ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ವಾರಕ್ಕೊಮ್ಮೆ ನೀರು; ಗೋಳು ಕೇಳೋರು ಯಾರು?

ಹದಗೆಟ್ಟ ನೀರು ಸರಬರಾಜು ನಿರ್ವಹಣಾ ವ್ಯವಸ್ಥೆ, ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯ
Last Updated 13 ಜುಲೈ 2020, 14:43 IST
ಅಕ್ಷರ ಗಾತ್ರ

ಮಂಡ್ಯ: ಕೆಆರ್‌ಎಸ್‌ ಜಲಾಶಯದಲ್ಲಿ ನೀರಿದ್ದರೂ ನಗರದ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಜಲಮಂಡಳಿ ಎಂಜಿನಿಯರ್‌ಗಳ ನಿರ್ಲಕ್ಷ್ಯದಿಂದಾಗಿ ಮಂಡ್ಯ ಜನರು ವಾರಕ್ಕೊಮ್ಮೆ ನೀರು ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶ್ರೀರಂಗಪಟ್ಟಣ ತಾಲ್ಲೂಕು ವೆಲ್ಲೆಸ್ಲಿ ಸೇತುವೆ ಸಮೀಪದ ಘಟಕದಿಂದ ಪಂಪ್‌ ಮಾಡಿ ನಗರಕ್ಕೆ ಕಾವೇರಿ ನೀರು ಪೂರೈಸಲಾಗುತ್ತಿದೆ. ಗಣಂಗೂರು ಸಮೀಪ ಶುದ್ಧೀಕರಣಗೊಂಡು ನಗರದ ವಿವಿಧ ಬಡಾವಣೆಗಳಿಗೆ ಸಾಗುತ್ತದೆ. ಆದರೆ ನೀರು ಪೂರೈಕೆ ವ್ಯವಸ್ಥೆ ನಿರ್ವಹಣೆಯಲ್ಲಿ ಜಲಮಂಡಳಿ ಅಧಿಕಾರಿಗಳು ತೀವ್ರ ನಿರ್ಲಕ್ಷ್ಯ ತೋರಿದ್ದು ನಗರದ ಜನರು ನೀರು ಪಡೆಯಲು ವಾರಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ನದಿಯಿಂದ ಬರುವ ನೀರಿನ ಹಾದಿಯಲ್ಲಿ ನಗರದ ಕಲ್ಲಹಳ್ಳಿ ಬಡಾವಣೆಯೇ ಮೊದಲು ಸಿಗುತ್ತದೆ. ಆದರೆ ಈ ಬಡಾವಣೆಯ ಜನರು ನಿಯಮಿತವಾಗಿ ನೀರು ಪಡೆಯಲು ಪರದಾಡುತ್ತಿದ್ದಾರೆ. ಎಂಜಿನಿಯರ್‌ಗಳ ಮುಂದೆ ಮೊರೆ ಇಡುವ ಪರಿಸ್ಥಿತಿ ಬದಲಾಗಿಲ್ಲ. ದಿನ ಬಿಟ್ಟು ದಿನ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ವಾಸ್ತವವಾಗಿ 4, 5, 7 ದಿನ ಕಳೆದರೂ ನೀರು ಬಿಟ್ಟಿರುವುದಿಲ್ಲ. ಒಮ್ಮೊಮ್ಮೆ ಪಂಪ್‌ ಕೆಟ್ಟಿದೆ ಎಂಬ ನೆಪ ಹೇಳುವ ಎಂಜಿನಿಯರ್‌ಗಳು ನೀರು ಬಿಡಲು 10ಕ್ಕೂ ಹೆಚ್ಚು ದಿನ ತೆಗೆದುಕೊಳ್ಳುತ್ತಾರೆ.

‘ಕಲ್ಲಹಳ್ಳಿ ಬಡಾವಣೆಯಲ್ಲಿ ಜನರು ಸಣ್ಣಪುಟ್ಟ ಮನೆಗಳಲ್ಲಿ ವಾಸ ಮಾಡುತ್ತಿದ್ದು ಸ್ವಂತ ಕೊಳವೆಬಾವಿ ಹೊಂದಿಲ್ಲ. ಹೀಗಾಗಿ ಜಲಮಂಡಳಿ ಪೂರೈಸುವ ನೀರಿನ ಮೇಲೆಯೇ ಅವಲಂಬಿತರಾಗಿದ್ದೇವೆ. ಆದರೆ ಅಧಿಕಾರಿಗಳು ನಿಯಮಿತವಾಗಿ ನೀರು ಪೂರೈಸುವುದಿಲ್ಲ. ಕೆಲಸ ಬಿಟ್ಟು ನೀರಿಗಾಗಿ ಕಾಯುತ್ತಾ ಕುಳಿತರೆ ನೀರೂ ಬರುವುದಿಲ್ಲ, ಕೆಲಸವೂ ಆಗುವುದಿಲ್ಲ. ಮೋಟಾರ್‌, ಪಂಪ್‌ ಕೆಟ್ಟಿದೆ, ಪೈಪ್‌ಲೈನ್‌ ಒಡೆದಿದೆ ಎಂಬ ನೆಪದಲ್ಲೇ ದಿನ ದೂಡುತ್ತಾರೆ’ ಎಂದು ಕಲ್ಲಹಳ್ಳಿಯ ಬಂದೀಗೌಡ ಆರೋಪಿಸಿದರು.

‘ಜಲಮಂಡಳಿ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿರುವ ಜನರು ಸ್ವಂತ ಕೊಳವೆ ಬಾವಿ ಕೊರೆಸಿಕೊಳ್ಳುತ್ತಿದ್ದಾರೆ. ಆದರೆ ಬಡವರು, ಜಾಗ ಇಲ್ಲದವರು ಏನು ಮಾಡಬೇಕು’ ಎಂದು ಗುತ್ತಲು ನಿವಾಸಿ ಶ್ರೀನಿವಾಸ್‌ ಪ್ರಶ್ನಿಸಿದರು.

ಅಶುದ್ಧ ನೀರು ಪೂರೈಕೆ: ಗಣಂಗೂರು ಹಾಗೂ ಗಾಂಧಿನಗರದಲ್ಲಿ ಶುದ್ಧೀಕರಣ ಘಟಕಗಳಿವೆ. ಈ ಘಟಕಗಳು ಸದಾ ತಾಂತ್ರಿಕೆ ಸಮಸ್ಯೆ ಎದುರಿಸುತ್ತಿದ್ದು ನೀರು ಪೂರ್ಣವಾಗಿ ಶುದ್ಧಗೊಳ್ಳುತ್ತಿಲ್ಲ, ಸಮಸ್ಯೆ ಸರಿಪಡಿಸದ ಅಧಿಕಾರಿಗಳು ಕೊಳಚೆ ನೀರನ್ನೇ ಪೂರೈಸುತ್ತಾರೆ ಎಂಬ ಆರೋಪವೂ ಇದೆ.

‘ಶಂಕರಮಠ, ಮುಸ್ಲಿಂ ಬ್ಲಾಕ್‌ಗಳಲ್ಲಿ ನಿತ್ಯ ಕಂದು ಬಣ್ಣದ ಕೊಳಚೆ ನೀರು ಬರುತ್ತಿದ್ದು ಅಲ್ಲಿಯ ಜನರಿಗೆ ರೋಗ ಭೀತಿ ಎದುರಾಗಿದೆ. ಈ ಕುರಿತು ಶಾಸಕ ಎಂ.ಶ್ರೀನಿವಾಸ್‌ ಅವರಿಗೆ ದೂರು ಕೊಟ್ಟಿದ್ದರೂ ಸಮಸ್ಯೆ ಬಗೆಹರಿದಿಲ್ಲ. ನಾವು ಖಾಸಗಿ ಶುದ್ಧ ನೀರಿನ ಘಟಕಗಳಿಂದ ನೀರು ಖರೀದಿಸಿ ಕುಡಿಯುತ್ತಿದ್ದೇವೆ’ ಎಂದು ಶಂಕರಮಠದ ಬಸವರಾಜು ಹೇಳಿದರು.

24X7 ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಜಾರಿಗೊಳಿಸಲಾದ ‘ಅಮೃತ್‌’ ಯೋಜನೆ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಹಲವು ಗಡುವುಗಳು ಮುಗಿದು ಹೋಗಿದ್ದರೂ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ, ಕೊರೊನಾ ಸೋಂಕು ಮುಂತಾದ ಕಾರಣ ಹೇಳುತ್ತಿರುವ ಅಧಿಕಾರಿಗಳು ಕಾಮಗಾರಿಯನ್ನು ಮುಂದೂಡುತ್ತಲೇ ಇದ್ದಾರೆ. ಹೀಗಾಗಿ 24ಗಂಟೆಯೂ ನೀರು ಪಡೆಯುವ ನಗರದ ಜನರ ಕನಸು ಮರೀಚಿಕೆಯಾಗಿದೆ.

***

ಶ್ರೀರಂಗಪಟ್ಟಣ ಘಟಕದ ಪಂಪ್‌ನಲ್ಲಿ ತಾಂತ್ರಿಕೆ ಸಮಸ್ಯೆ ಇದ್ದ ಕಾರಣ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ರಿಪೇರಿಯಾಗಿದ್ದು ನಿಗದಿತಯಂತೆ ನೀರು ಪೂರೈಸಲಾಗುವುದು

– ಎಂ.ಮಾಲಿನಿ, ಕಾರ್ಯಪಾಲಕ ಎಂಜಿನಿಯರ್‌, ಜಲಮಂಡಳಿ, ಮಂಡ್ಯ

ಬೆಂಗಳೂರಿಗಿಂತಲೂ ಹೆಚ್ಚು ದರ ನಿಗದಿ

ನಿಯಮಿತವಾಗಿ ನೀರು ಪೂರೈಕೆ ಮಾಡುವಲ್ಲಿ ವಿಫಲವಾಗಿರುವ ಜಲಮಂಡಳಿ ನೀರಿನ ದರವನ್ನು ಮೊದಲ ದರಕ್ಕಿಂತ 10 ಪಟ್ಟು ಹೆಚ್ಚಳ ಮಾಡಿದೆ. ಇದು ಬೆಂಗಳೂರು ನೀರು ಪೂರೈಕೆ ಹಾಗೂ ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ದರಕ್ಕಿಂತಲೂ ಹೆಚ್ಚು ಎಂದು ಹೋರಾಟಗಾರರು ಆರೋಪಿಸುತ್ತಾರೆ.

‘ಮೈಸೂರು, ಬೆಂಗಳೂರು, ರಾಮನಗರ, ಹಾಸನ ದರಕ್ಕಿಂತಲೂ ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದೆ. ನಿಗದಿತ ಅವಧಿಯಲ್ಲಿ ನೀರು ಬಿಡದ ಅಧಿಕಾರಿಗಳಿಗೆ ಹೆಚ್ಚಿನ ದರ ನಿಗದಿ ಮಾಡಲು ನೈತಿಕತೆ ಇದೆಯಾ’ ಎಂದು ಹೋರಾಟಗಾರ ಥಾಮಸ್‌ ಆರೋಪಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT