ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎ ಸರ್ಕಾರ ಇದ್ದಿದ್ದರೆ ದೇಶಕ್ಕೆ ತಾಲಿಬಾನಿಗಳು ಬರುತ್ತಿದ್ದರು: ಕಟೀಲ್

ಇನ್ನೂ 20 ವರ್ಷ ಬಿಜೆಪಿ ಸರ್ಕಾರ, ಕಾಂಗ್ರೆಸ್‌ ಪದಾಧಿಕಾರಿಗಳ ಆಯ್ಕೆಯಲ್ಲೂ ಜಗಳ
Last Updated 25 ಆಗಸ್ಟ್ 2021, 9:32 IST
ಅಕ್ಷರ ಗಾತ್ರ

ಮಂಡ್ಯ: ‘ಅಫ್ಗಾನಿಸ್ತಾನ ಪ್ರಕ್ಷಬ್ಧ ಸ್ಥಿತಿಯಲ್ಲಿ ಯುಪಿಎ ಅಧಿಕಾರ ನಡೆಸುತ್ತಿದ್ದರೆ ಕಾಂಗ್ರೆಸ್‌ ಮುಖಂಡರು ಭಾರತೀಯನ್ನು ರಕ್ಷಣೆ ಮಾಡಿ ಕರೆತರುತ್ತಿರಲಿಲ್ಲ, ಬದಲಾಗಿ ತಾಲಿಬಾನಿಗಳನ್ನೇ ಕರೆತರುತ್ತಿದ್ದರು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ವ್ಯಂಗ್ಯವಾಡಿದರು.

ನಗರದ ಸುಮಾರವಿ ಸಮುದಾಯ ಭವನದಲ್ಲಿ ಬುಧವಾರ ನಡೆದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ನರೇಂದ್ರ ಮೋದಿ ಅವರು ಅಫ್ಗಾನಿಸ್ತಾನದಲ್ಲಿದ್ದ ಪ್ರತಿಯೊಬ್ಬ ಭಾರತೀಯನನ್ನು ರಕ್ಷಣೆ ಮಾಡಿ ಕರೆತಂದಿದ್ದಾರೆ. ಪ್ರತಿಯೊಬ್ಬರಿಗೂ ವಿಮಾನದ ವ್ಯವಸ್ಥೆ ಮಾಡಿ ಅವರನ್ನು ರಕ್ಷಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮನಮೋಹನಸಿಂಗ್‌ ಪ್ರಧಾನಿಯಾಗಿರುತ್ತಿದ್ದರೆ ಭಾರತೀಯರು ರಕ್ಷಣೆಗಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು’ ಎಂದು ಆರೋಪಿಸಿದರು.

‘ಹಳೆಮೈಸೂರು ಭಾಗದಲ್ಲಿ ಬಿಜೆಪಿಗೆ ಶಕ್ತಿ ತುಂಬವ ಉದ್ದೇಶದಿಂದ ಮಂಡ್ಯದಲ್ಲಿ ಪದಾಧಿಕಾರಿಗಳ ಸಭೆ ನಡೆಸಲಾಗುತ್ತಿದೆ. ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಉತ್ತಮವಾಗಿ ಆಡಳಿತ ನಡೆಸುತ್ತಿದ್ದು ಜನಮನ್ನಣೆ ಗಳಿಸಿದೆ. ಇನ್ನೂ 20 ವರ್ಷ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದ್ದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಡುವ ಅವಶ್ಯಕತೆ ಇಲ್ಲ’ ಎಂದರು.

‘ಕಾಂಗ್ರೆಸ್‌ ಮುಖಂಡರು ಒಳಜಗಳದಲ್ಲಿ ಮುಳುಗಿದ್ದಾರೆ. ಕಾಂಗ್ರೆಸ್‌ನಲ್ಲಿ ಪದಾಧಿಕಾರಿಗಳ ಆಯ್ಕೆಯೇ ನಡೆದಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಪ್ರತ್ಯೇಕ ಪಟ್ಟಿ ಸಿದ್ಧಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಹುದ್ದೆಯ ಜಗಳ ಒಂದೆಡೆಯಾದರೆ ಪದಾಧಿಕಾರಿಗಳ ಆಯ್ಕೆ ಜಗಳವೂ ಇನ್ನೊಂದೆಡೆ ನಡೆಯುತ್ತಿದೆ’ ಎಂದರು.

ದ್ವೇಷಕ್ಕಾಗಿ ದೇಶ ವಿಭಜನೆ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್‌ ಕುಮಾರ್‌ ಗೌತಮ್‌ ಮಾತನಾಡಿ ‘ಒಬ್ಬ ವ್ಯಕ್ತಿಯ ದ್ವೇಷಕ್ಕಾಗಿ ಭಾರತ ವಿಭಜನೆಯಾಯಿತು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧೀಜಿಯ ಕಣ್ಣಮುಂದೆಯೇ ದೇಶ ಒಡೆದು ಹೋಯಿತು. ದೇಶ ವಿಭಜನೆ ಮಾಡಿದ ವ್ಯಕ್ತಿಯೇ ದೇಶದ ಮೊದಲ ಪ್ರಧಾನಮಂತ್ರಿಯಾಗಿದ್ದು ನಮ್ಮ ದೇಶದ ದುರಂತವಾಗಿದೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ದೇಶದ ಖಜಾನೆ ಖಾಲಿಯಾಗಿತ್ತು. ಯುಪಿಎ ಸರ್ಕಾರ ದಲ್ಲಾಳಿಯ ರೀತಿಯಲ್ಲಿ ಅಧಿಕಾರ ನಡೆಸುತ್ತಿತ್ತು. ಪಿಪಿಎ ಕಿಟ್‌, ವೆಂಟಿಲೇಟರ್‌, ಆಮ್ಲಜನಕ ತಯಾರಿಕಾ ಘಟಕಗಳು ಇರಲಿಲ್ಲ. ಕೋವಿಡ್‌ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಕಾರ್ಯಕರ್ತರು ಜನರ ಜೀವ ಉಳಿಸಲು ಹೋರಾಟ ನಡೆಸಿದರು. ಯಮರಾಜನ ವಿರುದ್ಧ ಹೋರಾಡಿ ಜನರನ್ನು ರಕ್ಷಣೆ ಮಾಡಿದರು’ ಎಂದರು.

‘ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ 5 ಕೋಟಿ ನಕಲಿ ಪಡಿತರ ಚೀಟಿಗಳು ಬಂದ್‌ ಆಗಿವೆ. 4 ಕೋಟಿ ನಕಲಿ ಎಲ್‌ಪಿಜಿ ಸಂಪರ್ಕ ಸ್ಥಗಿತಗೊಂಡಿವೆ. 2 ಕೋಟಿ ನಕಲಿ ನರೇಗಾ ಉದ್ಯೋಗಿ ಚೀಟಿಗಳನ್ನು ಸ್ಥಗಿತಗೊಸಲಾಗಿದೆ. ಮೋದಿ ಅವರು ಕಾಂಗ್ರೆಸ್‌ ಭ್ರಷ್ಟಾಚಾರವನ್ನು ನಿರ್ಮೂಲನೆಗೊಳಿಸಿ ದೇಶವನ್ನು ಪರಿವರ್ತನೆಯತ್ತ ಮುನ್ನಡೆಸುತ್ತಿದ್ದಾರೆ’ ಎಂದರು.

******

ಕೋವಿಡ್‌ ನಿಯಮ ಉಲ್ಲಂಘನೆ

ಪದಾಧಿಕಾರಿಗಳ ಸಭೆಯ ಅಂಗವಾಗಿ ಕೋವಿಡ್‌ ನಿಯಮಗಳನ್ನು ಗಾಳಿಗೆ ತೂರಲಾಯಿತು. ಸಭೆ ಸಮಾರಂಭಗಳಿಗೆ ಕೇವಲ 30 ಜನರಿಗಷ್ಟೇ ಅವಕಾಶವಿದೆ. ಆದರೆ ನೂರಾರು ಜನರನ್ನು ಸೇರಿಸಿ ಸಭೆ ನಡೆಸಲಾಯಿತು. ಬಿಜೆಪಿ ಕಾರ್ಯಕರ್ತರು ನಿಯಮ ಉಲ್ಲಂಘಿಸಿ ವಿಶ್ವೇಶ್ವಯ್ಯ ಪ್ರತಿಮೆಯಿಂದ ಸಮುದಾಯ ಭವನದವರೆಗೂ ಬೈಕ್‌ ರ‍್ಯಾಲಿ ನಡೆಸಿದರು. ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT