ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಕಾಂಗ್ರೆಸ್‌ ಪ್ರಣಾಳಿಕೆಗೆ ತಬ್ಬಿಬ್ಬಾದ ಬಿಜೆಪಿ, ಜೆಡಿಎಸ್

ಪ್ರಜಾಧ್ವನಿ ಸಮಾವೇಶದ ಸ್ಥಳ ಪರಿಶೀಲನೆ; ಕೆಪಿಸಿಸಿ ಉಪಾಧ್ಯಕ್ಷ ಚಲುವರಾಯಸ್ವಾಮಿ ಅಭಿಮತ
Last Updated 24 ಜನವರಿ 2023, 5:44 IST
ಅಕ್ಷರ ಗಾತ್ರ

ಮಂಡ್ಯ: ‘ಕಾಂಗ್ರೆಸ್‌ ಘೋಷಣೆ ಮಾಡಿರುವ ಪ್ರಣಾಳಿಕೆಗೆ ಬಿಜೆಪಿ, ಜೆಡಿಎಸ್‌ ಪಕ್ಷಗಳು ತಬ್ಬಿಬ್ಬಾಗಿವೆ. ಗೊಂದಲಕ್ಕೀಡಾಗಿರುವ ಎರಡೂ ಪಕ್ಷಗಳ ಮುಖಂಡರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ಹೇಳಿದರು.

ಜ.27ರಂದು ನಡೆಯಲಿರುವ ‘ಪ್ರಜಾಧ್ವನಿ’ ಸಮಾವೇಶದ ಹಿನ್ನೆಲೆಯಲ್ಲಿ ಸೋಮವಾರ ನಗರದ ಮಂಡ್ಯ ವಿವಿ ಮೈದಾನದಲ್ಲಿ ಸ್ಥಳ ಪರೀಶೀಲನೆ ನಡೆಸಿ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

‘ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತದೆ. ಗೃಹಲಕ್ಷ್ಮಿ ಯೋಜನೆಯಡಿ ಪ್ರತೀ ಕುಟುಂಬದ ಮಹಿಳೆಗೆ ₹2 ಸಾವಿರ ನೀಡುವುದಾಗಿ ಘೋಷಣೆ ಮಾಡಿರುವುದು ಜೆಡಿಎಸ್‌, ಬಿಜೆಪಿ ಮುಖಂಡರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಿಜೆಪಿ ಮುಖಂಡರಿಗೆ ಅನುಭವದ ಕೊರತೆ ಇದ್ದು ಅವರಿಗೆ ಆರ್ಥಿಕ ಶಿಸ್ತಿನ ಅರಿವಿಲ್ಲ. ನಾವು ಅದೆಲ್ಲವನ್ನೂ ಗೊತ್ತಿದ್ದೇ ಘೋಷಣೆ ಮಾಡಿದ್ದೇವೆ’ ಎಂದರು.

‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಯಾವ ರೀತಿ ಜನೋಪಯೋಗಿ ಕಾರ್ಯಕ್ರಮ ನೀಡಲಿದೆ ಎಂಬುದನ್ನು ಕಾದು ನೋಡಬೇಕು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರು ಏನೆಲ್ಲಾ ಮಾಡಿದ್ದರು ಎಂಬುದು ಜನರಿಗೆ ಗೊತ್ತಿದೆ. ರಾಜ್ಯದ ಎಲ್ಲಾ ಭಾಗದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಯೋಜನೆ ರೂಪಿಸಲು ಉದ್ದೇಶಿಸಲಾಗಿದೆ’ ಎಂದರು.

‘ಯುವಕರು, ಮಹಿಳೆಯರು, ಕಾರ್ಮಿಕರು, ದಲಿತರನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗುತ್ತದೆ. ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ತಲಾ 7 ಕೆ.ಜಿ. ಅಕ್ಕಿ ನೀಡುತ್ತಿದ್ದೆವು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅದನ್ನು 5 ಕೆ.ಜಿಗೆ ಇಳಿಕೆ ಮಾಡಿದೆ. ಮುಂದೆ ನಾವು ಅಧಿಕಾರಕ್ಕೆ ಬಂದರೆ 12 ಕೆ.ಜಿ ಅಕ್ಕಿ ನೀಡಲು ಉದ್ದೇಶಿಸಲಾಗಿದೆ’ ಎಂದರು.

