ಸೋಮವಾರ, ಮೇ 23, 2022
30 °C
ಜಿಲ್ಲಾ ಕ್ರೀಡಾಂಗಣದಲ್ಲಿ 18ನೇ ಕನ್ನಡ ಸಾಹಿತ್ಯ ಸಮ್ಮೇಳನ; ಸಾಹಿತಿ ಪ್ರೊ.ದೊಡ್ಡರಂಗೇಗೌಡ ವಿಷಾದ

ಇಂಗ್ಲಿಷ್‌ ವ್ಯಾಮೋಹ ಗುಲಾಮಗಿರಿಯ ಸಂಕೇತ: ಪ್ರೊ.ದೊಡ್ಡರಂಗೇಗೌಡ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಬ್ರಿಟಿಷರು ಬಿಟ್ಟು ಹೋದ ಗುಲಾಮಗಿರಿಯ ಸಂಕೇತ ಎಂಬಂತೆ ಇಂಗ್ಲಿಷ್‌ ಭಾಷೆಯ ವ್ಯಾಮೋಹ ತೀವ್ರಗೊಂಡಿದೆ. ಇಂದಿನ ಪೀಳಿಯ ಯುವಜನರಿಗೆ ಇಂಗ್ಲಿಷ್‌ ಮಬ್ಬು ಕವಿದಿದೆ, ಭ್ರಮೆ ಹೊಕ್ಕಿದೆ, ಪಿಶಾಚಿ ಮೆಟ್ಟಿದೆ’ ಎಂದು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪ್ರೊ.ದೊಡ್ಡರಂಗೇಗೌಡ ವಿಷಾದಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದ ಎಚ್‌.ಎಲ್‌.ಕೇಶವಮೂರ್ತಿ ವೇದಿಕೆಯಲ್ಲಿ ಶುಕ್ರವಾರ ಆರಂಭಗೊಂಡ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬೃಹತ್‌ ನಗರಗಳಲ್ಲಿ ಕನ್ನಡ ಮರೆಯಾಗುತ್ತಿದೆ. ಕನ್ನಡ ಮಾತನಾಡಲು ಕೀಳರಿಮೆ ಹೊಂದುವ ವಾತಾವರಣ ಇದೆ. ಇಂಗ್ಲಿಷ್‌ ಮಾತ್ರ ಅನ್ನ ನೀಡುವ ಭಾಷೆಯಾಗಿದೆ ಎಂಬ ಭ್ರಮೆ ಸೃಷ್ಟಿಯಾಗಿದೆ. ಆದರೆ ಅದು ತಪ್ಪು ಕಲ್ಪನೆಯಾಗಿದೆ ಎಂಬುದನ್ನು ಅರಿಯಬೇಕು. ತಾಯ್ನುಡಿಗೆ ಮಾತ್ರ ಮಗುವಿನ ಮಿದುಳು ಸ್ಪಂದಿಸುತ್ತದೆ. ಕನ್ನಡ ಇಡೀ ವಿಶ್ವದಲ್ಲಿ ಅತ್ಯಂತ ಸುಂದರ ಭಾಷೆಯಾಗಿದೆ. ಕನ್ನಡವನ್ನು ಅತ್ಯಂತ ಹೆಮ್ಮೆಯಿಂದ ಬಳಸಬೇಕು, ವ್ಯವಹರಿಸಬೇಕು’ ಎಂದರು.

‘ಸಕ್ಕರೆ ನಾಡಿನಲ್ಲಿ ಕನ್ನಡ ತೇರು ಎಳೆದವರಿಗೆ ಕೊರತೆ ಇಲ್ಲ. ಇಲ್ಲಿಯ ರೈತರು ನಿಚ್ಚಳ ಹೋರಾಟದ ಮೂಲಕ ಬಲುದೊಡ್ಡ ಮೌಲ್ಯವನ್ನು ಎತ್ತಿ ಹಿಡಿದಿದ್ದಾರೆ. ನೀಡುವ ಕೈ ಎಂದಿಗೂ ಬೇಡುವುದಿಲ್ಲ ಎಂಬ ಸಂದೇಶ ನೀಡಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್‌, ಸರ್‌.ಎಂ.ವಿಶ್ವೇಶ್ವರಯ್ಯ ಕನ್ನಂಬಾಡಿ ಕಟ್ಟೆ ಕಟ್ಟದಿದ್ದರೆ ಮಂಡ್ಯ ಜಿಲ್ಲೆಯನ್ನು ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ’ ಎಂದರು.

‘2ನೇ ಶತಮಾನದಲ್ಲೇ ಕನ್ನಡ ಭಾಷೆ ಇತ್ತು ಎನ್ನುವುದಕ್ಕೆ ಸಾಕಷ್ಟು ಸಾಕ್ಷಿಗಳಿವೆ. ಅಲೆಕ್ಸಾಂಡರ್‌ ಈಜಿಪ್ಟ್‌ ವಶಪಡಿಸಿಕೊಂಡಾಗ ರಹಟೋಪ್‌ ಎಂಬಲ್ಲಿ ದಿಗ್ವಿಜಯ ಯಾತ್ರೆ ನಡೆದಿತ್ತು. ಇಂತಹ ಸಂದರ್ಭದಲ್ಲಿ ಅಲ್ಲಿದ್ದ ಬೃಹತ್‌ ಗ್ರಂಥಾಲಯ ಬೆಂಕಿಗೆ ಆಹುತಿಯಾಯಿತು. ಅಲ್ಲಿ 36 ಸಾವಿರ ತಾಳೆಗರಿ ಗ್ರಂಥಗಳು ಭಸ್ಮವಾದವು. ಅಳಿದುಳಿದ ತಾಳೆಗರಿ ಹುಡುಕಿದಾಗಿ ಹಲವು ಭಾಷೆಯ ಅಕ್ಷರಗಳು ದೊರೆತವು. ಅದರಲ್ಲಿ ಕನ್ನಡ ಅಕ್ಷರಗಳು ದೊರೆತವು ಎಂಬುದಕ್ಕೆ ಅಲ್ಲಿರುವ ವಿಜಯ ಸ್ತಂಭವೇ ಸಾಕ್ಷಿಯಾಗಿದೆ’ ಎಂದರು.

‘ನಾವು ಕನ್ನಡ ಬರೆಯುವ ರೀತಿಯಲ್ಲಿ ಮಾತನಾಡುತ್ತೇವೆ. ಈ ಸಾಧ್ಯತೆ ಇಂಗ್ಲಿಷ್‌ನಲ್ಲಿ ಇಲ್ಲ. ಕನ್ನಡಿಗರಿಗೆ ಮೋಕ್ಷ ದೊರೆಯಬೇಕಾದರೆ ಕನ್ನಡ ನಾಡು–ನುಡಿ ಮೇಲೆ ಗೌರವ ಇಟ್ಟುಕೊಳ್ಳಬೇಕು. ಮಾತೃಭಾಷೆಯ ಕಿಮ್ಮತ್ತು, ದೀಶಕ್ತಿ ಬಲು ದೊಡ್ಡದಾಗಿದ್ದು ಸದಾ ನದಿಯಂತೆ ಹರಿಯಲಿದೆ. ಸೂರ್ಯ–ಚಂದ್ರ ಇರುವವರೆಗೂ ಉಳಿಯಲಿದೆ’ ಎಂದರು.

‘ಡಾ.ನಾಗಲೋಟಿ ಮಠ ಅವರು ಶಸ್ತ್ರಚಿಕಿತ್ಸೆ ಪ್ರಕ್ರಿಯೆಯನ್ನು ಕನ್ನಡದಲ್ಲಿ ಬರೆದಿದ್ದಾರೆ. ವೈಜ್ಞಾನಿಕ ವಿಚಾರಗಳನ್ನು ಬಹಳ ಸೊಗಸಾಗಿ ಮಾತೃಭಾಷೆಯಲ್ಲಿ ಹಂಚಿಕೊಂಡಿದ್ದಾರೆ. ಕನ್ನಡ ಭಾಷೆಗೆ ತನ್ನದೇ ಆದ ವೈಶಿಷ್ಟ್ಯವಿದೆ, ತನ್ನ ತನವಿದೆ. ಈ ಕನ್ನಡತನ ಉಳಿಯುವಂತಾಗಬೇಕು’ ಎಂದರು.

‘ಅನಿವಾಸಿ ಕನ್ನಡಿಗರು ದೂರದ ದೇಶಗಳಲ್ಲಿ ಕನ್ನಡ ಚಟುವಟಿಕೆಗಳನ್ನು ಬಹಳ ಪ್ರೀತಿಯಿಂದ ನಡೆಸುತ್ತಿದ್ದಾರೆ. ಕನ್ನಡ ಸಂಘ ಮಾಡಿಕೊಂಡು ಶನಿವಾರ–ಭಾನುವಾರಗಳನ್ನು ಮಾತೃಭಾಷೆಗೆ ಮೀಸಲಿಟ್ಟಿದ್ದಾರೆ. ಏಳು ಸಮುದ್ರದಾಚೆಗೂ ಕನ್ನಡ ಬೆಳೆಯುತ್ತಿದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ ‘ಸದಾ ಕಾಲ ರಾಜಕಾರಣ ಮಾಡಲು ಸಾಧ್ಯವಿಲ್ಲ. ನಾಡು ನುಡಿ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಕೊಂಡರೆ ಮಾತ್ರ ನೆಮ್ಮದಿಯ ಬದುಕು ಕಾಣಲು ಸಾಧ್ಯ. ನಾನು ಮುಂಬೈನಲ್ಲಿ ಇದ್ದಾಗ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಿದ್ದೆ. ಭಾಷಾ ಪ್ರೀತಿ ಎಂದಿಗೂ ಇರುತ್ತದೆ’ ಎಂದರು.

ಶಾಸಕ ಕೆ.ಟಿ.ಶ್ರೀಕಂಠೇಗೌಡ, ಆದಷ್ಟು ಬೇಗ ಮೇಕೆದಾಟು ಯೋಜನೆ ಕಾರ್ಯರೂಪಕ್ಕೆ ಬರಬೇಕು. ₹ 9 ಸಾವಿರ ಕೋಟಿ ವೆಚ್ಚದ ಅಂದಾಜು ಮಾಡಲಾಗಿದೆ. ಇದರಿಂದ ನಮ್ಮ ರಾಜ್ಯದಕ್ಕೆ 70 ಟಿಎಂಸಿ ಅಡಿ ನೀರು ದೊರೆಯಲಿದೆ. ಈ ಯೋಜನೆ ಕಾರ್ಯಗತಗೊಂಡರೆ ಮಾತ್ರ ತಮಿಳುನಾಡು ಮತ್ತು ಕರ್ನಾಟಕ ನಡುವೆ ಇರುವ ಕಾವೇರಿ ವಿವಾದ ಅಂತ್ಯಗೊಳ್ಳಲಿದೆ ಎಂದರು.

ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ ಜನಪದಗೀತೆ ಪ್ರಸ್ತುತಪಡಿಸಿ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ಡಾ.ಎನ್‌.ಎಸ್‌.ಶಂಕರೇಗೌಡ ಸಂಪಾದಿಸಿರುವ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಶಾಸಕ ಎಂ.ಶ್ರೀನಿವಾಸ್‌, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್‌, ಜಿಲ್ಲಾಧಿಕಾರಿ ಎಸ್‌.ಅಶ್ವಥಿ, ಜಿಲ್ಲಾ ಕಸಾಪ ಅಧ್ಯಕ್ಷ ರವಿಕುಮಾರ್‌ ಚಾಮಲಾಪುರ, ನಗರಸಭೆ ಅಧ್ಯಕ್ಷ ಎಚ್‌.ಎಸ್‌.ಮಂಜು, ಜಿ.ಪಂ ಸಿಇಒ ಜುಲ್ಫಿಕರ್‌ ಉಲ್ಲಾ ಇದ್ದರು.

*******

 ‘ಕೃಷಿ ಕಲ್ಪ’ದಿಂದ ರೈತರಿಗೆ ಬಲ

ಸಮ್ಮೇಳನ ಉದ್ಘಾಟಿಸಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಾತನಾಡಿ ‘ಬದಲಾದ ಕಾಲದಲ್ಲಿ ರೈತರು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢವಾಗಬೇಕು. ಈ ಉದ್ದೇಶದಿಂದ ಸರ್ಕಾರ ಕೃಷಿಕಲ್ಪ ಸಂಘಟನೆ ರೂಪಿಸುತ್ತಿದೆ’ ಎಂದರು.

‘ಕೃಷಿಯಲ್ಲಿ ತಂತ್ರಜ್ಞಾನ ರೂಪಿಸಿ ರೈತರನ್ನು ಸಬಲೀಕರಣಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಜನರು ಕೃಷಿ ಅವಲಂಬಿಸಿರುವ ಕಾರಣ ಕೃಷಿ ತಂತ್ರಜ್ಞಾನ ಸುಧಾರಣೆಗೊಳ್ಳಬೇಕು. ಇಸ್ರೇಲ್‌ ಮಾದರಿಯ ಕೃಷಿ ತಂತ್ರಜ್ಞಾನ ಅಳವಡಿಸಿಕೊಳ್ಳುವ ಬಗೆಗೂ ಸರ್ಕಾರ ಚಿಂತಿಸುತ್ತಿದೆ’ ಎಂದರು.

‘ಮುಂದಿನ 5 ವರ್ಷಗಳಲ್ಲಿ 1 ಕೋಟಿ ಉದ್ಯೋಗ ಸೃಷ್ಟಿಸುವುದು ಸರ್ಕಾರದ ಉದ್ದೇಶವಾಗಿದೆ. ಮೈಷುಗರ್‌ ಕಾರ್ಖಾನೆ ಆರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಆದಷ್ಟು ಬೇಗ ನಿರ್ಧಾರ ಪ್ರಕಟಿಸಲಾಗುವುದು’ ಎಂದರು.

***********

ರಾಜಕಾರಣಿಗಳ ಸಮ್ಮೇಳನ

ನಿಕಟಪೂರ್ವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ ‘ಇದು ಹೆಸರಿಗಷ್ಟೇ ಸಾಹಿತ್ಯ ಸಮ್ಮೇಳನ, ಆದರೆ ವೇದಿಕೆಯಲ್ಲಿ ರಾಜಕಾರಣಿಗಳೇ ವಿಜೃಂಭಿಸುತ್ತಿದ್ದಾರೆ. ರಾಜಕಾರಣಿಗಳ ಸಮ್ಮೇಳನದಂತಿದೆ. ಜನಪ್ರತಿನಿಧಿಗಳು ಬರವುದು ಒಳ್ಳೆಯದು, ಆದರೆ ಅವರು ಸಾಹಿತ್ಯೆ ಸೇವೆ ಮಾಡಬೇಕು. ಇಲ್ಲದಿದ್ದರೆ ಅದು ಅವರ ಸಾಮಾಜಿಕ ಅಪರಾಧವಾಗುತ್ತದೆ’ ಎಂದರು.

‘ಸರ್ಕಾರ ಸಂಗ್ರಹಿಸುವ ಗ್ರಂಥಾಲಯ ಸೆಸ್‌ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಲಾಗುತ್ತಿದೆ. ರಾಜಕಾರಣಿಗಳು ಈ ಬಗ್ಗೆ ಧ್ವನಿ ಎತ್ತಿ ಸೆಸ್‌ ಹಣವನ್ನು ಗ್ರಂಥಾಲಯ, ಪುಸ್ತಕ ಪ್ರಕಟಣೆಗೆ ಬಳಸುವಂತಾಗಬೇಕು. ಪ್ರತಿ ಪಂಚಾಯಿತಿಯಲ್ಲೂ ತಲಾ ಒಂದು ಗ್ರಂಥಾಲಯ ಸ್ಥಾಪಿಸಲು ಕ್ರಮ ವಹಿಸಬೇಕು’ ಎಂದರು.

‘ಕಿಕ್ಕೇರಿಯಲ್ಲಿರುವ ಕೆರೆಯನ್ನು ಕೆಎಸ್‌ನ ಸರೋವರ ಎಂದು ನಾಮಕರಣ ಮಾಡಿ ಅಭಿವೃದ್ಧಿಗೊಳಿಸಬೇಕು. ನರಸಿಂಹಸ್ವಾಮಿ ಅವರು ಬದುಕಿದ ಮನೆಯನ್ನು ಬಿಡಿಸಿಕೊಡಬೇಕು. ಕವಿಗಳ ತವರು ಪ್ರವಾಸಿತಾಣವಾಗಿ ಅಭಿವೃದ್ಧಿಗೊಳ್ಳಬೇಕು’ ಎಂದರು.

*******

ಹಿಂದಿಯ ಅಹಂಕಾರ ಮೆಟ್ಟಿ ನಿಲ್ಲೋಣ

ಸಮ್ಮೇಳನದ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ ‘ಭಾಷೆಯ ವಿಷಯದಲ್ಲಿ ನಿರಭಿಮಾನ ಇರಬಾರದು. ಹಿಂದಿ ರಾಷ್ಟ್ರಭಾಷೆ ಎಂಬ ಅಹಂಕಾರವನ್ನು ಮೆಟ್ಟಿ ನಿಲ್ಲಬೇಕು. ಸಂವಿಧಾನದಲ್ಲಿ ಉಲ್ಲೇಖಿತವಾಗಿರುವ ಎಲ್ಲಾ ಭಾಷೆಗಳು ರಾಷ್ಟ್ರಭಾಷೆಯೇ ಆಗಿವೆ’ ಎಂದರು.

‘ಭಾಷೆಯಾಗಿ ಹಿಂದಿ ಕಲಿಯಲು ತೊಂದರೆ ಇಲ್ಲ. ಹಿಂದಿಯನ್ನು ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಹೇರದೆ ಪ್ರೌಢಶಾಲೆ ಮಟ್ಟದಲ್ಲಿ ಐಚ್ಛಿಕ ವಿಷಯವಾಗಿ ಕಲಿಸಬಹುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು