ಬುಧವಾರ, ಸೆಪ್ಟೆಂಬರ್ 23, 2020
24 °C

ಒಣಗುತ್ತಿರುವ ಬೆಳೆ: ಇಂದು ಹೆದ್ದಾರಿ ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಉಣಿಸಲು ನಾಲೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ರೈತರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕತರು ಶುಕ್ರವಾರ ಪಟ್ಟಣದಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿ ಬಂದ್ ಮಾಡಲಿದ್ದಾರೆ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರಳಾಗಾಲ ಕೃಷ್ಣೇಗೌಡ ತಿಳಿಸಿದರು.

ಶುಕ್ರವಾರ ಬೆಳಿಗ್ಗೆ 11ಗಂಟೆಗೆ ಕುವೆಂಪು ವೃತ್ತದ ಬಳಿ ಹೆದ್ದಾರಿ ತಡೆ ಮಾಡಲಾಗುತ್ತದೆ ಎಂದು ಗುರುವಾರ ಪಟ್ಟಣದ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಸಭೆಯಲ್ಲಿ ಅವರು ಹೇಳಿದರು.

ರಾಜ್ಯ ಸರ್ಕಾರ ಮಂಡ್ಯ ಜಿಲ್ಲೆ ರೈತರ ಹಿತವನ್ನು ಕಡೆಗಣಿಸಿದೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ನೀರಿಗಾಗಿ ಒಂದು ವಾರ ಧರಣಿ ನಡೆಸಿದರೂ ಸರ್ಕಾರದ ಪ್ರತಿನಿಧಿಗಳು ಬೇಡಿಕೆಗೆ ಸ್ಪಂದಿಸಿಲ್ಲ. ರೈತರಿಗೆ ಸಚಿವರು ಹಾಗೂ ಮುಖ್ಯಮಂತ್ರಿ ಅಗೌರವ ತೋರುತ್ತಿದ್ದಾರೆ ಎಂದು ಅವರು ದೂರಿದರು.

‘ನೀರಿಲ್ಲದೆ ಲಕ್ಷಾಂತರ ಎಕರೆಯಲ್ಲಿ ಪ್ರದೇಶದಲ್ಲಿ ಬೆಳೆದಿರುವ ಕಬ್ಬು, ಬಾಳೆ, ತೆಂಗು ಹಾಗೂ ತರಕಾರಿ ಬೆಳೆಗಳು ಒಣಗುತ್ತಿವೆ. ಮುಂಗಾರು ಮಳೆ ಬೀಳದೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಕೊಳವೆ ಬಾವಿಗಳೂ ಬತ್ತಿ ಹೋಗಿವೆ. ಜನ, ಜಾನುವಾರುಗಳಿಗೆ ತೊಂದರೆಯಾಗಿದ್ದು, ನಿರಿಗೆ ಹಾಹಾಕಾರ ಶುರುವಾಗಿದೆ. ಕೆಆರ್ಎಸ್ ಅಚ್ಚುಕಟ್ಟು ವ್ಯಾಪ್ತಿಯ ಎಲ್ಲ ನಾಲೆಗಳ ತಕ್ಷಣ ನೀರು ಹರಿಸಿದರೆ ಬೆಳೆ ಉಳಿಯುತ್ತದೆ. ಇಲ್ಲದಿದ್ದರೆ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ’ ಎಂದು ಕಡತನಾಳು ಬಾಲಕೃಷ್ಣ ಕಳವಳ ವ್ಯಕ್ತಪಡಿಸಿದರು.

ರೈತ ಮುಖಂಡ ಬಿ.ಎಸ್. ರಮೇಶ್ ಮಾತನಾಡಿ, ‘ಜುಲೈ 5ರಂದು ಪಟ್ಟಣದಲ್ಲಿ ನಡೆಯುವ ಚಳವಳಿಯಲ್ಲಿ ರೈತ ಸಂಘದ ಜತೆಗೆ ದಲಿತ ಸಂಘಟನೆ, ಕನ್ನಡ ಪರ ಸಂಘಟನೆ, ಕಾರ್ಮಿಕ ಸಂಘಟನೆಗಳ ಮುಖಂಡರು ಹಾಗೂ ವ್ಯಾಪಾರಿಗಳು ಪಾಲ್ಗೊಳ್ಳಲಿದ್ದಾರೆ. ಶಾಲಾ- ಕಾಲೇಜು ವಿದ್ಯಾರ್ಥಿಗಳೂ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ಪಿಎಸ್ಎಸ್‌ಕೆ ಮಾಜಿ ನಿರ್ದೇಶಕ ಪಾಂಡು, ಕೆಂಪೇಗೌಡ, ಮೇಳಾಪುರ ಜಯರಾಮೇಗೌಡ, ಕೂಡಲಕುಪ್ಪೆ ಶಂಕರನಾರಾಯಣ್, ಮಹದೇವಪುರ ನಾಗೇಂದ್ರ, ನೆಲಮನೆ ಕಾಳೇಗೌಡ ಇತರರು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.