ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಮಂಡ್ಯ ಮಗ, ಸೊಸೆಗೆ ಪ್ರಮುಖ ಹುದ್ದೆ?

ಹಲ್ಲೇಗೆರೆ ಮೂಲದ ಡಾ.ವಿವೇಕ್‌ ಮೂರ್ತಿಗೆ ಕೋವಿಡ್‌ ಕಾರ್ಯಪಡೆಯಲ್ಲಿ ಪ್ರಮುಖ ಸ್ಥಾನ ನಿರೀಕ್ಷೆ
Last Updated 8 ನವೆಂಬರ್ 2020, 13:18 IST
ಅಕ್ಷರ ಗಾತ್ರ
ADVERTISEMENT
""
""

ಮಂಡ್ಯ: ಅಮೆರಿಕದ ನಿಯೋಜಿತ ಅಧ್ಯಕ್ಷ ಜೊ ಬೈಡನ್‌ ಅವರ ಸರ್ಕಾರದಲ್ಲಿ ಮಂಡ್ಯದ ಮಗ ಹಾಗೂ ಸೊಸೆಗೆ ಪ್ರಮುಖ ಹುದ್ದೆ ದೊರೆಯುವ ನಿರೀಕ್ಷೆ ಇದೆ ಎಂದು ಅಲ್ಲಿಯ ಮಾಧ್ಯಮಗಳು ವರದಿ ಮಾಡಿರುವುದು ತವರಿನಲ್ಲಿ ಸಂಭ್ರಮ ಸೃಷ್ಟಿಸಿದೆ.

ತಾಲ್ಲೂಕಿನ ಹಲ್ಲೇಗೆರೆ ಮೂಲದ ಡಾ.ವಿವೇಕ್‌ ಮೂರ್ತಿ ಹಾಗೂ ಅವರ ಪತ್ನಿ ಅಲೈಸ್‌ ದಂಪತಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಪರ ಪ್ರಚಾರ ನಡೆಸಿದ್ದರು. ಆ ಮೂಲಕ ‘ಪ್ರಧಾನ ತಂತ್ರಗಾರ’ ಎನಿಸಿಕೊಂಡಿದ್ದರು. ಬರಾಕ್‌ ಒಬಾಮ ಸರ್ಕಾರದಲ್ಲಿ ಯುಎಸ್‌ ಸರ್ಜನ್‌ ಜನರಲ್‌ ಆಗಿ ಕೆಲಸ ಮಾಡಿದ್ದ ಡಾ.ವಿವೇಕ್‌ , ಒಬಾಮ ಆರೋಗ್ಯ ಸುರಕ್ಷೆ (ಒಬಾಮ ಕೇರ್‌) ಕಾರ್ಯಕ್ರಮ ರೂಪಿಸುವಲ್ಲೂ ಪ್ರಮುಖ ಪಾತ್ರವಹಿಸಿದ್ದರು.

ವಿವೇಕ್‌ ‘ಡಾಕ್ಟರ್‌ ಫಾರ್‌ ಅಮೆರಿಕ’ ಸಂಸ್ಥೆಯ ಸಹ ಸಂಸ್ಥಾಪಕರಾಗಿದ್ದರೆ ಅವರ ಪತ್ನಿ ಡಾ.ಅಲೀಸ್‌ ಚೆನ್‌ ಸಿಇಒ ಆಗಿದ್ದಾರೆ. ಕೋವಿಡ್‌ ಸಂಕಷ್ಟ ಸಮಯದಲ್ಲಿ ವಿವೇಕ್‌ ಬರೆದ ‘ಟುಗೆದರ್‌’ ಪುಸ್ತಕ 25 ರಾಷ್ಟ್ರಗಳಲ್ಲಿ ಬಿಡುಗಡೆ ಕಂಡಿದೆ. ಭಾರತದಲ್ಲಿ ಭಾರತೀಯ ಇಂಗ್ಲಿಷ್ ಭಾಷಾ ಸೊಸೈಟಿ (ಇಎಲ್‌ಎಸ್‌ಐ) ಪುಸ್ತಕ ಪ್ರಕಟಿಸಿದೆ.

