ಶ್ರೀರಂಗಪಟ್ಟಣ: ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆವರಣ ಅವ್ಯವಸ್ಥೆಯ ಆಗರವಾಗಿದೆ.
ಶಾಲೆಯ ಮುಂದಿನ ಮೈದಾನದಲ್ಲಿ ಮಣ್ಣು ಮತ್ತು ಕಲ್ಲಿನ ಗುಡ್ಡೆಗಳು ಬಿದ್ದಿವೆ. ಮೈದಾನದ ತುಂಬೆಲ್ಲಾ ಗಿಡ ಗಂಟಿಗಳು ಯಥೇಚ್ಛವಾಗಿ ಬೆಳೆದಿವೆ. ಹೆಜ್ಜೆ ಇಟ್ಟರೆ ನೆಗ್ಗಲು ಮುಳ್ಳುಗಳು ಕಾಲಿಗೆ ಚುಚ್ಚುತ್ತವೆ. ಅಭಿವೃದ್ಧಿಯ ಹೆಸರಿನಲ್ಲಿ ಮೈದಾನದ ಸುತ್ತಲೂ ಗುಂಡಿ (ಟ್ರೆಂಚ್) ತೆಗೆದು ಹಾಗೆಯೇ ಬಿಡಲಾಗಿದೆ. ಶಾಲಾ ಕಟ್ಟಡದ ಸುತ್ತ ನಿರ್ಮಿಸಿದ್ದ ಕಾಂಪೌಂಡ್ ಭಾಗಶಃ ಕುಸಿದಿದೆ. ಮುಖ್ಯ ರಸ್ತೆಯಿಂದ ಶಾಲೆಯ ಕಡೆಗೆ ಹೋಗಲು ಸೂಕ್ತ ರಸ್ತೆಯೂ ಇಲ್ಲ. ಕಲ್ಲು, ಮುಳ್ಳಿನ ದಾರಿಯಲ್ಲಿ ಸರ್ಕಸ್ ಮಾಡಿಕೊಂಡು ಹೋಗಬೇಕಾದ ಸ್ಥಿತಿ ಬಂದೊಗಿದೆ. ಹಾಗಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪಡಿಪಾಟಲು ಅನುಭವಿಸುತ್ತಿದ್ದಾರೆ.
‘ಈ ಶಾಲೆಯು ಸಿಡಿಎಸ್ ನಾಲೆಗೆ ಹೊಂದಿಕೊಂಡಂತೆ ಇದೆ. ಶಾಲಾ ಮೈದಾನಕ್ಕೆ ಕೇವಲ ಹತ್ತಿಪ್ಪತ್ತು ಅಡಿಗಳ ದೂರದಲ್ಲಿ ಈ ನಾಲೆ ಇದ್ದು, ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಕುಸಿದಿರುವ ಕಾಂಪೌಂಡ್ ಅನ್ನು ಪುನರ್ ನಿರ್ಮಿಸಬೇಕು. ತಕ್ಷಣಕ್ಕೆ ಮುಖ್ಯ ರಸ್ತೆಯಿಂದ ಶಾಲೆಯ ವರೆಗೆ ರಸ್ತೆಯನ್ನು ಮಾಡಿಕೊಡಬೇಕು’ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹದೇವಸ್ವಾಮಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದಾರೆ.
‘ಕೆ.ಶೆಟ್ಟಹಳ್ಳಿ ಸರ್ಕಾರಿ ಪ್ರೌಢಶಾಲೆಯು ಬೆಂಗಳೂರು– ಮೈಸೂರು ಹೆದ್ದಾರಿಯ ಸಮೀಪದಲ್ಲೇ ಇದೆ. ಶಾಲೆಯ ಮುಂದೆ ವಿಶಾಲವಾದ ಆಟದ ಮೈದಾನ ಇದ್ದರೂ ನಿಷ್ಪ್ರಯೋಜಕವಾಗಿದೆ. ಆಟದ ಮೈದಾನವನ್ನು ಅಭಿವೃದ್ಧಿ ಮಾಡುವುದಾಗಿ ಹೇಳಿ ಕಲ್ಲು ಮತ್ತು ಮಣ್ಣನ್ನು ತಂದು ಗುಡ್ಡೆ ಹಾಕಲಾಗಿದೆ. ಮೈದಾನಕ್ಕೆ ಕಾಲಿಡಲು ಆಗದ ಸ್ಥಿತಿ ಬಂದಿದೆ. ಎರಡು ವರ್ಷಗಳಿಂದ ಶಾಲೆಯಲ್ಲಿ ಯಾವುದೇ ಕ್ರೀಡಾ ಚಟುವಟಿಕೆಗಳು ನಡೆಯುತ್ತಿಲ್ಲ’ ಎಂದು ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಮುರಳಿ ಬೇಸರ ವ್ಯಕ್ತಪಡಿಸುತ್ತಾರೆ.
‘ಗುತ್ತಿಗೆದಾರ ಕರಿಯಪ್ಪ ಅವರು ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯಡಿ, ₹3 ಲಕ್ಷ ವೆಚ್ಚದಲ್ಲಿ ಶಾಲಾ ಆವರಣದ ಅಭಿವೃದ್ಧಿ ಕಾಮಗಾರಿ ಆರಂಭಿಸಿದ್ದರು. ಉದ್ಯೋಗ ಚೀಟಿ ಹೊಂದಿರುವವರ ಬ್ಯಾಂಕ್ ಖಾತೆಗೆ ಗ್ರಾಮ ಪಂಚಾಯಿತಿಯಿಂದ ಹಣ ಹಾಕಿಸಿಕೊಂಡು ಕೆಲಸ ಆರಂಭಿಸಿದ್ದರು. ಆದರೆ ಹಣವನ್ನು ತಮ್ಮ ಖಾತೆಗೆ ಹಾಕಿಸಿಕೊಂಡವರ ಪೈಕಿ ಅರ್ಧದಷ್ಟು ಮಂದಿ ಗುತ್ತಿಗೆದಾರನಿಗೆ ಹಣ ಕೊಟ್ಟಿಲ್ಲ. ಮತ್ತೆ ಕೆಲವರ ಖಾತೆಗೆ ಹಾಕಿದ ಹಣ ಸಾಲಕ್ಕೆ ಜಮೆಯಾಗಿದೆ ಎಂಬ ಮಾಹಿತಿಯೂ ಇದೆ. ಹಾಗಾಗಿ ಒಂದು ವರ್ಷದ ಹಿಂದೆ ಆರಂಭಿಸಿದ ಅಭಿವೃದ್ಧಿ ಕೆಲಸ ಅರ್ಧಕ್ಕೇ ನಿಂತಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಅಪ್ಪಾಜಿ ಹೇಳುತ್ತಾರೆ.
‘ಶಾಲೆಯ ಮೈದಾನದ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿದ್ದು, ಪೂರ್ಣಗೊಳಿಸವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಪತ್ರ ಬರೆಯಲಾಗಿದೆ. ಮಣ್ಣು ಮತ್ತು ಕಲ್ಲಿನ ರಾಶಿಯನ್ನು ತೆಗೆಸಿ ಹಸನು ಮಾಡಿಕೊಡುವಂತೆ ಕೋರಲಾಗಿದೆ. ಈ ಕುರಿತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅವರನ್ನೂ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು’ ಎಂದು ಶಾಲೆಯ ಮುಖ್ಯ ಶಿಕ್ಷಕ ಮಂಚೇಗೌಡ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಕಲ್ಲು, ಮಣ್ಣಿನ ರಾಶಿ ತೆಗೆಸುವಂತೆ ಮನವಿ ಸ್ಥಗಿತಗೊಂಡ ಉದ್ಯೋಗಖಾತ್ರಿ ಕಾಮಗಾರಿ ಆಟದ ಮೈದಾನ ಇದ್ದರೂ ನಿಷ್ಪ್ರಯೋಜಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.