ಮದ್ದೂರು (ಮಂಡ್ಯ ಜಿಲ್ಲೆ): ‘ಇಂದಿರಾಗಾಂಧಿಯಿಂದ ಸಿದ್ದರಾಮಯ್ಯನ ಸರ್ಕಾರದವರೆಗೆ ಜಾರಿಗೊಳಿಸಿದ ಕಲ್ಯಾಣ ಯೋಜನೆಗಳಲ್ಲಿ ಒಂದೇ ಒಂದು ಯೋಜನೆಯನ್ನು ನಿಲ್ಲಿಸಲು ಪ್ರತಿಪಕ್ಷಗಳಿಗೆ ಸಾಧ್ಯವಾಗಿಲ್ಲ. ನಾವು ತಂದಿರುವ ಯೋಜನೆಗಳನ್ನು ನಿಲ್ಲಿಸುವುದು ನಿಮ್ಮ ಹಣೆಯಲ್ಲಿ ಬರೆದಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗುಡುಗಿದರು.
ಮದ್ದೂರಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಸೋಮವಾರ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ‘ಜನಾಂದೋಲನ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿರಾಗಾಂಧಿ ಅವರು ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ಅಶಕ್ತರಿಗೆ ಹಣ ನೀಡುವ ಕಾರ್ಯಕ್ರಮ ತಂದರು. ಉಳುವವನೇ ಭೂ ಒಡೆಯ, ಬ್ಯಾಂಕ್ ರಾಷ್ಟ್ರೀಕರಣ ಸೇರಿದಂತೆ ನೂರಾರು ಯೋಜನೆಗಳು ಬಡಜನರಿಗೆ ಶಕ್ತಿ ತುಂಬಿವೆ. ಸಿದ್ದರಾಮಯ್ಯನವರ ಸರ್ಕಾರ ಜಾರಿಗೊಳಿಸಿರುವ ‘ಪಂಚ ಗ್ಯಾರಂಟಿ’ ಯೋಜನೆಗಳಿಂದ ಸರ್ವ ಜನರಿಗೆ ಅನುಕೂಲವಾಗಿದೆ. ಇದನ್ನು ಸಹಿಸದ ಪ್ರತಿಪಕ್ಷಗಳು ಹುನ್ನಾರ ಮಾಡಿಕೊಂಡು ಪಾದಯಾತ್ರೆ ನಡೆಸುತ್ತಿವೆ. ಕುಮಾರಸ್ವಾಮಿ, ವಿಜಯೇಂದ್ರ ಯಡಿಯೂರಪ್ಪ, ಆರ್.ಅಶೋಕ್, ಎಲ್ಲಾ ಸೇರಿ ಗ್ಯಾರಂಟಿ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ’ ಎಂದರು.
ಕುಟುಂಬ ಹೇಗೆ ಬಂತು: ಎಚ್.ಡಿ. ಕುಮಾರಸ್ವಾಮಿ ಅವರ ಒಂದೊಂದೇ ಹೇಳಿಕೆಗಳಿಗೆ ಡಿ.ಕೆ.ಶಿವಕುಮಾರ್ ತಿರುಗೇಟು ನೀಡುತ್ತಾ, ಏಕವಚನದಲ್ಲೇ ಜರಿದರು. ‘ಈಗ ಪಾದಯಾತ್ರೆಯಲ್ಲಿ ಎರಡು ಹೆಜ್ಜೆ ಹಾಕಿ ಹೇಳಿಕೆ ನೀಡಿ ಏಕೆ ಓಡಿ ಹೋಗುತ್ತಾ ಇದ್ದಿಯಾ? ಅವನು ಯಾರೋ ಪ್ರೀತಂಗೌಡ ನನ್ನ ಕುಟುಂಬದ ಮರ್ಯಾದೆ ತೆಗೆದಿದ್ದಾನೆ ಎಂದು ಹೇಳಿದೆ. ಆದರೆ, ಇದಕ್ಕೂ ಮೊದಲು ರೇವಣ್ಣನದ್ದೇ ಬೇರೆ ಕುಟುಂಬ, ನನ್ನದೇ ಬೇರೆ ಕುಟುಂಬ ಎಂದು ಹೇಳಿದ್ದೇ. ಈಗ ಎಲ್ಲಿಂದ ಬಂತು ಕುಟುಂಬ? ನಾವು ನಿನ್ನ ಕುಟುಂಬದ ವಿಚಾರಕ್ಕೆ ಕೈ ಹಾಕುವುದಿಲ್ಲ. ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡಬೇಡಿ ಎಂದು ಬಿಜೆಪಿಯ ದೇವರಾಜೇಗೌಡನಿಂದ ಪತ್ರ ಬರೆಸಿದವನು ನೀನೆ ಅಲ್ಲವೇ’ ಎಂದು ಪ್ರಶ್ನಿಸಿದರು.
ಅಣ್ಣ–ತಮ್ಮಂದಿರನ್ನೇ ಎಚ್‌ಡಿಕೆ ಸಹಿಸಿಲ್ಲ: ‘ಮುಖ್ಯಮಂತ್ರಿಯನ್ನಾಗಿ ಮಾಡಿದ ನಿಮ್ಮ ವಿರುದ್ಧವೇ ಕುಮಾರಸ್ವಾಮಿ ಹೀಗೆ ಮಾತನಾಡುತ್ತಿದ್ದಾರಲ್ಲಾ ಸರಿಯೇ?’ ಎಂದು ಯಾರೋ ಪ್ರಶ್ನಿಸಿದರು. ಅದಕ್ಕೆ ನಾನು ಹೇಳಿದೆ ‘ಸ್ವಂತ ಅಣ್ಣ, ತಮ್ಮಂದಿರನ್ನೇ ಸಹಿಸುವುದಿಲ್ಲ. ಇನ್ನು ನನ್ನ ಹಾಗೂ ಚಲುವರಾಯಸ್ವಾಮಿ ಅವರನ್ನು ಸಹಿಸುತ್ತಾನೆಯೇ?’ ಮಂಡ್ಯ ಸಂಸದನಾದ ಕಾರಣಕ್ಕೆ ಇಷ್ಟೆಲ್ಲಾ ಹೇಳುತ್ತಿದ್ದೇನೆ. ನಾನು ಅವನ ಮಗನನ್ನು ಗೆಲ್ಲಿಸಲು ನೋಡಿದೆ. ಆದರೆ ಜನ ಸೋಲಿಸಿದರು’ ಎಂದರು.
ಸಹಕಾರ ಕೊಡುತ್ತೇವೆ: ‘ಮಂಡ್ಯ ಮತ್ತು ಹಾಸನಕ್ಕೆ ದೊಡ್ಡ ಕೈಗಾರಿಕೆಗಳನ್ನು ತಂದು ತಲಾ 10 ಸಾವಿರ ಜನರಿಗೆ ಉದ್ಯೋಗ ನೀಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ನೀವು ಈ ಕೆಲಸ ಮಾಡಿದರೆ ನನ್ನ ಹಾಗೂ ಚಲುವರಾಯಸ್ವಾಮಿ ಅವರ ಸಂಪೂರ್ಣ ಬೆಂಬಲವಿರುತ್ತದೆ’ ಎಂದು ಹೇಳಿದರು.
ಶಿವಪುರ ಸೌಧವೇ ಸಾಕ್ಷಿ: ಕಾಂಗ್ರೆಸ್ ಹೋರಾಟಕ್ಕೆ ಕುಮಾರಸ್ವಾಮಿ ಅವರ ಕ್ಷೇತ್ರದ ಹೆಬ್ಬಾಗಿನಲ್ಲೇ ಇರುವ ಶಿವಪುರ ಸತ್ಯಾಗ್ರಹ ಸೌಧವೇ ಸಾಕ್ಷಿ. ಜನರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಶಿವಪುರದ ಧ್ವಜ ಸತ್ಯಾಗ್ರಹ ಸೌಧಕ್ಕೆ ಬಿಜೆಪಿಯವರು ಒಮ್ಮೆ ಭೇಟಿ ನೀಡಬೇಕು ಎಂದು ಸಲಹೆ ನೀಡುತ್ತೇನೆ. ಆಗಿನ ಕಾಲದಲ್ಲೇ 10 ಸಾವಿರ ಜನರು ಸೇರಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಜಾಗವಿದು. ಗಂಡು ಭೂಮಿ ಮಂಡ್ಯ ನೂರಾರು ನಾಯಕರನ್ನು ರಾಜ್ಯ ರಾಜಕಾರಣಕ್ಕೆ ನೀಡಿದೆ. ಕೇಂದ್ರ ಮಂತ್ರಿ, ಮುಖ್ಯಮಂತ್ರಿಗಳಾಗಿದ್ದಾರೆ. ಸ್ವಾತಂತ್ರ್ಯ ಹೋರಾಟದ ಕಾಲ ಸಾಹುಕಾರ್ ಚೆನ್ನಯ್ಯ, ವೀರಣ್ಣ ಗೌಡರು, ಮಲ್ಲಯ್ಯ ಅವರು ಇತಿಹಾಸ ಸೃಷ್ಟಿಸಿದ ಭೂಮಿ ಮಂಡ್ಯ’ ಎಂದರು.
ಮೈಸೂರಿನಲ್ಲಿ ವಿಶೇಷ ಸಭೆ: ‘ಆ.9ರಂದು ಕ್ವಿಟ್ ಇಂಡಿಯಾ ಚಳವಳಿ ನಡೆದ ದಿನ. ಅಂದು ವಿಶೇಷ ರೀತಿಯಲ್ಲಿ ಮೈಸೂರಿನಲ್ಲಿ ಸಭೆ ಆಯೋಜಿಸಲಾಗಿದೆ. ಈ ಜನಾಂದೋಲನ ಸಭೆ ರಾಜ್ಯ ರಾಜಕರಣದ ಇತಿಹಾಸದ ಪುಟ ಸೇರಲಿದೆ. ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆಯನ್ನು ವಹಿಸಿಕೊಂಡು 100 ವರ್ಷಗಳಾಗಿವೆ. ಇದಕ್ಕಾಗಿ ಎಚ್.ಕೆ.ಪಾಟೀಲ್ ಅವರ ನೇತೃತ್ವದಲ್ಲಿ ಇಡೀ ವರ್ಷ ಕಾರ್ಯಕ್ರಮ ರೂಪಿಸಲಾಗಿದೆ’ ಎಂದು ತಿಳಿಸಿದರು.
ಸಮಾವೇಶದಲ್ಲಿ ಸಚಿವರಾದ ಎಚ್.ಕೆ.ಪಾಟೀಲ್, ಎಚ್.ಸಿ.ಮಹದೇವಪ್ಪ, ಎನ್.ಚಲುವರಾಯಸ್ವಾಮಿ, ಕೆ.ಎನ್.ರಾಜಣ್ಣ, ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಶಿವಾನಂದ ಪಾಟೀಲ, ಮಧು ಬಂಗಾರಪ್ಪ, ಎಂ.ಸಿ. ಸುಧಾಕರ್, ಮಾಜಿ ಸಚಿವ ರಮಾನಾಥ ರೈ, ವಿನಯಕುಮಾರ ಸೊರಕೆ, ಎಸ್.ಆರ್. ಶ್ರೀನಿವಾಸ್, ಶಾಸಕರಾದ ಕೆ.ಎಂ.ಉದಯ್, ಪಿ.ರವಿಕುಮಾರ್, ರಮೇಶ ಬಂಡಿಸಿದ್ದೇಗೌಡ, ಎಂ.ಪಿ.ನರೇಂದ್ರಸ್ವಾಮಿ, ವಿಧಾನ ಪರಿಷತ್ ಸದಸ್ಯ ದಿನೇಶ ಗೂಳಿಗೌಡ, ಮುಖಂಡರಾದ ಪುಷ್ಪಾ ಅಮರನಾಥ್, ನಾಗರಾಜ್, ಗೌರಿಶಂಕರ್, ಮುದ್ದಹನುಮೇಗೌಡ, ಸಿ.ಡಿ.ಗಂಗಾಧರ್, ಕದಲೂರು ರಾಮಕೃಷ್ಣ ಮುಂತಾದವರು ಇದ್ದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಮತ್ತು ಜೆಡಿಎಸ್ ನಾಯಕರು ನಿದ್ದೆ ಮಾಡುತ್ತಿಲ್ಲ. ಡಿಕೆಶಿ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಾ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಹುನ್ನಾರ ಮಾಡುತ್ತಿದ್ದಾರೆ.– ಚಲುವರಾಯಸ್ವಾಮಿ, ಕೃಷಿ ಸಚಿವ
ರಾಜಭವನವನ್ನು ರಾಜಕೀಯಕ್ಕೆ ಬಳಸಿ ಸಿದ್ದರಾಮಯ್ಯನವರ ಕುರ್ಚಿ ಅಲುಗಾಡಿಸಲು ಪಾದಯಾತ್ರೆಯ ನಾಟಕ ಶುರು ಮಾಡಿದ್ದಾರೆ. ರಾಜಭವನದಲ್ಲಿ ಕುಳಿತವರು ಸಂವಿಧಾನಬದ್ಧವಾಗಿ ಕೆಲಸ ಮಾಡಬೇಕು.–ಎಚ್.ಕೆ.ಪಾಟೀಲ, ಕಾನೂನು ಸಚಿವ
ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಾಡಿದ ಅವ್ಯವಹಾರಗಳ ಬಗ್ಗೆ ಗ್ರಂಥವನ್ನೇ ಬರೆಯಬಹುದು. ಜೆಡಿಎಸ್‌ನವರು ಇಸ್ಪೀಟ್ ಆಟದಲ್ಲಿ ಬಳಸುವ ಜೋಕರ್ ಇದ್ದ ಹಾಗೆ. ಅವರ ನಡವಳಿಕೆ ಮತ್ತು ಹೇಳಿಕೆ ಎರಡೂ ತದ್ವಿರುದ್ಧ.– ಕೆ.ಎನ್.ರಾಜಣ್ಣ, ಸಹಕಾರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.