ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿ ಹಚ್ಚಲು ಬಂದರೆ ಹಣತೆ ಬೆಳಗೋಣ: ಲೇಖಕ ದೇವನೂರ ಮಹಾದೇವ

Published 15 ಫೆಬ್ರುವರಿ 2024, 14:49 IST
Last Updated 15 ಫೆಬ್ರುವರಿ 2024, 14:49 IST
ಅಕ್ಷರ ಗಾತ್ರ

ಮಂಡ್ಯ: ‘ಬಿಜೆಪಿ, ಸಂಘಪರಿವಾರದ ಕಾರ್ಯಕರ್ತರು ಪಂಜು ಹಿಡಿದು ಬೆಂಕಿ ಹಚ್ಚಲು ಬಂದರೆ ನಾವು ಮನೆಮನೆಗಳಲ್ಲಿ ಸಹಬಾಳ್ವೆಯ ಹಣತೆ ಬೆಳಗಬೇಕಿದೆ. ಮಂಡ್ಯ ನೆಲದಲ್ಲಿ ಅಂತರಂಗೆಯಾಗಿ ಹರಿಯುತ್ತಿರುವ ಐಕ್ಯತೆಯ ಚೇತನಕ್ಕೆ ಜೀವ ತುಂಬಬೇಕಿದೆ’ ಎಂದು ಲೇಖಕ ದೇವನೂರ ಮಹಾದೇವ ಹೇಳಿದರು.

ಕೆರಗೋಡು ಹನುಮಧ್ವಜ ವಿವಾದದ ಹಿನ್ನೆಲೆಯಲ್ಲಿ, ಪ್ರಗತಿಪರ ಸಂಘಟನೆಗಳ ಒಕ್ಕೂಟವು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಏರ್ಪಡಿಸಿದ್ದ ‘ಶಾಂತಿ ಸೌಹಾರ್ದಕ್ಕಾಗಿ ಪ್ರತಿಭಟನೆ’ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಮಂಡ್ಯದಂತಹ ನೆಲದಲ್ಲಿ ಕೆರಗೋಡು ಘಟನೆಯನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. 1938ರಲ್ಲಿ ನಡೆದ ಶಿವಪುರ ಧ್ವಜಸತ್ಯಾಗ್ರಹದಲ್ಲಿ ಧೀಮಂತ ಮಹಿಳೆಯೊಬ್ಬರು ಭಾಗವಹಿಸಿ ಪೊಲೀಸರಿಂದ ಏಟು ತಿಂದ ನೆಲವಿದು. ಕೆರಗೋಡು ಗ್ರಾಮದಲ್ಲಿ ಧಜ್ವಾರೋಹಣ ನೆಪದಲ್ಲಿ ಐಕ್ಯತೆಯನ್ನು ಛಿದ್ರಗೊಳಿಸಲಾಗಿದೆ. ಇದರ ಹಿಂದೆ ಬಿಜೆಪಿ, ಸಂಘಪರಿವಾರ ನಡೆಸುತ್ತಿರುವ ಮರ್ಮವನ್ನು ಅರಿಯಬೇಕಿದೆ’ ಎಂದರು.

‘ಮಂಡ್ಯದಲ್ಲಿ ಕಣ್ಣಿಗೆ ಕಾಣದ ಒಳಿತಿನ ಅಂತರ್ಜಲ ಹರಿಯುತ್ತಿದ್ದು ಇದಕ್ಕೆ ಹಲವು ಉದಾಹರಣೆಗಳಿವೆ. ಕೆರಗೋಡು ಸಮೀಪದ ಹೊನಗಾನಹಳ್ಳಿ ಗ್ರಾಮದ ಪುಟ್ಟಣ್ಣ ಊರ ಕೆರೆಯಲ್ಲಿ ಅಸ್ಪೃಶ್ಯರಿಗೂ ನೀರು ಬಳಸಲು ಅವಕಾಶ ನೀಡುತ್ತಾರೆ. ಆದರೆ ಊರಿನ ಮೂಢಾತ್ಮರು ಪುಟ್ಟಣ್ಣನಿಗೆ ಹಿಗ್ಗಾಮುಗ್ಗಾ ಥಳಿಸುತ್ತಾರೆ. ಆ ನಂತರ ಪುಟ್ಟಣ್ಣ ಊರುಬಿಟ್ಟು ಕೆ.ಆರ್‌.ಪೇಟೆಯ ಹೇಮಗಿರಿಯಲ್ಲಿ ನೆಲೆಸುತ್ತಾರೆ, ಅಲ್ಲೊಂದು ವಿದ್ಯಾಸಂಸ್ಥೆ ಸ್ಥಾಪಿಸುತ್ತಾರೆ’ ಎಂದರು.

‘ಪ್ರಜಾಪ್ರತಿನಿಧಿಸಭೆಯ ಸದಸ್ಯರಾಗಿದ್ದ ಎಸ್‌.ಸಿ.ಮಲ್ಲಯ್ಯ ಸೋಮನಹಳ್ಳಿಯಲ್ಲಿ ಸ್ಥಾಪಿಸಿದ್ದ ಒಕ್ಕಲಿಗರ ವಸತಿ ನಿಲಯಕ್ಕೆ ಅಸ್ಪೃಶ್ಯ ಮಕ್ಕಳನ್ನೂ ಸೇರಿಸಿ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಾರೆ. ಊರ ಹೊರಗಿದ್ದ ಅಸ್ಪೃಶ್ಯರಿಗೆ ತಮ್ಮ ಮನೆಯ ಎದುರಿನ ಜಾಗವನ್ನೇ ನೀಡಿ ಸಹಬಾಳ್ವೆಯಿಂದ ವಾಸಿಸುವಂತೆ ಮಾಡುತ್ತಾರೆ. ಮಹಾತ್ಮ ಗಾಂಧಿ ಈ ಊರಿಗೆ ಭೇಟಿ ನೀಡಿ ನಿಬ್ಬೆರಗಾಗಿ ನೋಡಿದ್ದರು’ ಎಂದರು.

‘ಗುತ್ತಿಗೆದಾರರ ಅಣ್ಣೇಗೌಡರ ಪ್ರಾಮಾಣಿಕತೆ ಸೋಜಿಗ ಎನಿಸುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಅವರೊಂದು ಸೇತುವೆ ನಿರ್ಮಾಣ ಮಾಡುತ್ತಾರೆ. ಸೇತುವೆಯಲ್ಲಿ ಹುಳುಕು ಹುಡುಕಿ ಬ್ರಿಟೀಷರು ಅವರಿಗೆ 1 ಆಣೆ ದಂಡ ಹಾಕುತ್ತಾರೆ. ಸ್ವಾಭಿಮಾನಿ ಅಣ್ಣೇಗೌಡ ಆ ಅವಮಾನ ತಡೆಯಲಾಗದೇ ಆ ಸೇತುವೆ ಮೇಲಿಂದ ಬಿದ್ದು ಪ್ರಾಣ ಬಿಡುತ್ತಾರೆ. ಇಂತಹ ಅದೆಷ್ಟೋ ಘಟನೆಗಳು ಮಂಡ್ಯ ನೆಲದಲ್ಲಿ ಜೀವಂತವಾಗಿವೆ’ ಎಂದರು.

ಸಾಹಿತಿ ಜಗದೀಶ ಕೊಪ್ಪ ಮಾತನಾಡಿ ‘ಮಂಡ್ಯದ್ದು ಹಸಿದವರಿಗೆ ಅನ್ನ, ಬಾಯಾರಿದವರಿಗೆ ನೀರು ಕೊಡುವ ಸಂಸ್ಕೃತಿ. ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಹಲವು ಪಕ್ಷಗಳಿವೆ, ಅವುಗಳಿಗೆ ಅವುಗಳದ್ದೇ ಆದ ತತ್ವ, ಸಿದ್ಧಾಂತಗಳಿವೆ. ಆದರೆ ಕಳೆದ 10 ವರ್ಷಗಳಿಂದ ಯಾವುದೇ ತಾತ್ವಿಕ ಸಿದ್ಧಾಂತವಿಲ್ಲದ ಒಂದು ಪಕ್ಷವನ್ನು ನಾವು ನೋಡುತ್ತಿದ್ದೇವೆ’ ಎಂದರು.

‘ಒಬ್ಬ ವ್ಯಕ್ತಿಯ ಖಾಲಿತನಕ್ಕೆ, ರಕ್ಷಣೆಗಾಗಿ ಜಾತಿ, ಧರ್ಮದ ಅಸ್ತ್ರ ಬಳಕೆ ಮಾಡಲಾಗುತ್ತಿದೆ. ಈ ದೇಶದ ಅಭಿವೃದ್ಧಿಯ ಬಗ್ಗೆ ಅವರ ಬಳಿ ಯಾವುದೇ ಉತ್ತರವಿಲ್ಲ. ಕಾರ್ಲ್‌ ಮಾರ್ಕ್ಸ್‌ ಧರ್ಮ ಎಂದರೆ ಅಪೀಮು ಎಂದಿದ್ದಾನೆ, ಇಂದು ನಮ್ಮ ದೇಶದಲ್ಲಿ ಹಮಲನ್ನು ನಮಗೆ ತಿನ್ನಿಸಲು ಹೊರಟಿದ್ದಾರೆ. ನಾವು ಅನ್ನ ತಿನ್ನುವ ಜನ, ಹಮಲು ತಿನ್ನುವ ಜನರಲ್ಲ ಎಂಬುದನ್ನು ನಾವಿಂದು ಮಂಡ್ಯ ಮೂಲಕ ತೋರಿಸಿಕೊಡಬೇಕಿದೆ’ ಎಂದರು.

ಪ್ರತಿಭಟನೆಯಲ್ಲಿ ರೈತಸಂಘ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಸಾಹಿತಿ ಕಾಳೇಗೌಡ ನಾಗವಾರ, ಕಾರ್ಮಿಕ ಮುಖಂಡ ಜಿ.ಎನ್‌.ನಾಗರಾಜ್‌, ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ, ಅನಂತ ನಾಯಕ, ಜನಾರ್ಧನ (ಜನ್ನಿ), ಪುಟ್ಟಮಾದು, ಟಿ.ಎಲ್‌.ಕೃಷ್ಣೇಗೌಡ, ಹುಲ್ಕೆರೆ ಮಹಾದೇವು, ಕೆಂಪೂಗೌಡ, ಸುನಂದಾ ಜಯರಾಂ, ಸಿ.ಕುಮಾರಿ, ಎಲ್‌.ಸಂದೇಶ್‌ ಇದ್ದರು.

‘ಸೈದ್ಧಾಂತಿಕ ಬುಡ ಭದ್ರವಾಗಲಿ’

‘ಕೆರಗೋಡು ಘಟನೆಯನ್ನು ನಾವು ನೋಡುವುದು ಬೇಡ ನಮ್ಮನ್ನು ನಾವು ನೋಡಿಕೊಳ್ಳಬೇಕಿದೆ. ನಾವು ಇಲ್ಲಿಯವರೆಗೂ ಏನು ಮಾಡಬೇಕಾಗಿತ್ತೋ ಅದನ್ನು ಮಾಡಿಲ್ಲ. ಅದಕ್ಕೇ ಕೆರಗೋಡು ಪ್ರಕರಣ ನಡೆದಿದೆ. ನಾವು ನಮ್ಮ ಸಂಘಟನೆಗಳ ಹೋರಾಟ ಬೇಡಿಕೆಗಾಗಿಯೇ ಸೀಮಿತರಾಗಿದ್ದೇವೆ. ಅದರಾಚೆ ಏನನ್ನಾದರೂ ಮಾಡಿದ್ದೇವಾ’ ಎಂದು ದೇವನೂರ ಮಹಾದೇವ ಪ್ರಶ್ನಿಸಿದರು. ‘ಬುಡಕಟ್ಟು ಸಮುದಾಯಗಳಿಗೆ ಆದಿವಾಸಿಗಳಿಗೆ ಅಲೆಮಾರಿ ಪೌರಕಾರ್ಮಿಕ ದೇವದಾಸಿಯರಿಗೆ ನಾವು ಧ್ವನಿಯಾಗಿ ಕೆಲಸ ಮಾಡಿಲ್ಲ. ಅವರ ಸಮಸ್ಯೆ ನಮ್ಮ ಸಮಸ್ಯೆಯೂ ಆಗಬೇಕಿತ್ತು. ಅವರಿಗಾಗಿ ಕೆಲಸ ಮಾಡಿದರೆ ನಾವು ಸಂವೇದನಾಶೀಲರಾಗುತ್ತೇವೆ. ನಮ್ಮ ಸೈದ್ಧಾಂತಿಕ ಬುಡವೂ ಭದ್ರವಾಗುತ್ತದೆ’ ಎಂದರು.

ತೋರಣ ತೊಡೆದು ಕೇಸರಿ ಬಂಟಿಂಗ್ಸ್‌

ದಸಂಸ ಮುಖಂಡ ಗುರುಪ್ರಸಾದ್‌ ಕೆರಗೋಡು ಮಾತನಾಡಿ ‘ಮಹಾರಾಷ್ಟ್ರದ ಧ್ವಜವಾದ ಕೇಸರಿ ಬಣ್ಣದ ಬ್ಯಾನರ್‌ ಬಂಟಿಂಗ್ಸ್‌ಗಳನ್ನು ಎಲ್ಲೆಂದರಲ್ಲಿ ಕಟ್ಟಿದ್ದಾರೆ. ನಮ್ಮ ದೇವಾಲಯಗಳಲ್ಲಿ ಮಾವಿನ ಸೊಪ್ಪು ತಳಿರು ತೋರಣಗಳನ್ನು ಕಟ್ಟುತ್ತಿದ್ದೆವು. ಆದರೆ ಈಗ ಮರಾಠಿಗರ ಕೇಸರಿ ಬ್ಯಾನರ್‌ ಬಂಟಿಂಗ್ಸ್‌  ಎಲ್ಲೆಡೆ ರಾರಾಜಿಸುತ್ತಿವೆ’ ಎಂದರು. ‘ಮಂಡ್ಯ ಜಿಲ್ಲೆಯಲ್ಲಿ ಮೂಡಲಬಾಗಿಲು ದೇವಾಲಯದ ಹೆಸರಿನಲ್ಲಿ ಬೆಂಕಿ ಹಚ್ಚುವ ಕೆಲಸ ಆರಂಭವಾಗಿದೆ. ಚರಿತ್ರೆಯಲ್ಲಿ ಅನೇಕ ಘಟನೆಗಳು ನಡೆದಿವೆ. ಅದನ್ನು ಈಗ ಸರಿ ಮಾಡಲು ಸಾಧ್ಯವೇ? ಯಥಾಸ್ಥಿತಿ ಕಾಯ್ದುಕೊಂಡು ಹೋಗುವುದೇ ಅದಕ್ಕೆ ಪರಿಹಾರ’ ಎಂದರು.

ದಲಿತ ಸಂಘರ್ಷ ಸಮಿತಿ ಮುಖಂಡ ಗುರುಪ್ರಸಾದ್‌ ಕೆರಗೋಡು ಮಾತನಾಡಿದರು
ದಲಿತ ಸಂಘರ್ಷ ಸಮಿತಿ ಮುಖಂಡ ಗುರುಪ್ರಸಾದ್‌ ಕೆರಗೋಡು ಮಾತನಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT