ಬೆಂಗಳೂರು: ‘ಆಪರೇಷನ್ ಕಮಲ’ದ ಮೂಲಕ ಕಾಂಗ್ರೆಸ್– ಜೆಡಿಎಸ್ ಸಮ್ಮಿಶ್ರ ಸರ್ಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಉದ್ಯಮಿ, ಮದ್ದೂರು ವಿಧಾನಸಭೆ ಕ್ಷೇತ್ರದ ಮುಖಂಡ ಕದಲೂರು ಉದಯ್‌ಗೌಡ ಅವರು ತಮ್ಮ ಬೆಂಬಲಿಗರ ಜೊತೆ ಸೋಮವಾರ ಕಾಂಗ್ರೆಸ್ ಸೇರಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಮುಖಂಡರಾದ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಅವರು ಉದಯ್ ಗೌಡ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ‘ಉದಯ್ ಯಾವುದೇ ಷರತ್ತು ಇಲ್ಲದೆ ಪಕ್ಷ ಸೇರುತ್ತಿದ್ದಾರೆ. ಮದ್ದೂರು ಕ್ಷೇತ್ರ ರಾಜ್ಯ ರಾಜಕಾರಣಕ್ಕೆ ಬಹಳ ಉತ್ತಮ ನಾಯಕರನ್ನು ಕೊಟ್ಟಿದೆ. ಎಸ್.ಎಂ. ಕೃಷ್ಣ, ಮಾದೇಗೌಡರು, ಮಂಚೇಗೌಡರು ಅವರನ್ನು ಕೊಟ್ಟಿರುವ ಕ್ಷೇತ್ರ ಇದಾಗಿದೆ’ ಎಂದರು.
‘ನಮ್ಮ ಕೆಲವು ತಪ್ಪುಗಳಿಂದ ಈ ಕ್ಷೇತ್ರ (ಮದ್ದೂರು) ಕೈತಪ್ಪಿ ಹೋಗಿತ್ತು. ಉದಯ್ ಇಲ್ಲಿ ಕೆಲಸ ಮಾಡುತ್ತಾ ಬಂದಿದ್ದು, ಜೆಡಿಎಸ್‌ನ ಡಿ.ಸಿ. ತಮ್ಮಣ್ಣ ಅವರನ್ನು ಸೋಲಿಸಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಸೇರುತ್ತಿದ್ದಾರೆ. ಪಕ್ಷ ಯಾರಿಗೇ ಟಿಕೆಟ್ ಕೊಟ್ಟರೂ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ಇಲ್ಲಿನ ಎಲ್ಲ ನಾಯಕರು ಒಪ್ಪಿದ್ದಾರೆ. ಎಲ್ಲ ನಾಯಕರ ಸಮ್ಮುಖದಲ್ಲಿ ಉದಯ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ’ ಎಂದರು.
‘ಆಪರೇಷನ್ ಕಮಲ’ದಲ್ಲಿ ಉದಯ್ ಭಾಗಿಯಾದ ಆರೋಪ ಇದೆಯಲ್ಲವೇ? ಎಂದು ಕೇಳಿದಾಗ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ‘ವಿರೋಧ ಪಕ್ಷದಲ್ಲಿದ್ದಾಗ ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ನಮ್ಮ ಜತೆ ಇದ್ದ ಎ. ಮಂಜು ಈಗ ಜೆಡಿಎಸ್‌ಗೆ ಹೋಗಿದ್ದಾರೆ. ಜೆಡಿಎಸ್‌ನಲ್ಲಿದ್ದ ಶಿವಲಿಂಗೇಗೌಡ, ಗುಬ್ಬಿ ಎಸ್.ಆರ್. ಶ್ರೀನಿವಾಸ (ವಾಸು), ಮಧುಬಂಗಾರಪ್ಪ ಸೇರಿದಂತೆ ಅನೇಕರು ಕಾಂಗ್ರೆಸ್‌ಗೆ ಬಂದಿದ್ದಾರೆ. ನಾನು ಮತ್ತು ಕುಮಾರಸ್ವಾಮಿ ಗುದ್ದಾಡಿದ್ದರೂ ಹೈಕಮಾಂಡ್ ನಿರ್ದೇಶನದ ಮೇರೆಗೆ ಜೆಡಿಎಸ್ ಜತೆ ಸೇರಿ ಮೈತ್ರಿ ಸರ್ಕಾರ ಮಾಡಿದ್ದೇವೆ. ರಾಜಕಾರಣದಲ್ಲಿ ಇಂತಹ ಬೆಳವಣಿಗೆ ಸಹಜ’ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಮಾದೇಗೌಡ, ಕಾಂಗ್ರೆಸ್ ಮುಖಂಡ ಕೆ.ಬಿ. ಚಂದ್ರಶೇಖರ್, ಗುರುಚರಣ್, ಡಿಸಿಸಿ ಅಧ್ಯಕ್ಷ ಗಂಗಾಧರ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.