‘ಬಿಜೆಪಿ ಗಿಮಿಕ್ ರಾಜಕಾರಣ ಮಾಡುತ್ತಿದೆ. ಪ್ರಸ್ತುತ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವ ಯೋಜನೆಗಳು ರಾಜ್ಯದ ಬಹುತೇಕ ಬಿಪಿಎಲ್ ಕುಟುಂಬದವರಿಗೆ ತಲುಪುತ್ತವೆ. ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅದಕ್ಕೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಬೇಕಿದೆ’ ಎಂದರು.

‘ಹುಲಿವಾನ ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಬೇಕಿತ್ತು, ತುರ್ತು ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬರಲಾಗಲಿಲ್ಲ. ಇದಕ್ಕೆ ತಪ್ಪು ಅರ್ಥ ನೀಡುವುದು ಬೇಡ, ಎಲ್ಲರೂ ಎಲ್ಲಾ ಕಡೆ ಹೋಗಲು ಸಾಧ್ಯವಾಗುವುದಿಲ್ಲ. ಕಾಂಗ್ರೆಸ್‌ ಪಕ್ಷದಲ್ಲಿ ಶೇ 100ರಷ್ಟು ಒಗ್ಗಟ್ಟಿದೆ. ಮಂಡ್ಯ ಕ್ಷೇತ್ರದಲ್ಲಿ 16 ಮಂದಿ ಆಕಾಂಕ್ಷಿತರಿದ್ದಾರೆ, ಎಲ್ಲರಿಗೂ ಟಿಕೆಟ್ ಸಿಗುವುದಿಲ್ಲ. ಒಬ್ಬರಿಗೆ ಮಾತ್ರ ಟಿಕೆಟ್ ಸಿಗಲಿದ್ದು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು’ ಎಂದರು.

‘ಕಾಂಗ್ರೆಸ್ ಪಕ್ಷದ ವತಿಯಿಂದ ಈಗಾಗಲೇ ರಾಜ್ಯದಲ್ಲಿ ಚುನಾವಣಾ ಪ್ರಚಾರ ಪ್ರಾರಂಭವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಇಬ್ಬರೂ ಒಟ್ಟಾಗಿ ಪ್ರಜಾಧ್ವನಿ ಕಾರ್ಯಕ್ರಮ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಜ.27 ಬೆಳಿಗ್ಗೆ 11 ಗಂಟೆಗೆ ಮಂಡ್ಯ ವಿವಿ ಆವರಣದಲ್ಲಿ ಸಮಾವೇಶ ನಡೆಯಲಿದೆ. 75 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ’ ಎಂದರು.

ಮುಖಂಡರಾದ ತ್ಯಾಗರಾಜು, ವಿಜಯುಕಮಾರ್, ಎಂ.ಎಸ್.ಚಿದಂಬರ್, ಬಿ.ಟಿ.ಗುರುರಾಜ್ ಭಾಗವಹಿಸಿದ್ದರು.

ನಾಗಮಂಗಲದಿಂದಲೇ ಸ್ಪರ್ಧೆ
‘ನಾಗಮಂಗಲ ಕ್ಷೇತ್ರದಿಂದಲೇ ನಾನು ಸ್ಪರ್ಧಿಸುವುದಾಗಿ ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಮಂಡ್ಯ ಕ್ಷೇತ್ರದ ಜನತೆ ಪ್ರೀತಿಯಿಂದ ಕರೆಯುತ್ತಿದ್ದಾರೆ. ಆದರೆ, ಮಂಡ್ಯದಲ್ಲಿ ಸ್ಪರ್ಧೆ ಮಾಡುವುದಿಲ್ಲ’ ಎಂದು ಚಲುವರಾಯಸ್ವಾಮಿ ಹೇಳಿದರು.

‘ಔಪಚಾರಿಕವಾಗಿಯೇ ಎಲ್.ಆರ್.ಶಿವರಾಮೇಗೌಡರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ, ಇದರಲ್ಲಿ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ. ಬೇರೆ ಮುಖಂಡರ ಜೊತೆಗೆ ಮಾತನಾಡಬಾರದು ಎಂಬ ನಿಯಮವೇನೂ ಇಲ್ಲ. ಸಹಜವಾಗಿ ದೂರವಾಣಿ ಕರೆ ಮಾಡಿದ್ದರು, ಅದಕ್ಕೆ ಉತ್ತರ ನೀಡಿದ್ದೇನೆ ಅಷ್ಟೇ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT