ಗುರುವಾರ , ಮಾರ್ಚ್ 30, 2023
24 °C
ಆಮೆಗತಿಯಲ್ಲಿ ತಂತ್ರಾಂಶ ಅಳವಡಿಕೆ ಕಾರ್ಯ, 6 ತಿಂಗಳಿಂದ ನಡೆದ ಖಾತೆ ಪ್ರಕ್ರಿಯೆ

ಮಂಡ್ಯ: 'ಕಾವೇರಿ' ಗೊಂದಲ, ಆಸ್ತಿ ಖಾತೆಗಾಗಿ ಪರದಾಟ

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಜಿಲ್ಲೆಯ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ‘ಕಾವೇರಿ ತಂತ್ರಾಂಶ’ ಅಳವಡಿಕೆ ಕಾರ್ಯ ಪೂರ್ಣಗೊಳ್ಳದ ಪರಿಣಾಮ ಕಳೆದ 6 ತಿಂಗಳಿಂದ ಹೊಸದಾಗಿ ನೋಂದಣಿಯಾಗುವ ಆಸ್ತಿಗಳ ಖಾತೆಗಾಗಿ ಸಾರ್ವಜನಿಕರು ಪರದಾಡುವಂತಾಗಿದೆ.

ಆಸ್ತಿ ನೋಂದಣಿ ವೇಳೆ ನಡೆಯುತ್ತಿದ್ದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸರ್ಕಾರ ಇ–ತಂತ್ರಾಂಶವನ್ನು ಹೊಸದಾಗಿ ರೂಪಿಸಲಾಗಿದ್ದ ಕಾವೇರಿ ತಂತ್ರಾಂಶದೊಂದಿಗೆ ಜೋಡಣೆ ಮಾಡಿತ್ತು. ಇದನ್ನು ರಾಜ್ಯದಾದ್ಯಂತ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ರಾಮನಗರ ಹಾಗೂ ಕನಕಪುರ ತಾಲ್ಲೂಕುಗಳನ್ನು ಆಯ್ಕೆ ಮಾಡಲಾಗಿತ್ತು. ಅನುಷ್ಠಾನ ಜವಾಬ್ದಾರಿಯನ್ನು ನೋಂದಣಿ ಹಾಗೂ ಮುದ್ರಾಂಕ ಇಲಾಖೆಗೆ ನೀಡಲಾಗಿತ್ತು.

2ನೇ ಹಂತದಲ್ಲಿ ಕಾವೇರಿ ತಂತ್ರಾಂಶವನ್ನು ರಾಜ್ಯದ 65 ತಾಲ್ಲೂಕುಗಳಲ್ಲಿ ಅನುಷ್ಠಾನಗೊಳಿಸಲಾಯಿತು. ಅದರಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಆಯ್ಕೆ ಮಾಡಲಾಯಿತು. ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ, ನಗರಸಭೆ ಸೇರಿ ಎಲ್ಲಾ ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಜಾರಿಗೊಳಿಸಲಾಯಿತು. ಹೊಸದಾಗಿ ನೋಂದಣಿಯಾದ ಆಸ್ತಿಯನ್ನು ಕಾವೇರಿ ತಂತ್ರಾಂಶದ ಮೂಲಕವೇ ಖಾತೆ ಮಾಡಬೇಕು ಎಂದು ಸೂಚನೆ ನೀಡಲಾಗಿತ್ತು.

ಆದರೆ ತಂತ್ರಾಂಶ ಅಳವಡಿಕೆ ಪ್ರಕ್ರಿಯೆ ಆಮೆಗತಿಯಲ್ಲಿ ನಡೆಯುತ್ತಿರುವ ಕಳೆದ 6 ತಿಂಗಳಿಂದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಯಾದ ಆಸ್ತಿಯನ್ನು ಖಾತೆ ಮಾಡಲು ಸಾಧ್ಯವಾಗುತ್ತಿಲ್ಲ. ಆಸ್ತಿ, ನಿವೇಶನ ಖರೀದಿಸಿದರು, ಖಾತೆ ಬದಲಾವಣೆ ಬಯಸುವವರು ನಿತ್ಯ ಕಚೇರಿಗಳಿಗೆ ಅಲೆದಾಡಿ ಹೈರಾಣಾಗಿದ್ದಾರೆ. ಕೋವಿಡ್‌ ಕಾರಣ ನೀಡುತ್ತಿರುವ ನಗರ, ಸ್ಥಳೀಯ ಸಂಸ್ಥೆ ಅಧಿಕಾರಿಗಳು ಖಾತೆ ಪ್ರಕ್ರಿಯೆಯನ್ನು ಮುಂದೂಡುತ್ತಲೇ ಬಂದಿದ್ದಾರೆ.

‘ಮಂಡ್ಯ ನಗರಸಭೆ ವ್ಯಾಪ್ತಿಯ ನಿವೇಶನ ಖರೀದಿಸಿ 5 ತಿಂಗಳಾಗಿದೆ. ಲಕ್ಷಾಂತರ ರೂಪಾಯಿ ಕೈಸಾಲ ಮಾಡಿದ್ದೇನೆ. ನಿವೇಶನ ಆಧಾರ ಮಾಡಿ ಬ್ಯಾಂಕ್‌ನಲ್ಲಿ ಸಾಲ ಮಾಡಿ ಕೈಸಾಲ ತೀರಿಸುವ ಯೋಚನೆ ಇತ್ತು. ಪತ್ನಿಯ ಹೆಸರಿಗೆ ಆಸ್ತಿ ಖಾತೆಯಾಗದ ಕಾರಣ ಬ್ಯಾಂಕ್‌ನಲ್ಲಿ ಸಾಲ ದೊರೆಯುತ್ತಿಲ್ಲ. ಕೋವಿಡ್‌ ಕಡಿಮೆಯಾಗುತ್ತಿದ್ದು ಈಗಲಾದರೂ ಹೊಸ ತಂತ್ರಾಂಶವನ್ನು ಪೂರ್ಣ ಪ್ರಮಾಣದಲ್ಲಿ ಅಳವಡಿಸಬೇಕು’ ಎಂದು ನಗರದ ಅತಿಥಿ ಉಪನ್ಯಾಸಕ ಮಂಜುನಾಥ್‌ ಒತ್ತಾಯಿಸಿದರು.

ಮುಡಾ ಅಭಿವೃದ್ಧಿಗೊಳಿಸಿರುವ ನಿವೇಶನ, ಮಂಡ್ಯ ನಗರಸಭೆ, ಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್‌.ಪೇಟೆ, ನಾಗಮಂಗಲ, ಮದ್ದೂರು ಪುರಸಭೆ, ಬೆಳ್ಳೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇದೇ ಸಮಸ್ಯೆಯಾಗಿದ್ದು ಸಾವಿರಾರು ಜನರ ಆಸ್ತಿಗಳು ಖಾತೆಯಾಗದೇ ಬಾಕಿ ಉಳಿದಿವೆ.

ಮೊದಲು ಹೇಗಿತ್ತು?: ಕಳೆದ ವರ್ಷ ಇ–ತಂತ್ರಾಂಶವನ್ನು ‘ಕಾವೇರಿ’ಯೊಂದಿಗೆ ಜೋಡಣೆ ಮಾಡಲಾಗಿದ್ದು ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದೆ. ಆದರೆ ಮಂಡ್ಯ ಜಿಲ್ಲೆಯಲ್ಲಿ ಹೊಸ ತಂತ್ರಾಂಶ ಅಳವಡಿಕೆ ಕಾರ್ಯ ಪೂರ್ಣಗೊಂಡಿಲ್ಲ. ಇದಕ್ಕೂ ಮೊದಲು ನೋಂದಣಿಯಾದ ಆಸ್ತಿಗಳ ಖಾತೆ ಪ್ರಕ್ರಿಯೆ ಭೌತಿಕವಾಗಿ ನಡೆಯುತ್ತಿತ್ತು. ಉಪ ನೋಂದಣಾಧಿಕಾರಿ ಕಚೇರಿಯಿಂದ ಬಂದ ದಾಖಲಾತಿಯನ್ನು ಸ್ಥಳೀಯ ಸಂಸ್ಥೆಯಲ್ಲಿರುವ ಇ–ತಂತ್ರಾಂಶದಲ್ಲಿ ದಾಖಲು ಮಾಡಿ ಖಾತೆ ಮಾಡಲಾಗುತ್ತಿತ್ತು.

ಆದರೆ ಸದ್ಯ ಇ–ತಂತ್ರಾಂಶಕ್ಕೆ ಆಸ್ತಿ ದಾಖಲಾತಿ ವಿವಿರ ನಮೂದು ಮಾಡಿದರೆ ಅದು ತಿರಸ್ಕಾರಗೊಳ್ಳುತ್ತಿದೆ. ಭೌತಿಕವಾಗಿಯೂ ಖಾತೆ ನಡೆಯದ ಕಾರಣ ಸಾರ್ವಜನಿಕರು ಆಸ್ತಿಯ  ಮೇಲೆ ಯಾವುದೇ ಚಟುವಟಿಕೆ ಮಾಡಲು ಸಾಧ್ಯವಾಗುತ್ತಿಲ್ಲ.

‘ನಿತ್ಯ ಕಚೇರಿಗೆ ಬರುವ ಜನರಿಗೆ ಕೋವಿಡ್‌ ಕಾರಣ ನೀಡಲಾಗುತ್ತಿದೆ. ಈ ವಿಚಾರವನ್ನು ನಗರಾಭಿವೃದ್ಧಿ ಇಲಾಖೆ ಗಮನಕ್ಕೆ ತರಲಾಗಿದೆ’  ಎಂದು ನಗರಸಭೆ ಪೌರಾಯುಕ್ತ ಎಸ್‌.ಲೋಕೇಶ್ ಹೇಳಿದರು.

ಜಿಲ್ಲಾಧಿಕಾರಿ 3 ಬಾರಿ ಪತ್ರ
ಕಾವೇರಿ ತಂತ್ರಾಂಶ ಅಳವಡಿಕೆಯಾಗದ ಪರಿಣಾಮ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿ ನಗರಾಭಿವೃದ್ಧಿ ಇಲಾಖೆ ನಿರ್ದೇಶಕರಿಗೆ 3 ಬಾರಿ ಪತ್ರ ಬರೆದಿದ್ದಾರೆ. ಇಷ್ಟಾದರೂ ಸಮಸ್ಯೆ ಬಗೆಹರಿಯದಿರುವ ಕಾರಣ ಸಾರ್ವಜನಿಕರಿಗೆ ತೊಂದರೆಯಾಗಿದೆ.

‘ಕಾವೇರಿ ತಂತ್ರಾಂಶದಿಂದ ಉಂಟಾಗಿರುವ ಗೊಂದಲಗಳ ಬಗ್ಗೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನನ್ನ ಗಮನಕ್ಕೆ ತಂದಿದ್ದಾರೆ. ನಗರಾಭಿವೃದ್ಧಿ ಇಲಾಖೆಗೆ ಇನ್ನೊಮ್ಮೆ ಪತ್ರ ಬರೆಯುತ್ತೇನೆ’ ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವತಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು