ಶನಿವಾರ, ಜನವರಿ 16, 2021
17 °C
ಗೆದ್ದವರ ಬಾಲ ಹಿಡಿಯುತ್ತಿರುವ ರಾಜಕೀಯ ಪಕ್ಷಗಳು, ಸನ್ಮಾನ ಸಮಾರಂಭಗಳ ಆಯೋಜನೆ

ಮೀಸಲಾತಿಯತ್ತ ನೂತನ ಗ್ರಾ.ಪಂ ಸದಸ್ಯರ ಚಿತ್ತ

ಎಂ.ಎನ್‌.ಯೋಗೇಶ್‌‌ Updated:

ಅಕ್ಷರ ಗಾತ್ರ : | |

ಮಂಡ್ಯ: ಗ್ರಾಮ ಪಂಚಾಯಿತಿ ಅಧ್ಯಕ್ಷ–ಉಪಾಧ್ಯಕ್ಷ ಮೀಸಲಾತಿ ನಿಗದಿ ಪ್ರಕ್ರಿಯೆ ಆರಂಭಗೊಂಡಿದ್ದು ನೂತನ ಸದಸ್ಯರ ಚಿತ್ತ ಪಂಚಾಯಿತಿ ಆಡಳಿತದತ್ತ ನೆಟ್ಟಿದೆ. ಅಧ್ಯಕ್ಷ ಹುದ್ದೆ ಯಾರ ಮುಡಿಗೇರಲಿದೆ ಎಂಬ ವಿಚಾರ ಕುರಿತ ಚರ್ಚೆಗಳು ಈಗ ಹಳ್ಳಿಗಳಲ್ಲಿ ಗರಿಗೆದರಿವೆ.

ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಅಭಿನಂದನೆಗಳ ಮಹಾಪೂರವೇ ಹರಿಯುತ್ತಿದೆ. ಗೆದ್ದ ಅಭ್ಯರ್ಥಿಗಳನ್ನು ಹೈಜಾಕ್‌ ಮಾಡುತ್ತಿರುವ ರಾಜಕೀಯ ಪಕ್ಷಗಳ ಮುಖಂಡರು ಸನ್ಮಾನ ಸಮಾರಂಭ ಆಯೋಜಿಸುತ್ತಿದ್ದಾರೆ. ಬಹುತೇಕ ಸದಸ್ಯರನ್ನು ನಮ್ಮ ಪಕ್ಷದ ಬೆಂಬಲದಿಂದಲೇ ಗೆದ್ದಿದ್ದಾರೆ ಎಂಬ ಲೆಕ್ಕ ಕೊಡುತ್ತಿದ್ದಾರೆ. ಭರ್ಜರಿ ಊಟ ಆಯೋಜನೆ ಮಾಡಿ ವಿಜಯೋತ್ಸವ ಆಚರಣೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರು ನಾವೇ ಮೊದಲ ಸ್ಥಾನ ಪಡೆದಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಈ ವಿಷಯದಲ್ಲಿ ಬಿಜೆಪಿ ಕೂಡ ಒಂದು ಹೆಜ್ಜೆ ಮುಂದೆ ಹೋಗಿದ್ದು 80ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಧಿಕಾರ ಹಿಡಿಯಲಿದ್ದಾರೆ ಎಂದು ಹೇಳಿಕೊಂಡಿದೆ. ಮೂರೂ ಪಕ್ಷಗಳು ತಮ್ಮ ಬಂಬಲಿಗ ಅಭ್ಯರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಆಯೋಜನೆ ಮಾಡುತ್ತಿವೆ. ಪಕ್ಷೇತರವಾಗಿ ಗೆದ್ದ ಅಭ್ಯರ್ಥಿಗಳನ್ನೂ ಪಕ್ಷಕ್ಕೆ ಸೇರಿಸಿಕೊಳ್ಳಲು ತುದಿಗಾಲಮೇಲೆ ನಿಂತಿವೆ.‌

ಜಿಲ್ಲಾಧಿಕಾರಿಯತ್ತ ಚಿತ್ತ: ಅಧ್ಯಕ್ಷ– ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ನಿಗದಿ ಜವಾಬ್ದಾರಿಯನ್ನು ಜಿಲ್ಲಾಧಿಕಾರಿ ವಹಿಸಿರುವ ಚುನಾವಣಾ ಆಯೋಗ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕಳೆದ 20 ವರ್ಷಗಳ ಮೀಸಲಾತಿ ನಿಗದಿಯನ್ನು ಪರಿಗಣಿಸಿ, ಸರದಿಯ (ರೊಟೇಷನ್‌) ನಿಯಮ ಪಾಲನೆ ಮಾಡಿ, ಅವಕಾಶ ವಂಚಿತ ಸಮುದಾಯಗಳಿಗೆ ಅವಕಾಶ ನೀಡುವಂತೆ ಸೂಚನೆ ನೀಡಿದೆ. ಈಗಾಗಲೇ ಮೀಸಲಾತಿ ನಿಗದಿ ಪ್ರಕ್ರಿಯೆ ಆರಂಭಗೊಂಡಿದ್ದು ನೂತನ ಸದಸ್ಯರ ಚಿತ್ತ ಜಿಲ್ಲಾಡಳಿತದತ್ತ ಹರಿದಿದೆ.

‘ಈಗ ಗೆಲುವು ಸಾಧಿಸಿರುವ ಅಭ್ಯರ್ಥಿಗಳೆಲ್ಲರೂ ವಿಜಯೋತ್ಸವದ ಮನಸ್ಥಿತಿಯಲ್ಲಿದ್ದಾರೆ. ಮೀಸಲಾತಿ ಪಟ್ಟಿ ನಿಗದಿಯಾದ ತಕ್ಷಣ ರಾಜಕೀಯ ಚಟುವಟಿಕೆಗಳು ಮತ್ತೆ ಆರಂಭಗೊಳ್ಳಲಿವೆ. ಈಗಾಗಲೇ ಕೆಲವು ಗ್ರಾ.ಪಂಗಳಲ್ಲಿ ಸದಸ್ಯರನ್ನು ಒಲಿಸಿಕೊಳ್ಳುವ ಯತ್ನಗಳು ನಡೆಯುತ್ತಿವೆ’ ಎಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರೊಬ್ಬರು ತಿಳಿಸಿದರು.

ಮಹಿಳೆಗೆ ಸಿಂಹಪಾಲು: ಜಿಲ್ಲೆಯ ಒಟ್ಟು 233 ಗ್ರಾಮ ಪಂಚಾಯಿತಿಗಳಲ್ಲಿ 118 ಪಂಚಾಯಿತಿಗಳಲ್ಲಿ ಅಧ್ಯಕ್ಷ– ಉಪಾಧ್ಯಕ್ಷ ಹುದ್ದೆಯನ್ನು ಮಹಿಳೆಗೆ ಮೀಸಲುಗೊಳಿಸುವಂತೆ ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಪರಿಶಿಷ್ಟ ಜಾತಿಗೆ 35 ಸ್ಥಾನ, ಅದರಲ್ಲಿ 19 ಸ್ಥಾನ ಮಹಿಳೆಗೆ ನಿಗದಿ ಮಾಡಲು ಸೂಚಿಸಲಾಗಿದೆ. ಪರಿಶಿಷ್ಟ ಪಂಗಡಕ್ಕೆ 2 ಸ್ಥಾನ ನಿಗದಿಗೊಂಡಿದ್ದು ಎರಡೂ ಮಹಿಳೆಯ ಪಾಲಾಗಿವೆ.

ಹಿಂದುಳಿದ ಎ ವರ್ಗಕ್ಕೆ 58 ಸ್ಥಾನ, ಮಹಿಳೆಗೆ 31, ಹಿಂದುಳಿದ ಬಿ ವರ್ಗಕ್ಕೆ 15 ಸ್ಥಾನ, 8 ಮಹಿಳೆಗೆ ನಿಗದಿಗೊಳಿಸುವಂತೆ ಸೂಚಿಸಲಾಗಿದೆ. ಸಾಮಾನ್ಯ ವರ್ಗಕ್ಕೆ 123 ಗ್ರಾಮ ಪಂಚಾಯಿತಿ ಧಕ್ಕಿದ್ದು ಅದರಲ್ಲಿ 58 ಸ್ಥಾನ ಮಹಿಳೆ ಪಾಲಾಗಿವೆ.

ರೆಸಾರ್ಟ್‌ ರಾಜಕಾರಣ: ಇತ್ತೀಚೆಗೆ ನಡೆದ ನಗರಸಭೆ ಅಧ್ಯಕ್ಷ– ಉಪಾಧ್ಯಕ್ಷ ಚುನಾವಣೆಯೂ ರೆಸಾರ್ಟ್‌ ರಾಜಕಾರಣಕ್ಕೆ ಸಾಕ್ಷಿಯಾಗಿತ್ತು. ಮುಂದೆ ಅದು ಗ್ರಾಮ ಪಂಚಾಯಿತಿ ಅಧ್ಯಕ್ಷ– ಉಪಾಧ್ಯಕ್ಷ ಚುನಾವಣೆಯಲ್ಲೂ ಮುಂದುವರಿಯುತ್ತದೆ. ಅಂತಹ ವಾತಾವರಣ ಹಳ್ಳಿಗಳ್ಳಿ ಈಗಾಗಲೇ ನಿರ್ಮಾಣವಾಗಿದೆ. ಮೀಸಲಾತಿ ಪಟ್ಟಿ ಬಿಡುಗಡೆಯಾವುದಕ್ಕೆ ಮೊದಲೇ ಹಳ್ಳಿಗಳಲ್ಲಿ ಜಟುವಟಿಕೆ ಆರಂಭವಾಗಿವೆ ಎಂದು ಜನ ಹೇಳುತ್ತಾರೆ.

******

ಶಾಸಕರಿಗೆ ಸದಸ್ಯರ ಮೊರೆ

ನೂತನ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅವರ ಬೆಂಬಲಿಗರು ಆಯಾ ತಾಲ್ಲೂಕುಗಳ ಶಾಸಕರನ್ನು ಭೇಟಿ ಮಾಡಿ ತಮಗೆ ಬೇಕಾದ ಮೀಸಲಾತಿ ನಿಗದಿ ಮಾಡಿಸಿಕೊಡುವಂತೆ ಒತ್ತಡ ಹಾಕುತ್ತಿದ್ದಾರೆ. ಜಿಲ್ಲೆಯ ಎಲ್ಲಾ ಶಾಸಕರಿಗೂ ಇದು ಬಲುದೊಡ್ಡ ತಲೆ ನೋವಾಗಿದೆ. ವಿವಿಧ ಸಮುದಾಯಗಳ ಮುಖಂಡರು ಮನವಿ ಸಲ್ಲಿಸಿ ತಮ್ಮ ಸಮುದಾಯಕ್ಕೆ ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದಾರೆ.

‘ನೂತನ ಸದಸ್ಯರು ಮೀಸಲಾತಿ ನಿಗದಿ ಬಗ್ಗೆ ಒತ್ತಡ ಹಾಕುತ್ತಿದ್ದಾರೆ. ಆದರೆ ನಿಯಮದಂತೆ ಮೀಸಲಾತಿ ನಿಗದಿಯಾಗಲಿದ್ದು ಅದಕ್ಕೆ ಎಲ್ಲರೂ ಬದ್ಧರಾಗಿ ಆಡಳಿತ ಮಂಡಳಿ ರಚನೆ ಮಾಡುವಂತೆ ಸ್ಪಷ್ಟವಾಗಿ ಹೇಳಿದ್ದೇನೆ’ ಎಂದು ಶಾಸಕ ಎಂ.ಶ್ರೀನಿವಾಸ್‌ ಹೇಳಿದರು.

****

ಚುನಾವಣಾ ಆಯೋಗದ ಕಾರ್ಯಸೂಚಿಯಂತೆ ಹಿಂದಿನ ಮೀಸಲಾತಿಯನ್ನು ಪರಿಗಣಿಸಿ ಎಲ್ಲಾ ಗ್ರಾಮ ಪಂಚಾಯಿತಿಗಳ ಮೀಸಲಾತಿ ನಿಗದಿ ಮಾಡಲಾಗುವುದು

–ಡಾ.ಎಂ.ವಿ.ವೆಂಕಟೇಶ್‌, ಜಿಲ್ಲಾಧಿಕಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು