ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣದಲ್ಲಿ ಕಡಿಮೆಯಾಗುತ್ತಿರುವ ಸ್ನೇಹ: ಪಿ.ಜಿ.ಆರ್‌.ಸಿಂಧ್ಯಾ ವಿಷಾದ

ಕರ್ನಾಟಕ ಸಂಘದ ಅಮೃತಮಹೋತ್ಸವ; ಕಾಂಗ್ರೆಸ್‌ ಮುಖಂಡ ಪಿಜಿಆರ್‌ ಸಿಂಧ್ಯಾ ವಿಷಾದ
Last Updated 1 ಆಗಸ್ಟ್ 2021, 12:42 IST
ಅಕ್ಷರ ಗಾತ್ರ

ಮಂಡ್ಯ: ‘ಪ್ರಸ್ತುತ ರಾಜಕಾರಣದಲ್ಲಿ ಸ್ನೇಹ ಸಂಬಂಧ ಕಡಿಮೆಯಾಗುತ್ತಿದೆ, ಇದಕ್ಕೆ ಜನಪ್ರತಿನಿಧಗಿಳ ನೈತಿಕ ಮೌಲ್ಯಗಳ ಕುಸಿತವೇ ಕಾರಣ’ ಎಂದು ಕಾಂಗ್ರೆಸ್‌ ಮುಖಂಡ ಪಿ.ಜಿ.ಆರ್‌.ಸಿಂಧ್ಯಾ ವಿಷಾದ ವ್ಯಕ್ತಪಡಿಸಿದರು.

ನಗರದ ವಿವೇಕಾನಂದ ರಂಗಮಂದಿರದಲ್ಲಿ ಭಾನುವಾರ ನಡೆದ ಕರ್ನಾಟಕ ಸಂಘದ ಅಮೃತ ಮಹೋತ್ಸವ, ಕೆ.ವಿ.ಶಂಕರಗೌಡರ 106ನೇ ಜನ್ಮದಿನ, ‘ಪಾದುಕಾ ಕಿರೀಟಿ’ ನಾಟಕ ಪ್ರದರ್ಶನದ ವಜ್ರ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಆಡಳಿತ ಪಕ್ಷವೂ ಇರಬೇಕು, ವಿರೋಧ ಪಕ್ಷವೂ ಇರಬೇಕು. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಸ್ನೇಹ ಸಂಬಂಧಕ್ಕೆ ಕೊರತೆಯಾಗಬಾರದು. ಹಿಂದೆ ಕೆ.ವಿ.ಶಂಕರಗೌಡ, ಜಿ.ಮಾದೇಗೌಡ, ಎಸ್‌.ಎಂ.ಲಿಂಗಪ್ಪ, ಮಂಚೇಗೌಡ, ಬೋರೇಗೌಡ, ಎಚ್‌.ಟಿ.ಕೃಷ್ಣಪ್ಪ ಅವರು ಯಾವುದೇ ಪಕ್ಷದಲ್ಲಿದ್ದರೂ ಸ್ನೇಹಕ್ಕೆ ಕೊರತೆ ಇರಲಿಲ್ಲ. ಆದರೆ ಪ್ರಸ್ತುತ ರಾಜಕಾರಣದಲ್ಲಿ ಅಂತಹ ಯಾವುದೇ ವಾತಾವರಣ ಇಲ್ಲ’ ಎಂದರು.

‘ಶಂಕರಗೌಡರು ಮೃತಪಟ್ಟು 30 ವರ್ಷ ಕಳೆದಿದ್ದರೂ ಅವರು ಮಂಡ್ಯ ಜಿಲ್ಲೆ ಹಾಗೂ ರಾಜ್ಯದಲ್ಲಿ ಮಾಡಿರುವ ಕೆಲಸಗಳ ಮೂಲಕ ಈಗಲೂ ಜನರ ಹೃದಯದಲ್ಲಿ ಜೀವಂತವಾಗಿದ್ದಾರೆ. ಆ ಮೂಲಕ ಅವರು ಶಾಶ್ವತ ಸಚಿವ ಎಂದು ಕರೆಸಿಕೊಂಡಿದ್ಧಾರೆ. ಶಂಕರಗೌಡರ ಮೇಲೆ ನಿಜಲಿಂಗಪ್ಪ ಅವರಿಗೆ ವಿಶೇಷವಾದ ಪ್ರೀತಿ ಇತ್ತು. ರಾಮಕೃಷ್ಣ ಹೆಗಡೆ ಅವರು ಕೂಡ ಶಂಕರಗೌಡರನ್ನು ಪ್ರೀತಿಯಿಂದ ಕಾಣುತ್ತಿದ್ದರು’ ಎಂದರು.

‘ಜಾತ್ಯತೀತ ಮನೋಭಾವ ಹೊಂದಿದ್ದ ಅವರು ಸಮಾಜವಾದಿ ತತ್ವ, ರೈತಧರ್ಮವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಅವರು ಹಲವು ಚಳವಳಿಗಳಲ್ಲಿ ರಚನಾತ್ಮಕವಾಗಿ ತೊಡಗಿಸಿಕೊಂಡಿದ್ದರು, ಆದರೆ ಒಂದು ದಿನವೂ ಪ್ರಚೋದನಾತ್ಮಕವಾದ ಮಾತುಗಳನ್ನಾಡಿರಲಿಲ್ಲ. ಅದಕ್ಕೆ ಅವರಿಗಿದ್ದ ಸಂಸ್ಕೃತಿ, ಕಲೆ, ನಾಟಕಗಳ ಆಸಕ್ತಿಯೇ ಕಾರಣ. ನಾಟಕದ ಪಾತ್ರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದರಂತೆಯೇ ಬದುಕಿದ್ದರು’ ಎಂದರು.

‘1984ರ ಲೋಕಸಭಾ ಚುನಾವಣೆಯಲ್ಲಿ ಅವರು ಪ್ರಚಾರಕ್ಕೇ ಹೋಗಲಿಲ್ಲ. ಇಂದಿರಾಗಾಂಧಿ ಹತ್ಯೆಯ ನಂತರ ನಡೆದ ಆ ಚುನಾವಣೆಯಲ್ಲಿ ಎಸ್‌.ಎಂ.ಕೃಷ್ಣ ಅವರನ್ನು ಸೋಲಿಸಿ ಅವರು ಸಂಸತ್‌ ಪ್ರವೇಶ ಮಾಡಿದರು. ಬಹುಮುಖ ವ್ಯಕ್ತಿತ್ವದ ಮೂಲಕ ತಮ್ಮ ಕೆಲಸಗಳ ಮೂಲಕ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕವನ್ನು ಬೆಸೆದಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಈಗಿನ ಪೀಳಿಗೆ ನಡೆಯಬೇಕು. ಅವರ ಕೆಲಸಗಳನ್ನು ಉಳಿಸಿ, ಬೆಳೆಸಬೇಕು’ ಎಂದರು.

ಬೆಂಗಳೂರು ಜಂಟಿ ಪೊಲೀಸ್‌ ಆಯುಕ್ತ (ಸಂಚಾರ ವಿಭಾಗ) ಡಾ.ಬಿ.ಆರ್‌.ರವಿಕಾಂತೇಗೌಡ ಮಾತನಾಡಿ ‘ಶಂಕರಗೌಡರು ಮಂಡ್ಯ ಮಣ್ಣಿನ ಪುಣ್ಯ. ರಾಜಕಾರಣ, ಶಿಕ್ಷಣ, ಸಂಸ್ಕೃತಿಯ ಚೇತನವಾಗಿದ್ದ ಅವರು ಸದಾ ತಾತ್ವಿಕತೆಗೆ ಅಂಟಿಕೊಂಡಿದ್ದರು. 1955ರಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಗ ಸಭಾಧ್ಯಕ್ಷರು 3 ತಿಂಗಳು ರಾಜೀನಾಮೆ ಸ್ವೀಕಾರ ಮಾಡಿರಲಿಲ್ಲ. ತಾವು ನಂಬಿದ್ದ ತತ್ವಗಳನ್ನು ತಮ್ಮಕಡೆಯ ಉಸಿರು ಇರುವವರೆಗೂ ಪಾಲಿಸಿದರು’ ಎಂದರು.

‘ಶಂಕರಗೌಡರು ಸುಪ್ಪತ್ತಿಗೆಯಲ್ಲಿ ಬೆಳೆದು ಬಂದವರಲ್ಲ, ಬೆಂಕಿಯಲ್ಲಿ ಅರಳಿದ ವ್ಯಕ್ತಿತ್ವ ಅದು. 1984ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಂತರ ಸಂಸತ್‌ನಲ್ಲಿ ಅವರು ಆಡಿದ ಮಾತುಗಳು ಈಗಲೂ ಜೀವಂತವಾಗಿವೆ. ರಾಜಕಾರಣ ಎಂದರೆ ಅಧಿಕಾರ ಹಿಡಿಯುವುದಲ್ಲ, ಅಧಿಕಾರ ಇಲ್ಲದ ಕಾಲದಲ್ಲೂ ಜನರ ಪರವಾಗಿ ಕೆಲಸ ಮಾಡುವುದೇ ರಾಜಕಾರಣ ಎಂದು ಅವರು ನಂಬಿದ್ದರು’ ಎಂದರು.

ಇದೇ ಸಂದರ್ಭದಲ್ಲಿ 6 ಕೃತಿಗಳು ಬಿಡುಗಡೆಯಾದವು. ನಂತರ ಶಂಕರಗೌಡರ ‘ಪಾದುಕಾ ಕಿರೀಟಿ’ ನಾಟಕ ಪ್ರದರ್ಶನ ನಡೆಯಿತು. ಶಾಸಕರಾದ ಎಂ.ಶ್ರೀನಿವಾಸ್‌, ಕೆ.ಟಿ.ಶ್ರೀಕಂಠೇಗೌಡ, ನಗರಸಭೆ ಅಧ್ಯಕ್ಷ ಎಚ್‌.ಎಸ್‌.ಮಂಜು, ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್‌, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್‌ಗೌಡ, ಕೆ.ಸಿ. ಜಯರಾಮು ಅಂಕೇಗೌಡ, ಕೆ.ಸಿ.ಜಯರಾಮು, ಎಚ್‌.ಕೆ.ರಾಮು ಇದ್ದರು.

ಶಂಕರಗೌಡರ ‘ಶೂನ್ಯ ಸಂಪಾದನೆ’

‘1983ರವರೆಗೆ ಶಂಕರಗೌಡರು ಮೂರು ಚುನಾವಣೆಯಲ್ಲಿ ಸೋತಿದ್ದರು 1984ರ ಲೋಕಸಭಾ ಚುನಾವಣೆಯಲ್ಲಿ ಗೆದ್ದಾಗ ಅಭಿನಂದನಾ ಸಮಾರಂಭ ನಡೆದಿತ್ತು. ಅಭಿನಂದನಾ ಭಾಷಣ ಮಾಡಿದ್ದ ಸಾಹಿತಿ ಯು.ಆರ್‌.ಅನಂತಮೂರ್ತಿ, ಶಂಕರಗೌಡರು ಪಾಂಡವರಂತೆ ಅಜ್ಞಾತವಾಸ ಕಳೆದು ಮತ್ತೆ ಗೆಲುವು ಸಾಧಿಸಿದ್ದಾರೆ ಎಂದಿದ್ದರು’ ಎಂದು ಬಿ.ಆರ್‌.ರವಿಕಾಂತೇಗೌಡ ಹೇಳಿದರು.

‘ಅನಂತಮೂರ್ತಿ ಮಾತಿಗೆ ಉತ್ತರ ಕೊಟ್ಟ ಶಂಕರಗೌಡರು, ನಾನು ಅಜ್ಞಾತವಾಸದಲ್ಲಿ ಇರಲಿಲ್ಲ. ಅಧಿಕಾರ ಇಲ್ಲದಿದ್ದರೂ ಜನಸೇವೆ ಮಾಡಿದ್ದೇನೆ. ಶೂನ್ಯ ಸಂಪಾದನೆಯೇ ನನ್ನ ಬದುಕಿನ ಗುರಿ ಎಂದಿದ್ದರು. ಕಡೆಗೂ ಸಂಪಾದನೆ ಮಾಡಿದ್ದೆಲ್ಲವನ್ನು ಕಳೆದುಕೊಂಡು ಶೂನ್ಯಕ್ಕೆ ಬಂದು ನಿಂತರು’ ಎಂದರು.

ಬಿಡುಗಡೆಯಾದ 6 ಕೃತಿಗಳು

ಕೃತಿಗಳು ಲೇಖಕರು
‘ಪಾದುಕಾ ಕಿರೀಟಿ’ ನಾಟಕ ದಿ.ಕೆ.ವಿ.ಶಂಕರಗೌಡ
‘ನಿತ್ಯ ಚೇತನಿ’ ಮಹಾಕಾವ್ಯ ಡಾ.ಪ್ರದೀಪಕುಮಾರ್‌ ಹೆಬ್ರಿ
ಜಾನಪದ ಗತಿಬಿಂಬ ಡಾ.ಎಂ.ಕೆಂಪಮ್ಮ ಕಾರ್ಕಹಳ್ಳಿ
ಮಹಿಳೆ ಮತ್ತು ಪ್ರಚಲಿತ ವಿಷಯಗಳು ಡಾ.ಎಚ್‌.ಎಂ.ಹೇಮಲತಾ
ಉದಾರ ಚರಿತ ಪ್ರೊ.ಜಯಪ್ರಕಾಶಗೌಡ
ಕಾವ್ಯ ಶಂಕರ ಡಾ.ಎಸ್‌.ಶಿವರಾಮು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT