ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ನಿರೀಕ್ಷೆಯಂತೆ ಮೂವರಿಗೆ ಕಾಂಗ್ರೆಸ್‌ ಟಿಕೆಟ್‌

ಮಂಡ್ಯ, ಕೆ.ಆರ್‌.ಪೇಟೆ, ಮದ್ದೂರು ಕ್ಷೇತ್ರಗಳ ಆಕಾಂಕ್ಷಿಗಳಲ್ಲಿ ಹೆಚ್ಚಾದ ಕುತೂಹಲ
Last Updated 25 ಮಾರ್ಚ್ 2023, 13:19 IST
ಅಕ್ಷರ ಗಾತ್ರ

ಮಂಡ್ಯ: ನಿರೀಕ್ಷೆಯಂತೆ ಗೊಂದಲವಿಲ್ಲದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಹೈಕಮಾಂಡ್‌ ಶನಿವಾರ ಅಭ್ಯರ್ಥಿಗಳ ಹೆಸರು ಘೋಷಿಸಿದೆ. ಉಳಿದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಗೊಂದಲವಿದ್ದು ಟಿಕೆಟ್‌ ಆಕಾಂಕ್ಷಿಗಳು ಮತ್ತಷ್ಟು ದಿನ ಕಾಯುವುದು ಅನಿವಾರ್ಯವಾಗಿದೆ.

ನಾಗಮಂಗಲ ಕ್ಷೇತ್ರದಿಂದ ಎನ್‌.ಚಲುವರಾಯಸ್ವಾಮಿ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ಮಳವಳ್ಳಿಯಿಂದ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಶ್ರೀರಂಗಪಟ್ಟಣ ಕ್ಷೇತ್ರದಿಂದ ರಮೇಶ್‌ಬಾಬು ಬಂಡಿಸಿದ್ದೇಗೌಡ ಅವರ ಹೆಸರು ಘೋಷಣೆಯಾಗಿವೆ. ಮೇಲುಕೋಟೆ ಕ್ಷೇತ್ರದಲ್ಲಿ ಕರ್ನಾಟಕ ಸರ್ವೋದಯ ಪಕ್ಷದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ಅವರಿಗೆ ಕಾಂಗ್ರೆಸ್‌ ಬೆಂಬಲ ನೀಡುವುದು ಬಹುತೇಕ ಖಚಿತ.

ಇನ್ನುಳಿದ ಮಂಡ್ಯ, ಕೆ.ಆರ್‌.ಪೇಟೆ, ಮದ್ದೂರು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ಹೆಚ್ಚು ಆಕಾಂಕ್ಷಿಗಳಿರುವ ಕಾರಣ ಮೊದಲ ಪಟ್ಟಿಯಲ್ಲಿ ಹೆಸರು ಘೋಷಣೆಯಾಗಿಲ್ಲ. ಆರಂಭದಲ್ಲಿ ಅಭ್ಯರ್ಥಿ ಘೋಷಣೆ ಮಾಡಿದರೆ ಆಕಾಂಕ್ಷಿಗಳ ಅಸಮಾಧಾನಕ್ಕೆ ಕಾರಣವಾಗಬಹುದು ಎಂಬ ಹಿನ್ನೆಲೆಯಲ್ಲಿ ಈ ಕ್ಷೇತ್ರಗಳ ಹೆಸರುಗಳನ್ನು ಬಾಕಿ ಉಳಿಸಲಾಗಿದೆ.

ಮಂಡ್ಯ ಕ್ಷೇತ್ರದಲ್ಲಿ 15 ಮಂದಿ ಆಕಾಂಕ್ಷಿಗಳಿದ್ದರೂ ಪ್ರಮುಖವಾಗಿ ನಾಲ್ಕೈದು ಮಂದಿ ಕ್ಷೇತ್ರದಾಂತ್ಯಂತ ಸಂಚಾರ ನಡೆಸುತ್ತಿದ್ದಾರೆ. ಉಳಿದವರು ಅರ್ಜಿ ಸಲ್ಲಿಸಿ ಮೌನಕ್ಕೆ ಶರಣಾಗಿದ್ದಾರೆ. 2018ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದ ಗಣಿಗ ರವಿಕುಮಾರ್‌ಗೌಡ ಅವರು ಮತ್ತೊಮ್ಮೆ ಟಿಕೆಟ್‌ಗಾಗಿ ಪೈಪೋಟಿ ನೀಡುತ್ತಿದ್ದಾರೆ.

ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವ ಕೆ.ಕೆ.ರಾಧಾಕೃಷ್ಣ ಕೀಲಾರ ಅವರು ಕ್ಷೇತ್ರದಾದ್ಯಂತ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ. ಕ್ಷೇತ್ರದೆಲ್ಲೆಡೆ ವಿವಿಧ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದು ಕಾಂಗ್ರೆಸ್‌ ಟಿಕೆಟ್‌ಗಾಗಿ ಮುನ್ನೆಲೆಯಲ್ಲಿ ಹೋರಾಟ ನೀಡುತ್ತಿದ್ದಾರೆ. ಡಾ.ಎಚ್‌.ಕೃಷ್ಣ ಅವರು ಕೂಡ ಕ್ಷೇತ್ರದಾದ್ಯಂತ ಓಡಾಡುತ್ತಿದ್ದು ಟಿಕೆಟ್‌ ದೊರೆಯುವ ಭರವಸೆ ಹೊಂದಿದ್ದಾರೆ.

ಜೊತೆಗೆ ಎಂ.ಎಸ್‌.ಆತ್ಮಾನಂದ, ಅಮರಾವತಿ ಚಂದ್ರಶೇಖರ್‌ ಕೂಡ ವರಿಷ್ಠರ ಮಟ್ಟದಲ್ಲಿ ಟಿಕೆಟ್‌ಗಾಗಿ ಪ್ರಯತ್ನ ಮಾಡುತ್ತಿದ್ದಾರೆ. ಅಂತಿಮವಾಗಿ ಹೈಕಮಾಂಡ್‌ ಯಾರಿಗೆ ಮಣೆ ಹಾಕಲಿದೆ ಎಂಬುದು ಗೊತ್ತಾಗಬೇಕಿದೆ.

ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಹೊಸದಾಗಿ ಬಿ.ಎಲ್‌.ದೇವರಾಜು ಅವರು ಕೂಡ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಶುಕ್ರವಾರವಷ್ಟೇ ಜೆಡಿಎಸ್‌ಗೆ ರಾಜೀನಾಮೆ ಘೋಷಣೆ ಮಾಡಿದ್ದು ಮಾರ್ಚ್‌ 27ರಂದು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ. ವಿಜಯ್‌ ರಾಮೇಗೌಡ, ಮಲ್ಲಿಕಾರ್ಜುನ್‌ ಜೊತೆಗೆ ದೇವರಾಜು ಕೂಡ ಟಿಕೆಟ್‌ಗಾಗಿ ಮನವಿ ಮಾಡಿದ್ದಾರೆ.

ಮದ್ದೂರು ಕ್ಷೇತ್ರದಲ್ಲಿ ಹೆಚ್ಚು ಗೊಂದಲವಿಲ್ಲ, ಕದಲೂರು ಉದಯ್‌, ಗುರುಚರಣ್‌ ಇಬ್ಬರ ನಡುವೆ ಟಿಕೆಟ್‌ ಸ್ಪರ್ಧೆ ಇದೆ. ಈಗಾಗಲೇ ಒಬ್ಬರ ಹೆಸರು ಅಂತಿಮಗೊಂಡಿದ್ದು ಘೋಷಣೆಯಷ್ಟೇ ಬಾಕಿ ಇದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಮಂಡ್ಯದಲ್ಲೂ ಎಚ್‌ಡಿಕೆ ನಿಲ್ಲುವರೇ?

ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಚನ್ನಪಟ್ಟಣದ ಜೊತೆಗೆ ಮಂಡ್ಯ ಕ್ಷೇತ್ರದಲ್ಲೂ ಸ್ಪರ್ಧಿಸುತ್ತಾರೆ. ಆಗ ಕ್ಷೇತ್ರದಲ್ಲಿ ಕಾಂಗ್ರೆಸ್‌ ಲೆಕ್ಕಾಚಾರ ಬದಲಾಗಲಿದ್ದು ಹೊರಗಿನಿಂದ ಆಶ್ಚರ್ಯಕರ ಅಭ್ಯರ್ಥಿಯೊಬ್ಬರನ್ನು ಕರೆದು ತಂದು ಕಣಕ್ಕಿಳಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿವೆ.

ಇಂತಹ ಪರಿಸ್ಥಿತಿ ಎದುರಾದರೆ ಬಿಜೆಪಿಯಿಂದ ಸಂಸದೆ ಸುಮಲತಾ ಅವರೇ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿಯೂ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪರ ವಾತಾವರಣ ಇದೆ. ಜನರ ಪ್ರೀತಿ ಗಳಿಸಲು ಶ್ರಮಿಸುತ್ತಿದ್ದೇವೆ. ಕಾಂಗ್ರೆಸ್‌ ಪಕ್ಷದ ಭರವಸೆಗಳು ಜನರಿಗೆ ಇಷ್ಟವಾಗಿದ್ದು ನಮಗೆ ಬೆಂಬಲ ನೀಡುತ್ತಾರೆ

–ಎನ್‌.ಚಲುವರಾಯಸ್ವಾಮಿ, ನಾಗಮಂಗಲ ಕ್ಷೇತ್ರದ ಅಭ್ಯರ್ಥಿ

ಕಾಂಗ್ರೆಸ್‌ ಪಕ್ಷಕ್ಕೆ ಆಭಾರಿಯಾಗಿದ್ದೇನೆ. ನನ್ನದು ಅಭಿವೃದ್ಧಿಯ ರಾಜಕಾರಣ, ಕ್ಷೇತದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಧ್ಯೇಯ. ಕ್ಷೇತ್ರದ ಜನರ ಆಶೀರ್ವಾದದಿಂದ ಗೆದ್ದು ಬರುತ್ತೇನೆ

– ಪಿ.ಎಂ.ನರೇಂದ್ರಸ್ವಾಮಿ, ಮಳವಳ್ಳಿ ಕ್ಷೇತ್ರದ ಅಭ್ಯರ್ಥಿ

ಕ್ಷೇತ್ರದ ಜನರ ಪ್ರೀತಿಗಾಗಿ ಹಗಲಿರುಳು ಹೋರಾಡುತ್ತಿದ್ದೇನೆ, ಜನರು ನನ್ನ ಪರ ನಿಲ್ಲುತ್ತಾರೆ ಎಂಬ ವಿಶ್ವಾಸವಿದೆ. ಅಂತಹ ವಾತಾವರಣವೂ ಸೃಷ್ಟಿಯಾಗಿದೆ

– ರಮೇಶ್‌ಬಾಬು ಬಂಡಿಸಿದ್ದೇಗೌಡ, ಶ್ರೀರಂಗಪಟ್ಟಣ ಕ್ಷೇತ್ರದ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT