ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಮೆಂಟ್‌ ಕಾಡಿನಲ್ಲಿ ಪ್ರತಿಮೆಯಾದ ನಾಡಪ್ರಭು!

‘ಸಿರಿಗೆ ಸೆರೆ’ ನಾಟಕಕ್ಕೆ ಸಮಕಾಲೀನ ಸ್ಪರ್ಶ, ಮನಸೂರೆಗೊಂಡ ಪ್ರಯೋಗ
Last Updated 21 ಜುಲೈ 2019, 19:45 IST
ಅಕ್ಷರ ಗಾತ್ರ

ಮಂಡ್ಯ: ಸಿಮೆಂಟ್‌ ಕಾಡಿನಲ್ಲಿ ‘ನಾಡಪ್ರಭು ಕೆಂಪೇಗೌಡರು’ ಕಂಚಿನ ಪ್ರತಿಮೆಗಳಾಗಿದ್ದಾರೆ. ಅಭಿವೃದ್ಧಿಯ ನೆಪದಲ್ಲಿ ಬದುಕು ಅದಲು–ಬದಲಾಗುತ್ತಿದ್ದು ‘ಕಾಲ’ ಪುರುಷನೇ ಚಕಿತಗೊಳ್ಳುತ್ತಾನೆ, ಮೌನ ಪ್ರತಿಮೆಗಳ ಕಂಡು ಮರುಗುತ್ತಾನೆ!

ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡರ ಜೀವನಗಾಥೆಯ ಮೇಲೆ ಎಣೆಯಲಾಗಿರುವ ‘ಸಿರಿಗೆ ಸೆರೆ’ ರಂಗಪ್ರಯೋಗಕ್ಕೆ ನಿರ್ದೇಶಕ ಉಮೇಶ ಪಾಟೀಲ ಅವರು ಸಮಕಾಲೀನ ಸ್ಪರ್ಶ ನೀಡಿರುವುದು ಪ್ರೇಕ್ಷಕರ ಮನಸೂರೆಗೊಂಡಿತು. ಕರ್ನಾಟಕ ಸಂಘದ ವತಿಯಿಂದ ನಗರದ ವಿವೇಕಾನಂದ ರಂಗಮಂದಿರದಲ್ಲಿ ಶನಿವಾರ ಮತ್ತು ಭಾನುವಾರ ಎರಡು ಪ್ರದರ್ಶನ ನಡೆದವು

ನಾಡು ಕಟ್ಟಿದ ಕೆಂಪೇಗೌಡರ ಬದುಕಿನ ಎಳೆಗಳಿಗೆ ರಂಗಕರ್ಮಿ ಜಯರಾಮ ರಾಯಪುರ ಅವರು ನಾಟಕ ರೂಪಕೊಟ್ಟಿದ್ದಾರೆ. ಐತಿಹಾಸಿಕ ಘಟನೆಗಳನ್ನು ಜೋಡಿಸಿ ಜೀವನಗಾಥೆಯ ನಾಟಕ ರೂಪಿಸಿದ್ದಾರೆ. ಅದನ್ನು ನಿರ್ದೇಶಕರು ವಿಭಿನ್ನವಾಗಿ ರಂಗರೂಪ ನೀಡಿ ಪ್ರಭುದ್ಧತೆ ಮೆರೆದಿದ್ದಾರೆ. ಕೆಂಪೇಗೌಡರ ಜೀವನಗಾಥೆ ಸಮಾನ್ಯವಾಗಿ ಎಲ್ಲರೂ ತಿಳಿದಿರುವಂಥದ್ದು. ಯಲಹಂಕ, ಬೆಂಗಳೂರು, ಮಾಗಡಿ ಕುರಿತು ಸಾಕಷ್ಟು ಜಿಜ್ಞಾಸೆಗಳಿವೆ. ಆದರೆ ಕೆಂಪೇಗೌಡರು ತಮ್ಮ ಜೀವನವಿಡೀ ಅನುಸರಿಸಿದ ಬದುಕಿನ ತತ್ವಗಳಿಗೆ ಮನ್ನಣೆ ಕೊಟ್ಟು ‘ಸಿರಿಗೆ ಸೆರೆ’ ನಾಟಕ ಕಟ್ಟಲಾಗಿದೆ.

ವಿಜಯನಗರ ಅರಸ ಅಳಿಯ ರಾಮರಾಯ ಕಂಡವರ ಮಾತು ಕೇಳಿ ಸಾಮಂತ ಪಾಳೇಗಾರನಾಗಿದ್ದ ಕೆಂಪೇಗೌಡರನ್ನು ಸೆರೆಗೆ ತಳ್ಳುತ್ತಾನೆ. ಕೆಂಪೇಗೌಡ ಹೊಸ ನಾಣ್ಯ ಜಾರಿಗೆ ತಂದು ಪ್ರತ್ಯೇಕತೆ ಮೆರೆಯುತ್ತಿದ್ದಾರೆ ಎಂಬ ಚಾಡಿ ಮಾತಿಗೆ ರಾಮರಾಯ ಕಿವಿಯಾಗುತ್ತಾನೆ. ನಾಡಪ್ರಭುಗಳು ಸತ್ಯ ತಿಳಿಸಲೆತ್ನಿಸಿದರೂ ಸಾಧ್ಯವಾಗದೇ ಆರು ವರ್ಷ ಸೆರೆಮನೆವಾಸ ಅನುಭವಿಸುತ್ತಾರೆ.

ಆದರೆ ಬಹುಮನಿ ಸುಲ್ತಾನರ ಜೊತೆ ಸಂಬಂಧ ಹಳಸಿದಾಗ ರಾಮರಾಯ ಪಾಳೇಗಾರರಿಂದಲೇ 20 ಸೇರು ಚಿನ್ನ ಪಡೆದು ಕೆಂಪೇಗೌಡರನ್ನು ಬಿಡುಗಡೆ ಮಾಡುತ್ತಾನೆ. ನಾಡಪ್ರಭುವಿನ ಪ್ರೀತಿಗಾಗಿ ಜನ ತಮ್ಮ ಕೈಲಾದ ಸಹಾಯ ಮಾಡುತ್ತಾರೆ. ಸಿರಿ ಕೊಟ್ಟು ಸೆರೆಯಿಂದ ಪ್ರಭುಗಳನ್ನು ಬಿಡಿಸಿಕೊಳ್ಳಲಾಗುತ್ತದೆ. ಆಗಲೂ ರಾಮರಾಯ ಮತ್ತೊಂದು ಷರತ್ತು ವಿಧಿಸುತ್ತಾನೆ. ಅದರಂತೆ ನಾಡಪ್ರಭುಗಳು ಬೆಂಗಳೂರು ತೊರೆದು ಮಾಗಡಿಯಲ್ಲಿ ನೆಲೆಸುತ್ತಾರೆ. ಕೋಟೆ ಕಟ್ಟಿ, ಪೇಟೆ ಕಟ್ಟಿದ್ದ ಕೆಂಪೇಗೌಡರು ನೋವಿನಿಂದಲೇ ಪ್ರೀತಿಯ ಊರು ತೊರೆಯುತ್ತಾರೆ. ಜನ ನೋವಿನಿಂದಲೇ ಬೀಳ್ಕೊಡುತ್ತಾರೆ. ಇದಿಷ್ಟು ನಾಟಕದ ವಸ್ತು.

ನಾಟಕದ ವಸ್ತುವನ್ನು ವಿಶೇಷ ರೀತಿಯಲ್ಲಿ ರಂಗಕ್ಕೆ ತಂದಿರುವುದು ಗಮನ ಸೆಳೆಯಿತು. ಪ್ರತಿ ದೃಶ್ಯದಲ್ಲೂ ಕುತೂಹಲ ಹಿಡಿದಿಟ್ಟುಕೊಳ್ಳವ ಯತ್ನವಿದೆ. ಭಾವನಾತ್ಮಕ ಸನ್ನಿವೇಶಗಳಲ್ಲಿ ಕಣ್ಣಾಲಿಗಳು ತುಂಬಿ ಬರುತ್ತವೆ. ಪುರಜನರು ನಾಡಪ್ರಭುವಿಗಾಗಿ ಹಾತೊರೆಯುವ ದೃಶ್ಯಗಳು ಮನನ್ಸುಗಳನ್ನು ಅರಳಿಸುತ್ತವೆ. ದೊರೆಯನ್ನು ಬಿಡಿಸಿಕೊಳ್ಳಲು ಕೂಲಿ ಮಾಡುವವರು, ತಮಟೆ ಹೊಡೆಯುವವರೂ ಪುಡಿಗಾಸು ಅರ್ಪಿಸುವ ದೃಶ್ಯಗಳು ಗಮನ ಸೆಳೆಯುತ್ತವೆ.

‘ಕಾಲ ಬದಲಾಗಿದೆ, ಅದಲು ಬದಲಾಗಿದೆ, ಬೀಸುವ ತಂಗಾಳಿ ಕಾಣದಾಗಿದೆ, ಗುಡಿ–ಗೋಪುರಗಳು ಮುಸುಕಾಗಿವೆ, ಅಭಿವೃದ್ಧಿಯ ನೆಪದಲ್ಲಿ ಹರಿಕಾರನ ನೆನಪು ಶಿಲೆಯಾಗಿವೆ’ ಎಂಬ ಸಾಲಿನ ಮೂಲಕ ನಿರ್ದೇಶಕರು ನಾಟಕಕ್ಕೆ ಸಮಕಾಲೀನ ರೂಪ ನೀಡಿದ್ದಾರೆ. ಬೆಂಗಳೂರು ಸಿಮೆಂಟ್‌ ಕಾಡಾಗುತ್ತಿದ್ದು ತಿಳಿಗಾಳಿಗೂ ಜಾಗವಿಲ್ಲದಂತಾಗಿದೆ. ಇದರ ನಡುವೆ ಸಾಮಾಜಿಕ ಹರಿಕಾರ ಕೆಂಪೇಗೌಡರು ಕೇವಲ ಪ್ರತಿಮೆಯಾಗುತ್ತಿದ್ದಾರೆ ಎಂಬ ಸಂದೇಶದೊಂದಿಗೆ ನಾಟಕ ಕೊನೆಗೊಳ್ಳುತ್ತದೆ. ಬಿಳಿ ವಸ್ತ್ರದಲ್ಲಿ ಕಟ್ಟಡಗಳನ್ನು ಚಿತ್ರಿಸಿ ಕಾಲ ಪುರುಷ ಅದನ್ನು ಎಳೆದು ತರುವ ದೃಶ್ಯ ಮನಮೋಹಕವಾಗಿದೆ.

‘ಕೋಟೆ ಕಟ್ಟಿದ ಪಾಳೇಗಾರ ಕೆಂಪೇಗೌಡ, ಕೋಟೆ ಕಟ್ಟಿ ಪೇಟೆ ಬೆಳೆಸಿದ ಕೆಂಪೇಗೌಡ, ಪ್ರೀತಿಯ ನಾಡು ತೊರೆದ ಕೆಂಪೇಗೌಡ’ ಗೀತೆ ಪ್ರೇಕ್ಷಕರಲ್ಲಿ ವಿಷಾದ ತುಂಬುತ್ತದೆ. ಸಂಗೀತ ಜನರ ನೆನಪಿನಂಗಳದಲ್ಲಿ ಉಳಿಯುತ್ತದೆ. ನಟರು ಮತ್ತಷ್ಟು ತಾಲೀಮಿನೊಂದಿಗೆ ರಂಗಕ್ಕೆ ಬರಬೇಕಿತ್ತು ಎಂದೆನಿಸಿದರೂ ನಾಟಕದ ಆಶಯವನ್ನು ಪ್ರೇಕ್ಷಕರ ಅಂತರಕ್ಕಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೆಂಪೇಗೌಡರಾಗಿ ಶ್ರೀಕಂಠೇಗೌಡ, ಚಿಕ್ಕಭೈರೇಗೌಡರಾಗಿ ನಿಶ್ಚಯ್‌ ಜೈನ್‌, ಜಗದೇವರಾಯರಾಗಿ ಮಂಗಲ ಲಂಕೇಶ್‌, ತಿರುಮಲರಾಯರಾಗಿ ಶಿವರಾಮು, ವ್ಯಾಪಾರಿ–ಪ್ರತಿಮೆಯಾಗಿ ಕಾಳೇನಹಳ್ಳಿ ಕೆಂಚೇಗೌಡ, ‘ಕಾಲ’ನಾಗಿ ರಂಜನಾ, ವ್ಯಾಪಾರಿಯಾಗಿ ಜಯರತ್ನಾ ಗಮನ ಸೆಳೆದರು.

ಶಾಸಕರೇ, ಕೆಂಪೇಗೌಡರನ್ನು ನೋಡಿ
ರಂಗಪ್ರಯೋಗ ವೀಕ್ಷಿಸಿದ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಮಾತನಾಡಿ ‘ಪ್ರಸ್ತುತ ನಮ್ಮ ರಾಜ್ಯದ ರಾಜಕೀಯ ನಾಟಕ ಇಡೀ ದೇಶದ ಗಮನ ಸೆಳೆದಿದೆ. ಕೆಂಪೇಗೌಡರು ಜನರಿಗಾಗಿ ಸೆರೆಮನೆವಾಸ ಅನುಭವಿಸಿದರು. ಆದರೆ ನಮ್ಮ ಶಾಸಕರು ಪ್ರಜಾಪ್ರಭುತ್ವವನ್ನೇ ಮಾರಾಟ ಮಾಡಿ ರೆಸಾರ್ಟ್‌ ರಾಜಕೀಯ ಮಾಡುತ್ತಿದ್ದಾರೆ. ಇವರೆಲ್ಲರೂ ಕೆಂಪೇಗೌಡರನ್ನು ನೋಡಿ ಕಲಿಯಬೇಕು. ಸಿರಿಗೆ ಸೆರೆ ನಾಟಕ ಪ್ರಸ್ತುತ ವಿದ್ಯಾಮಾನವನ್ನು ಧ್ವನಿಸುತ್ತದೆ’ ಎಂದರು. ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT