ಸೋಮವಾರ, ಮಾರ್ಚ್ 8, 2021
24 °C
ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ದೇವೀರಮ್ಮನಿಗೆ ಧಾರ್ಮಿಕ ವಿಧಿ– ವಿಧಾನ ಪೂಜೆ

ಸಂಭ್ರಮದ ಚಿಕ್ಕಾಡೆ ದೇವೀರಮ್ಮನ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾಂಡವಪುರ: ತಾಲ್ಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಿಗ್ಗೆ ದೇವೀರಮ್ಮನ ಜಾತ್ರೆ ವಿಜೃಂಭಣೆಯಿಂದ ನಡೆಯಿತು.

ದೇವೇಗೌಡನಕೊಪ್ಪಲು ಸಮೀಪವಿರುವ ಕಾಚೇಳಮ್ಮನ ಗುಡಿಯಿಂದ ಸೋಮವಾರ ರಾತ್ರಿ ದೇವೀರಮ್ಮನ ಹೆಬ್ಬಾರೆ ಉತ್ಸವವು ತಮಟೆ ಹಾಗೂ ಚಕ್ರಾಂಜಿ ಬಳೆ ಮೇಳದೊಂದಿಗೆ ಹೊರಟಿತು.

ತಮಟೆ ಮತ್ತು ಚಕ್ರಾಂಜಿ ‌ಬಳೆಯ ಬಡಿತಕ್ಕೆ ಕಂಚು ಮತ್ತು ಮೇಕೆಯ ಚರ್ಮದಿಂದ ಸಿದ್ಧಪಡಿಸಿದ್ದ ಭಾರವಾದ ‘ಹೆಣ್ಣು ಹೆಬ್ಬಾರೆ ಮತ್ತು ಗಂಡು ಹೆಬ್ಬಾರೆ’ಗಳನ್ನು ಹೊತ್ತ ಪರಿಶಿಷ್ಟ ಜಾತಿಯ ದೇವರಗುಡ್ಡರು ಕುಣಿಯುತ್ತ ಹೆಜ್ಜೆ ಹಾಕಿದರು. ಈ ಹೆಜ್ಜೆಗೆ ಭಕ್ತಾಧಿಗಳು ಹೆಜ್ಜೆಹಾಕಿ ಕುಣಿತು ಕುಪ್ಪಳಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು.

ದೇವೇಗೌಡನಕೊಪ್ಪಲು ಗ್ರಾಮದ ಗೇಟ್ ಬಳಿ ಹೆಬ್ಬಾರೆ ಉತ್ಸವಗಳು ಬಂದಾಗ ಗ್ರಾಮಸ್ಥರು ಪೂಜೆ ಸಲ್ಲಿಸಿ ನಮಸ್ಕರಿಸಿ ತಮ್ಮ ಭಕ್ತಿ ಮೆರೆದರು. ನಂತರ ಉತ್ಸವವು ಚಿಕ್ಕಾಡೆ ಗ್ರಾಮದತ್ತ ಸಾಗಿತು.

ಚಿಕ್ಕಾಡೆ ಗ್ರಾಮದ ಪ್ರವೇಶದ್ವಾರಕ್ಕೆ ಹೆಬ್ಬಾರೆ ಉತ್ಸವಗಳು ಬಂದಾಗ ಗ್ರಾಮದ ಮಹಿಳೆಯರು ಆರತಿ ಎತ್ತಿ ಪೂಜೆ ಸಲ್ಲಿಸಿದರು. ಊರ ತುಂಬೆಲ್ಲಾ ಬಣ್ಣಬಣ್ಣದ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಬೀದಿ ಬೀದಿಗಳಲ್ಲಿ ಹೆಬ್ಬಾರೆ ಉತ್ಸವವು ತಮಟೆ, ಚಕ್ರಾಂಜಿ ಬಳೆ ಬಡಿತ, ಸಿಡಿಮದ್ದುಗಳ ಸಿಡಿತ, ಭಕ್ತರ ಕುಣಿತಗಳೊಂದಿಗೆ ಸಾಗಿತು. ಗ್ರಾಮದ ಜನರು ಹೆಬ್ಬಾರೆ ಉತ್ಸವವಕ್ಕೆ ಕೈಮುಗಿದು ತಮ್ಮ ಭಕ್ತಿಭಾವ ಪ್ರದರ್ಶಿಸಿದರು. ಮಧ್ಯರಾತ್ರಿ ಉತ್ಸವವು ಕೊನೆಗೊಂಡಿತು.

ಬೆಳಿಗ್ಗೆ ಹೆಬ್ಬಾರೆಗಳನ್ನು ಗ್ರಾಮದ ಹೊರವಲಯದಲ್ಲಿರುವ ದೇವೀರಮ್ಮನ ದೇವಸ್ಥಾನದ ಬಳಿ ದೇವರಗುಡ್ಡರು ಹೊತ್ತು ಸಾಗಿದರು. ಅಲ್ಲಿ ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ದೇವೀರಮ್ಮನ ದೇವಸ್ಥಾನಕ್ಕೆ ಪೂಜೆ ಪುನಸ್ಕಾರಗಳು ನಡೆದವು.

ಸುತ್ತಮತ್ತಲ ಜನರು ಜಾತ್ರೆಯಲ್ಲಿ ಭಾಗವಹಿಸಿದ್ದರು. ಸಂಜೆಯಾಗುತ್ತಿದ್ದಂತೆಯೇ ದೇವೀರಮ್ಮ ದೇವಸ್ಥಾನದ ಬಾಗಿಲನ್ನು ಮುಚ್ಚಲಾಯಿತು. ಈ ದೇವಸ್ಥಾನದ ಬಾಗಿಲನ್ನು ಮತ್ತೆ ಮುಂದಿನ ವರ್ಷಕ್ಕೆ ತೆರೆಯಲಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು