ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಉಪನ್ಯಾಸಕರೇ ಗೈರು; ವಿದ್ಯಾರ್ಥಿಗಳಿಗೆ ಸಂಕಷ್ಟ

ಅತಿಥಿ ಉಪನ್ಯಾಸಕರ ಮುಷ್ಕರ; ಪಾಠ–ಪ್ರವಚನಕ್ಕೆ ಅಡ್ಡಿ
Published 15 ಡಿಸೆಂಬರ್ 2023, 5:23 IST
Last Updated 15 ಡಿಸೆಂಬರ್ 2023, 5:23 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಧರಣಿ ಮುಂದುವರಿದಿದ್ದು, ಇದರಿಂದ ಕಾಲೇಜುಗಳಲ್ಲಿ ಸರಿಯಾಗಿ ಪಾಠ ನಡೆಯದೇ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತೆ ಆಗಿದೆ.

ಸೇವೆ ಕಾಯಂಗೆ ಒತ್ತಾಯಿಸಿ ಜಿಲ್ಲೆಯ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ ನಗರದ ಸರ್‌ ಎಂ. ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಕಳೆದ 12 ದಿನದಿಂದ ಧರಣಿ ಕುಳಿತಿದ್ದಾರೆ. ಶೇ 90–95 ಅತಿಥಿ ಉಪನ್ಯಾಸಕರು ಕೆಲಸಕ್ಕೆ ಹಾಜರಾಗುತ್ತಿಲ್ಲ. ಇದರಿಂದ ಸಕಾಲಕ್ಕೆ ತರಗತಿಗಳು ನಡೆಯುತ್ತಿಲ್ಲ.

ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರಿಗಿಂತ ಅತಿಥಿ ಉಪನ್ಯಾಸಕರ ಸಂಖ್ಯೆಯೇ ಹೆಚ್ಚಿದೆ. ಕೆಲವು ವಿಭಾಗಗಳಲ್ಲಂತೂ ಕಾಯಂ ಉಪನ್ಯಾಸಕರೇ ಇಲ್ಲದ ಪರಿಸ್ಥಿತಿ ಇದೆ. ಇಂತಹ ಕಡೆಗಳಲ್ಲಿ ಪಾಠಪ್ರವಚನಗಳು ಬಹುತೇಕ ಬಂದ್‌ ಆಗಿದೆ. ಕಳೆದ 15 ದಿನದಿಂದ ತರಗತಿಗಳು ಇಲ್ಲದೆಯೇ ವಿದ್ಯಾರ್ಥಿಗಳು ಸುಮ್ಮನೆ ಕೂರುತ್ತಿದ್ದಾರೆ.

‘ ವಿಶ್ವವಿದ್ಯಾಲಯದ ವೇಳಾಪಟ್ಟಿಯಂತೆ ಪದವಿ ಕಾಲೇಜು ಪಠ್ಯಕ್ರಮದ ಬೋಧನೆಯು ಇದೇ ತಿಂಗಳ 26ರ ಒಳಗೆ ಮುಗಿಯಬೇಕು. ಆದರೆ ಕೆಲವು ಕಾಲೇಜುಗಳಲ್ಲಿ ಇನ್ನೂ ಶೇ 30–40ರಷ್ಟು ಪಾಠ ಬಾಕಿ ಇದೆ. ಕಾಯಂ ಉಪನ್ಯಾಸಕರು ಸಾಧ್ಯವಾದಷ್ಟು ತರಗತಿಗಳನ್ನು ನಡೆಸಿಕೊಂಡು ಪಾಠ ಮುಗಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ ಸಾಮಾನ್ಯ ವಿಷಯಗಳಲ್ಲಿ ಹೆಚ್ಚು ವಿದ್ಯಾರ್ಥಿಗಳು ಇದ್ದು, ಅಂತಹವರಿಗೆ ಕಷ್ಟವಾಗಿದೆ’ ಎಂದು ಸರ್ಕಾರಿ ಕಾಲೇಜೊಂದರ ಕಾಯಂ ಉಪನ್ಯಾಸಕರೊಬ್ಬರು ಹೇಳುತ್ತಾರೆ.

ಮಂಡ್ಯದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಟ್ಟು 2200 ವಿದ್ಯಾರ್ಥಿಗಳು ಇದ್ದಾರೆ. 102 ಉಪನ್ಯಾಸಕ ಹುದ್ದೆಗಳ ಪೈಕಿ 61 ಉಪನ್ಯಾಸಕರು ಕಾಯಂ ಆಗಿ ಸೇವೆ ಸಲ್ಲಿಸುತ್ತಿದ್ದು, ಉಳಿದಂತೆ 41 ಅತಿಥಿ ಉಪನ್ಯಾಸಕರು ಇದ್ದಾರೆ. ಸದ್ಯಕ್ಕೆ ಕಾಯಂ ಉಪನ್ಯಾಸಕರಿಂದ ತರಗತಿಗಳು ನಡೆದಿವೆಯಾದರೂ ಹಿಂದಿನಂತೆ ನಿಯಮಿತವಾಗಿ ತರಗತಿ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೆಲವು ತರಗತಿಗಳು ಅರ್ಧಕ್ಕೆ ನಿಲ್ಲುತ್ತಿವೆ.

ತಾಲ್ಲೂಕು ಕೇಂದ್ರಗಳಲ್ಲಿನ ಕಾಲೇಜುಗಳಲ್ಲಿಯೂ ಇಂತಹದ್ದೇ ಪರಿಸ್ಥಿತಿ ಇದೆ. ಶ್ರೀರಂಗಪಟ್ಟಣ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರು ಸೇರಿದಂತೆ ಒಟ್ಟು 22 ಹುದ್ದೆಗಳಿದ್ದು, ಇದರಲ್ಲಿ 10 ಕಾಯಂ ಹಾಗೂ 12 ಅತಿಥಿ ಉಪನ್ಯಾಸಕರು ಇದ್ದಾರೆ. ಕಾಯಂ ಉಪನ್ಯಾಸಕರಿಂದ ಹೆಚ್ಚುವರಿ ಬೋಧನೆಯ ಪ್ರಯತ್ನ ನಡೆದಿದೆ.

ಅಂಕಿ–ಅಂಶ

  • 430–ರಾಜ್ಯದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು

  • 11,788– ಈ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು

  • 10– ಮಂಡ್ಯ ಜಿಲ್ಲೆಯಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು

  • 350-400- ಈ ಕಾಲೇಜುಗಳಲ್ಲಿರುವ ಅತಿಥಿ ಉಪನ್ಯಾಸಕರು

ಅತಿಥಿ ಉಪನ್ಯಾಸಕರಿಂದ ಪಾಠಕ್ಕೆ ತೊಂದರೆ ಆಗಿದ್ದು ಕಾಯಂ ಉಪನ್ಯಾಸಕರು ಹೆಚ್ಚುವರಿ ತರಗತಿ ತೆಗೆದುಕೊಳ್ಳುತ್ತಿದ್ದಾರೆ. ಲರ್ನಿಂಗ್ ಮ್ಯಾನೇಜ್‌ಮೆಂಟ್ ಸಿಸ್ಟಂ ಮೂಲಕ ಪಠ್ಯದ ಅಂಶಗಳನ್ನು ಕಲಿಯುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ್ದೇವೆ
-ಎಂ.ಕೆ. ಮಂಜುಳಾ ಪ್ರಾಂಶು‍ಪಾಲೆ ಸ.ಪ್ರ.ದ. ಕಾಲೇಜು ಶ್ರೀರಂಗಪಟ್ಟಣ
ಎಂ.ಕೆ. ಮಂಜುಳಾ
ಎಂ.ಕೆ. ಮಂಜುಳಾ
ಕೆಲವು ಅತಿಥಿ ಉಪನ್ಯಾಸಕರು ಗೈರಾಗಿದ್ದು ಉಳಿದ ಉಪನ್ಯಾಸಕರಿಂದ ಪಾಠ ಮುಂದುವರಿದಿದೆ. ಮುಂದೆ ಹೆಚ್ಚುವರಿ ತರಗತಿ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಸದ್ಯಕ್ಕೆ ಹೆಚ್ಚಿನ ತೊಂದರೆ ಆಗಿಲ್ಲ
-ಆರ್‌. ದಶರಥ ಪ್ರಾಂಶುಪಾಲ ಸ.ಪ್ರ.ದ. ಮಹಿಳಾ ಕಾಲೇಜು ಮಂಡ್ಯ
ಆರ್‌. ದಶರಥ
ಆರ್‌. ದಶರಥ
ಸರ್ಕಾರಿ ಪದವಿ ಕಾಲೇಜುಗಳಲ್ಲಿ ಶೇ 80ರಷ್ಟು ತರಗತಿಗಳು ಬಂದ್ ಆಗಿವೆ. ಎಲ್ಲಿಯೂ ತರಗತಿಗಳು ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ನಮ್ಮ ಬೇಡಿಕೆ ಈಡೇರದ ಹೊರತು ಧರಣಿ ವಾಪಸ್ ಪಡೆಯುವುದಿಲ್ಲ
-ಎಂ.ಎಸ್.ಚಲುವರಾಜು ಉಪಾಧ್ಯಕ್ಷ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘ
ಎಂ.ಎಸ್.ಚಲುವರಾಜು

ಎಂ.ಎಸ್.ಚಲುವರಾಜು

ಬೇಡಿಕೆಗೆ ಸ್ಪಂದಿಸಿದರಷ್ಟೇ ಧರಣಿ ವಾಪಸ್‌
‘ ಅತಿಥಿ ಉಪನ್ಯಾಸಕರ ಧರಣಿಯಿಂದ ಪದವಿ ಕಾಲೇಜುಗಳ ವಿದ್ಯಾರ್ಥಿಗಳ ಪಾಠಕ್ಕೆ ತೊಂದರೆ ಆಗುವುದು ನಮ್ಮ ಗಮನದಲ್ಲಿದೆ. ಆದರೆ ಇದು ನಮ್ಮ ಬದುಕಿನ ಅಳಿವು–ಉಳಿವಿನ ಪ್ರಶ್ನೆ. ಬೇಡಿಕೆ ಈಡೇರದ ಹೊರತು ಧರಣಿ ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ’ ಎನ್ನುತ್ತಾರೆ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಉಪಾಧ್ಯಕ್ಷ ಎಂ.ಎಸ್.ಚಲುವರಾಜು. ‘ ಬಹುತೇಕ ಉಪನ್ಯಾಸಕರು 20–22 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದು ನಮ್ಮ ವಯೋಮಿತಿ ದಾಟುತ್ತಿದೆ. ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿದರೆ ಮುಂದೆ ಹೆಚ್ಚುವರಿ ತರಗತಿ ತೆಗೆದುಕೊಂಡು ಪಾಠ ಮುಗಿಸುತ್ತೇವೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT