ಮಂಡ್ಯ: ಜಿಲ್ಲೆಯಾದ್ಯಂತ ಅದರಲ್ಲೂ ನಗರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ಅದನ್ನು ಮರೆತ ನಗರದ ಜನರು ಗುರುವಾರ ವರಮಹಾಲಕ್ಷ್ಮಿ ಹಬ್ಬದ ಖರೀದಿಗೆ ಮುಗಿಬಿದ್ದಿದ್ದರು.
ಪೇಟೆ ಬೀದಿ, ವಿವಿ ರಸ್ತೆ, ಆರ್.ಪಿ ರಸ್ತೆ, ನೂರಡಿ ರಸ್ತೆಯಲ್ಲಿ ಹಬ್ಬದ ಸಾಮಗ್ರಿ ಖರೀದಿಸಲು ಮುಗಿಬಿದ್ದಿದ್ದರು. ಬೆಲೆ ಏರಿಕೆ ನಡುವೆಯೂ ವರಮಹಾಲಕ್ಷ್ಮಿ ಹಬ್ಬಕ್ಕೆ ಬೇಕಾದ ಹೂವು, ಹಣ್ಣು, ಬಾಳೆ ಕಂದು, ಕಬ್ಬು ಖರೀದಿ ಮಾಡಿದರು. ವಿ.ವಿ ರಸ್ತೆಯಿಂದ ಹೊಸಹಳ್ಳಿ ವೃತ್ತದವರೆಗೂ ಜನಜಾತ್ರೆಯೇ ನೆರೆದಿತ್ತು. ಗುತ್ತಲು ರಸ್ತೆ, ಹೊಳಲು ವೃತ್ತ ಸೇರಿದಂತೆ ಹಲವಾರು ಕಡೆ ರಸ್ತೆ ಬದಿಯಲ್ಲಿ ಮಾವಿನ ಸೊಪ್ಪು, ಬಾಳೆಕಂದು, ತಾವರೆ ಹೂ, ಹಣ್ಣುಗಳ ಮಾರಾಟ ಜೋರಾಗಿ ನಡೆಯಿತು.
ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳಬೇಕು ಎಂಬ ನಿಯಮವಿದ್ದರೂ ಅದನ್ನು ಗಾಳಿಗೆ ತೂರಿ ಖರೀದಿಯಲ್ಲಿ ಮಗ್ನರಾಗಿದ್ದರು. ವರ್ಷಕ್ಕೆ ಬರುವುದು ಒಂದೇ ಹಬ್ಬ ಎಂದು ನಿರ್ಲಕ್ಷ್ಯದ ಮಾತು ಎಲ್ಲೆಡೆ ಕೇಳಿ ಬಂತು. ವಿವಿಧೆಡೆ ಜನರ ನಿಯಂತ್ರಣಕ್ಕೆ ಪೊಲೀಸರನ್ನೂ ನೇಮಕ ಮಾಡದ ಪರಿಣಾಮ ಜನರು ಭಯ ತೊರೆದಿದ್ದರು.
ಪೇಟೆ ಬೀದಿಯಲ್ಲಿ ಜನಜಂಗುಳಿಯೇ ನೆರೆದಿತ್ತು. ಅರಿಶಿಣ, ಕುಂಕುಮ, ದೀಪದ ಬತ್ತಿ, ಕರ್ಪೂರ, ಸಾಂಬ್ರಾಣಿ ಮಾರಾಟದಲ್ಲಿ ಹಲವರು ನಿರತರಾಗಿದ್ದರು. ಹಬ್ಬವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಮಹಿಳೆಯರು ವಾರದಿಂದಲೇ ಮನೆಯನ್ನು ಶುಚಿಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಇದೀಗ ವರಮಹಾಲಕ್ಷ್ಮಿ ಪ್ರತಿಷ್ಠಾಪನೆಗೆ ಅಂತಿಮ ಹಂತದ ಸಿದ್ಧತೆ ನಡೆಸಿದರು. ಹಬ್ಬಕ್ಕೆ ಮುನ್ನಾ ದಿನವಾದ ಗುರುವಾರ ಮಾರುಕಟ್ಟೆಗೆ ಲಗ್ಗೆ ಇಟ್ಟ ಮಹಿಳೆಯರು ಬೆಲೆ ಏರಿಕೆಯನ್ನು ಲೆಕ್ಕಿಸದೇ ಅಗತ್ಯ ಸಾಮಗ್ರಿಗಳನ್ನು ಖರೀದಿಸಿದರು.
ಬೆಲೆ ಏರಿಕೆ: ಕೊರೊನಾ ಕಾರಣದಿಂದ ಬೆಲೆಯಲ್ಲಿ ಕುಸಿತ ಕಂಡಿದ್ದ ಹೂವು, ಹಣ್ಣು ಹಬ್ಬಕ್ಕೆ ದಿಢೀರನೇ ಏರಿದ್ದು, ಕೆಲವೊಂದು ಪದಾರ್ಥ ದುಪ್ಪಾಟ್ಟಾಗಿತ್ತು. ಹಣ್ಣುಗಳ ಬೆಲೆಯಲ್ಲೂ ಏರಿಕೆ ಕಂಡು ಬಂತು. ಕೆಲ ದಿನಗಳ ಹಿಂದೆ ₹80 ಇದ್ದ ದ್ರಾಕ್ಷಿ ಗುರುವಾರ ₹120 ಆಗಿತ್ತು. ಕೆ.ಜಿ. ಸೇಬು ₹200, ಕಿತ್ತಳೆ ₹140–160, ಅನಾನಸ್ ಒಂದಕ್ಕೆ ₹30, ಮೂಸಂಬಿ ₹80, ಬಾಳೆಹಣ್ಣು ₹50 ರಂತೆ ಬಿಕರಿಯಾಗುತ್ತಿದ್ದವು.
ವರಮಹಾಲಕ್ಷ್ಮಿ ತಾಯಿಯ ಅಲಂಕಾರಕ್ಕೆ ಪ್ರಮುಖವಾಗಿ ಬಳಸುವ ತಾವರೆ ಹೂವು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ₹10–20ರವರೆಗೆ ಮಾರಾಟವಾದವು. ಇದಲ್ಲದೆ ಸೇವಂತಿಗೆ ಹೂವು ಮಾರಿಗೆ ₹100, ಕಾಕಡ ₹80, ಮಲ್ಲಿಗೆ ₹150–200, ಒಂದು ಹಾರ ₹100, ಬಿಡಿ ಸೇವಂತಿ 100ಗ್ರಾಂ ಗೆ ₹30, ಮರಳೆ ₹1000, ಕಾಕಡ ₹800, ಕನಕಾಂಬರ ದಾಖಲೆಯ ₹3ಸಾವಿರಕ್ಕೆ ಏರಿಕೆಯಾಗಿದೆ. ಬೆಲೆ ಏರಿಕೆ ನಡುವೆಯೂ ಅಗತ್ಯಕ್ಕೆ ತಕ್ಕಂತೆ ಗ್ರಾಹಕರು ಖರೀದಿಸಿದರು.
ದೇವಿಗೆ ನೈವೇದ್ಯ ರೂಪದಲ್ಲಿ ಕೊಬ್ಬರಿ ಮಿಠಾಯಿ, ರವೆ ಉಂಡೆ, ಚಕ್ಕುಲಿ, ನಿಪ್ಪಟ್ಟು, ಸಿಹಿ ಪೂರಿ ಸೇರಿ ಇನ್ನಿತರ ಸಿಹಿ ತಿನಿಸುಗಳನ್ನಿಡಲು ಜನರು ತಯಾರಿ ನಡೆಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.