ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತರ ಸಂಕಷ್ಟ ಕಳೆಯುವ ಬಡಗೂಡಮ್ಮ

ರುಂಡವಿಲ್ಲದ ಮುಂಡಾಕೃತಿಯಲ್ಲಿ ನೆಲೆಸಿರುವುದು ವಿಶೇಷ, ದೇವಿಯ ಜಾತ್ರೋತ್ಸವಕ್ಕೆ ಸಿದ್ಧತೆ
ಉಲ್ಲಾಸ್.ಯು.ವಿ
Published 3 ಮೇ 2024, 5:53 IST
Last Updated 3 ಮೇ 2024, 5:53 IST
ಅಕ್ಷರ ಗಾತ್ರ

ನಾಗಮಂಗಲ: ನಾಡಿನ ವಿವಿಧ ಭಾಗಗಳಿಂದ ಹರಕೆಹೊತ್ತು ಬರುವ ಭಕ್ತರ ಬವಣೆ, ಸಂಕಷ್ಟ ಕಳೆಯುವ ಶಕ್ತಿದೇವತೆ ಬಡಗೂಡಮ್ಮ ಈ ಭಾಗದ ಭಕ್ತರ ಆರಾಧ್ಯ ದೇವಿಯಾಗಿ ನೆಲೆ ನಿಂತಿದ್ದಾಳೆ.

ಪಟ್ಟಣದ ಟಿ.ಬಿ.ಬಡಾವಣೆಯಲ್ಲಿ ಶ್ರೀಬಡಗೂಡಮ್ಮ ದೇವಿಯ ದೇವಾಲಯವಿದೆ. ಪಡುವಲಪಟ್ಟಣ ರಸ್ತೆಯಲ್ಲಿ ಮತ್ತೊಂದು ದೇವಾಲಯವನ್ನು ನಿರ್ಮಿಸಿ ಅಲ್ಲಿ ಉತ್ಸವ ಮೂರ್ತಿಯನ್ನಿಟ್ಟು ಪೂಜಿಸಲಾಗುತ್ತಿದೆ. ಬಡಗೂಡಮ್ಮ ದೇವಿಯ ಮೂಲಮೂರ್ತಿಯು ರುಂಡವಿಲ್ಲದ ಮುಂಡಾಕೃತಿಯಲ್ಲಿ ನೆಲೆಸಿದ್ದು ತ್ರಿಶೂಲ, ಖಡ್ಗ ಸೇರಿದಂತೆ ಢಮರುಗದೊಂದಿಗೆ ಅಭಯಹಸ್ತಳಾಗಿ ನೆಲೆನಿಂತಿರುವುದು ಕ್ಷೇತ್ರದ ವಿಶೇಷವಾಗಿದೆ.

ದೇವಾಲಯಗಳ ನಾಡು ಎಂದೇ ಪ್ರಸಿದ್ಧೊ ಪಡೆದಿರುವ ನಾಗಮಂಗಲದ ಬಡಗಲ ದಿಕ್ಕಿನ ಹಿರಿಕೆರೆ ಕೋಡಿಯ ಮೇಲೆ ನೆಲೆಸಿದ್ದು, ಪ್ರತಿ ಭಾನುವಾರ, ಮಂಗಳವಾರ, ಶುಕ್ರವಾರ, ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ ವಿಶೇಷ ಪೂಜೆಯೊಂದಿಗೆ  ಬಡಗೂಡಮ್ಮ ದರ್ಶನ ನೀಡುತ್ತಾಳೆ.

ಪಟ್ಟಣ ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮಗಳಾದ ಉಪ್ಪಾರಹಳ್ಳಿ, ನರಿಗುಡ್ಡೆ, ಮದಲಹಳ್ಳಿ, ಬಸವೇಶ್ವರನಗರ, ಸಾರಿಮೇಗಲಕೊಪ್ಪಲು ಸೇರಿದಂತೆ 12 ತತ್ತಿನ ಗ್ರಾಮಗಳು ಈ ದೇವಿಯ ಧಾರ್ಮಿಕ ಕಾರ್ಯ ನಿರ್ವಹಿಸುವ ಹಕ್ಕನ್ನು ಹೊಂದಿವೆ.

ದೇವಿಯ ಜಾತ್ರಾ ಮಹೋತ್ಸವ ಸಮಯದಲ್ಲಿ ಪ್ರತಿ ಗ್ರಾಮದ ಗ್ರಾಮಸ್ತರು ಒಂದೊಂದು ಧಾರ್ಮಿಕ ಕೈಂಕರ್ಯ ಹಂಚಿಕೆ ಮಾಡಿಕೊಂಡು ತಮ್ಮ ಸೇವೆ ಸಲ್ಲಿಸುತ್ತಾರೆ. ಪ್ರತಿ ವರ್ಷ ಯುಗಾದಿ ನಂತರದಲ್ಲಿ ಮೂರನೇ ಶನಿವಾರ ಹಬ್ಬ ಮತ್ತು ರಥೋತ್ಸವ ಜರುಗುವುದು ರೂಢಿಯಾಗಿದೆ. ಜೊತೆಗೆ ದೇವಿಯ ತವರುಮನೆ ಎಂದು ಕರೆಯಲಾಗುವ ಉಪ್ಪಾರಹಳ್ಳಿ ಗ್ರಾಮಸ್ಥರಿಂದ ರಥೋತ್ಸವದ ಹಿಂದಿನ ದಿನ ಶುಭ ಗೋಧೂಳಿ ಲಗ್ನದಲ್ಲಿ ಧಾರ್ಮಿಕ ಪೂಜೆಗಳೊಂದಿಗೆ ಕೊಂಡೋತ್ಸವಕ್ಕೆ ಅಗ್ನಿಸ್ಪರ್ಷ ಮಾಡುವುದು ವಾಡಿಕೆ.

ಪಟ್ಟಣದ ಉತ್ಸವ ಮೂರ್ತಿಯ ಇರುವ ದೇವಾಲಯದಿಂದ ಹೊರಡುವ ಪಾಲಕ್ಕಿ ಉತ್ಸವವು ತಮಟೆ, ನಗಾರಿ, ಪೂಜೆ ಕುಣಿತ, ಸೋಮನ ಕುಣಿತ ಪಟದ ಕುಣಿತಗಳೊಂದಿಗೆ ಟಿ.ಬಿ.ಬಡಾವಣೆಯಲ್ಲಿರುವ ಮೂಲ ಸನ್ನಿಧಿಗೆ ಬಂದ ನಂತರ ಮಹಾರಥೋತ್ಸವ ನಡೆಯುತ್ತದೆ.

‘ದೇವಿಯ  ನಾಮಹರಸಿ ಬಂದವರನ್ನು ಈ ತಾಯಿಯು ಎಂದೂ ಕೈಬಿಟ್ಟಿಲ್ಲ. ಜೊತೆಗೆ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತವರ ಇಷ್ಟಾರ್ಥಗಳು ಪೂರೈಕೆಯಾಗಿವೆ. ದೇವಿ ತವರೂರಾದ ಉಪ್ಪಾರಹಳ್ಳಿ ಗ್ರಾಮಸ್ಥರಾಗಿ ತಾಯಿಯ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ನಮ್ಮ ಗ್ರಾಮಸ್ಥರ ಪುಣ್ಯ’ ಎಂದು ಉಪ್ಪಾರಹಳ್ಳಿ ಗ್ರಾಮದ ಮುಖಂಡ ಅಶೋಕ್ ಹೇಳುತ್ತಾರೆ‌.

ನಾಗಮಂಗಲ ಪಟ್ಟಣದ ಟಿ.ಬಿ.ಬಡಾವಣೆಯಲ್ಲಿರುವ ಬಡಗೂಡಮ್ಮ ದೇವಾಲಯದ ಆವರಣದಲ್ಲಿ ಜರುಗುವ ಮಹಾರಥೋತ್ಸವದ ಕಳೆದ ವರ್ಷದ ದೃಶ್ಯ
ನಾಗಮಂಗಲ ಪಟ್ಟಣದ ಟಿ.ಬಿ.ಬಡಾವಣೆಯಲ್ಲಿರುವ ಬಡಗೂಡಮ್ಮ ದೇವಾಲಯದ ಆವರಣದಲ್ಲಿ ಜರುಗುವ ಮಹಾರಥೋತ್ಸವದ ಕಳೆದ ವರ್ಷದ ದೃಶ್ಯ

- ಇಂದಿನಿಂದ ಮೂರು ದಿನ ಜಾತ್ರೆ

ಬಡಗೂಡಮ್ಮ ದೇವಿಯ ಜಾತ್ರೆಯನ್ನು 15 ದಿನಗಳ ಮುಂಚೆಯೇ ಸಾರಣೆ ಮಾಡಲಾಗಿದೆ. ಮೇ 3ರ ರಾತ್ರಿ ಉಪ್ಪಾರಹಳ್ಳಿ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಿಂದ ಮಡೆ ಮತ್ತು ತಂಬಿಟ್ಟಿನ ಆರತಿಯನ್ನು ಮೆರವಣಿಯ ಮೂಲಕ ತರಲಾಗುತ್ತದೆ. ಮೇ 4ರ ಬೆಳಗಿನ ಜಾವ 5.30ಕ್ಕೆ ಕೊಂಡೋತ್ಸವ ಜರುಗಲಿದೆ. ದೇವಾಲಯದಲ್ಲಿ ಮುಂಜಾನೆಯಿಂದ ಸಂಜೆಯವರೆಗೂ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗುತ್ತವೆ. ಶನಿವಾರ ಸಂಜೆ ಬಡಗೂಡಮ್ಮ ದೇವಿಯ ಮಹಾರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗುತ್ತದೆ. ಭಾನುವಾರ ಗ್ರಾಮಗಳಲ್ಲಿ ಹೊಸತೊಡಕಿನ ಅಂಗವಾಗಿ ಮಾಂಸದೂಟವನ್ನು ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT