾಸಕ ನರೇಂದ್ರಸ್ವಾಮಿ ನೇತೃತ್ವದಲ್ಲಿ ಜಲಪಾತೋತ್ಸವಕ್ಕೆ ಸಿದ್ದತೆ ನಡೆಸುತ್ತಿರುವ ವೇಳೆ ಜನರಿಂದ ತಿರಸ್ಕೃತಗೊಂಡಿರುವ ಮಾಜಿ ಶಾಸಕರೊಬ್ಬರು ಜಲಪಾತೋತ್ಸವಕ್ಕೆ ಅಡ್ಡಿ ಪಡಿಸುವುದು ಹಾಗೂ ಮುಖ್ಯಮಂತ್ರಿ ಆಗಮನದ ವೇಳೆ ಕಪ್ಪು ಬಾವುಟ ಪ್ರದರ್ಶನ ಮಾಡುವ ಹೇಳಿಕೆ ನಿಮಗೆ ಶೋಭೆ ತರುವುದಿಲ್ಲ ಎಂದರು.
ಮಳವಳ್ಳಿ ಕಡೇ ಭಾಗಕ್ಕೆ ನೀರು ಹರಿಸಿಲ್ಲ, ಕೆರೆಕಟ್ಟೆಗಳನ್ನು ತುಂಬಿಸಿಲ್ಲ ಎಂಬ ಆರೋಪಕ್ಕೆ ಉತ್ತರಿಸಿ, ಒಂದು ತಿಂಗಳಿಂದ ನಾಲೆಗಳಿಗೆ ನೀರು ಹರಿಸಿ, . ಕೆರೆ ಕಟ್ಟೆಗಳನ್ನು ತುಂಬಿಸಲಾಗುತ್ತಿದೆ. ವಿ.ಸಿ.ನಾಲೆ ಆಧುನೀಕರಣ ನಡೆಯುತ್ತಿದ್ದು, ಡಿಸೆಂಬರ್ ವರೆಗೆ ಕಾಲಾವಕಾಶ ಬೇಕು ಎಂದು ತಿಳಿಸಿದರು.
ತಾರತಮ್ಯ ಮಾಡಿಲ್ಲ:
‘ಖಾಸಗಿ ಸಕ್ಕರೆ ಕಾರ್ಖಾನೆಗಳು ತಮ್ಮ ವ್ಯಾಪ್ತಿಯ ಕಬ್ಬನ್ನು ಮಾತ್ರ ಅರೆಯಬೇಕು. ಅದು ಬಿಟ್ಟು ಮೈಷುಗರ್ ವ್ಯಾಪ್ತಿಯ ಕಬ್ಬು ಅರೆಯಲು ಬರುತ್ತಿರುವುದು ಸರಿಯಲ್ಲ. ಇದು ನಿಲ್ಲದಿದ್ದರೆ ನಿಮ್ಮ ಭಾಗಕ್ಕೆ ನಾವು ಬರಬೇಕಾಗುತ್ತದೆ. ಮೈಶುಗರ್ ಕಾರ್ಖಾನೆಯ 2.5 ಲಕ್ಷ ಟನ್ ಕಬ್ಬು ಗುರಿಯನ್ನು ಸದ್ಯದಲ್ಲೇ ಮುಟ್ಟುತ್ತೇವೆ, 61 ಸಾವಿರ ಟನ್ ಕಬ್ಬು ಅರೆಯಲಾಗಿದೆ. ರೈತರಿಗೆ ತಾರತಮ್ಯ ಮಾಡಿಲ್ಲ, ಕಾಂಗ್ರೆಸ್ ಪರ ವ್ಯಕ್ತಿಗಳ ಹೊಲದ ಕಬ್ಬು ಕಡಿಯುವಂತೆ ಎಲ್ಲಿಯೂ ತಿಳಿಸಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಡಾ ಅಧ್ಯಕ್ಷ ನಯೀಮ್, ನಗರಸಭೆ ಸದಸ್ಯ ಶ್ರೀಧರ್, ಮುಖಂಡರಾದ ಸಿ.ಎಂ.ದ್ಯಾವಪ್ಪ, ವಿಜಯಕುಮಾರ್, ಪ್ರಶಾಂತ್‌ಬಾಬು, ಎಚ್.ಬಿ.ವಿಜಯ್ ಕುಮಾರ್, ಸಾತನೂರು ಕೃಷ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.