ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲುಕೋಟೆ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಚಿವ ಸುರೇಶ್ ಕುಮಾರ್

ಮೇಲುಕೋಟೆಯಲ್ಲಿ ದೇವರ ದರ್ಶನ ಪಡೆದ ಶಿಕ್ಷಣ ಸಚಿವ ಸುರೇಶ್ ಕುಮಾರ್
Last Updated 21 ನವೆಂಬರ್ 2020, 13:12 IST
ಅಕ್ಷರ ಗಾತ್ರ

ಮೇಲುಕೋಟೆ: ‘ಚೆಲುವನಾರಾಯಣಸ್ವಾಮಿಯ ದಿವ್ಯಕ್ಷೇತ್ರವಾದ ಮೇಲುಕೋಟೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಅವರು ಶನಿವಾರ ದಂಪತಿ ಸಮೇತ ಮೇಲುಕೋಟೆಗೆ ಆಗಮಿಸಿ ಚೆಲುವನಾರಾಯಣಸ್ವಾಮಿ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಸುಸಜ್ಜಿತ ಧಾರ್ಮಿಕ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುತ್ತಿದೆ. ಪ್ರವಾಸೋದ್ಯಮ ಇಲಾಖೆಯ ಮೂಲಕ ₹ 7 ಕೋಟಿ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿಗಳು ಅನ್ನದಾನ ಭವನ ನಿರ್ಮಾಣಕ್ಕೆ ₹ 2 ಕೋಟಿ ಅನುದಾನ ನೀಡಿದ್ದಾರೆ. ಇನ್ನೂ ಹಲವು ಅಭಿವೃದ್ಧಿ ಕಾರ್ಯಗಳು ಆರಂಭವಾಗಲಿದೆ’ ಎಂದು ಹೇಳಿದರು.

‘ಶಿಕ್ಷಣ ಇಲಾಖೆಯಿಂದ ಮೇಲುಕೋಟೆ ಶತಮಾನದ ಶಾಲೆಯನ್ನು ಅಭಿವೃದ್ಧಿ ಮಾಡುತ್ತೇನೆ ಜೊತೆಗೆ ವಿವಿಧ ಇಲಾಖೆ ಸಚಿವರನ್ನು ಸಮನ್ವಯಗೊಳಿಸಿ ಮೇಲುಕೋಟೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದರು.

ಶಿಥಿಲವಾದ ರಥದ ಬದಲು ಹೊಸರಥ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಬೇಕೆಂಬ ರಾಮಾನುಜರ ಸನ್ನಿಧಿ ಅರ್ಚಕರಾದ ವಿದ್ವಾನ್ ರಾಮಪ್ರಿಯ ಮನವಿಗೆ ಸ್ಪಂದಿಸಿದ ಸಚಿವರು, ‘ಸೂಕ್ತ ಪ್ರಸ್ತಾವ ತಂದರೆ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಕರ್ನಾಟಕ ಸರ್ಕಾರದ ವತಿಯಿಂದ ಮಹಾರಥ ಮಾಡಿಸಿಕೊಡಲು ಸಹಕಾರ ನೀಡುತ್ತೇನೆ’ ಎಂದು ಭರವಸೆ ನೀಡಿದರು.

ಸಚಿವರನ್ನು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಂಗಳಮ್ಮ ಸ್ವಾಗತಿಸಿದರು. ನಂತರ ಪೂರ್ಣಕುಂಭ ಮತ್ತು ಸಾಂಪ್ರದಾಯಿಕ ಶಠಾರಿ ಮರ್ಯಾದೆಯೊಂದಿಗೆ ದೇವಾಲಯಕ್ಕೆ ಬರಮಾಡಿ ಕೊಳ್ಳಲಾಯಿತು.

ಚೆಲುವನಾರಾಯಣಸ್ವಾಮಿ ಮತ್ತು ಯದುಗಿರಿನಾಯಕಿ ನಂತರ ರಾಮಾನುಜಾಚಾರ್ಯರ ದರ್ಶನ ಪಡೆದರು. ಈ ವೇಳೆ ರಾಜಾಶೀರ್ವಾದ ನೆರವೇರಿಸಲಾಯಿತು. ನಂತರ ಸಂಸ್ಕೃತ ಸಂಶೋಧನಾ ಸಂಸ್ಥೆ, ಪು.ತಿ.ನ ಮನೆಗೆ ಭೇಟಿ ನೀಡಿ, ಬೆಟ್ಟಕ್ಕೆ ತೆರಳಿ ಯೋಗಾನರಸಿಂಹಸ್ವಾಮಿಯ ದರ್ಶನ ಪಡೆದರು.

ರಾಮಾನುಜಾಚಾರ್ಯರೇ ಭಿಕ್ಷೆ ಸ್ವೀಕರಿಸುತ್ತಿದ್ದ ಯತಿರಾಜದಾಸರ್ ಗುರುಪೀಠದಲ್ಲಿ ಭೋಜನ ಸ್ವೀಕರಿಸಿ ವಿಜಯಲಕ್ಷ್ಮಿ ಅಮ್ಮನವರ ದರ್ಶನ ಹಾಗೂ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಆಶೀರ್ವಾದ ಪಡೆದರು.

ಈ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಘುನಂದನ್, ಪಾಂಡವಪುರ ಕ್ಷೇತ್ರಶಿಕ್ಷಣಾಧಿಕಾರಿ ಮಲ್ಲೇಶ್ವರಿ, ಸಮನ್ವಯಾಧಿಕಾರಿ ತಿಮ್ಮರಾಯಿಗೌಡ, ತಾ.ಪಂ ಸದಸ್ಯೆ ಮಂಗಳಮ್ಮ ಮುಖ್ಯಶಿಕ್ಷಕ ಸಂತಾನರಾಮನ್, ಸಿ.ಆರ್.ಪಿ ಬೆಟ್ಟಸ್ವಾಮಿಗೌಡ, ಬಿಜೆಪಿ ಮೇಲುಕೋಟೆ ಹೋಬಳಿ ಘಟಕದ ಅಧ್ಯಕ್ಷ ಎಸ್.ಎನ್.ಟಿ ಸೋಮಶೇಖರ್, ತಾಲ್ಲೂಕು ರೈತ ಮೋರ್ಚಾ ಕಾರ್ಯದರ್ಶಿ ಮಂಜುನಾಥ್, ಬಿಜೆಪಿ ಮುಖಂಡರಾದ ಧನಂಜಯ, ಮೇಲುಕೋಟೆ ಶಂಕರ್, ನಾಗೇಶ್, ಅರಕನಕೆರೆ ಪುರುಷೋತ್ತಮ್, ಗುರು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT