ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಮಂಡ್ಯದಲ್ಲಿ ಮೊದಲ ಸಾವು

ಜುಲೈ9 ರಂದು ಚನ್ನಪಟ್ಟಣದ ಮೂಲದ ವ್ಯಕ್ತಿ ಮಿಮ್ಸ್‌ನಲ್ಲಿ ಸಾವು, ಬುಧವಾರ ಕೋವಿಡ್‌ ದೃಢ
Last Updated 15 ಜುಲೈ 2020, 17:39 IST
ಅಕ್ಷರ ಗಾತ್ರ

ಮಂಡ್ಯ: ನಗರದ ಕೋವಿಡ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಚನ್ನಪಟ್ಟಣ ಮೂಲದ ವ್ಯಕ್ತಿಯೊಬ್ಬರಿಗೆ ಬುಧವಾರ ಕೋವಿಡ್‌–19 ದೃಢಪಟ್ಟಿದೆ. ಇದು ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟ ಮೊದಲ ಪ್ರಕರಣವಾಗಿದೆ.

ತೀವ್ರ ಉಸಿರಾಟ ಹಾಗೂ ಇನ್ನಿತರ ಸಮಸ್ಯೆಗಳಿಂದ ಬಳಲುತ್ತಿದ್ದ ಚನ್ನಪಟ್ಟಣದ ವ್ಯಕ್ತಿಯೊಬ್ಬರನ್ನು ಮಿಮ್ಸ್‌ ಆಸ್ಪತ್ರೆಗೆ ಕರೆತರಲಾಗಿತ್ತು. ಅವರು ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದರು. ಅಂದು ಮೃತವ್ಯಕ್ತಿಯ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಬುಧವಾರ ವರದಿ ಬಂದಿದ್ದು ಪಾಸಿಟಿವ್‌ ಫಲಿತಾಂಶ ಬಂದಿದೆ. ಮಂಡ್ಯದಲ್ಲಿ ಮೃತಪಟ್ಟಿರುವ ಕಾರಣ ಆರೋಗ್ಯ ಇಲಾಖೆ ಅವರ ಸಾವನ್ನು ಮಂಡ್ಯ ಜಿಲ್ಲೆಗೆ ಸೇರಿಸಿದೆ.

‘ಚನ್ನಪಟ್ಟಣದಿಂದ ಮಿಮ್ಸ್‌ ಆಸ್ಪತ್ರೆಗೆ ಬರುವ ಸಂದರ್ಭದಲ್ಲಿ ಆ ವ್ಯಕ್ತಿ ಮೃತಪಟ್ಟಿದ್ದರು. ಮಿಮ್ಸ್‌ ಆಸ್ಪತ್ರೆಯಲ್ಲಿ ಪರೀಕ್ಷಿಸಿ ಗಂಟಲು ದ್ರವ ಸ್ವೀಕರಿಸಿದ್ದ ಕಾರಣ ಅದನ್ನು ಮಂಡ್ಯ ಪಟ್ಟಿಗೆ ಸೇರಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ತಿಳಿಸಿದರು.

ಇದಕ್ಕೂ ಮೊದಲು ಕಳೆದ ವಾರ ಜಿಲ್ಲೆಯ ಇಬ್ಬರು ಮೈಸೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಹೀಗಾಗಿ ಅವರನ್ನು ಮೈಸೂರು ಜಿಲ್ಲೆಯ ಸಾವಿನ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿತ್ತು. ಕೋವಿಡ್‌ ದೃಢಪಟ್ಟಿದ್ದ ಮದ್ದೂರು, ಲೀಲಾವತಿ ಬಡಾವಣೆಯ ವ್ಯಕ್ತಿಯನ್ನು ಮಂಡ್ಯಕ್ಕೆ ತರುವಾಗ ಮೃತಪಟ್ಟಿದ್ದರು. ನಾಗಮಂಗಲ ತಾಲ್ಲೂಕು ರಾಮೇನಹಳ್ಳಿ ಗ್ರಾಮದ ವ್ಯಕ್ತಿ ಮೈಸೂರಿನ ನಾರಾಯಣ ಹೃದಯಾಲಯದಲ್ಲಿ ಮೃತಪಟ್ಟಿದ್ದರು. ಮೈಸೂರು ವ್ಯಾಪ್ತಿಯಲ್ಲಿ ಇವರಿಬ್ಬರು ಮೃತಪಟ್ಟಿದ್ದರು.

ಬೆಂಗಳೂರಿಗೆ ತೆರಳುತ್ತಿದ್ದ 90 ಬಸ್ ಸ್ಥಗಿತ: ಬೆಂಗಳೂರಿನಲ್ಲಿ ಲಾಕ್‌ಡೌನ್‌ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಮಂಡ್ಯ ವಿಭಾಗದಿಂದ ನಿತ್ಯ ಬೆಂಗಳೂರಿಗೆ ಸಂಚರಿಸುತ್ತಿದ್ದ 90 ಬಸ್‌ಗಳ ಓಡಾಟವನ್ನು ಬುಧವಾರ ಸ್ಥಗಿತಗೊಳಿಸಲಾಗಿದೆ.

ಬೆಂಗಳೂರು– ಮೈಸೂರು ನಡುವೆ ಸಂಚರಿಸುತ್ತಿದ್ದ ಪ್ರತಿ ಸಾರಿಗೆ ಬಸ್‌ನಿಂದ ನಿತ್ಯ ₹ 5 ಸಾವಿರ ಸಂಗ್ರಹವಾಗುತ್ತಿತ್ತು. ಆದರೆ ಬಸ್‌ಗಳು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ವಿಭಾಗಕ್ಕೆ ನಿತ್ಯ ₹ 4.5 ಲಕ್ಷ ನಷ್ಟವಾಗುತ್ತಿದೆ. ರಾಜ್ಯದಾದ್ಯಂತ ಲಾಕ್‌ಡೌನ್‌ ಸಡಿಲಗೊಂಡ ನಂತರ ಬೆಂಗಳೂರಿಗೆ ಹೆಚ್ಚು ಬಸ್‌ ಓಡಾಡುತ್ತಿದ್ದವು.

ಜಿಲ್ಲೆಯ ಇತರ ಭಾಗಕ್ಕಿಂತಲೂ ರಾಜಧಾನಿಗೆ ಹೆಚ್ಚು ಬಸ್‌ಗಳ ಬೇಡಿಕೆ ಇತ್ತು. ಆದರೆ ಅಲ್ಲಿ ಬಸ್‌ ಸಂಚಾರ ಸ್ಥಗಿತಗೊಳಿಸಿರುವ ಕಾರಣ ಅಪಾರ ನಷ್ಟವಾಗುತ್ತಿದೆ. ‘ಲಾಕ್‌ಡೌನ್‌ ಸಡಿಲಗೊಂಡ ನಂತರ ಜಿಲ್ಲೆಯಾದ್ಯಂತ 200 ಬಸ್‌ಗಳು ಓಡಾಡುತ್ತಿದ್ದವು. ಈಗ ಬೆಂಗಳೂರಿನಲ್ಲಿ ಒಂದು ವಾರ ಲಾಕ್‌ಡೌನ್‌ ಇರುವ ಕಾರಣ ಜಿಲ್ಲೆಯ ಭಾಗಕ್ಕಷ್ಟೇ ಬಸ್‌ ಕಳುಹಿಸಲಾಗುತ್ತಿದೆ’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣ್‌ಕುಮಾರ್‌ ಹೇಳಿದರು.

ಬುಧವಾರ 31 ಮಂದಿಯಲ್ಲಿ ಕೋವಿಡ್‌: ಬುಧವಾರ ಒಂದೇ ದಿನ 31 ಮಂದಿಯಲ್ಲಿ ಕೋವಿಡ್‌–19 ಪತ್ತೆಯಾಗಿದ್ದು ಜಿಲ್ಲೆಯ ಒಟ್ಟು ರೋಗಿಗಳ ಸಂಖ್ಯೆ 787ಕ್ಕೆ ಏರಿಕೆಯಾಗಿದೆ.

ಕೋವಿಡ್‌ನಿಂದ ಗುಣಮುಖರಾದ 19 ಮಂದಿಯನ್ನು ಮಿಮ್ಸ್‌ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಇಲ್ಲಿಯವರೆಗೂ 552 ಮಂದಿ ಗುಣಮುಖರಾಗಿದ್ದು 234 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ಹೊರ ಜಿಲ್ಲೆಯಿಂದ ಬಂದ ಬಹುತೇಕ ಮಂದಿಗೆ ಕೋವಿಡ್‌ ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT