ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಡಿಸಿ ಕಚೇರಿ ಮುಂದೆ ಎತ್ತಿನ ಗಾಡಿ, ಟ್ರ್ಯಾಕ್ಟರ್‌ ಮೆರವಣಿಗೆ

ಮೈಷುಗರ್‌ ಆರಂಭ, ಬೆಲೆ ಏರಿಕೆ ನಿಯಂತ್ರಣಕ್ಕೆ ಒತ್ತಾಯಿಸಿ ಯುವ ಕಾಂಗ್ರೆಸ್‌ ಸದಸ್ಯರ ಪ್ರತಿಭಟನೆ
Last Updated 26 ಮಾರ್ಚ್ 2021, 14:27 IST
ಅಕ್ಷರ ಗಾತ್ರ

ಮಂಡ್ಯ: ಮೈಷುಗರ್‌ ಕಾರ್ಖಾನೆಯನ್ನು ಕೂಡಲೇ ಸರ್ಕಾರಿ ಸ್ವಾಮ್ಯದಲ್ಲೇ ಆರಂಭಿಸಬೇಕು, ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಬೇಕು, ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿ ಯುವ ಕಾಂಗ್ರೆಸ್‌ ಜಿಲ್ಲಾ ಘಟಕದ ಸದಸ್ಯರು ಶುಕ್ರವಾರ ನಗರದಲ್ಲಿ ಎತ್ತಿನಗಾಡಿ, ಟ್ರ್ಯಾಕ್ಟರ್‌ ಮೆರವಣಿಗೆ ನಡೆಸುವ ಮೂಲಕ ಬೃಹತ್‌ ಪ್ರತಿಭಟನೆ ನಡೆಸಿದರು.

100ಕ್ಕೂ ಹೆಚ್ಚು ಹೆಚ್ಚು ಎತ್ತಿನಗಾಡಿಗಳು, 45 ಕ್ಕೂ ಹೆಚ್ಚು ಟ್ರ್ಯಾಕ್ಟರ್‌, ನೂರಾರು ಬೈಕ್‌ಗಳಲ್ಲಿ ಹೊರಟ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೈಷುಗರ್‌ ಕಾರ್ಖಾನೆಯಿಂದ ಹೊರಟ ಮೆರವಣಿಗೆ ಸಂಜಯ್‌ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಪ್ರವೇಶಿಸಿದರು. ಕಾಂಗ್ರೆಸ್‌ ಮುಖಂಡ ಎನ್‌.ಚಲುವರಾಯಸ್ವಾಮಿ ಎತ್ತಿನ ಗಾಡಿ ಓಡಿಸುವ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು. ಯುವ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ರಕ್ಷಾ ರಾಮಯ್ಯ ಕೂಡ ಎತ್ತಿನಗಾಡಿ ನಡೆಸಿದರು.

ಮೈಷುಗರ್‌ ಖಾರ್ಖಾನೆ ಜಿಲ್ಲೆಯ ಜೀವನಾಡಿಯಾಗಿದ್ದು ಕಾರ್ಖಾನೆ ಸ್ಥಗಿತಗೊಂಡ ನಂತರ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಸಂಕಷ್ಟ ಅರಿತು ಪರಿಹಾರ ನೀಡಬೇಕಾದ ಸರ್ಕಾರ 40 ವರ್ಷಗಳಿಗೆ ಖಾಸಗಿ ಗುತ್ತಿಗೆ ನೀಡುವ ಮೂಲಕ ಕಾರ್ಖಾನೆಯನ್ನು ಖಾಸಗಿ ಹಿಡಿತಕ್ಕೆ ನೀಡಲು ಹೊರಟಿದೆ. ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

₹2 ಲಕ್ಷ ಕೋಟಿ ಬಜೆಟ್ ಮಂಡನೆ ಮಾಡುವ ಸರ್ಕಾರ ಕನಿಷ್ಠ ₹200 ಹಣವನ್ನು ಕಾರ್ಖಾನೆಗೆ ವ್ಯಯಿಸುವ ಇಚ್ಛಾಶಕ್ತಿ ಇಲ್ಲ. 40 ವರ್ಷ ಕಾರ್ಖಾನೆಯನ್ನು ಹೊರಗುತ್ತಿಗೆಗೆ ನೀಡಿದರೆ ಕಾರ್ಖಾನೆ ಮೇಲಿನ ಸರ್ಕಾರದ ಹಿಡಿತವನ್ನು ಕಳೆದುಕೊಳ್ಳಲಿದ್ದು, ಜಿಲ್ಲೆಯ ಜನರ ಪಾಲಿಗೆ ಮೈಷುಗರ್‌ ತಪ್ಪಿ ಹೋಗುತ್ತದೆ. ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ನೀಡದೆ ಸರ್ಕಾರಿ ಸ್ವಾಮ್ಯದಲ್ಲೇ ನಡೆಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಮರಣ ಶಾಸನ ಬರೆಯುವ ಕಾನೂನುಗಳನ್ನು ಜಾರಿಗೆ ತರುತ್ತಿದೆ. ಇದನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ 110 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಕಾಯ್ದೆಯನ್ನು ವಾಪಸ್‌ ಪಡೆಯುತ್ತಿಲ್ಲ. ಬದಲಿಗೆ ಕಾರ್ಪೊರೇಟ್‌ ಕಂಪೆನಿಗಳ ಉದ್ಧಾರ ಮಾಡಲು ರೈತರ ಜೀವನ ಬಲಿ ಕೊಡಲು ಮುಂದಾಗಿದೆ ಎಂದು ಆರೋಪಿಸಿದರು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕಡಿಮೆ ಇದ್ದರೂ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗುತ್ತಿದೆ. ದೇಶದಲ್ಲಿ ಲಕ್ಷಾಂತರ ಉದ್ಯೋಗ ನಷ್ಟವಾಗಿದ್ದು ಯುವಜನ ಸಂಕಷ್ಟದಲ್ಲಿದ್ದಾರೆ. ಅಡುಗೆ ಎಣ್ಣೆ, ಕಾಳುಗಳು, ತರಕಾರಿ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಸಾಮಾನ್ಯ ಜನರು ಜೀವನ ನಡೆಸಲು ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಸಂಸದ ಜಿ.ಮಾದೇಗೌಡ, ಪುಟ್ಟಸ್ವಾಮಿ ಅವರು ಪ್ರತಿಭಟನಾ ರ‍್ಯಾಲಿಗೆ ಚಾಲನೆ ನೀಡಿದರು. ಮುಖಂಡರಾದ ಪಿ.ಎಂ.ನರೇಂದ್ರಸ್ವಾಮಿ, ಸಿ.ಡಿ.ಗಂಗಾಧರ್‌, ಅಂಜನಾ ಶ್ರೀಕಾಂತ್‌, ಮುಖಂಡರಾದ ರವಿಕುಮಾರ್‌ ಗಣಿಗ, ವಿಜಯ್‌ಕುಮಾರ್‌, ಉಮೇಶ್‌, ಜಯಕುಮಾರ್‌, ಎಂ.ಎಸ್‌.ಚಿದಂಬರ್‌, ಸಿ.ಎಂ.ದ್ಯಾವಪ್ಪ, ಸುಂಡಹಳ್ಳಿ ಮಂಜುನಾಥ್‌, ಅಶೋಕ್‌, ಗುರು ಮೂರ್ತಿ, ರುದ್ರಪ್ಪ ಇದ್ದರು.

ಮಾತಿಗೆ ತಪ್ಪಿದ ಮುಖ್ಯಮಂತ್ರಿ

ಮಂಡ್ಯ ಜಿಲ್ಲೆಯ ಜಿಲ್ಲೆಯ ಮಗನಾದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಅಧಿಕಾರಕ್ಕೆ ಬರುವ ಮುನ್ನ, ಸಾಲ ಮಾಡಿಯಾದರೂ ಕಾರ್ಖಾನೆ ನಡೆಸುತ್ತೇನೆ ಎಂದು ಹೇಳಿದ್ದರು. ಆದರೆ ಮಾತಿನಂತೆ ನಡೆದುಕೊಳ್ಳದೆ ಖಾಸಗೀಕರಣ ಮಾಡಲು ಮುಂದಾಗಿದ್ದು, ಜಿಲ್ಲೆಯ ಜನರಿಗೆ ದ್ರೋಹ ಮಾಡುತ್ತಿದ್ದಾರೆ, ಮಾತಿಗೆ ತಪ್ಪಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT