ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಮೇಲೆ ಡ್ರೋನ್‌ ದಾಳಿ; ಬೃಂದಾ ಕಾರಟ್‌ ಆಕ್ರೋಶ

ಮಂಡ್ಯದಲ್ಲಿ ಶಾಂತಿ– ಸೌಹಾರ್ದ– ಸಹಬಾಳ್ವೆಗಾಗಿ ಶ್ರಮಜೀವಿಗಳ ಸಮಾವೇಶ
Published 3 ಮಾರ್ಚ್ 2024, 13:42 IST
Last Updated 3 ಮಾರ್ಚ್ 2024, 13:42 IST
ಅಕ್ಷರ ಗಾತ್ರ

ಮಂಡ್ಯ: ‘ರಕ್ಷಣಾ ಕಾರ್ಯಕ್ಕೆ ಬಳಸುವ ಡ್ರೋನ್‌ಗಳಿಂದ ಪ್ರತಿಭಟನನಿರತ ರೈತರ ಮೇಲೆ ಕೇಂದ್ರ ಸರ್ಕಾರ ಅಶ್ರುವಾಯು ಶೆಲ್‌ ದಾಳಿ ನಡೆಸಿರುವುದು ಖಂಡನೀಯ. ಸ್ವತಂತ್ರ ಭಾರತದಲ್ಲಿ ಯಾವ ಸರ್ಕಾರವೂ ಇಂತಹ ಕೆಟ್ಟ ಕೆಲಸ ಮಾಡಿಲ್ಲ’ ಎಂದು ಹೋರಾಟಗಾರ್ತಿ ಬೃಂದಾ ಕಾರಟ್‌ ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಎಂ ವತಿಯಿಂದ ನಗರದ ಸಿಲ್ವರ್‌ ಜ್ಯೂಬಿಲಿ ಉದ್ಯಾನದಲ್ಲಿ ಭಾನುವಾರ ನಡೆದ ‘ಶಾಂತಿ–ಸೌಹಾರ್ದ– ಸಹಬಾಳ್ವೆಗಾಗಿ ಶ್ರಮಜೀವಿಗಳ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಗ್ಯಾರಂಟಿ ಪಡೆಯಲು ರೈತರು ದೆಹಲಿ ಗಡಿಯಲ್ಲಿ ಹೋರಾಟ ನಡೆಸುತ್ತಿದ್ದರೆ ಕೇಂದ್ರ ಸರ್ಕಾರ ಅವರ ಮೇಲೆ ದಾಳಿ ನಡೆಸುತ್ತಿದೆ. ಎರಡೂವರೆ ವರ್ಷಗಳ ಹಿಂದೆ ನೀಡಿದ್ದ ಭರವಸೆಯನ್ನು ಈಡೇರಿಸುವಲ್ಲಿ ಮೋದಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು ರೈತರನ್ನು ವಂಚಿಸಿದೆ’ ಎಂದರು.

‘ಎಡಪಕ್ಷಗಳ ಬೆಂಬಲದೊಂದಿಗೆ ಯುಪಿಎ ಸರ್ಕಾರ ಜಾರಿಗೊಳಿಸಿದ್ದ ನರೇಗಾ ಯೋಜನೆ ಗ್ರಾಮೀಣ ಭಾರತದ ಜೀವಸೆಲೆಯಾಗಿತ್ತು. ಆದರೆ, ನರೇಂದ್ರ ಮೋದಿ ಸರ್ಕಾರ ಆ ಸೆಲೆಯನ್ನು ಕತ್ತರಿಸಿ ಹಾಕಿದೆ. 100 ದಿನ ಕೆಲಸ ಕೊಡಬೇಕು ಎಂಬ ನಿಯಮವನ್ನು ಬುಲ್ಡೋಜ್‌ ಮಾಡಿದೆ. ವರ್ಷದಿಂದ ವರ್ಷಕ್ಕೆ ನರೇಗಾ ಯೋಜನೆಯ ಅನುದಾನ ಕಡಿತಗೊಳಿಸುತ್ತಿದೆ’ ಎಂದು ದೂರಿದರು.

‘ದೇಶದ ಕೋಟ್ಯಂತರ ಹೆಣ್ಣು ಮಕ್ಕಳು ನರೇಗಾ ಯೋಜನೆ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾರಿ ಶಕ್ತಿಯ ಬಗ್ಗೆ ಏನೂ ಗೊತ್ತಿಲ್ಲ. ಅವರಿಗೆ ಗೊತ್ತಿರುವುದು ಕಾರ್ಪೊರೇಟ್‌ ಶಕ್ತಿ ಮಾತ್ರ. ನಾರಿ ಶಕ್ತಿ ಬಗ್ಗೆ ಮಾತನಾಡಲು ನೈತಿಕ ಹಕ್ಕು ಅವರಿಗಿಲ್ಲ’ ಎಂದರು.

‘ಅಂಗನವಾಡಿ, ಆಶಾ, ಬಿಸಿಯೂಟ ಯೋಜನೆ ಸೇರಿದಂತೆ ಸ್ಕೀಂ ನೌಕರರ ವೇತನವನ್ನು ಒಂದು ರೂಪಾಯಿಯೂ ಹೆಚ್ಚಿಸಿಲ್ಲ. ಆದರೆ, ಉದ್ಯಮಪತಿಗಳ ಸಾವಿರಾರು ಕೋಟಿ ರೂಪಾಯಿ ಸಾಲ ಮನ್ನಾ ಮಾಡುತ್ತಿದೆ. ರಾಜಕೀಯ ಲಾಭಕ್ಕಾಗಿ ದೇಶದ ಜನರ ಮೇಲೆ ಧರ್ಮದ ಅಸ್ತ್ರ ಬಳಸುತ್ತಿದೆ’ ಎಂದು ಆರೋಪಿಸಿದರು.

‘ಜೆಡಿಎಸ್‌ ಬಿಜೆಪಿಯ ಸ್ಟೆಫ್ನಿ’

‘ಜಾತ್ಯತೀತ ತತ್ವಗಳ ಮೇಲೆ ರಾಜಕಾರಣ ಮಾಡುತ್ತಿದ್ದ ಎಚ್‌.ಡಿ.ದೇವೇಗೌಡ ಅವರ ನೇತೃತ್ವದ ಜೆಡಿಎಸ್‌ ಪಕ್ಷ ಈಗ ಕೋಮುವಾದಿ ಬಿಜೆಪಿಗೆ ಸ್ಟೆಪ್ನಿಯಾಗಿರುವುದು ನಾಚಿಕೆಗೇಡಿನ ಸಂಗತಿ. ಧರ್ಮಾಧಾರಿತ ರಾಜಕಾರಣಕ್ಕೆ ಬೆಂಬಲ ನೀಡುತ್ತಿರುವ ಜೆಡಿಎಸ್‌ಗೆ ಯಾವುದೇ ಸಿದ್ಧಾಂತ ಇಲ್ಲ’ ಎಂದು ಬೃಂದಾ ಕಾರಟ್‌ ಟೀಕಿಸಿದರು. ‘ಜಿಲ್ಲೆಯ ಕೆರಗೋಡು ಗ್ರಾಮದ ಸರ್ಕಾರಿ ಜಾಗದಲ್ಲಿ ಹನುಮ ಧ್ವಜ ಹಾರಿಸುವ ಮೂಲಕ ಜೆಡಿಎಸ್‌ ಹಾಗೂ ಸಂಘ ಪರಿವಾರದ ಮುಖಂಡರು ಸಂವಿಧಾನದ ತತ್ವಗಳನ್ನು ಉಲ್ಲಂಘಿಸಿದ್ದಾರೆ. ದೇವರ ಮೇಲಿನ ನಂಬಿಕೆ ವೈಯಕ್ತಿಕವಾದುದು. ಮನೆಯ ದೇವರ ಕೋಣೆಯಲ್ಲಿ ಯಾವುದೇ ಧ್ವಜ ಹಾರಿಸಿಕೊಳ್ಳಲಿ ಸಾರ್ವಜನಿಕರವಾಗಿ ಕೇಸರಿ ಧ್ವಜ ಹಾರಿಸಿದ್ದು ಏಕೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT