ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳ್ಗಿಚ್ಚು: ನಾಶವಾಗುತ್ತಿದೆ ಅರಣ್ಯ ಸಂಪತ್ತು

ಸುಟ್ಟು ಹೋಗುತ್ತಿರುವ ಕಾಡು; ವನ್ಯ ಜೀವಿ ಬೆಂಕಿಗಾಹುತಿ: ಅಗ್ನಿ ತಡೆಗೆ ಅರಣ್ಯ ಇಲಾಖೆ ವಿಫಲ
Last Updated 27 ಮಾರ್ಚ್ 2023, 6:35 IST
ಅಕ್ಷರ ಗಾತ್ರ

ಮಂಡ್ಯ: ಬೇಸಿಗೆ ಆರಂಭವಾಗುತ್ತಿದ್ದಂತೆ ಜಿಲ್ಲಾ ವ್ಯಾಪ್ತಿಯ ವಿವಿಧ ಅರಣ್ಯ ಪ್ರದೇಶದಲ್ಲಿ ದೊಡ್ಡ ಮಟ್ಟದ ಕಾಳ್ಗಿಚ್ಚು ಕಾಣಿಸಿಕೊಳ್ಳುತ್ತಿದ್ದು, ಅಪಾರ ಪ್ರಮಾಣದ ಹಸಿರು ಸಂಪತ್ತು ನಾಶವಾಗುತ್ತಿದೆ. ಅರಣ್ಯಾಧಿಕಾರಿಗಳು ಎಷ್ಟೇ ಎಚ್ಚರ ವಹಿಸಿದರೂ ಬೆಂಕಿಯ ಕೆನ್ನಾಲಗೆ ತಡೆಯಲು ವಿಫಲರಾಗುತ್ತಿರುವುದು ಪ್ರತಿ ವರ್ಷ ಬಹಿರಂಗವಾಗುತ್ತಿದೆ.

ಬಿಸಿಲ ಝಳ ಹೆಚ್ಚುವ ಮೊದಲೇ ವಿವಿಧೆಡೆ ಈ ವರ್ಷ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ಶ್ರೀರಂಗಪಟ್ಟಣ ತಾಲ್ಲೂಕಿನ ಕರಿಘಟ್ಟ ಮೀಸಲು ಅರಣ್ಯದಲ್ಲಿ ಈಚೆಗೆ ಬೆಂಕಿ ಕಾಣಿಸಿ ಕೊಂಡು ನೂರಾರು ಎಕರೆ ಅರಣ್ಯ ಸಂಪತ್ತು ಸುಟ್ಟು ಹೋಗಿದೆ. ಪ್ರಕೃತಿ ಪ್ರೇಮಿಗಳು ಘಟ್ಟದ ಮೇಲೆ ಪ್ರೀತಿಯಿಂದ ನೆಟ್ಟು ಸಲಹುತ್ತಿದ್ದ ಸಸ್ಯ ಸಂಪನ್ಮೂಲಗಳೂ ಬೆಂಕಿಗೆ ಆಹುತಿಯಾಗಿವೆ.

ಕರಿಘಟ್ಟ ಮಾತ್ರವಲ್ಲದೆ ಹುಂಜನಕೆರೆ ಬೆಟ್ಟ, ಕತ್ತೆಕಲ್ಲು ಗುಡ್ಡ, ಮೇಳಾಪುರ ಕಾಡಿಗೆ ಪ್ರತಿ ವರ್ಷ ಬೆಂಕಿ ಬೀಳುವುದು ತಪ್ಪಿಲ್ಲ. ಬೇಸಿಗೆ ಆರಂಭಕ್ಕೂ ಮುನ್ನವೇ ಅರಣ್ಯಕ್ಕೆ ಬೆಂಕಿ ಬೀಳುತ್ತದೆ. ಇದರಿಂದ ವನ್ಯ ಸಂಪತ್ತು ನಾಶವಾಗುತ್ತಿದೆ. ಬೆಂಕಿ ಅವಘಡದಿಂದಾಗಿ ಕುರುಚಲು ಕಾಡಿನಲ್ಲಿ ಕಾಣ ಸಿಗುವ ಅಪರೂಪದ ಸಸ್ಯ ಸಂಪತ್ತಿನ ಪ್ರಭೇದಗಳು ಒಂದೊಂದಾಗಿ ಅವನತಿಯತ್ತ ಸಾಗುತ್ತವೆ. ಕರಿಘಟ್ಟ ಅರಣ್ಯದಲ್ಲಿ ಎರಡು ದಶಕಗಳ ಹಿಂದೆ ಕಂಡುಬರುತ್ತಿದ್ದ ಹಲವು ಮೂಲಿಕೆಗಳು ಈಗ ನಾಮಾವಶೇಷವಾಗಿವೆ.

ಮೊಲ, ಉಡ, ಕೆಂಪು ಕೊರಳಿನ ಓತಿಕ್ಯಾತ ಮತ್ತು ಸರೀಸೃಪಗಳು ಹುಡುಕಿದರೂ ಸಿಗುತ್ತಿಲ್ಲ. ಕಾಡಂಚಿನ ಹೊಲಗಳಿಗೆ ಲಗ್ಗೆ ಇಡುತ್ತಿದ್ದ ಜಿಂಕೆಗಳ ಹಿಂಡು ಈಗೆಲ್ಲಿ? ಎಂದು ಅರಣ್ಯದ ಆಸುಪಾಸಿನ ಗ್ರಾಮಗಳ ರೈತರು ಪ್ರಶ್ನೆ ಮಾಡುವ ಸ್ಥಿತಿ ಬಂದಿದೆ. ಕುರುಚಲು ಕಾಡನ್ನೇ ಆಶ್ರಯಿಸಿ ಬದುಕುವ ರುಧರ ಟಿಟ್ಟಿಭ (ಕೀನಕ್ಕಿ), ಸೋರಕ್ಕೆ, ಗೊರವಂಕ, ನೈಟ್‌ ಜರ್ನಿ, ಪುಟ್ಟಂ ಪುರ್ಲೆ ಹಕ್ಕಿಗಳನ್ನು ಹುಡುಕುವ ಸ್ಥಿತಿ ಬಂದಿದೆ.

ಕಾವೇರಿ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿ ಬರುವ ಅರಣ್ಯ ಪ್ರದೇಶವಾದ ಹಲಗೂರು, ಬಸವನಬೆಟ್ಟ, ಶಿಂಷಾ ವಲಯದ ಕೆಲವು ಕಡೆ ಬೆಂಕಿ ಕಾಣಿಸಿಕೊಂಡು ಅರಣ್ಯ ಸಂಪತ್ತಿಗೆ ಹಾನಿಯುಂಟಾಗುತ್ತಿದೆ. ಸುಮಾರು 10.625 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಆನೆ, ಜಿಂಕೆ, ಕಾಡು ಹಂದಿ, ಚಿರತೆ ಸೇರಿದಂತೆ ಅನೇಕ ಬಗೆಯ ಜೀವ ಸಂಕುಲಗಳ ನೆಚ್ಚಿನ ನೆಲೆಯಾಗಿದೆ.

ಕಾಳ್ಗಿಚ್ಚಿಗೆ ಪ್ರಮುಖವಾಗಿ ಕಿಡಿಗೇಡಿಗಳ ಕೃತ್ಯವೂ ಪ್ರಮುಖ ಕಾರಣವಾಗಿದೆ. ಕಳ್ಳ ಬೇಟೆ ಮಾಡುವವರು ಅರಣ್ಯ ಸಿಬ್ಬಂದಿಯ ಗಮನ ಬೇರೆಡೆಗೆ ಸೆಳೆಯಲು ಒಂದು ಕಡೆ ಕಾಡಿಗೆ ಬೆಂಕಿ ಹಚ್ಚಿ, ಕಾಡಿನ ಮತ್ತೊಂದೆಡೆ ಮೀನು ಬೇಟೆ ಮಾಡುವ ಸಂಗತಿಗಳು ನಡೆಯುತ್ತಿವೆ.

ಕೆಲ ಕಿಡಿಗೇಡಿಗಳು ವಿಕೃತ ಸಂತೋಷಕ್ಕಾಗಿ ಕೆಲವು ಬಾರಿ ಬೆಂಕಿ ಹಚ್ಚುತ್ತಾರೆ. ದನಕರುಗಳಿಗೆ ಕಾಡಿನಲ್ಲಿ ಹೊಸ ಮೇವು ಸಿಗಲಿ ಎಂದು ಹಲವರು ಕಾಡಿಗೆ ಬೆಂಕಿ ಹಚ್ಚುವ ಘಟನೆಗಳು ನಡೆದಿವೆ. ಜಮೀನಿನ ಕಳೆ ನಾಶ ಮಾಡಲು ಹಚ್ಚುವ ಬೆಂಕಿ, ಕೆಲವೊಮ್ಮೆ ಅರಣ್ಯಕ್ಕೆ ಆವರಿಸುತ್ತದೆ.

‘ಕಾವೇರಿ ಕೊಳ್ಳದ ಕಾಡಂಚಿನ ಗ್ರಾಮಗಳಲ್ಲಿ ಕಾಳ್ಗಿಚ್ಚು ಕುರಿತು ಬೀದಿ ನಾಟಕ ಪ್ರದರ್ಶನ, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಜಾಥಾ, ಅರಿವು ಮೂಡಿಸುವ ಭಿತ್ತಿ ಪತ್ರಗಳನ್ನು ಅಳವಡಿಸಿ ಮಾನವ ನಿರ್ಮಿತ ಕಾಳ್ಗಿಚ್ಚು ನಿಯಂತ್ರಣಕ್ಕೆ ಯೋಜನೆ ರೂಪಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಇಲಾಖೆ ಸಿಬ್ಬಂದಿಯಿಂದ ನಿರಂತರ ಗಸ್ತು, ಬೆಂಕಿ ರೇಖೆ (ಫೈರ್ ಲೈನ್) ನಿರ್ಮಾಣ ಮಾಡಲಾಗಿದೆ’ ಎಂದು ಕಾವೇರಿ ವನ್ಯಜೀವಿ ವಲಯ, ಹಲಗೂರು ವಲಯ ಅರಣ್ಯ ಅಧಿಕಾರಿ ರವಿ ಬುರ್ಜಿ ಹೇಳುತ್ತಾರೆ.

ನಾಗಮಂಗಲ ತಾಲ್ಲೂಕಿನ ಹೊಣಕೆರೆ ಹೋಬಳಿಯ ಹೊನ್ನ ಬೆಟ್ಟಕ್ಕೆ ಈಚೆಗೆ ಬೆಂಕಿ ಬಿದ್ದಿದ್ದು, ಅಪಾರ ಹಾನಿಯಾಗಿತ್ತು. ಅಂಚೆಚಿಟ್ಟನಹಳ್ಳಿ ಸಮೀಪದ ಅರಣ್ಯ ಪ್ರದೇಶ, ರಸ್ತೆ ಬದಿಯ ಸಾಮಾಜಿಕ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿ ಬೇಲಿ ಸೇರಿದಂತೆ ಗಿಡಗಂಟಿ ತೆರವುಗೊಳಿಸಲು ಜನರೇ ಬೆಂಕಿ ಹಾಕಿದ್ದಾರೆ.

ಜತೆಗೆ ಕೆರೆಗಳ ಏರಿಗಳು ಸೇರಿದಂತೆ ಮುಳಕಟ್ಟೆ, ಹಾಲ್ತಿ, ಕೋಟೆಬೆಟ್ಟ, ಶಿಕಾರಿಪುರ ಸೇರಿದಂತೆ ಹಲವೆಡೆ ಸಣ್ಣ ಪ್ರಮಾಣದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

‘ಹಳೆಯ ಹುಲ್ಲನ್ನು ನಾಶಗೊಳಿಸಿದರೆ ಜಾನುವಾರುಗಳಿಗೆ ಹೊಸ ಹುಲ್ಲು ಬೆಳೆಯುತ್ತದೆ ಎಂಬ ಉದ್ದೇಶದಿಂದ ಕುರಿಗಾಹಿಗಳು ಹಚ್ಚಿರುವ ಬೆಂಕಿಯೇ ಅರಣ್ಯ ಪ್ರದೇಶದಲ್ಲಿ ಇಲ್ಲಿಯವರೆಗೆ ಕಾಣಿಸಿಕೊಂಡಿರುವ ಬಹುತೇಕ ಕಾಳ್ಗಿಚ್ಚಿಗೆ ಕಾರಣವಾಗಿದೆ. ಹೀಗೆ ಮಾಡುವುದರಿಂದ ಅರಣ್ಯ ಪ್ರದೇಶದ ಮರಗಳು ನಾಶವಾಗುವ ಜೊತೆಗೆ ವನ್ಯಜೀವಿಗಳು, ಸೂಕ್ಷ್ಮವಾದ ಪ್ರಾಣಿಪಕ್ಷಿಗಳು ನಾಶವಾಗುತ್ತವೆ. ಈ ಬಗ್ಗೆ ಜಾಗೃತಿ ಮೂಡಿಸಿ ಬೆಂಕಿ ತಡೆಗೆ ಎಚ್ಚರ ವಹಿಸಲಾಗಿದೆ’ ಎಂದು ಎಂದು ವಲಯ ಅರಣ್ಯಾಧಿಕಾರಿ ಆರ್.ಎನ್.ಮಂಜುನಾಥ್ ಹೇಳಿದರು.

ಕೆ.ಆರ್.ಪೇಟೆ ತಾಲ್ಲೂಕಿನ ಹೇಮಗಿರಿ, ಬೆಳ್ಳಿ ಬೆಟ್ಟಕಾವಲು, ನಾರಾಯಣದುರ್ಗ, ಸಂತೇಬಾಚಹಳ್ಳಿ, ಗವಿರಂಗನಾಥ ಸ್ವಾಮಿ ದೇವಾಲಯ ಪ್ರದೇಶದಲ್ಲಿ ಅರಣ್ಯವಿದೆ. ಹೇಮಗಿರಿ ಬೆಟ್ಟದ ಅರಣ್ಯ, ನಾಟನಹಳ್ಳಿ, ಮಾವಿನಕೆರೆ, ಮಲ್ಕೋನಹಳ್ಳಿ ಭಾಗದಲ್ಲಿ ಕಳೆದ ವರ್ಷ ಬೆಂಕಿ ಕಾಣಿಸಿಕೊಂಡಿತ್ತು. ಈ ವರ್ಷವೂ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇದ್ದು ಅರಣ್ಯ ಇಲಾಖೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ.

ಕಿಡಿಗೇಡಿ ಕೃತ್ಯ ತಡೆಯುವವರು ಯಾರು?

ಮದುವೆಯಾಗದವರು, ಮಕ್ಕಳಾಗದವರು ಹರಕೆ ಹೊತ್ತುಕೊಂಡು ಅರಣ್ಯಕ್ಕೆ ಬೆಂಕಿ ಹಚ್ಚಿ ಹರಕೆ ತೀರಿಸಿದರೆ ಇಷ್ಟಾರ್ಥ ಫಲಿಸುತ್ತದೆ ಎಂಬ ಮೂಢ ನಂಬಿಕೆಯಿಂದ ಕರಿಘಟ್ಟ ಅರಣ್ಯಕ್ಕೆ ಬೆಂಕಿ ಹಚ್ಚುತ್ತಾರೆ ಎಂಬ ಮಾತು ಈ ಭಾಗದಲ್ಲಿ ಜನಜನಿತವಾಗಿದೆ. ಮೇಳಾಪುರ, ಮಹದೇವಪುರ, ಹುಂಜನಕೆರೆ ಅರಣ್ಯ ಪ್ರದೇಶಗಳಿಗೆ ದನಗಾಹಿಗಳು ಬೆಂಕಿ ಹಚ್ಚುವುದು ವಾಡಿಕೆಯಾಗಿದೆ. ಮುಂಗಾರು ಮಳೆಗೆ ಹುಲುಸಾಗಿ ಮೇವು ಬೆಳೆಯಲಿ ಎಂಬ ಉದ್ದೇಶ ಇದರ ಹಿಂದಿದೆ.

ಪ್ರತಿ ವರ್ಷ ಅರಣ್ಯಕ್ಕೆ ಬೆಂಕಿ ಬೀಳುವುದು ಸಾಮಾನ್ಯ ಸಂಗತಿಯಾದರೂ ಇಲಾಖೆಯ ಅಧಿಕಾರಿಗಳು ಬೆಂಕಿ ಬೀಳುವುದನ್ನು ತಡೆಯಲು ಗಂಭೀರ ಪ್ರಯತ್ನ ಮಾಡುತ್ತಿಲ್ಲ ಎಂಬ ಆರೋಪವಿದೆ. ಫೈರ್‌ ಲೈನ್‌ ನಿರ್ಮಾಣ, ನಿರ್ದಿಷ್ಟ ಸ್ಥಳದಲ್ಲಿ ಸಿಬ್ಬಂದಿ ನಿಯೋಜನೆ, ಬೆಂಕಿ ಹರಡಿದಾಗ ನಂದಿಸಲು ನೀರಿನ ವ್ಯವಸ್ಥೆ ಯಾವುದನ್ನೂ ಮಾಡುತ್ತಿಲ್ಲ. ಅಧಿಕಾರಿಗಳು ಅರಣ್ಯ ಪ್ರದೇಶಕ್ಕೇ ಬರುವುದಿಲ್ಲ ಎಂಬ ಆರೋಪವಿದೆ.

ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ

ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತಿದ್ದು, ಕಾಳ್ಗಿಚ್ಚು ತಡೆಯುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪವಿದೆ. ಜಿಲ್ಲೆಯಲ್ಲಿ ಚಿರತೆ ಹಾವಳಿ ವಿಪರೀತ ಹೆಚ್ಚಾಗಿದ್ದು, ಬಹುತೇಕ ಅರಣ್ಯಾಧಿಕಾರಿಗಳು ಚಿರತೆ ಮೇಲೆ ನಿಗಾ ವಹಿಸಿದ್ದಾರೆ. ಇಂಥ ಸಂದರ್ಭದಲ್ಲಿ ಕಾಳ್ಗಿಚ್ಚು ತಡೆಯುವಲ್ಲಿ ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿಯೇ ಇಲ್ಲವಾಗಿದ್ದಾರೆ ಎಂಬ ಬಗ್ಗೆ ಅಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ.

‘ಅರಣ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಗಾರ್ಡ್‌, ವಾಚರ್‌ಗಳ ಕೊರತೆ ಇದೆ. ಒಬ್ಬ ಗಾರ್ಡ್‌ ಸಾವಿರಾರು ಎಕರೆ ಅರಣ್ಯ ನೋಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಅರಣ್ಯ ಇಲಾಖೆಯ ಸ್ಥಿತಿ ಅರಣ್ಯ ರೋದನವಾಗಿದೆ’ ಎಂದು ಅರಣ್ಯ ಗಾರ್ಡ್‌ ಒಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT