ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮರಳು-ಕಲ್ಲು ಗಣಿಗಾರಿಕೆ ನಿಲ್ಲಲಿ: ಸಂಸದೆ ಸುಮಲತಾ

ಜಿಲ್ಲಾ ಅಭಿವೃದ್ಧಿ ಮತ್ತು ಸಮನ್ವಯ ಸಮಿತಿ ಸಭೆಯಲ್ಲಿ ಸಂಸದೆ ಸುಮಲತಾ ಸೂಚನೆ
Published 3 ನವೆಂಬರ್ 2023, 15:54 IST
Last Updated 3 ನವೆಂಬರ್ 2023, 15:54 IST
ಅಕ್ಷರ ಗಾತ್ರ

ಮಂಡ್ಯ: ‘ಮದ್ದೂರು ತಾಲ್ಲೂಕು ಕೆಕ್ಕರೆಬೆಳ್ಳೂರು ಪ್ರವಾಸಿ ತಾಣ ಸೇರಿದಂತೆ ಶಿಂಷಾ ನದಿ ತಟದಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿರುವ ದೂರುಗಳು ಕೇಳಿ ಬರುತ್ತಿವೆ. ಅಕ್ರಮ ಗಣಿಗಾರಿಕೆ ತಡೆಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸಂಸದೆ ಸುಮಲತಾ ಅದಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ, ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಅಭಿವೃದ್ಧಿ ಮತ್ತು ಸಮನ್ವಯ ಸಮಿತಿ (ದಿಶಾ) ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ವಿಶ್ವಪ್ರಸಿ ಪಕ್ಷಿಧಾಮದಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿರುವುದನ್ನು ತಕ್ಷಣವೇ ನಿಲ್ಲಿಸಬೇಕು. ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ತಾಲ್ಲೂಕು ವ್ಯಾಪ್ತಿಯ ಅರಣ್ಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನೂ ತಡೆಯಬೇಕು. ಈ ಹಿಂದೆಯೂ ಹಲವು ಸಂದರ್ಭಗಳಲ್ಲಿ ಕಲ್ಲು ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿದ್ದೇನೆ. ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುವುದನ್ನು ಸಹಿಸುವುದಿಲ್ಲ’ ಎಂದರು.

ಜಿಲ್ಲಾಧಿಕಾರಿ ಕುಮಾರ ಉತ್ತರಿಸಿ ‘ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ತಂಡ ರಚನೆ ಮಾಡಿಕೊಂಡಿದ್ದು ಗಣಿಗಾರಿಕೆ ದೂರುಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆ ದೂರುಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಿದ್ದಾರೆ’ ಎಂದರು.

ಬರ ಪರಿಸ್ಥಿತಿ ನಿವಾರಿಸಿ: ‘ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಎಲ್ಲಾ ಏಳೂ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕು. ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಂಬಂಧ ಯಾವುದೇ ದೂರುಗಳು ಬಾರದಂತೆ ಕ್ರಮ ವಹಿಸಬೇಕು’ ಎಂದು ಸುಮಲತಾ ತಿಳಿಸಿದರು.

‘ನಗರದ ತಮಿಳು ಕಾಲೊನಿ ನಿವಾಸಿಗಳನ್ನು ಚಿಕ್ಕಮಂಡ್ಯದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿರುವ ಮನೆಗಳಿಗೆ ಸ್ಥಳಾಂತರ ಮಾಡಲು ಕ್ರಮ ವಹಿಸಬೇಕು. 576 ಮನೆಗಳ ನಿರ್ಮಾಣವಾಗಿದ್ದು ಅರ್ಹ ಫಲಾನುಭವಿಗಳನ್ನು ಗುರಿತಿಸಿ ಸ್ಥಳಾಂತರ ಮಾಡಬೇಕು’ ಎಂದರು.

ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಉತ್ತರಿಸಿ ‘100 ಮನೆಗಳು ಎಲ್ಲಾ ಮೂಲ ವ್ಯವಸ್ಥೆಯೊಂದಿಗೆ ಸಿದ್ಧವಾಗಿವೆ. 10 ದಿನದ ಒಳಗಾಗಿ ಇನ್ನುಳಿದ ಮನೆಗಳು ಸಹ ಸಿದ್ಧವಾಗಲಿವೆ. ಎಲ್ಲಾ ಸೌಲಭ್ಯಗಳನ್ನು ಒದಗಿಸಿದ ನಂತರ ನಿವಾಸಿಗಳ ಸ್ಥಳಾಂತರಕ್ಕೆ ಕ್ರಮ ವಹಿಸಲಾಗುವುದು’ ಎಂದರು.

‘ಬೆಂಗಳೂರು- ಮೈಸೂರು ಹೆದ್ದಾರಿ, ಸರ್ವೀಸ್‌ ರಸ್ತೆಯಲ್ಲಿ ನಿರ್ಮಾಣವಾಗಿರುವ ಹಂಪ್‌ಗಳು ವೈಜ್ಞಾನಿಕವಾಗಿ ನಿರ್ಮಾಣವಾಗಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಅವುಗಳನ್ನು ತೆರವುಗೊಳಿಸಲು ಕ್ರಮ ವಹಿಸಬೇಕು’ ಎಂದು ಸಂಸದೆ ಹೇಳಿದರು.

ಜಿಲ್ಲಾಧಿಕಾರಿ ಉತ್ತರಿಸಿ ‘ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಭಾಗೀಯ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಬಾಕಿ ಉಳಿದಿರುವ ಕೆಳಸೇತುವೆಗಳ ನಿರ್ಮಾಣಕ್ಕೂ ಕೋರಲಾಗಿದೆ’ ಎಂದರು.

‘ಜಿಲ್ಲೆಯ ರೈತರ ಆರ್ಥಿಕ ಮಟ್ಟ ಸುಧಾರಿಸಲು ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸಲು ಕ್ರಮ ವಹಿಸಬೇಕು. ಸಿರಿಧಾನ್ಯ ಮೇಳ ಹಾಗೂ ಬೆಲ್ಲದ ಪರಿಷೆ ಕಾರ್ಯಕ್ರಮವನ್ನು ಹೆಚ್ಚಾಗಿ ಆಯೋಜನೆ ಮಾಡಿ ರೈತ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಬೇಕು’ ಎಂದು ಸುಮಲತಾ ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್‌.ಯತೀಶ್ ಹಾಜರಿದ್ದರು.

ಮರಳು ಗಣಿಗಾರಕೆ; ಜನರಿಂದ ದೂರು ಸಮಗ್ರ ಪರಿಶೀಲನೆ ನಡೆಸಲು ಸೂಚನೆ ಕುಡಿಯುವ ನೀರಿನ ವ್ಯತ್ಯಯ ಆಗದಿರಲಿ

‘ಅಮೃತ್‌’ ಕಾಮಗಾರಿ ಪೂರ್ಣಗೊಳಿಸಿ

ಮಂಡ್ಯ: ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಜೊತೆಗೆ ಪಿ.ಎಂ ಸ್ವನಿಧಿ ಸ್ವಚ್ಛಭಾರತ ಮಿಷನ್‌ ಪ್ರಧಾನಮಂತ್ರಿ ಆವಾಸ್‌ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು’ಎಂದು ಸಂಸದೆ ಸುಮಲತಾ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಸಲಹಾ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ‘ಪಿ.ಎಂ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪರಿಗಳಿಗೆ₹ 10 ಸಾಲ ನೀಡಲಾಗುತ್ತಿದೆ. ಸಾಲ ಪಡೆದವರು ಸಾಲ ತೀರಿಸಿದ ನಂತರ ಅವರಿಗೆ ವ್ಯಾಪಾರ ಕೈಗೊಳ್ಳಲು ₹ 50 ಸಾವಿರದವರೆಗೆ ಸಾಲ ನೀಡಲಾಗುವುದು. ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಿದರೆ ಬೀದಿ ಬದಿ ವ್ಯಾಪಾರಿಗಳು ಆರ್ಥಿಕವಾಗಿ ಸದೃಢಗೊಳ್ಳಲು ಸಾಧ್ಯವಾಗುತ್ತದೆ’ ಎಂದರು. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 2015-16ನೇ ಸಾಲಿನಿಂದ 2021-22ನೇ ಸಾಲಿನಲ್ಲಿ 1283 ಮನೆಗಳು ಅನುಮೋದನೆಯಾಗಿದ್ದು 948 ಪೂರ್ಣಗೊಂಡಿವೆ. 278 ಪ್ರಗತಿಯಲ್ಲಿದ್ದು 57 ಇನ್ನೂ ಪ್ರಾರಂಭವಾಗಿರುವುದಿಲ್ಲ. ಪ್ರಾರಂಭವಾಗದೇ ಇರುವ ಮನೆಗಳ ಕಾಮಗಾರಿಯನ್ನು ಶೀಘ್ರವಾಗಿ ಪ್ರಾರಂಭಿಸಿ’ ಎಂದು ಸೂಚಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಕುಮಾರ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರ ಮಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT