ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಗ್ರಾಮೀಣ ಭಾಗದಲ್ಲಿ ಪರೀಕ್ಷೆ ಹೆಚ್ಚಳಕ್ಕೆ ಸೂಚನೆ

ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ, ಪರಿಶೀಲನೆ
Last Updated 4 ಜೂನ್ 2021, 13:40 IST
ಅಕ್ಷರ ಗಾತ್ರ

ಮಂಡ್ಯ: ‘ಗ್ರಾಮೀಣ ಭಾಗದಲ್ಲಿ ಕೋವಿಡ್‌ ಪರೀಕ್ಷೆಯನ್ನು ಮತ್ತಷ್ಟು ಹೆಚ್ಚಳ ಮಾಡಬೇಕು. ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಬೇಕು, ಲಸಿಕೆ ದೊರೆಯುವಂತಾಗಬೇಕು’ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಭೇಟಿ ನೀಡಿದ್ದ ಅವರು ಕೋವಿಡ್ ಪರಿಸ್ಥಿತಿ ನಿರ್ವಹಣೆಯನ್ನು ಪರಿಶೀಲಿಸಿ ಮಾತನಾಡಿದರು.

‘ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸಮರ್ಪಕವಾಗಿ ಚಿಕಿತ್ಸೆ ದೊರೆಯಬೇಕು. ಜಿಲ್ಲೆಯಲ್ಲಿರುವ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ಆರೋಗ್ಯ ಸೌಲಭ್ಯಗಳು ಸಮರ್ಪಕವಾಗಿ ದೊರೆಯಬೇಕು. ಯಾವುದೇ ದೂರುಗಳಿಲ್ಲದಂತೆ ನೋಡಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಹೆಚ್ಚು ಸೋಂಕಿತರು ಇರುವ ಕಾರಣ ಹಳ್ಳಿಗಳ ಮೇಲೆ ಹೆಚ್ಚು ನಿಗಾ ವಹಿಸಬೇಕು’ ಎಂದು ಹೇಳಿದರು.

‘ಜಿಲ್ಲೆಯ ಗ್ರಾಮ ಮಟ್ಟದ ಟಾಸ್ಕ್ ಪೋರ್ಸ್ ಗಳಿಂದ ಹೆಚ್ಚಿನ ಮಾಹಿತಿ ಪಡೆಯಬೇಕು. ಸೋಂಕಿತರು ಇರುವ ಕುಟುಂಬಗಳಿಗೆ ಅವಕಶ್ಯಕ ವಸ್ತುಗಳನ್ನು ಪೂರೈಸಬೇಕು. ಕರೋನಾ ನಿಯಂತ್ರಿಸಲು ಅಲ್ಲಿನ ಜನಪ್ರತಿನಿಧಿಗಳು, ಗ್ರಾಮ ಪಂಚಾಯತಿ ನೌಕರರು, ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಬೇಕು’ ಎಂದರು.

‘ಜಿಲ್ಲೆಯಲ್ಲಿ ಕರೋನಾ ನಿಯಂತ್ರಿಸಲು ಸೋಂಕಿತರ ಪತ್ತೆ ಮಾಡಲು ಪ್ರಮುಖ ಆದ್ಯತೆ ನೀಡಬೇಕು. ಕೋವಿಡ್ ಲಸಿಕೆ ನೀಡುವ ಸಂಬಂಧ ಮೊದಲು 45 ವರ್ಷ ಮೇಲ್ಪಟ್ಟವರಿಗೆ ಮೊದಲ ಆದ್ಯತೆ ನೀಡಬೇಕು. ಹಳ್ಳಿಗಳ ಮನೆಮನೆಯಲ್ಲಿ ಕೋವಿಡ್‌ ಪರೀಕ್ಷೆ ನಡೆಸಬೇಕು. ರ‍್ಯಾಪಿಡ್‌ ಪರೀಕ್ಷೆ, ಆರ್‌ಟಿಸಿಪಿಆರ್‌ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಳ ಮಾಡಬೇಕು. ಅಧಿಕಾರಿಗಳು ಹಳ್ಳಿಗಳೊಂದಿಗೆ ಹೆಚ್ಚು ಸಂಪರ್ಕ ಇಟ್ಟುಕೊಳ್ಳಬೇಕು’ ಎಂದರು.

‘ಜಿಲ್ಲೆಯಲ್ಲಿ ಲಭ್ಯವಿರುವ ಹಾಸಿಗೆ, ವೆಂಟಿಲೇಟರ್‌ಗಳು, ಆಮ್ಲಜನಕ ಸಿಲಿಂಡರ್‌ಗಳು, ಆಮ್ಲಜನಕ ಕಾನ್ಸಂಟ್ರೇಟರ್‌ಗಳನ್ನು ಸಮಪರ್ಕವಾಗಿ ಬಳಸಿಕೊಳ್ಳಬೇಕು. ನಗರ ಸೇರಿದಂತೆ ಹಳ್ಳಿಗಳಲ್ಲಿ ಲಸಿಕೆ ನೀಡುವ ಸಂಬಂಧ ಶಿಬಿರಗಳನ್ನು ಆಯೋಜಿಸಬೇಕು. ಲಸಿಕೆ ಬಗ್ಗೆ ಗೊಂದಲಗಳು ಇರಬಾರದು. ಈ ಬಗ್ಗೆ ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಮಗ್ರ ಮಾಹಿತಿ ನೀಡಬೇಕು’ ಎಂದರು.

‘18 ವರ್ಷ, 45 ವರ್ಷ ಮೇಲ್ಪಟ್ಟ ಆದ್ಯತಾ ವಲಯದ ಸಿಬ್ಬಂದಿಗೆ ಲಸಿಕೆ ಹಾಕಬೇಕು. ಕೋವಿಡ್-19 ಕರ್ತವ್ಯದಲ್ಲಿರುವ ಶಿಕ್ಷಕರು, ಸರ್ಕಾರಿ ಸಾರಿಗೆ ಸಿಬ್ಬಂದಿ, ಆಟೊ ಚಾಲಕರು, ಕ್ಯಾಬ್ ಚಾಲಕರು, ಬೀದಿ ಬದಿ ವ್ಯಾಪಾರಿಗಳು, ವಿದ್ಯುಚ್ಛಕ್ತಿ, ನೀರು ಪೂರೈಕೆ ಸಿಬ್ಬಂದಿ, ಅಂಚೆ ಇಲಾಖೆ ನೌಕರರು, ರಸ್ತೆ ಕಾಮಗಾರಿ ಮಾಡುವವರು, ಭದ್ರತಾ ಮತ್ತು ಹೌಸ್ ಕೀಪಿಂಗ್ ಸಿಬ್ಬಂದಿ, ಕಚೇರಿಗಳಲ್ಲಿ, ನ್ಯಾಯಾಂಗ ಅಧಿಕಾರಿಗಳ ಬಳಿ ಕೆಲಸ ಮಾಡುವವರು,ಕಟ್ಟಡಕಾರ್ಮಿಕರು, ಗಾರ್ಮೆಂಟ್ಸ್ ಕಾರ್ಮಿಕರು,ಹಿರಿಯರು ಮತ್ತು ರೋಗಿಗಳನ್ನು ನೋಡಿಕೊಳ್ಳುವವರು, ಮಕ್ಕಳ ರಕ್ಷಣಾ ಅಧಿಕಾರಿಗಳಿಗೆ ಲಸಿಕೆ ನೀಡುವ ಕೆಲಸ ಕ್ಷಿಪ್ರಗತಿಯಲ್ಲಿ ಸಾಗಬೇಕು’ ಎಂದು ಸೂಚಿಸಿದರು.

‘ಲಸಿಕೆ ನಿಡುವ ಸಂಬಂಧ ಹೆಚ್ಚು ಕರೋನಾ ಪ್ರಕರಣಗಳಿರುವ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಲಸಿಕೆ ಹಾಕಲು ಆದ್ಯತೆ ನೀಡಬೇಕು. ಕೋವಿಡ್ ನಿಂದ ಕೊರೊನಾ ವಾರಿಯರ್‌ಗಳೂ ಮೃತರಾದರೆ ಪರಿಹಾರಧನ ಹಾಗೂ ಪಿಂಚಣಿ ನೀಡಲು ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಪ್ರಾದೇಶಿಕ ಆಯುಕ್ತರಾದ ಡಾ.ಜಿ.ಸಿ.ಪ್ರಕಾಶ್, ಜಿಲ್ಲಾಧಿಕಾರಿ ಎಸ್ ಅಶ್ವತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಶ್ವಿನಿ, ಜಿ.ಪಂ ಸಿಇಒ ದಿವ್ಯಾಪ್ರಭು, ಹೆಚಚುವರಿ ಜಿಲ್ಲಾಧಿಕಾರಿ ಶೈಲಜಾ, ಜಿಲ್ಲಾ ಆರೋಗ್ಯಾಧಿಕಾರಿ ಧನಂಜಯ, ಮಿಮ್ಸ್ ನ ನಿರ್ದೇಶಕ ಎಂ.ಆರ್ ಹರೀಶ್, ಜಿಲ್ಲಾ ಆರ್‌ಸಿಎಚ್ ಡಾ.ಸೋಮಶೇಖರ್ ಇದ್ದರು.

ಮಕ್ಕಳ ಚಿಕಿತ್ಸೆ ಆದ್ಯತೆ ನೀಡಿ
‘3ನೇ ಕೋವಿಡ್‌ ಅಲೆ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವ ಅಪಾಯ ಇರುವ ಕಾರಣ ಅಧಿಕಾರಿಗಳು ಮಕ್ಕಳ ಚಿಕಿತ್ಸೆಗೆ ಹೆಚ್ಚು ಆದ್ಯತೆ ನೀಡಬೇಕು. ಮಕ್ಕಳಿಗಾಗಿ ಪ್ರತ್ಯೇಕ ವಾರ್ಡ್‌, ಪ್ರತ್ಯೇಕ ಕೋವಿಡ್‌ ಕೇರ್‌ ಕೇಂದ್ರ ತೆರೆಯಬೇಕು’ ಎಂದು ಪಿ.ರವಿಕುಮಾರ್‌ ಸೂಚಿಸಿದರು.

‘ಮಕ್ಕಳು ಕೂಡ ಈಗಾಗಿಲೇ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‌ಗೆ ತುತ್ತಾಗುತ್ತಿದ್ದಾರೆ. ಇದನ್ನು ಮನಗಂಡು ಆರೋಗ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗೆ ಅಗತ್ಯ ಸೂಚನೆ ನೀಡಬೇಕು. ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ತಕ್ಷಣ ಚಿಕಿತ್ಸೆ ಕೊಡಿಸುವಂತೆ ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT