ಶುಕ್ರವಾರ, ಜನವರಿ 22, 2021
27 °C
ಮೂವರು ಆರೋಪಿಗಳ ಬಂಧನ; ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಯಲ್ಲಿ ಕಳವು

ಕಳವು: ₹25 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮದ್ದೂರು: ವಿವಿಧ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿರುವ ಪಟ್ಟಣದ ಪೊಲೀಸರು, ಆರೋಪಿಗಳಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ವಾಹನ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರು ವಿದ್ಯಾರಣ್ಯಪುರಂ ನಿವಾಸಿ ಅನಂತ ಅಲಿಯಾಸ್ ಗುರುವ, ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕು ಭೈರಪಟ್ಟಣ ನಿವಾಸಿ ಕೃಷ್ಣ ಅಲಿಯಾಸ್ ಕಂಚನಹಳ್ಳಿ ಕೃಷ್ಣ, ಇದೇ ಗ್ರಾಮದ ವೆಂಕಟೇಶ ಅಲಿಯಾಸ್ ಸುಮ ಬಂಧಿತರು. ಬಂಧಿತರಿಂದ 435 ಗ್ರಾಂ. ಚಿನ್ನದ ಒಡವೆಗಳು, 1.05 ಕೆ.ಜಿ ತೂಕದ ಬೆಳ್ಳಿ ವಸ್ತುಗಳು, ಟಾಟಾ ಏಸ್ ವಾಹನ, ದ್ವಿಚಕ್ರ ವಾಹನ ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ ₹25 ಲಕ್ಷ ಎಂದು ಅಂದಾಜಿಸಲಾಗಿದೆ.

ಆರೋಪಿಗಳು ಮದ್ದೂರು ತಾಲ್ಲೂಕಿನ ಚುಂಚಗಹಳ್ಳಿ, ಆಲಂಶೆಟ್ಟ ಹಳ್ಳಿ, ಚಿಕ್ಕದೊಡ್ಡಿ, ಯರಗನಹಳ್ಳಿ, ಚಮಲಾಪುರ, ತೊರೆಶೆಟ್ಟಹಳ್ಳಿ, ಮಳವಳ್ಳಿ ತಾಲ್ಲೂಕಿನ ಸಾಹಳ್ಳಿ, ಶಿವಹಳ್ಳಿ ಠಾಣಾ ವ್ಯಾಪ್ತಿಯ ಹುಳ್ಳೇನಹಳ್ಳಿ, ರಾಮನಗರ ಜಿಲ್ಲೆಯ ಹೊಸದೊಡ್ಡಿ ಗ್ರಾಮದ ಎರಡು ಮನೆ, ಒಂದು ದೇವಾಲಯ, ಕನಕಪುರ ತಾಲ್ಲೂಕಿನ ಸೋಮೇದೇಪನಹಳ್ಳಿ, ಹುಲಿಯೂರು ಹೋಬಳಿಯ ಚಲಮಸಂದ್ರ ಹಾಗೂ ಮೈಸೂರು ತಾಲ್ಲೂಕಿನ ಅಂದ್ರಹಳ್ಳಿ ಗ್ರಾಮಗಳಲ್ಲಿ ಕಳವು ಕೃತ್ಯ ಎಸಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರುಶುರಾಮ್ ತಿಳಿಸಿದರು.

ಆರೋಪಿಗಳು ಕಳವು ವೇಳೆ ಕಪ್ಪುಬಟ್ಟೆ ಧರಿಸಿ ಮನೆಯ ಬಾಗಿಲುಗಳನ್ನು ಆಯುಧಗಳಿಂದ ಮೀಟಿ ತೆಗೆಯುತ್ತಿದ್ದರು. ಮನೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿ ಬೆಲೆ ಬಾಳುವ ವಸ್ತುಗಳು, ಚಿನ್ನದ ಆಭರಣಗಳನ್ನು ದೋಚಿ ಪರಾರಿಯಾಗುತ್ತಿದ್ದರು. ಮಳವಳ್ಳಿ ವಿಭಾಗದ ಡಿವೈಎಸ್ಪಿ ಎಂ.ಜೆ.ಪೃಥ್ವಿ ಮಾರ್ಗದರ್ಶನದಲ್ಲಿ ಮದ್ದೂರು ಸಿಪಿಐ ಕೆ.ಆರ್. ಪ್ರಸಾದ್ ನೇತೃತ್ವದ ತಂಡವು ಆರೋಪಿಗಳನ್ನು ಬಂಧಿಸಿದೆ ಎಂದರು.

ಮದ್ದೂರು ಪೊಲೀಸ್ ಠಾಣೆ ಹೊರ ಆವರಣದಲ್ಲಿ ಆರೋಪಿಗಳಿಂದ ವಶಪಡಿಸಿಕೊಂಡ ಆಭರಣಗಳು, ವಾಹನವನ್ನು ಬುಧವಾರ ಪ್ರದರ್ಶಿಸಲಾಯಿತು.

ಹೆಚ್ಚುವರಿ ವರಿಷ್ಠಾಧಿಕಾರಿ ಡಾ. ಶೋಭಾರಾಣಿ, ಡಿವೈಎಸ್ಪಿ ಎಂ.ಜೆ.ಪೃಥ್ವಿ ಮತ್ತು ಸಿಪಿಐ ಕೆ.ಆರ್. ಪ್ರಸಾದ್, ಪಿಎಸ್ಐಗಳಾದ ಮಂಜೇಗೌಡ, ಮೋಹನ್ ಡಿ. ಪಟೇಲ್, ಪ್ರಭಾ, ಪಿಎಸ್ಐ ರವಿಕುಮಾರ್, ಎಎಸ್ಐ ಮಹದೇವಯ್ಯ, ಕಾನ್‌ಸ್ಟೆಬಲ್‌ಗಳಾದ ಪ್ರಶಾಂತ್ ಕುಮಾರ್, ಮಹೇಶ್, ರಿಯಾಜ್ ಪಾಷಾ, ಪ್ರಭು, ಕುಮಾರಸ್ವಾಮಿ, ಭರತ್, ಕಿಶೋರ್, ಚಿರಂಜೀವಿ, ಶರತ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.