ತಾಲ್ಲೂಕು ಕಚೇರಿಗೆ ರೈತರ ಮುತ್ತಿಗೆ

ಶ್ರೀರಂಗಪಟ್ಟಣ: ಬೆಂಗಳೂರು– ಮೈಸೂರು ಚತುಷ್ಪಥ ಹೆದ್ದಾರಿ ನಿರ್ಮಾಣ ಉದ್ದೇಶಕ್ಕೆ ಭೂ ಸ್ವಾಧೀನ ಪಡಿಸಿಕೊಂಡಿರುವ ರೈತರ ಜಮೀನಿಗೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ನಡೆದಿದ್ದು, ಸರಿಪಡಿಸುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಬುಧವಾರ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತಾಲ್ಲೂಕು ಕಚೇರಿ ಸಭಾಂಗಣಕ್ಕೆ ಬಂದ ರೈತರ ದಂಡು ತಹಶೀಲ್ದಾರ್ ಎಂ.ವಿ. ರೂಪಾ ಅವರನ್ನು ಪ್ರಶ್ನಿಸಿತು.
‘ತಾಲ್ಲೂಕಿನ ಬೊಮ್ಮೂರು ಅಗ್ರಹಾರ ಗ್ರಾಮದ ರೈತರಿಗೆ ಪ್ರತಿ ಗುಂಟೆ ಜಮೀನಿಗೆ ₹ 3.77 ಲಕ್ಷ, ಕೆ.ಶೆಟ್ಟಹಳ್ಳಿ ಭಾಗದ ರೈತರಿಗೆ ₹ 2.30 ಲಕ್ಷ ಪರಿಹಾರ ನೀಡಲಾಗಿದೆ. ಆದರೆ ಬಾಬುರಾಯನಕೊಪ್ಪಲು ಮತ್ತು ಕಿರಂಗೂರು ಗ್ರಾಮಗಳ ರೈತರಿಗೆ ಪ್ರತಿ ಗುಂಟೆಗೆ ₹ 1.27 ಲಕ್ಷ ಪರಿಹಾರ ಪ್ರಕಟಿಸಿ ಸರ್ಕಾರ ಅನ್ಯಾಯ ಮಾಡಿದೆ’ ಎಂದು ರೈತ ಮುಖಂಡ ರಾಮಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಈ ತಾರತಮ್ಯ ಸರಿಪಡಿಸುವವರೆಗೆ ಕಾಮಗಾರಿ ನಡೆಸಲು ಅನುಮತಿ ನೀಡಬಾರದು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಒಂದು ತಿಂಗಳು ಕಳೆದರೂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಧಿಕಾರಿಗಳು ರೈತರ ಅಳಲಿಗೆ ಸ್ಪಂದಿಸುತ್ತಿಲ್ಲ ಎಂದು ರೈತ ಮುಖಂಡ ಮೇಳಾಪುರ ಸ್ವಾಮಿಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಎಂ.ವಿ. ರೂಪಾ, ‘ಸಮಸ್ಯೆ ಕುರಿತು ಮೇಲಧಿಕಾರಿಗೆ ವರದಿ ಸಲ್ಲಿಸುತ್ತೇನೆ. ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರಳಾಗಾಲ ಕೃಷ್ಣೇಗೌಡ, ಪಿಎಸ್‌ಎಸ್‌ಕೆ ಮಾಜಿ ನಿರ್ದೇಶಕ ಪಾಂಡು, ಕೃಷಿಕ ಸಮಾಜದ ನಿರ್ದೇಶಕ ಕಡತನಾಳು ಬಾಲಕೃಷ್ಣ, ಜಯರಾಮೇಗೌಡ, ಮಹದೇವಪುರ ನಾಗೇಂದ್ರು, ಸುಧಾಕರ್, ಟಿ.ಸಿ. ದೇವೇಗೌಡ, ನಿಂಗಮ್ಮ, ಚನ್ನೇಗೌಡ, ತಮ್ಮಣ್ಣ, ಚಿಕ್ಕಲಿಂಗೇಗೌಡ, ಬೋರಲಿಂಗೇಗೌಡ ಇತರರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.