ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಜಿ ಶಾಸಕ ಡಿ.ಆರ್‌.ಪಾಟೀಲ, ಶ್ರೀಪಾದಗೆ ಪ್ರಶಸ್ತಿ ಪ್ರದಾನ

Published 10 ಜುಲೈ 2024, 14:24 IST
Last Updated 10 ಜುಲೈ 2024, 14:24 IST
ಅಕ್ಷರ ಗಾತ್ರ

ಮಂಡ್ಯ: ‘ಕಾವೇರಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಜಿ.ಮಾದೇಗೌಡ ಅವರು ಐತಿಹಾಸಿಕ ಕಾವೇರಿ ಅಂಕಿಅಂಶ ಇಟ್ಟುಕೊಂಡು ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದ ವಾಸ್ತವವನ್ನು ಎಳೆಎಳೆಯಾಗಿ ರೈತರ ಪರವಾಗಿ ಮಂಡಿಸುತ್ತಾ ಹೋರಾಡಿದ ಧೀಮಂತ ನಾಯಕ’ ಎಂದು ಸಾಹಿತಿ ಎಸ್‌.ಜಿ.ಸಿದ್ದರಾಮಯ್ಯ ಶ್ಲಾಘಿಸಿದರು.

ನಗರದ ರೈತ ಸಭಾಂಗಣದಲ್ಲಿ ಡಾ.ಜಿ.ಮಾದೇಗೌಡ ಪ್ರತಿಷ್ಠಾನ ಮತ್ತು ಭಾರತೀ ಎಜುಕೇಷನ್‌ ಟ್ರಸ್ಟ್‌ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ 24ನೇ ವರ್ಷದ ರಾಜ್ಯ ಮಟ್ಟದ ‘ಡಾ.ಜಿ.ಮಾದೇಗೌಡ ಸಮಾಜ ಸೇವಾ’ ಮತ್ತು ‘ಸಾವಯವ ಕೃಷಿಕ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರವೂ ಸಹ ಸಂಧಿಗ್ಧ ಕಾಲಘಟ್ಟವಿರುವುದನ್ನು ನಾವು ಕಾಣಬಹುದು. ಒಂದು ಕಾಲದಲ್ಲಿ ಮೌಲ್ಯಕ್ಕಾಗಿ ರಾಜಕಾರಣ ಮಾಡುತ್ತಿದ್ದ ವ್ಯಕ್ತಿ ಮತ್ತು ಶಕ್ತಿಯಿತ್ತು. ಈಗ ಬೇರೆ ಹಿತಾಸಕ್ತಿಗಳಿಗಾಗಿ ರಾಜಕಾರಣ ಮಾಡುವುದನ್ನು ನೋಡುತ್ತಿದ್ದೇವೆ. ಆದರೆ ಜಿ.ಮಾದೇಗೌಡ ಅವರು ಆದರ್ಶದಿಂದಾದರೂ ಸರಿ ಅಥವಾ ರಾಜಕಾರಣದಿಂದಾದರೂ ಸರಿ ಅವರು ನಿರ್ವಹಿಸಿದ ರೀತಿ ಎಲ್ಲರಿಗೂ ಮಾರ್ಗದರ್ಶಕವಾಗಿದೆ ಎಂದರು.

ಚರಿತ್ರೆಯ ನೆನಪು ಅಗತ್ಯ:

ಜನಪ್ರತಿನಿಧಿಯಾಗಿರುವವರಿಗೆ ಚರಿತ್ರೆಯ ನೆನಪು ಇಲ್ಲದೇ ಹೋದರೆ ವರ್ತಮಾನದ ಸಮಸ್ಯೆ ಅರ್ಥವಾಗುವುದಿಲ್ಲ. ನೀರಿನ ವಿವಾದದ ತಜ್ಞತೆಯು ನಂಜೇಗೌಡ ಮತ್ತು ಜಿ.ಮಾದೇಗೌಡರಿಗಿತ್ತು, ಇದು ಪ್ರತಿಯೊಬ್ಬ ರಾಜಕಾರಣಿಗೂ ಇರಬೇಕಾದ ಕಾಳಜಿ ಎಂದು ಹೇಳಿದರು.

ಜಿ.ಮಾದೇಗೌಡ ಸಮಾಜ ಸೇವಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗದಗ ಕೆ.ಎಚ್. ಪಾಟೀಲ್ ಪ್ರತಿಷ್ಠಾನದ ಅಧ್ಯಕ್ಷ ಡಿ.ಆರ್.ಪಾಟೀಲ್, ‘ಮಾದೇಗೌಡರು ಮತ್ತು ಎಚ್.ಕೆ. ಪಾಟೀಲ್ ಅವರಲ್ಲಿ ಬಹಳ ಸಾಮ್ಯತೆ ಇದೆ. ಈ ನೆಲದ ಗತ್ತನ್ನು ಉಪಯೋಗಿಸಿಕೊಂಡು ಸಾಕಷ್ಟು ರೈತರಿಗೆ ರೈತ ಕಾರ್ಮಿಕರಿಗೆ ಅನುಕೂಲಕರವಾದ ಕೆಲಸ ಕಾರ್ಯಗಳನ್ನು ಮಾಡಿದವರು. ವಿಶೇಷವಾಗಿ ಶಿಕ್ಷಣರಂಗದಲ್ಲಿ ಸಾಕಷ್ಟು ಅನುಕೂಲ ಮಾಡಿದ್ದರಿಂದ ಬಹಳಷ್ಟು ಕುಟುಂಬಗಳಲ್ಲಿ ದೊಡ್ಡ ಬದಲಾವಣೆ ಕಾಣಲು ಸಾಧ್ಯವಾಗಿದೆ’ ಎಂದರು.

ಪ್ರಶಸ್ತಿ ಪ್ರದಾನ:

ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಗದಗ ಜಿಲ್ಲೆಯ ಮಾಜಿ ಶಾಸಕ ಡಿ.ಆರ್. ಪಾಟೀಲ್ ಅವರಿಗೆ ‘ಡಾ.ಜಿ.ಮಾದೇಗೌಡ ಸಮಾಜ ಸೇವಾ ಪ್ರಶಸ್ತಿ’ ಹಾಗೂ ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾದ (ಪ್ರಸ್ತುತ ಮಳವಳ್ಳಿ ತಾಲ್ಲೂಕಿನ ಮಲ್ಲಿಗಹಳ್ಳಿ) ಸಾವಯವ ಕೃಷಿಕ ‘ಶ್ರೀಪಾದ ಪಿ. ಆಚಾರ್ಯ’ ಅವರಿಗೆ ‘ಸಾವಯವ ಕೃಷಿಕ ಪ್ರಶಸ್ತಿ’ ಜೊತೆ ₹25 ಸಾವಿರ ಮತ್ತು ಫಲಕ ನೀಡಿ ಸನ್ಮಾನಿಸಲಾಯಿತು.

ಶಾಸಕ ಪಿ. ರವಿಕುಮಾರ್, ಬಿ.ಇ.ಟಿ ಅಧ್ಯಕ್ಷ ಮಧು ಜಿ.ಮಾದೇಗೌಡ, ಡಾ.ಜಿ.ಮಾದೇಗೌಡ ಪ್ರತಿಷ್ಠಾನ ಮತ್ತು ಭಾರತಿ ಎಜುಕೇಷನ್ ಟ್ರಸ್ಟ್‌ನ ಪದಾಧಿಕಾರಿಗಳು, ಜಿ.ಮಾದೇಗೌಡ ಅಭಿಮಾನಿ ಬಳಗದವರು ಹಾಗೂ ಶಿಕ್ಷಕರು, ಸಾಹಿತಿಗಳು ಸೇರಿದಂತೆ ಅವರ ಶಿಷ್ಯ ವೃಂದದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT