ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ನಿದ್ದೆಗೆ, ಜೆಡಿಎಸ್‌ ನಾಪತ್ತೆ: ಆರ್‌. ಅಶೋಕ್‌ ವ್ಯಂಗ್ಯ

ಕೆ.ಆರ್‌.ಪೇಟೆಯಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ: ಕಂದಾಯ ಸಚಿವ ಆರ್‌.ಅಶೋಕ ವ್ಯಂಗ್ಯ
Last Updated 3 ಡಿಸೆಂಬರ್ 2020, 2:38 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ‘ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಪಕ್ಷ ನಿದ್ದೆ ಮಾಡುತ್ತಿದ್ದು, ಕುಮಾರಸ್ವಾಮಿ ಅವರ ಜೆಡಿಎಸ್ ನಾಪತ್ತೆಯಾಗಿದೆ. ಸದಾ ಕ್ರಿಯಾಶೀಲವಾಗಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಯಗಳಿಸಲಿದ್ದಾರೆ’ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.

ಬಿಜೆಪಿ ವತಿಯಿಂದ ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನದಲ್ಲಿ ಬುಧವಾರ ನಡೆದ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಜನರ ಮನೆ ಬಾಗಿಲಿಗೆ ಆಡಳಿತ ತಲುಪಿಸಬೇಕೆಂಬ ಕನಸನ್ನು ಹೊತ್ತಿದ್ದಾರೆ. ಅದನ್ನು ಸಾಕಾರಗೊಳಿಸಲು ರಾಜ್ಯದಲ್ಲಿ ಯಡಿಯೂರಪ್ಪ ಅವರ ಬಿಜೆಪಿ ಸರ್ಕಾರ ಸರ್ಕಾರವಿದೆ. ಗ್ರಾಮ ಪಂಚಾಯಿತಿಗಳು ಸಬಲವಾದಾಗ ಮಾತ್ರ ಗ್ರಾಮಾಂತರ ಪ್ರದೇಶಗಳು ಅಭಿವೃದ್ಧಿಗೊಳ್ಳಲು ಸಾಧ್ಯ ಎಂಬುದು ಬಿಜೆಪಿ ಆಶಯವಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ನೀಡುತ್ತಿದೆ. ಅದು ಸಾಕಾರವಾಗಬೇಕಾದರೆ ಬಿಜೆಪಿ ಅಭ್ಯರ್ಥಿಗಳು ಶೇ 80ರಷ್ಟು ಆಯ್ಕೆಯಾಗಬೇಕು’ ಎಂದರು.

‘ರಾಜ್ಯ ಸರ್ಕಾರ ತರಲು ಹೊರಟಿರುವ ಲವ್ ಜಿಹಾದ್ ಕಾನೂನನ್ನು ಕಾಂಗ್ರೆಸ್ ಪಕ್ಷ ವಿರೋಧ ಮಾಡುತ್ತಿರುವುದು ಓಲೈಕೆಯ ರಾಜಕಾರಣವಾಗಿದೆ. ಲವ್ ಜಿಹಾದ್ ನಿಷೇಧ ಮಾಡಬೇಕೋ, ಬೇಡವೋ ಎಂಬ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಸ್ಪಷ್ಟಪಡಿಸಬೇಕು’ ಎಂದರು.

‘ನಿಜವಾಗಿ ಪ್ರೀತಿಸಿ ಮದುವೆಯಾಗಿ ಸಂಸಾರ ನಡೆಸುವವರನ್ನು ನಾವು ಗೌರವಿಸುತ್ತೆವೆ. ಆದರೆ ಹಿಂದೂ ಧರ್ಮವನ್ನು ಹತ್ತಿಕ್ಕುವ ಉದ್ದೇಶದಿಂದ ಮತಾಂತರಕ್ಕಾಗಿ ಪ್ರೀತಿ ಮಾಡಿ ನಂತರ ವಂಚಿಸುವವರ ವಿರುದ್ಧ ಕಾನೂನು ಕ್ರಮ ಅವಶ್ಯವಾಗಿದೆ. ಈ ಕಾನೂನನ್ನು ತಂದೇ ತೀರುತ್ತೇವೆ. ರಾಜ್ಯದಲ್ಲಿ ಮುಂದಿನ ಎರಡೂವರೆ ವರ್ಷ ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಸುಭದ್ರವಾಗಿರಲಿದೆ’ ಎಂದರು.

ಬಿಜೆಪಿ ರಾಜ್ಯ ಘಟಕದ ಬಿ.ವೈ.ವಿಜಯೇಂದ್ರ ಮಾತನಾಡಿ ‘ಕೆ.ಆರ್.ಪೇಟೆ ಮತ್ತು ಶಿರಾ ಉಪಚುನಾವಣೆಯ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಹತಾಶವಾಗಿದ್ದು ಮಾತನಾಡಲು ಯಾವ ಅಸ್ತ್ರವೂ ಇಲ್ಲವಾಗಿದೆ. ಇಲ್ಲಿಯ ಉಪ ಚುನಾವಣೆಯನ್ನು ಹಣ –ಹೆಂಡ ಹಂಚಿ ಗೆದ್ದರು ಎಂದು ಈಗ ಹೇಳಿಕೊಂಡು ಓಡಾಡುತ್ತಿದ್ದಾರೆ. ಕಳೆದ ಆರು ದಶಕಗಳಿಂದ ಜನರಿಗೆ ವಂಚಿಸುತ್ತಾ ಬಂದಿದ್ದರಿಂದ ಜನ ಬೇಸತ್ತು ಬಿಜೆಪಿಗೆ ಮತ ಹಾಕಿದ್ದಾರೆ’ ಎಂದರು.

‘ನುಡಿದಂತೆ ನಡೆಯುವ ಪಕ್ಷ ಬಿಜೆಪಿ ಎಂಬುದಕ್ಕೆ ಶಿರಾ ತಾಲ್ಲೂಕಿನ ಕೆರೆಯನ್ನು ತುಂಬಿಸಿದ್ದೇವೆ. ಕೆ.ಆರ್.ಪೇಟೆಗೆ ಸಾವಿರಾರು ಕೋಟಿ ಅನುದಾನ ಕೊಟ್ಟು ಅಭಿವೃದ್ಧಿ ಪರ್ವವೇ ನಡೆಯುತ್ತಿದೆ. ಬಿಜೆಪಿಯನ್ನು ಗ್ರಾಮಮಟ್ಟದ ಬಲಪಡಿಸಬೇಕಾಗಿದೆ. ಇದಕ್ಕೆ ಗ್ರಾಮ ಪಂಚಾಯಿತಿ ಚುನಾವಣೆಗಳು ಪ್ರಮುಖ ಸ್ಥಾನ ವಹಿಸುತ್ತವೆ’ ಎಂದರು.

ಸಹಕಾರ ಸಚಿವ ಸೋಮಶೇಖರ್ ಮಾತನಾಡಿ ‘ನಾರಾಯಣಗೌಡರು ಒಳ್ಳೆಯ ಮನುಷ್ಯ, ನಮಗೆ ಮುಂಬೈನಲ್ಲಿ ಒಳ್ಳೆಯ ಆತಿಥ್ಯ ನೀಡಿದ್ದರು. ಮುಖ್ಯಮಂತ್ರಿಗಳು ಅದೇನು ಮೋಡಿ ಮಾಡಿದ್ದಾರೋ ಗೊತ್ತಿಲ್ಲ, ನನಗೆ, ಗೋಪಾಲಯ್ಯ ಅವರಿಗೆ ಒಂದೇ ಒಂದು ಖಾತೆ. ಆದರೆ, ನಾರಾಯಣಗೌಡರಿಗೆ ಮೂರು ಖಾತೆ ನೀಡಿದ್ದಾರೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ‘ಮುಂದಿನ ಎರಡು ವರ್ಷದವರೆಗೆ ಹರಿಹರ ಬ್ರಹ್ಮರು ಬಂದರೂ ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಸಾಧ್ಯವಿಲ್ಲ. ನನ್ನ ಗೆಲುವಿಗೆ ಮತ್ತು ಸಚಿವನಾಗಲು ಅವರು ಮತ್ತು ಅವರ ಪುತ್ರ ವಿಜಯೇಂದ್ರ ಪ್ರಮುಖ ಕಾರಣ. ಸಂಕಷ್ಟದ ಸಮಯದಲ್ಲೂ ಸಾವಿರಾರು ಕೋಟಿ ಅನುದಾನ ನೀಡಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ’ ಎಂದರು.

ಬಿಜೆಪಿ ರಾಜ್ಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಎಸ್.ಸಿ ಮೋರ್ಚಾ ಅಧ್ಯಕ್ಷ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜೆ.ವಿಜಯಕುಮಾರ್, ಮಾಜಿ ಸಚಿವ ಎ.ಮಂಜು, ರಾಜ್ಯ ಮಹಿಳಾ ಉಪಾಧ್ಯಕ್ಷೆ ಪ್ರಮೀಳಾ, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಮಾಜಿ ಉಪಾಧ್ಯಕ್ಷ ಅಂಬರೀಷ್‌, ತಾಲ್ಲೂಕು ಅಧ್ಯಕ್ಷ ಪರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT