ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಅಂತರ್ಜಲ ವೃದ್ಧಿಸಿದ ‘ನಮ್ಮೂರು ನಮ್ಮ ಕೆರೆ’

ಕೆರೆ ಒತ್ತುವರಿಗೆ ತಡೆ; ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ಕೆ ಶ್ಲಾಘನೆ
Last Updated 27 ಮಾರ್ಚ್ 2023, 6:33 IST
ಅಕ್ಷರ ಗಾತ್ರ

ಮಂಡ್ಯ: ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದಡಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಗ್ರಾಮೀಣ ಕೆರೆ ಪುನಶ್ಚೇತನ ಕಾಮಗಾರಿಯಿಂದ ಒಂದೇ ವರ್ಷದಲ್ಲಿ ಆರು ಕೆರೆಗಳು ಅಭಿವೃದ್ಧಿಗೊಂಡಿವೆ. ಈ ಮೂಲಕ ಅಂತರ್ಜಲ ವೃದ್ಧಿಸಿಕೊಂಡಿರುವ ಕೆರೆಯ ಒಡಲು ಸ್ಥಳೀಯರಿಗೆ ವರದಾನವಾಗಿದೆ.

2022–23ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕೈಗೆತ್ತಿಕೊಂಡಿರುವ ಮಂಡ್ಯ ಜಿಲ್ಲೆಯ ಆರು ಕೆರೆಗಳ ಅಂತರ್ಜಲ ವೃದ್ಧಿಸಲು ಸಮಗ್ರವಾಗಿ ಅಭಿವೃದ್ಧಿ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಬೆಂಡರವಾಡಿ ಕೆರೆ 12.28 ಎಕರೆ ಇದ್ದು, ಈ
ಪೈಕಿ 7 ಎಕರೆಯ ಹೂಳೆತ್ತಲು ₹ 13 ಲಕ್ಷ, 9.13 ಎಕರೆ ಇರುವ ಹುಲ್ಲೇಗಾಲ ಕೆರೆಯ 7 ಎಕರೆ ಹೂಳೆತ್ತಲು ₹13 ಲಕ್ಷ, ಮದ್ದೂರು ತಾಲ್ಲೂಕಿನ ಮುದಿಗೆರೆಯ 10.19 ಎಕರೆ ಪೈಕಿ 6.5 ಎಕರೆಯ ಹೂಳೆತ್ತಲು ₹10.50 ಲಕ್ಷ ಮಾಡಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕಿ ಎಂ.ಚೇತನಾ ಮಾಹಿತಿ ನೀಡಿದರು.

ಮಂಡ್ಯ ತಾಲ್ಲೂಕಿನ ಪುಟ್ಟಿಕೊಪ್ಪಲು ಸರ್ಕಾರಿ ಕೆರೆ 4.6 ಎಕರೆಯಲ್ಲಿದ್ದು, ಈ ಪೈಕಿ 2.5 ಎಕರೆಯ ಹೂಳೆತ್ತಲು ₹2.50 ಲಕ್ಷ, 70 ಎಕರೆ ಇರುವ ಗೊಪಾಲಪುರ ಕೆರೆಯ 13 ಎಕರೆ ಪ್ರದೇಶದ ಹೂಳೆತ್ತಲು ₹9.98 ಲಕ್ಷ, ನಾಗಮಂಗಲ ತಾಲ್ಲೂಕಿನ ದೇವಲಾಪುರ ಕೆರೆಯ 10 ಎಕರೆ ಪೈಕಿ 5 ಎಕರೆಯ ಹೂಳೆತ್ತಲು ₹3 ಲಕ್ಷ ವ್ಯಯಿಸಲಾಗಿದೆ. ಇದುವರೆಗೆ ಜಿಲ್ಲೆಯ 17 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಹೂಳೆತ್ತುವುದರಿಂದ ಕೆರೆ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಾಗುತ್ತದೆ. ಕೆರೆಯ ಅಚ್ಚುಕಟ್ಟು ಪ್ರದೇಶದ ಬಾವಿ, ಬೋರ್‌ವೆಲ್‌ಗಳಿಗೆ ಜಲಮರುಪೂರಣವಾಗುತ್ತದೆ. ಜನ, ಜಾನುವಾರು, ಪಕ್ಷಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಲಭಿಸುತ್ತದೆ. ರೈತರ ಜಮೀನಿಗೆ ಫಲವತ್ತಾದ ಹೂಳು ಲಭ್ಯವಾಗಿ ಹೆಚ್ಚಿನ ಇಳುವರಿ ಸಿಗುತ್ತದೆ. ಕೆರೆಯ ಒತ್ತುವರಿ ಕಡಿಮೆಯಾಗಿ ಕೆರೆಯ ದಂಡೆಯ ಮೇಲೆ ವಾಯುವಿಹಾರಿಗಳಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಯೋಜನೆಯ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ.

ಕೆರೆಯಲ್ಲಿ ಹೂಳೆತ್ತುವಾಗ ಸರ್ಕಾರದ ನಿಯಮಾವಳಿ ಪ್ರಕಾರ ನೀರಾವರಿ ಇಲಾಖೆಯ ನಿಯಮದಂತೆ ಗರಿಷ್ಠ ಮೂರು ಅಡಿಯಷ್ಟು, ಕೆರೆ ಏರಿಯಿಂದ ಸುಮಾರು 15 ರಿಂದ 20 ಅಡಿ ಬಿಟ್ಟು ಹೂಳೆತ್ತಲಾಗುತ್ತದೆ. ಇದು ಮಳೆ ನೀರು ಸಂಗ್ರಹಕ್ಕೂ ಅನುಕೂಲಕರವಾಗಿದೆ. ಜಲ ಮರುಪೂರಣಕ್ಕೂ ಇದು ನೆರವಾಗುತ್ತದೆ. ನಿರ್ವಹಣೆ ಇಲ್ಲದ ಕೆರೆಗಳ ಸ್ವಚ್ಛತೆಗೆ ಆದ್ಯತೆ, ಕೆರೆಯ ಸುತ್ತಮುತ್ತ ಮರಗಿಡಗಳನ್ನು ಬೆಳೆಸು ವುದಕ್ಕೂ ಗ್ರಾಮೀಣ ಭಾಗದವರು ಒತ್ತು ನೀಡಬೇಕು ಎಂದು ಕೆರೆ ಎಂಜಿನಿಯರ್‌ ಸುರೇಶ್‌ ಸಲಹೆ ನೀಡುತ್ತಾರೆ.

ನಮ್ಮೂರಿನ ಕೆರೆ ಹೂಳೆತ್ತುವ ಕಾರ್ಯ ಶ್ಲಾಘನೀಯವಾಗಿದೆ. ಅಕ್ಕಪಕ್ಕದ ಗ್ರಾಮಗಳ ಕೆರೆಗಳು ಹಾಗೂ ಒತ್ತುವರಿಯಾಗಿರುವ ಕೆರೆಗಳ ಸಂರಕ್ಷಣೆಯೂ ಆಗಬೇಕು. ಇದರಿಂದ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಈ ಕಾರ್ಯ ಶ್ಲಾಘನೀಯವಾಗಿದೆ ಎಂದು ರೈತರಾದ ಪುಟ್ಟಿಕೊಪ್ಪಲು ಕಾಳೇಗೌಡ, ರಾಜಣ್ಣ ಬೆಂಡರವಾಡಿ, ಸಿದ್ದರಾಜು ಗೋಪಾಲಪುರ ಮೆಚ್ಚುಗೆ ವ್ಯಕ್ತಪಡಿಸಿದರು.

ಕೆರೆ ಹೂಳೆತ್ತುವ ಮುನ್ನ, ಗ್ರಾಮೀಣ ಭಾಗದಲ್ಲಿ ಆಯ್ಕೆಯಾದ ಕೆರೆಯ ಬಗ್ಗೆ ಗ್ರಾಮದಲ್ಲಿ ಸಮಾಲೋಚನಾ ಸಭೆ ನಡೆಸಲಾಗುತ್ತದೆ. ಕೆರೆ ಅಭಿವೃದ್ಧಿ ಸಮಿತಿಯಲ್ಲಿ ಹತ್ತು ಜನ ಪದಾಧಿಕಾರಿಗಳು ಇರುತ್ತಾರೆ. ಅನುಪಯುಕ್ತ ವಸ್ತುಗಳ ತೆರವು, ನೀರು ಪೋಲಾಗದ ರೀತಿ ನೋಡಿಕೊಳ್ಳುವುದು, ಕೆರೆ ಏರಿ ಸುತ್ತ ಗಿಡಗಳ ನಾಟಿ ಸೇರಿದಂತೆ ಸಂಪೂರ್ಣ ಕೆರೆ ಸಂರಕ್ಷಣೆಗೆ ಒತ್ತು ನೀಡಲಾಗುತ್ತಿದೆ ಎಂದು ಯೋಜನೆಯ ಕೃಷಿ ಮೇಲ್ವಿಚಾರಕ ನವೀನ್ ಕುಮಾರ್‌ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT