ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದಿಂದ ಕಲೆಗಳ ಉಳಿವು ಅಸಾಧ್ಯ

ಮೂಡಪಲಾಯ ಯಕ್ಷಗಾನ ಪುನಶ್ಚೇತನ ಶಿಬಿರ ಸಮಾರೋಪ; ಜಯರಾಂ ರಾಯಪುರ ಅಭಿಮತ
Last Updated 18 ಏಪ್ರಿಲ್ 2021, 11:03 IST
ಅಕ್ಷರ ಗಾತ್ರ

ಮಂಡ್ಯ: ‘ಸರ್ಕಾರದ ಸಹಾಯದಿಂದ ಯಾವುದೇ ಕಲಾ ಪ್ರಕಾರವನ್ನು ಉಳಿಸಿ, ಬೆಳೆಸಬಹುದು, ಪುನಶ್ಚೇತನ ನೀಡಬಹುದು ಎಂದು ತಿಳಿದಿದ್ದರೆ ಅದು ತಪ್ಪು. ಕಲೆಯಲ್ಲಿ ಇರುವವರೇ ನಾಯಕತ್ವ ವಹಿಸಿ ಕಲೆಯನ್ನು ಉಳಿಸುವ ಪ್ರಯತ್ನ ಮಾಡಬೇಕು’ ಎಂದು ಚೈನ್ನೈನ ಆದಾಯ ತೆರಿಗೆ ಇಲಾಖೆ ಆಯುಕ್ತ ಜಯರಾಂ ರಾಯಪುರ ಹೇಳಿದರು.

ಮೂಡಲಪಾಯ ಯಕ್ಷಗಾನ ಪುನಶ್ಚೇತನ ತರಬೇತಿ ಶಿಬಿರದ ಸಮಾರೋಪದ ಅಂಗವಾಗಿ ಭಾನುವಾರ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಸರ್ಕಾರದ ಪ್ರಯತ್ನದಿಂದ ಯಾವ ಕಲೆಗಳೂ ಬೆಳೆಯಲು ಸಾಧ್ಯವಿಲ್ಲ. ನಾಡು, ನುಡಿ, ಜಲದ ಸಂರಕ್ಷಣೆ, ಸಂಸ್ಕೃತಿಯ ಉಳಿವಿಗಾಗಿ ನಾವು ಸರ್ಕಾರದ ಯಾವುದೇ ಸಹಾಯವನ್ನು ನಿರೀಕ್ಷೆ ಮಾಡಬಾರದು. ಅಂತಹ ಪರಿಸ್ಥಿತಿ ಇಂದು ಕರ್ನಾಟಕ ರಾಜ್ಯ ಹಾಗೂ ಇಡೀ ದೇಶದಲ್ಲಿದೆ. ಹೀಗಾಗಿ ಸರ್ಕಾರದ ಸಹಾಯ ನಿರೀಕ್ಷೆ ಮಾಡದೆ ಆಯಾ ಕಲಾ ಕ್ಷೇತ್ರದಲ್ಲಿ ಇರುವವರೇ ಕಲೆಗಳನ್ನು ಬೆಳೆಸುವಂತಹ ಕೆಲಸ ಮಾಡಬೇಕು’ ಎಂದರು.

‘ಮೂಡಲಪಾಯ ಯಕ್ಷಗಾನದ ಉಳಿವಿಗಾಗಿ ಕಲೆಯಲ್ಲಿ ತೊಡಗಿಸಿಕೊಂಡ ಕಲಾವಿದರು, ಕಲಾ ಪೋಷಕರು ಹಾಗೂ ಕರ್ನಾಟಕ ಸಂಘದಂತಹ ಸಂಘಟನೆಗಳು ನಾಯಕತ್ವ ಗುಣ ವಹಿಸಿಕೊಳ್ಳಬೇಕು. ಅತ್ಯಂತ ಜೀವಂತ ಕಲೆಯಾಗಿರುವ ಮೂಡಲಪಾಯ ಯಕ್ಷಗಾನದಲ್ಲಿ ಖಚಿತತೆ, ನಿಖರತೆ ಇದೆ. ಆದರೂ ಅಳಿವಿನ ಅಂಚಿನಲ್ಲಿರುವ ಮೂಡಲಪಾಯಕ್ಕೆ ಪುನರುಜ್ಜೀವನ ನೀಡುವ ಅವಶ್ಯಕತೆ ಇದೆ’ ಎಂದರು.

‘ಯಕ್ಷಗಾನ ಅಕಾಡೆಮಿ ಮೂಡಲಪಾಯ ಪ್ರಕಾರಕ್ಕೂ ಆದ್ಯತೆ ನೀಡಬೇಕು. ಅಕಾಡೆಮಿಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡುವಾಗ ಪಡುವಲಪಾಯದ ಜೊತೆಗೆ ಮೂಡಲಪಾಯಕ್ಕೂ ಮಹತ್ವ ನೀಡಬೇಕು. ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಎಂ.ಎ.ಹೆಗಡೆ ಅವರು ಕೂಡ ಇದೇ ಅಭಿಪ್ರಾಯವನ್ನು ಹೊಂದಿದ್ದರು. ಅವರ ವಿಶಾಲ ಮನೋಭಾವ ಮೆಚ್ಚುವಂಥದ್ದು’ ಎಂದರು.

‘ನಮ್ಮಲ್ಲಿ ಇತಿಹಾಸ ಬರೆದಿಡುವ ಪರಂಪರೆ ಇಲ್ಲವಾಗಿದೆ. ಯಾವ ರಾಜರೂ ಕೂಡ ತಮ್ಮ ಸಮಕಾಲೀನ ಇತಿಹಾಸವನ್ನು ಬರೆದಿಟ್ಟಿಲ್ಲ. ಆದರೆ ಕರ್ನಾಟಕ ಸಂಘ ಆಯೋಜನೆ ಮಾಡಿರುವ ಪುನಶ್ಚೇತನ ಶಿಬಿರದ ಚಟುವಟಿಕೆಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಮೂಲಕ ಸಮಕಾಲೀನ ಇತಿಹಾಸ ಬರೆಯುವ ಕೆಲಸ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ’ ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ಮಾತನಾಡಿ ‘ಮೂಡಲಪಾಯ ಯಕ್ಷಗಾನ ಹಾಗೂ ಪಡುವಲಪಾಯ ಯಕ್ಷಗಾನದಲ್ಲಿ ಸಾಕಷ್ಟು ಸಾಮ್ಯತೆ ಇದೆ. ಮೂಡಲಪಾಯದಂತೆ ಪಡುವಲಪಾಯದಲ್ಲೂ ನೃತ್ಯ, ಸಂಗೀತ, ವೇಷಭೂಷಣವಿದೆ. ಆದರೆ ಇಲ್ಲಿ ಮುಖವೀಣೆ ಬಳಸಿದರೆ ಅಲ್ಲಿ ಚಂಡೆ ಬಳಕೆ ಮಾಡುತ್ತಾರೆ. ಪಡುವಲಪಾಯ ಕರಾವಳಿ, ಮಲೆನಾಡಿನ ಮೂರು ಜಿಲ್ಲೆಗಳಿಗೆ ಸೀಮಿತವಾಗಿದೆ. ಅಲ್ಲಿ ವಿದ್ಯಾವಂತರ ಪ್ರವೇಶವಾದ ಕಾರಣ ಕಲೆ ಅಲ್ಲಿ ವಿಜೃಂಭಿಸುತ್ತಿದೆ’ ಎಂದರು.

‘ಮೂಡಲಪಾಯ ಮೈಸೂರು, ಹಾಸನ, ಮಂಡ್ಯ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಕೋಲಾರ ಮುಂತಾದೆಡೆ ಹರಡಿಕೊಂಡಿದೆ. 10 ಜಿಲ್ಲೆಗಳಲ್ಲಿ ಮೂಡಲಪಾಯ ಇದ್ದರೂ ಇಲ್ಲಿ ವಿದ್ಯಾವಂತರ ಪ್ರವೇಶವಾಗದ ಕಾರಣ ಕಲೆ ಹಿಂದುಳಿದಿದೆ. ಕರಾವಳಿ ಯಕ್ಷಗಾನ ಅಲ್ಲಿಯ ಅಸ್ಮಿತೆಯ ಪ್ರಶ್ನೆಯಾಗಿದೆ. ಆದರೆ ಇಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಹೀಗಾಗಿ ಮೂಡಲಪಾಯ ಪ್ರಕಾರವನ್ನು ಪುನರುಜ್ಜೀವನಗೊಳಿಸುವ ಯತ್ನ ನಡೆಯುತ್ತಿದೆ’ ಎಂದರು.

ಡಾ.ಕೆಂಪಮ್ಮ ಅವರ ‘ಮೂಡಲಪಾಯ ಯಕ್ಷಗಾನ ಪುನಶ್ಚೇತನ’ ಕೃತಿ ಬಿಡುಗಡೆ ಮಾಡಲಾಯಿತು. ಹಿರಿಯ ಭಾಗವತರಾದ ಎಚ್‌.ಡಿ.ನರಸೇಗೌಡ ವಿಚಾರ ಮಂಡಿಸಿದರು.

ಸಾಹಿತಿ ಚಿಕ್ಕಮರಳಿ ಬೋರೇಗೌಡ, ಕರ್ನಾಟಕ ಸಂಘದ ಕಾರ್ಯದರ್ಶಿ ಲೋಕೇಶ್‌ ಚಂದಗಾಲು ಇದ್ದರು.

*******

ಎಂ.ಎ.ಹೆಗಡೆ ಸಾವಿಗೆ ಶ್ರದ್ಧಾಂಜಲಿ

ವಿಚಾರ ಸಂಕಿರಣಕ್ಕೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ಅವರು ಚಾಲನೆ ನೀಡಬೇಕಾಗಿತ್ತು. ಆದರೆ ಅವರು ಕೋವಿಡ್‌ನಿಂದ ಮೃತಪಟ್ಟಿದ್ದ ಕಾರಣ ಸಮಾರಂಭದಲ್ಲಿ ಶೋಕದ ವಾತಾವರಣ ಇತ್ತು. ಅವರಿಗೆ ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

‘ಎಂ.ಎ.ಹೆಗಡೆ ಅವರ ಸಾವಿನಿಂದ ಯಕ್ಷಗಾನ ಕ್ಷೇತ್ರ ಮಾತ್ರವಲ್ಲದೇ ಇಡೀ ಕಲಾಕ್ಷೇತ್ರಕ್ಕೆ ತುಂಬಲಾಗದ ನಷ್ಟವಾಗಿದೆ. ಮೂಡಲಪಾಯ ಯಕ್ಷಗಾನ ಪುನಶ್ಚೇತನ ಕೃತಿಯಲ್ಲಿ ಅವರು ಬರೆದಿರುವ ಮುನ್ನುಡಿ ಅತ್ಯಂತ ಉತ್ಕೃಷ್ಟವಾಗಿದೆ. ಇದು ಅವರ ಹೃದಯ ವೈಶಾಲ್ಯತೆಯನ್ನು ನಿರೂಪಿಸಿದೆ’ ಎಂದು ಜಯರಾಂ ರಾಯಪುರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT