ಮಂಗಳವಾರ, ಡಿಸೆಂಬರ್ 10, 2019
23 °C
ಕೆ.ಆರ್.ಪೇಟೆ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಸಂದರ್ಶನ

ನಾರಾಯಣಗೌಡರ ಅಧಿಕಾರದಾಹದಿಂದ ಕೆ.ಆರ್.ಪೇಟೆಗೆ ಚುನಾವಣೆ ಬಂತು: ಕೆ.ಬಿ.ಚಂದ್ರಶೇಖರ್

ಎಂ.ಎನ್‌.ಯೋಗೇಶ್‌‌ Updated:

ಅಕ್ಷರ ಗಾತ್ರ : | |

ಕೆ.ಆರ್.ಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಅವರಿಗೆ ‘ಅಹಿಂದ’ ವರ್ಗಗಳ ಜೊತೆಗೆ ಎಲ್ಲರ ಬೆಂಬಲವೂ ತನಗಿದೆ ಎನ್ನುವ ವಿಶ್ವಾಸ. ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರಜಾವಾಣಿಗೆ ನೀಡಿದ ಸಂದರ್ಶನದಲ್ಲಿ ಅವರು ಜೆಡಿಎಸ್ ಮತ್ತು ಬಿಜೆಪಿ ವಿರುದ್ಧ ಹರಿಹಾಯುವ ಜೊತೆಗೆ ತಮ್ಮ ಸಾಧನೆಯನ್ನು ವಿವರಿಸಿದರು.

 

* ಜೆಡಿಎಸ್‌, ಬಿಜೆಪಿ ಅಭ್ಯರ್ಥಿಗಳ ಅಬ್ಬರದಲ್ಲಿ ನೀವು ಮಂಕಾಗಿದ್ದೀರಾ?

ಕೆ.ಆರ್‌.ಪೇಟೆ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಬಾಂಬೆ ಗಿರಾಕಿ ನಾರಾಯಣಗೌಡನಿಂದಾಗಿ ಕ್ಷೇತ್ರ ಜೆಡಿಎಸ್‌ನತ್ತ ಹೊರಳಿತ್ತು. ಈಗ ಆತ ಪಕ್ಷಾಂತರ ಮಾಡಿದ್ದು ಕ್ಷೇತ್ರ ಮತ್ತೆ ಕಾಂಗ್ರೆಸ್‌ನತ್ತ ಬರಲಿದೆ. ಕಾಂಗ್ರೆಸ್‌ ಎಂದಿಗೂ ಮಂಕಾಗುವುದಿಲ್ಲ. ಉಪ ಚುನಾವಣೆಗೆ ಕಾರಣವಾದ ಬಿಜೆಪಿ, ಜೆಡಿಎಸ್‌ಗೆ ಕೆ.ಆರ್‌.ಪೇಟೆ ತಾಲ್ಲೂಕಿನ ಜನರು ತಕ್ಕ ಪಾಠ ಕಲಿಸುತ್ತಾರೆ.

* ಎರಡು ಬಾರಿ ಸೋತಿದ್ದೀರಿ, ನಿಮ್ಮ ಮೇಲೆ ಅನುಕಂಪ ಇದೆಯಾ?

ಎರಡು ಬಾರಿ ಶಾಸಕನಾಗಿ ಕ್ಷೇತ್ರಕ್ಕೆ ಅಪಾರ ಕೊಡುಗೆ ಕೊಟ್ಟಿದ್ದೇನೆ. ಕೆ.ಆರ್‌.ಪೇಟೆಯಲ್ಲಿ ಸುಸಜ್ಜಿತವಾದ ಎಳನೀರು ಮಾರುಕಟ್ಟೆ ನನ್ನ ಕಾಲದಲ್ಲಿ ಆಗಿದೆ. ರೈತರಿಗೆ ಅನುಕೂಲವಾದ ವಿದ್ಯುತ್‌ ಪವರ್‌ ಸ್ಟೇಷನ್‌ ತಂದಿದ್ದೇನೆ. ತಾಲ್ಲೂಕು ಆಸ್ಪತ್ರೆಯನ್ನು 100 ಬೆಡ್‌ ಮಟ್ಟಕ್ಕೆ ಮೇಲ್ದರ್ಜೇರಿಸಿದ್ದೇನೆ. ಅಭಿವೃದ್ಧಿ ಕೆಲಸಗಳು ನನ್ನ ಕೈ ಹಿಡಿಯಲಿವೆ. ಎರಡು ಸೋಲಿನ ಅನುಕಂಪವೂ ನನ್ನ ಮೇಲಿದೆ.

* ಅಲ್ಪಸಂಖ್ಯಾತರು, ಅಹಿಂದ ಮತಗಳನ್ನು ಮಾತ್ರ ಸೆಳೆಯುತ್ತಿದ್ದೀರಿ ಎಂಬ ಆರೋಪ ಇದೆಯಲ್ಲಾ?

ಹಾಗೇನಿಲ್ಲ, ಕ್ಷೇತ್ರದ ಎಲ್ಲಾ ವರ್ಗದ ಮತದಾರರನ್ನು ತಲುಪುತ್ತಿದ್ದೇನೆ. ಪ್ರಚಾರದ ವೇಳೆ ಯಾವುದೇ ಹಳ್ಳಿಗೆ ತೆರಳಿದರೂ ಎಲ್ಲಾ ಸಮಾಜಗಳ ಜನರೂ ಬರುತ್ತಿದ್ದಾರೆ. ಬಿಜೆಪಿ, ಜೆಡಿಎಸ್‌ನವರು ಹಣ ಹಂಚಿ ಮತಯಾಚನೆ ಮಾಡುತ್ತಿದ್ದಾರೆ. ನಾನು ನನ್ನ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿದ್ದೇನೆ.

* ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರಿಗೆ ಬೆಂಬಲ ಕೊಟ್ಟಿದ್ದಿರಿ, ಈಗ ನಿಮಗೆ ಅವರು ಬೆಂಬಲ ನೀಡಲಿಲ್ಲವೇ?

ಲೋಕಸಭಾ ಚುನಾವಣೆ ಸ್ವಾಭಿಮಾನದ ಹೆಸರಿನಲ್ಲಿ ನಡೆಯಿತು. ಆದರೆ ಈ ಚುನಾವಣೆ ನಾರಾಯಣಗೌಡರ ಅಧಿಕಾರ ದಾಹಕ್ಕಾಗಿ ನಡೆಯುತ್ತಿದೆ. ಹೀಗಾಗಿ ಸುಮಲತಾ ಅವರು ತಟಸ್ಥರಾಗಿ ಉಳಿದಿದ್ದಾರೆ. ನಮ್ಮ ಪಕ್ಷದ ಮುಖಂಡ ಸಿದ್ದರಾಮಯ್ಯ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು ನನ್ನ ಸಹಾಯಕ್ಕೆ ಬರಲಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು