ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನುಮಾನ್‌ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ

ಆಂಜನೇಯಸ್ವಾಮಿ ದೇವಾಲಯದಿಂದ ಯಾತ್ರೆ ಆರಂಭ, ಹಿಂದೂ ಜಾಗರಣಾ ವೇದಿಕೆಯಿಂದ ಆಯೋಜನೆ
Last Updated 12 ಡಿಸೆಂಬರ್ 2019, 9:57 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಬುಧವಾರ ಹಿಂದೂ ಜಾಗರಣಾ ವೇದಿಕೆ ಏರ್ಪಡಿಸಿದ್ದ ಹನುಮಾನ್‌ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಸಡಗರ, ಸಂಭ್ರಮದಿಂದ ನಡೆಯಿತು.

ಇಲ್ಲಿಗೆ ಸಮೀಪದ ಗಂಜಾಂ ಬಳಿಯ ಕಾವೇರಿ ನದಿ ತೀರದ ಐತಿಹಾಸಿಕ ಆಂಜನೇಯಸ್ವಾಮಿ ದೇವಾಲಯದಿಂದ ಸಂಕೀರ್ತನಾ ಯಾತ್ರೆ ಆರಂಭವಾಯಿತು. ಪಟ್ಟಣದ ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ಅಧ್ಯಕ್ಷ ಡಾ.ಭಾನುಪ್ರಕಾಶ್‌ ಶರ್ಮಾ ಯಾತ್ರೆಗೆ ಚಾಲನೆ ನೀಡಿದರು. ಗಂಜಾಂ ನಿಮಿಷಾಂಬ ದೇವಾಲಯ ಮಾರ್ಗವಾಗಿ ಮುಖ್ಯ ರಸ್ತೆ, ಟಿಪ್ಪು ಬೇಸಿಗೆ ಅರಮನೆ, ಸಾರ್ವಜನಿಕ ಆಸ್ಪತ್ರೆ, ಕುವೆಂಪು ವೃತ್ತ, ಪುರಸಭೆ ಸರ್ಕಲ್‌, ಗೋವಿಂದಪ್ಪ ಬೀದಿ, ಎಂ.ಶ್ರೀನಿವಾಸ್‌ ವೃತ್ತ, ಅಂಚೆ ಕಚೇರಿ ವೃತ್ತ, ಮಿನಿ ವಿಧಾನಸೌಧ ಮಾರ್ಗವಾಗಿ ಮಧ್ಯಾಹ್ನದ ವೇಳೆಗೆ ಯಾತ್ರೆ ಶ್ರೀರಂಗನಾಥಸ್ವಾಮಿ ದೇವಾಲಯ ತಲುಪಿತು.

ಯಾತ್ರೆಯಲ್ಲಿ ಮಂಡ್ಯ, ಮೈಸೂರು, ರಾಮನಗರ, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳ ಹನುಮ ಭಕ್ತರು ಹೆಜ್ಜೆ ಹಾಕಿದರು. ದಾರಿಯುದ್ದಕ್ಕೂ ಭಗವಾಧ್ವಜಗಳನ್ನು ಬೀಸುತ್ತಾ ಸಾಗಿದರು. ಕೆಲವರು ಶ್ರೀರಾಮ ಆಂಜನೇಯ, ಸೀತೆ ಹಾಗೂ ಲಕ್ಷ್ಮಣ ವೇಷ ಧರಿಸಿ ಗಮನ ಸೆಳೆದರು. 20ಕ್ಕೂ ಹೆಚ್ಚು ಮಂದಿ ಭಜರಂಗಿ ವೇಷದಲ್ಲಿದ್ದರು. ದಾರಿಯುದ್ದಕ್ಕೂ ‘ಜೈ ಶ್ರೀರಾಮ್‌’, ‘ಭಜರಂಗಿ ಭಜರಂಗಿ’, ‘ರಾಮ ಲಕ್ಷ್ಮಣ, ಜಾನಕಿ’ ಇತರ ಘೋಷಣೆಗಳು ಕೇಳಿ ಬಂದವು. ರಾಮ ಭಜನೆಯೂ ನಡೆಯಿತು. ಮಹಿಳಾ ಭಕ್ತರು ಪೂರ್ಣಕುಂಭ ಹೊತ್ತು ಸಾಗಿದರು. ನಗಾರಿ ಸಹಿತ ಮಂಗಳ ವಾದ್ಯ ತಂಡ ಮುಂಚೂಣಿಯಲ್ಲಿ ಸಾಗಿತು. ಹನುಮಾನ್‌ ಕಟೌಟ್‌ಗಳು ರಾರಾಜಿಸಿದವು.

ಮಾನವೀಯತೆ ಮೆರೆದ ಮಾಲಾಧಾರಿಗಳು: ಸಂಕೀರ್ತನಾ ಯಾತ್ರೆ ಕುವೆಂಪು ವೃತ್ತಕ್ಕೆ ಬಂದಾಗ ಪಟ್ಟಣದ ಒಳಗಿನಿಂದ ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯತ್ತಿದ್ದ ಆಂಬುಲೆನ್ಸ್‌ ಎದುರಾಯಿತು. ಮೆರವಣಿಗೆಯಲ್ಲಿ ಸಹಸ್ರಾರು ಮಂದಿ ಇದ್ದ ಕಾರಣ ಆಂಬುಲೆನ್ಸ್‌ ತೆರಳಲು ತೊಡಕಾಗಿತ್ತು. ಪರಿಸ್ಥಿತಿ ಅರಿತ ಹಿಂದೂ ಜಾಗರಣಾ ವೇದಿಕೆಯ ಮುಖಂಡರು ಆಂಬುಲೆನ್ಸ್‌ ಮುಂದೆ ಸಾಗಲು ಅನುವು ಮಾಡಿಕೊಟ್ಟರು.

ಬಿಜೆಪಿ ಮುಖಂಡ ಬಲ್ಲೇನಹಳ್ಳಿ ಸಂತೋಷ್‌ ಇತರರು ಮಾಲಾಧಾರಿಗಳಿಗೆ ಹಣ್ಣು, ಪಾನಕ ವಿತರಿಸುತ್ತಿದ್ದ ದೃಶ್ಯ ಕಂಡುಬಂತು.

ಶಬರಿಮಲೆ ಮಾದರಿಯಲ್ಲಿ ಯಾತ್ರೆ: ಶ್ರೀರಂಗಪಟ್ಟಣದಲ್ಲಿ ಶಬರಿಮಲೆ ಅಯ್ಯಪ್ಪಸ್ವಾಮಿ ಭಕ್ತರ ಯಾತ್ರೆಯ ಮಾದರಿಯಲ್ಲಿ ಹನುಮಾನ್‌ ಭಕ್ತರ ಯಾತ್ರೆ ಆಯೋಜಿಸಲು ಉದ್ದೇಶಿಸಲಾಗಿದೆ. ರಾಜ್ಯ, ಹೊರ ರಾಜ್ಯಗಳ ಹನುಮ ಭಕ್ತರು ವರ್ಷಕ್ಕೊಮ್ಮೆ ಪಟ್ಟಣದಲ್ಲಿ ಸೇರುವಂತೆ ಕಾರ್ಯಕ್ರಮ ರೂಪಿಸಲಾಗುವುದು. ಹನುಮ ಮಾಲೆಯ ಮಹತ್ವ ಕುರಿತು ವ್ಯಾಪಕ ಪ್ರಚಾರ ನಡೆಸಲು ಹಿಂದೂ ಸಂಘಟನೆಗಳು ಕೈ ಜೋಡಿಸಬೇಕು ಎಂದು ಭಾರತೀಯ ಹಿಂದೂ ಐಕ್ಯ ವೇದಿಕೆಯ ಅಧ್ಯಕ್ಷ ಕಾಸರಗೋಡು ರವೀಶ ತಂತ್ರಿ ಹೇಳಿದರು.

ಬೇಬಿ ಮಠದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ‘ಶ್ರೀರಂಗಪಟ್ಟಣ ಹಿಂದೂಗಳ ಪ್ರಸಿದ್ಧ ತೀರ್ಥ ಕ್ಷೇತ್ರ. ಕಾವೇರಿ ನದಿಯ ದ್ವೀಪ ಪಟ್ಟಣದಲ್ಲಿ ನೂರಾರು ಪ್ರಾರ್ಥನಾ ಮಂದಿರಗಳಿವೆ. ಋಷಿ ಮುನಿಗಳು ತಪಗೈದಿದ್ದಾರೆ. 9ನೇ ಶತಮಾನದಿಂದಲೂ ರಾಜ, ಮಹಾರಾಜರು ಈ ಕ್ಷೇತ್ರದಲ್ಲಿ ಆಳಿ ಹೋಗಿದ್ದಾರೆ. ಈ ಪಟ್ಟಣದ ಮಹತ್ವ ಜಗತ್ತಿಗೆ ತಿಳಿಯಬೇಕಾದರೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರ ನಡೆಯಬೇಕು’ ಎಂದರು.

ಡಾ.ಭಾನುಪ್ರಕಾಶ್‌ ಶರ್ಮಾ, ಹಿಂದೂ ಜಾಗರಣಾ ವೇದಿಕೆ ದಕ್ಷಿಣ ಪ್ರಾಂತ್ಯ ಕಾರ್ಯದರ್ಶಿ ಉಲ್ಲಾಸ್‌, ಜಿಲ್ಲಾ ಘಟಕದ ಕಾರ್ಯದರ್ಶಿ ಸುಜನ್‌, ತಾಲ್ಲೂಕು ಕಾರ್ಯದರ್ಶಿ ಕೆ. ಚಂದನ್‌ ಇದ್ದರು.

ಪೊಲೀಸರೊಂದಿಗೆ ವಾಗ್ವಾದ

ಸಂಕೀರ್ತನಾ ಯಾತ್ರೆಯು ಪಟ್ಟಣದ ಪುರಸಭೆ ವೃತ್ತಕ್ಕೆ ಆಗಮಿಸಿದ ವೇಳೆ ನೂಕುನುಗ್ಗಲು ಉಂಟಾಯಿತು. ಹನುಮ ಭಕ್ತರು ಟಿಪ್ಪು ಮಸೀದಿಯ ಕಡೆ ತೆರಳದಂತೆ ಮಸೀದಿಯ ಸುತ್ತ ನಾಕಾ ಬಂದಿ ಮಾಡಲಾಗಿತ್ತು. ಮಸೀದಿಯ ಎದುರು ಜಮಾಯಿಸಿದ ಹನುಮ ಭಕ್ತರು ಬ್ಯಾರಿಕೇಡ್‌ ತಳ್ಳುವ ಯತ್ನ ಮಾಡಿದರು. ಈ ಹಂತದಲ್ಲಿ ಪೊಲೀಸರು ಹನುಮ ಭಕ್ತರನ್ನು ದೂರ ತಳ್ಳಿದರು. ‘ಅತ್ತ ನಡೆಯಿರಿ’ ಎಂಬ ಪೊಲೀಸರ ಮಾತಿಗೆ ಕೆರಳಿದ ಹನುಮ ಭಕ್ತರು ಪೊಲೀಸರ ಜತೆ ವಾಗ್ವಾದಕ್ಕಿಳಿದರು. ಪೊಲೀಸರು ಮತ್ತು ಮಾಲಾಧಾರಿಗಳ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT