ಮಳವಳ್ಳಿ: ‘ಸಮಾಜದಲ್ಲಿ ಜೀವಂತವಾಗಿರುವ ಅಸ್ಪೃಶ್ಯತೆ ಆಚರಣೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು’ ಎಂದು ಚಿಂತಕ ಎಂ.ವಿ.ಕೃಷ್ಣ ಹೇಳಿದರು.
ಪಟ್ಟಣದ ಹಳೆಯ ಅಂಚೆ ಕಚೇರಿ ಮುಂಭಾಗ ಬೆಂಗಳೂರಿನಲ್ಲಿ ನಡೆಯುವ ಕರ್ನಾಟಕ ರಾಜ್ಯ ದಲಿತ ಶೃಂಗಸಭೆ– 2023ರ ಹಾಗೂ ರಾಷ್ಟ್ರಪತಿಗೆ ಒಂದು ಕೋಟಿ ಸಹಿ ಸಂಗ್ರಹ ಅಭಿಯಾನದ ಅಂಗವಾಗಿ ಸಹಿ ಸಂಗ್ರಹ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅಸ್ಪೃಶ್ಯತೆ ಆಚರಣೆ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು. ಪುರೋಹಿತಶಾಹಿಗಳ ಆಚರಣೆಗೆ ಕಡಿವಾಣ ಹಾಕಬೇಕು. ಆಚರಣೆಗಳು ವೈಜ್ಞಾನಿಕ ನೆಲೆಗಟ್ಟಿನಲ್ಲಿದ್ದಾಗ ಮಾತ್ರ ಸಮಾಜಕ್ಕೆ ಅಂಟಿಕೊಂಡಿರುವ ಅಸ್ಪೃಶ್ಯತೆ, ಜಾತಿ ಪದ್ಧತಿ ಹಾಗೂ ತಾರತಮ್ಯ ಹೋಗಲಾಡಿಸಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ದಲಿತ ಶೃಂಗಸಭೆ-2023ರ ರಾಜ್ಯ ಸಹ ಸಂಚಾಲಕ ಬಿ.ರಾಜಶೇಖರಮೂರ್ತಿ ಮಾತನಾಡಿ, ‘ದಲಿತರ ಮೇಲಿನ ದೌರ್ಜನ್ಯ, ಅಸ್ಪೃಶ್ಯತೆಗೆ ಕಡಿವಾಣ ಹಾಕಬೇಕು. ಎಲ್ಲ ಬಡವರಿಗೂ ಕೃಷಿ ಭೂಮಿ, ವಸತಿ, ಆರ್ಥಿಕ ಸೌಲಭ್ಯ ಕಲ್ಪಿಸಬೇಕು. ದಲಿತರಿಗೆ ಸ್ಮಶಾನ ಹಾಗೂ ಮೂಲ ಸೌಕರ್ಯ ಒದಗಿಸುವುದು ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶದೆಲ್ಲೆಡೆ 1 ಕೋಟಿ ಸಹಿ ಸಂಗ್ರಹಿಸಿ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಗುವುದು’ ಎಂದರು.
ದಲಿತ ಹಕ್ಕುಗಳ ಸಮಿತಿ ಮುಖಂಡ ಕೃಷ್ಣ ಮಾತನಾಡಿ, ‘ಅಸ್ಪೃಶ್ಯತೆ ಇಂದಿಗೂ ಆಚರಣೆಯಲ್ಲಿರುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಇಂಥ ಅನಿಷ್ಟ ಪದ್ಧತಿಗಳ ನಿರ್ಮೂಲನೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು’ ಎಂದು ಒತ್ತಾಯಿಸಿದರು.
ಪುರಸಭೆ ಸದಸ್ಯ ಸಿದ್ದರಾಜು, ಮುಖಂಡರಾದ ಎಂ.ಎನ್.ಜಯರಾಜು, ಮ.ಸಿ.ನಾರಾಯಣ, ಕೆ.ಎಚ್.ಪುಟ್ಟಮಾದೇಗೌಡ, ಪ್ರಸಾದ್, ಜವರಪ್ಪ, ಎಂ.ಎನ್.ನಂಜುಂಡಸ್ವಾಮಿ, ಸುರೇಶ್, ಬಿ.ಆರ್.ಅನಂತಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.