ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ–20 ಸದಸ್ಯರು ಟಿಪ್ಪು ಅರಮನೆಗೆ ಮನಸೋತರು..!

ಜಿ–20 ಗುಂಪಿನ ಸದಸ್ಯರಿಂದ ಶ್ರೀರಂಗಪಟ್ಟಣ ಭೇಟಿ
Published 2 ಆಗಸ್ಟ್ 2023, 15:41 IST
Last Updated 2 ಆಗಸ್ಟ್ 2023, 15:41 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಪಟ್ಟಣದ ಪ್ರಸಿದ್ದ ಟಿಪ್ಪು ಸುಲ್ತಾನ್‌ ಬೇಸಿಗೆ ಅರಮನೆಗೆ ಬುಧವಾರ ಸಂಜೆ ಭೇಟಿ ನೀಡಿದ್ದ ಜಿ–20 ಗುಂಪಿನ, 41 ದೇಶಗಳು 100ಕ್ಕೂ ಹೆಚ್ಚು ಸದಸ್ಯರು ಅರಮನೆಗೆ ಕಲಾ ವೈಭವಕ್ಕೆ ಮನಸೋತರು.

ಟಿಪ್ಪು ಸುಲ್ತಾನ್‌ ಕಾಲದಲ್ಲಿ, 240 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಇಂಡೋ– ಸಾರ್ಸೆನಿಕ್‌ ಶೈಲಿಯ ಅರಮನೆಯ ಸೊಬಗನ್ನು ಕಣ್ತುಂಬಿಕೊಂಡು. ಅರಮನೆಯ ಕಲಾತ್ಮಕ ಮರದ ಕಂಬಗಳು, ಬಾಲ್ಕನಿಗಳು, ಯುದ್ದದ ಕತೆ ಹೇಳುವ ಭಿತ್ತಿ ಚಿತ್ರಗಳು, ನೈಸರ್ಗಿಕ ಬಣ್ಣದ ಚಿತ್ತಾರಗಳನ್ನು ಕುತೂಹಲದಿಂದ ವೀಕ್ಷಿಸಿದರು. ಏಕ ವ್ಯಕ್ತಿ ವಸ್ತುಸಂಗ್ರಹಾಲಯವಾದ ಅರಮನೆಯಲ್ಲಿ ಟಿಪ್ಪು ಸುಲ್ತಾನ್‌ ಧರಿಸುತ್ತಿದ್ದ ವಸ್ತ್ರಗಳು, ಆತ ಬಳಸುತ್ತಿದ್ದ ಫಿರಂಗಿ, ಶಸ್ತ್ರಾಸ್ತ್ರಗಳು, ಪೀಠೋಪಕರಣಗಳು, ಯುವರಾಜ ಟಿಪ್ಪುವಿನ ಮೂರು ಆಯಾಮದ ಚಿತ್ರ, ಆತನ ಮಕ್ಕಳು, ಸೈನ್ಯಾಧಿಕಾರಿಗಳ ಚಿತ್ರಗಳು ಹಾಗೂ ಶ್ರೀರಂಗಪಟ್ಟಣ ಪತನದ ದೃಶ್ಯಗಳನ್ನು ಕಣ್ಣೆವೆಯಿಕ್ಕದೆ ನೋಡಿದರು.

ಮೈಸೂರಿನ ಪ್ರಸಾದ್‌, ರೂಪೇಶ್‌ ಸೇರಿದಂತೆ 11 ಮಂದಿ ಪ್ರವಾಸಿ ಮಾರ್ಗದರ್ಶಿಗಳು ಅರಮನೆಯ ವಿಶೇಷತೆಯನ್ನು ಜಿ–20 ತಂಡದ ಸದಸ್ಯರಿಗೆ ತಂಡಕ್ಕೆ ವಿವರಿಸಿದರು. ಒಂದು ಗಂಟೆ 10 ನಿಮಿಷಗಳ ಕಾಲ ಅರಮನೆಯನ್ನು ವೀಕ್ಷಿಸಿದ ತಂಡದ ಸದಸ್ಯರು ಮರದ ಕುಸುರಿ ಕೆತ್ತನೆ, ಪೂರ್ವ ಮತ್ತು ಪಶ್ಚಿಮ ದಿಕ್ಕಿನ ಭಿತ್ತಿ ಚಿತ್ರಗಳನ್ನು ತಮ್ಮ ಕ್ಯಾಮೆರಾ ಮತ್ತು ಮೊಬೈಲ್‌ಗಳಲ್ಲಿ ಕ್ಲಿಕ್ಕಿಸಿಕೊಂಡರು. ಬಳಿಕ ಬಸ್‌ಗಳಲ್ಲಿ ಕುಳಿತೇ ಪಟ್ಟಣದ ಪೂರ್ವ ಕೋಟೆ ಮತ್ತು ಶ್ರೀರಂಗನಾಥಸ್ವಾಮಿ ದೇವಾಲಯವನ್ನು ವೀಕ್ಷಿಸಿದ ಈ ತಂಡ ಕೆಆರ್‌ಎಸ್‌ ಕಡೆ ತೆರಳಿತು.

‘ಸಂಪೂರ್ಣ ಮರದಿಂದಲೇ ನಿರ್ಮಿಸಿರುವ ಬೇಸಿಗೆ ಈ ಅರಮನೆ ಚಿತ್ತಾಕರ್ಷಕವಾಗಿದೆ. ಹೈದರ್‌ ಅಲಿ ಮತ್ತು ಟಿಪ್ಪು ಸುಲ್ತಾನ್‌ರು ಬ್ರಿಟಿಷರ ಜತೆ ನಡೆಸಿದ ಯುದ್ಧ ಸಂಗತಿ ತಿಳಿಸುವ ಬಿತ್ತಿ ಚಿತ್ರಗಳು ಎರಡು ಶತಮಾನ ಕಳೆದರೂ ಮಾಸದೇ ಇರುವುದು ಅಚ್ಚರಿ ಹುಟ್ಟಿಸುತ್ತದೆ. ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿರುವ ಈ ಅರಮನೆಯನ್ನು ನೋಡಿ ನಿಜಕ್ಕೂ ಖುಷಿಯಾಗಿದೆ’ ಎಂದು ಈ ತಂಡದಲ್ಲಿದ್ದ ಅರ್ಜೆಂಟೀನಾ ಪ್ರತಿನಿಧಿ ಪ್ಯಾಟ್ರಿಕ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಜೆ 6.20ಕ್ಕೆ ಇಲ್ಲಿಗೆ ಆಗಮಿಸಿದ ಜಿ–20 ತಂಡದ ಸದಸ್ಯರನ್ನು ಉಪ ವಿಭಾಗಾಧಿಕಾರಿ ನಂದೀಶ್‌ ಮತ್ತು ತಹಶೀಲ್ದಾರ್‌ ಜಿ. ಅಶ್ವಿನಿ ನೇತೃತ್ವದ ಅಧಿಕಾರಿಗಳ ತಂಡ ಅರಮನೆಯ ಪ್ರವೇಶ ದ್ವಾರದಲ್ಲಿ ಸಂಭ್ರಮದಿಂದ ಸ್ವಾಗತಿಸಿತು. ಮಹಿಳೆಯರು ಪೂರ್ಣಕುಂಭ ಹಿಡಿದು ಬರಮಾಡಿಕೊಂಡರು. ವೀರಗಾಸೆ ಮತ್ತು ಚರ್ಮವಾದ್ಯ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸಿದರು. ಅರಮನೆ ಸುತ್ತ ಮುತ್ತ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಟಿ. ರಂಗಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ರಾಣಿ, ಬೇಸಿಗೆ ಅರಮನೆಯ ಅಧೀಕ್ಷಕ ಶ್ರೀಗುರು ಬಾಗಿ, ಪುರಾತತ್ವ ಇಲಾಖೆ ಸಹಾಯಕ ಅಧಿಕಾರಿ ಸುನಿಲ್‌ ಇದ್ದರು.

ಬೇಸಿಗೆ ಅರಮನೆಯನ್ನು ಜಿ–20 ಗುಂಪಿನ ಸದಸ್ಯರು ವೀಕ್ಷಿಸಿದರು
ಬೇಸಿಗೆ ಅರಮನೆಯನ್ನು ಜಿ–20 ಗುಂಪಿನ ಸದಸ್ಯರು ವೀಕ್ಷಿಸಿದರು
ಬೇಸಿಗೆ ಅರಮನೆಯನ್ನು ಜಿ–20 ಗುಂಪಿನ ಸದಸ್ಯರು ವೀಕ್ಷಿಸಿದ ಚಿತ್ರ
ಬೇಸಿಗೆ ಅರಮನೆಯನ್ನು ಜಿ–20 ಗುಂಪಿನ ಸದಸ್ಯರು ವೀಕ್ಷಿಸಿದ ಚಿತ್ರ
ಶ್ರೀರಂಗಪಟ್ಟಣದ ಟಿಪ್ಪು ಸುಲ್ತಾನ್‌ ಬೇಸಿಗೆ ಅರಮನೆಗೆ ಬುಧವಾರ ಸಂಜೆ ಭೇಟಿ ನೀಡಿದ್ದ ಜಿ–20 ಗುಂಪಿನ ದೇಶಗಳ ಪ್ರತಿನಿಧಿಗಳ ತಂಡ
ಶ್ರೀರಂಗಪಟ್ಟಣದ ಟಿಪ್ಪು ಸುಲ್ತಾನ್‌ ಬೇಸಿಗೆ ಅರಮನೆಗೆ ಬುಧವಾರ ಸಂಜೆ ಭೇಟಿ ನೀಡಿದ್ದ ಜಿ–20 ಗುಂಪಿನ ದೇಶಗಳ ಪ್ರತಿನಿಧಿಗಳ ತಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT