ಸೋಮವಾರ, ಜನವರಿ 20, 2020
18 °C
ಕಳಪೆ ಕಾಮಗಾರಿ; 2.7 ಕಿ.ಮೀ ವ್ಯಾಪ್ತಿ, ₹ 1.5 ಕೋಟಿ ವೆಚ್ಚ

ದ್ಯಾಪಸಂದ್ರ: ಮೂರೇ ದಿನಕ್ಕೆ ಕಿತ್ತುಹೋದ ಡಾಂಬರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ತಾಲ್ಲೂಕಿನ ದ್ಯಾಪಸಂದ್ರ ಗ್ರಾಮದಿಂದ ಕೆರಗೋಡು ಗ್ರಾಮದವರೆಗೆ ₹ 1.5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಡಾಂಬರೀಕರಣ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು ಮೂರೇ ದಿನದಲ್ಲಿ ರಸ್ತೆ ಕಿತ್ತು ಹೋಗಿದೆ. ಈ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆಯಿಂದ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆ ಅಡಿ ರಸ್ತೆ ಡಾಂಬರೀಕರಣ ಕಾಮಗಾರಿಗೆ 2016ರಲ್ಲೇ ಚಾಲನೆ ನೀಡಲಾಗಿತ್ತು. ಆದರೆ ಗುತ್ತಿಗೆದಾರ ರಸ್ತೆಗೆ ಮಣ್ಣು ಸುರಿದು ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದರು. 2.7 ಕಿ.ಮೀ ಡಾಂಬರೀಕರಣ ಕಾಮಗಾರಿ ಕಳೆದ ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಗ್ರಾಮಸ್ಥರು ಎಷ್ಟೇ ಒತ್ತಾಯ ಮಾಡಿದರೂ ಕಾಮಗಾರಿ ಪೂರ್ಣಗೊಳಿಸಿರಲಿಲ್ಲ. ಈಗ ಏಕಾಏಕಿ ಬಂದು ಕಳಪೆ ಕಾಮಗಾರಿ ಮಾಡಿ ಹೋಗಿದ್ದಾರೆ ಎಂದು ಗ್ರಾಮಸ್ಥರು ದೂರಿದರು.

ಕಳೆದ ಮೂರು ವರ್ಷಗಳಿಂದ ಜನರು ದೂಳಿನ ರಸ್ತೆಯಲ್ಲೇ ಓಡಾಡಿದ್ದಾರೆ. ಹಲವರು ಟಿ.ಬಿ, ಅಸ್ತಮಾ ಮುಂತಾದ ಕಾಯಿಲೆಗಳಿಂದ ನರಳಿದ್ದಾರೆ. ಕಾಮಗಾರಿಗೆ ಚಾಲನೆ ನೀಡಿರುವುದರಿಂದ ಒಂದಲ್ಲಾ ಒಂದು ದಿನ ಕಾಮಗಾರಿ ಪೂರ್ಣವಾಗುತ್ತದೆ, ಡಾಂಬರ್‌ ರಸ್ತೆ ಬರುತ್ತದೆ ಎಂದು ಕಾಯುತ್ತಿದ್ದೆವು. ಆದರೆ ಈಗ ಗುತ್ತಿಗೆದಾರ ಜಲ್ಲಿ ಹಾಕದೇ, ಹಾಳಾಗಿರುವ ಟಾರ್‌ ಸುರಿದು ಹೋಗಿದ್ದಾರೆ.  ರಸ್ತೆ ಮೇಲೆ ಜಲ್ಲಿ ಪುಡಿ ಸುರಿದು ಕೈತೊಳೆದುಕೊಂಡಿದ್ದಾರೆ. ಕಾಮಗಾರಿ ಮುಗಿಸಿ ಮೂರನೇ ದಿನಕ್ಕೆ ಡಾಂಬರ್‌ ಕಿತ್ತು ಹೋಗಿದೆ. ವಾರದೊಳಗೆ ರಸ್ತೆ ಮೊದಲಿನಂತೆ ಗುಂಡಿಮಯವಾಗಲಿದೆ ಎಂದು ಆರೋಪಿಸಿದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರರು ಶಾಮೀಲಾಗಿ ಕಳಪೆ ಕಾಮಗಾರಿ ಮಾಡಿದ್ದಾರೆ. ನಿಯಮಾನುಸಾರ ಡಾಂಬರ್‌ ಹಾಕದಿದ್ದರೂ ಅಧಿಕಾರಿಗಳು ಗುತ್ತಿಗೆದಾರನಿಗೆ ಬಿಲ್‌ ಮಾಡಿಕೊಟ್ಟಿದ್ದಾರೆ. ಕಾಮಗಾರಿ ಕಳಪೆಯಾಗಿರುವ ಕಾರಣ ಎಂಜಿನಿಯರ್‌ಗಳು ಕ್ರಮ ಕೈಗೊಳ್ಳಬೇಕಾಗಿತ್ತು. ಹಣದ ಅವ್ಯವಹಾರಕ್ಕೆ ಅಧಿಕಾರಿಗಳೇ ಸಾಥ್‌ ನೀಡಿದ್ದಾರೆ ಎಂದು ಆರೋಪಿಸಿದರು.

ನ.18,2016ರಲ್ಲಿ ಡಾಂಬರೀಕರಣ ಕಾಮಗಾರಿ ಆರಂಭವಾಯಿತು. ಅ.17, 2017ಕ್ಕೆ ಕಾಮಗಾರಿ ಮುಗಿಯಬೇಕಾಗಿತ್ತು. ಆದರೆ ಗುತ್ತಿಗೆದಾರ ಅನಾವಶ್ಯವಾಗಿ ಮೂರು ವರ್ಷ ಸವೆಸಿದ್ದಾರೆ. ಈಗ ಮಾಡಿ ಹೋಗಿರುವ ತೇಪೆ ಕಾಮಗಾರಿಯನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ. ಕಳಪೆ ಡಾಂಬರ್‌ ತೆರವುಗೊಳಿಸಿ ಮತ್ತೆ ಗುಣಮಟ್ಟದ ಡಾಂಬರೀಕರಣ ಕಾಮಗಾರಿ ಮಾಡಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಪ್ರತಿಕ್ರಿಯಿಸಿ (+)