ಡಾ.ವಿವೇಕ್‌ ಮೂರ್ತಿ, ಡಾ.ಅಲೀಸ್‌ ಚೆನ್‌ ದಂಪತಿ

ಡೆಮಾಕ್ರಟಿಕ್‌ ಪಕ್ಷದ ವೈದ್ಯಕೀಯ ವಿಭಾಗದ ಮುಖ್ಯಸ್ಥರೂ ಆಗಿರುವ ಅವರು ಕೋವಿಡ್‌ ಜಾಗೃತಿ ಮೂಡಿಸುತ್ತಲೇ ಜೋ ಬೈಡನ್‌– ಕಮಲಾ ಹ್ಯಾರಿಸ್‌ ಪರ ನಿಂತಿದ್ದರು. ಜೋ ಬೈಡನ್‌ ಶನಿವಾರ ವಿಜಯೋತ್ಸವದ ಭಾಷಣದಲ್ಲಿ, ಕೋವಿಡ್‌ ನಿಯಂತ್ರಣ ಕಾರ್ಯಪಡೆ ಸೋಮವಾರ ರಚನೆಯಾಗಲಿದ್ದು ಪ್ರಮುಖ ವಿಜ್ಞಾನಿಗಳು ಹಾಗೂ ವೈದ್ಯರನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಕಾರ್ಯಪಡೆ ಸಹ ಅಧ್ಯಕ್ಷರಾಗಿ ಡಾ.ವಿವೇಕ್‌ ನೇಮಗೊಳ್ಳುವ ಸಾಧ್ಯತೆ ಇದೆ ಎಂದು ‘ವಾಷಿಂಗ್ಟನ್‌ ಪೋಸ್ಟ್‌’ ವರದಿ ಮಾಡಿದೆ.

43 ವರ್ಷದ ವಿವೇಕ್‌, ಡಾ.ಎಚ್‌.ಎನ್‌.ಲಕ್ಷ್ಮಿನರಸಿಂಹಮೂರ್ತಿ– ಮೈತ್ರೇಯಿ ದಂಪತಿಯ ಪುತ್ರ. ಲಕ್ಷ್ಮಿನರಸಿಂಹಮೂರ್ತಿ ಹಲ್ಲೇಗೆರೆಯ ಎಚ್‌.ಟಿ.ನಾರಾಯಣಶೆಟ್ಟಿ ಅವರ ಪುತ್ರರಾಗಿದ್ದು ಹಲ್ಲೇಗೆಯಲ್ಲೇ ಜನಿಸಿದವರು. ಅವರು ಲಂಡನ್‌ನಲ್ಲಿ ವೈದ್ಯರಾಗಿದ್ದಾಗ ವಿವೇಕ್‌ ಜನಿಸಿದರು. ನಂತರ ಕುಟುಂಬ ಅಮೆರಿಕದಲ್ಲಿ ನೆಲೆಸಿತು.

ತವರಿನ ಮೇಲೆ ಅಪಾರ ಪ್ರೀತಿ ಹೊಂದಿರುವ ಈ ಕುಟುಂಬ ಪ್ರತಿ ವರ್ಷ ತಮ್ಮ ಹುಟ್ಟೂರಿಗೆ ಭೇಟಿ ನೀಡುತ್ತಾರೆ. ಹಲ್ಲೇಗೆರೆಯಲ್ಲಿ ದಶಕದಿಂದಲೂ ಆರೋಗ್ಯಮೇಳ ನಡೆಸುತ್ತಿದ್ದಾರೆ. ಸ್ಕೋಪ್‌ (ಸೊಸೈಟಿ ಆಫ್‌ ಚಿಲ್ಡ್ರನ್‌ ಆಫ್‌ ಪ್ಲಾನೆಟ್‌ ಅರ್ಥ್‌) ಸಂಸ್ಥೆ ಮೂಲಕ ಸರ್ಕಾರಿ ಶಾಲಾಕಾಲೇಜುಗಳಿಗೆ ಪಾಠೋಪಕರಣ, ಸಹಾಯಧನ ವಿತರಿಸುತ್ತಿದ್ದಾರೆ. ಪಿತ್ರಾರ್ಜಿತ ಆಸ್ತಿಯಲ್ಲಿ ಸರ್ವಧರ್ಮೀಯರೂ ಪ್ರಾರ್ಥನೆ ಸಲ್ಲಿಸುವ ‘ಭೂಮಂಡಲ ಆರಾಧನಾ ಕೇಂದ್ರ’ ಸ್ಥಾಪಿಸುವ ಸಿದ್ಧತೆ ನಡೆಸುತ್ತಿದ್ದಾರೆ.

‘ನಾಯಕತ್ವ ಗುಣ ಅವರ ಕುಟುಂಬದಲ್ಲೇ ಇದೆ. ದೇವರಾಜ ಅರಸು ಅವರಿಗೆ ಆಪ್ತರಾಗಿದ್ದ ವಿವೇಕ್‌ ತಾತ ಎಚ್‌.ಟಿ.ನಾರಾಯಣಶೆಟ್ಟಿ ಮೈಷುಗರ್‌ ಕಾರ್ಖಾನೆ, ಮೈಸೂರಿನ ವಿಕ್ರಾಂತ್‌ ಟೈರ್ಸ್‌ ನಿರ್ದೇಶಕರಾಗಿದ್ದರು. ರಾಜಕೀಯ ಗುಣ ವಿವೇಕ್‌ ರಕ್ತದಲ್ಲೇ ಇದ್ದು ಅಮೆರಿಕ ರಾಜಕಾರಣದಲ್ಲಿ ಗುರುತಿಸಿಕೊಂಡಿರುವುದು ಸಂತಸ ತಂದಿದೆ’ ಎಂದು ಹಲ್ಲೇಗೆರೆಯ ಮುಖಂಡ, ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ ಮಾಜಿ ಅಧ್ಯಕ್ಷ ಎಚ್‌.ಎ.ವೆಂಕಟೇಶ್‌ ಹೇಳಿದರು.

*******

ಜೋ ಬೈಡನ್‌ ಗೆಲುವಿನ ನಂತರ ಡಾ.ವಿವೇಕ್‌ ಅವರ ಚಿಕ್ಕಪ್ಪ ಎಚ್‌.ಕೆ.ವಸಂತಕುಮಾರ್‌ ಮಂಡ್ಯದ ವಿವಿ ರಸ್ತೆಯಲ್ಲಿ ಸಿಹಿ ವಿತರಿಸಿದರು

ಹಲ್ಲೇಗೆರೆಯಲ್ಲಿ ಸಿಹಿ ವಿತರಣೆ

ಜೋ ಬೈಡನ್‌ ಗೆಲುವು ಸಾಧಿಸುತ್ತಿದ್ದಂತೆ ಹಲ್ಲೇಗೆರೆಯ ಡಾ.ವಿವೇಕ್‌ ಸೋದರ ಸಂಬಂಧಿಗಳು ಸಂಭ್ರಮಾಚರಣೆ ನಡೆಸಿದರು. ಮಂಡ್ಯದಲ್ಲಿರುವ ಅವರ ಚಿಕ್ಕಪ್ಪ ಎಚ್‌.ಕೆ.ವಸಂತಕುಮಾರ್‌ ಸಿಹಿ ವಿತರಿಸಿದರು.

‘ವೈದ್ಯರಾಗಿದ್ದ ವಿವೇಕ್‌ ಅಮೆರಿಕ ರಾಜಕಾರಣದಲ್ಲಿ ಉನ್ನತ ಸಾಧನೆ ಮಾಡಿರುವುದು ನಮಗೆಲ್ಲಾ ಆಶ್ಚರ್ಯ ತಂದಿದೆ. ಅವರು ಎಷ್ಟೇ ಎತ್ತರಕ್ಕೇರಿದ್ದರೂ ತವರನ್ನು ಎಂದಿಗೂ ಮರೆತಿಲ್ಲ. ವಿವೇಕ್‌ ಬಹಳ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ, ಹಲ್ಲೇಗೆರೆಯನ್ನು ಪ್ರೀತಿಸುತ್ತಾರೆ’ ಎಂದು ವಸಂತಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT