ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಮ್ಮಾಯಿ ಸಂಪುಟ: ಬಿಎಸ್‌ವೈ ನಿಷ್ಠ ನಾರಾಯಣಗೌಡರಿಗೆ ಮತ್ತೆ ಸ್ಥಾನ

2ನೇ ಬಾರಿ ಸಚಿವರಾದ ಕೆಸಿಎನ್‌, ಹಳೇ ಮೈಸೂರು ಭಾಗದ ಏಕೈಕ ಸಚಿವ
Last Updated 4 ಆಗಸ್ಟ್ 2021, 12:38 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಗೆಲ್ಲಿಸಿದ ಕೀರ್ತಿ ಹೊತ್ತಿರುವ ಕೆ.ಆರ್‌.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡ 2ನೇ ಬಾರಿಗೆ ರಾಜ್ಯದ ಸಚಿವರಾಗಿ ಬುಧವಾರ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ನಿಷ್ಠರಾಗಿದ್ದ ನಾರಾಯಣಗೌಡರು ಮಂತ್ರಿಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಹಳೇ ಮೈಸೂರು ಭಾಗಕ್ಕೆ ಪ್ರಾತಿನಿಧ್ಯ ದೊರೆತಿಲ್ಲ ಎನ್ನುವ ಕೊರಗಿನ ನಡುವೆಯೇ ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ ಜಿಲ್ಲೆಗಳ ಪ್ರತಿನಿಧಿಯಾಗಿ ನಾರಾಯಣಗೌಡರು ಸಚಿವರಾಗಿದ್ದಾರೆ. ಅವರು ಸಚಿವರಾಗುವ ಬಗ್ಗೆ ಸಾಕಷ್ಟು ಊಹಾಪೋಹಗಳು ಸೃಷ್ಟಿಯಾಗಿದ್ದವು, ಆ ಕುರಿತು ಜಿಲ್ಲೆಯಾದ್ಯಂತ ಚರ್ಚೆ ಆರಂಭಗೊಂಡಿತ್ತು.

ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ನಾರಾಯಣಗೌಡರು ಸಚಿವರಾಗುವುದು ಕಷ್ಟ ಎಂಬೆಲ್ಲಾ ಚರ್ಚೆಗಳು ನಡೆಯುತ್ತಿದ್ದವು. ಆದರೆ ಎಲ್ಲಾ ಊಹಾಪೋಹಗಳಿಗೆ ತಡೆ ಬಿದ್ದಿದ್ದು ನಾರಾಯಣಗೌಡರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಬಿ.ಎಸ್‌.ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ ನಂತರ ನಾರಾಯಣಗೌಡರು ಬೆಂಗಳೂರಿನಲ್ಲೇ ಮೊಕ್ಕಾಂ ಹೂಡಿದ್ದರು. ಜಿಲ್ಲೆಯಲ್ಲಿ ನಿಗದಿಯಾಗಿದ್ದ ಹಲವು ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು. ಸ್ಥಾನಕ್ಕಾಗಿ ಸಕಲ ಪ್ರಯತ್ನ ನಡೆಸಿದ್ದ ನಾರಾಯಣಗೌಡರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಎಸ್‌ವೈ ನಿಷ್ಠ: ಬಿಜೆಪಿ ಸೇರಿ ಸರ್ಕಾರ ರಚನೆಗೆ ಸಹಾಯ ಮಾಡಿದ ಶಾಸಕರ ತಂಡದಲ್ಲಿ ನಾರಾಯಣಗೌಡರೂ ಒಬ್ಬರು. ಆ ತಂಡದ ಬಹುತೇಕ ಮಂದಿಗೆ ಸಚಿವ ಸ್ಥಾನ ಸಿಕ್ಕಿದೆ, ಹಲವರನ್ನು ಕೈಬಿಟ್ಟಿದ್ದಾರೆ. ಹೊಸಬರಿಗೆ ಅವಕಾಶ ನೀಡುವ ದೃಷ್ಟಿಯಿಂದ ನಾರಾಯಣಗೌಡರನ್ನೂ ಕೈಬಿಡುತ್ತಾರೆ ಎನ್ನಲಾಗುತ್ತಿತ್ತು. ಆದರೆ ನಾರಾಯಣಗೌಡ ಸಂಪುಟ ಸೇರಿ ಆಶ್ಚರ್ಯ ಸೃಷ್ಟಿ ಮಾಡಿದ್ದಾರೆ.

ನಾರಾಯಣಗೌಡರು ಮೊದಲಿನಿಂದಲೂ ಬಿ.ಎಸ್‌.ಯಡಿಯೂರಪ್ಪ ಅವರಿಗೆ ನಿಷ್ಠರಾಗಿಯೇ ಹೆಜ್ಜೆ ಇಡುತ್ತಿದ್ದಾರೆ. ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರ ಅಣತಿಯಂತೆಯೇ ನಡೆದುಕೊಳ್ಳುತ್ತಾರೆ. ವಿಧಾನಸಭಾ ಉಪಚುನಾವಣೆ ಸಂದರ್ಭದಲ್ಲಿ ವಿಜಯೇಂದ್ರ ಚುನಾವಣೆಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದರು. ಬಿಜೆಪಿ ಗೆಲುವನ್ನು ವಿಜಯೇಂದ್ರ ಗೆಲುವು ಎಂದೇ ಬಣ್ಣಿಸಲಾಗಿತ್ತು. ಜಿಲ್ಲೆಯಲ್ಲಿ ಪ್ರತಿ ಯೋಜನೆ ಅನುಷ್ಠಾನದಲ್ಲಿ ವಿಜಯೇಂದ್ರ ಪ್ರಮುಖ ಪಾತ್ರ ವಹಿಸುತ್ತಿದ್ದರು.

ಯಡಿಯೂರಪ್ಪ ಅವರಿಗೆ ನಿಷ್ಠರಾಗಿದ್ದ ಕಾರಣಕ್ಕೆ ನಾರಾಯಣಗೌಡರಿಗೆ ಮತ್ತೊಮ್ಮೆ ಸಚಿವರಾಗುವ ಅದೃಷ್ಟ ಒಲಿದು ಬಂದಿದೆ. ಜೆಡಿಎಸ್‌ ಭದ್ರಕೋಟೆಯಾಗಿರುವ ಜಿಲ್ಲೆಯಲ್ಲಿ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಏಕೈಕ ಬಿಜೆಪಿ ಶಾಸಕರಾಗಿರುವ ನಾರಾಯಣಗೌಡರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದೇ ಹೇಳಲಾಗುತ್ತಿದೆ.

‘ಜಿಲ್ಲೆಯ ಮಗ ಬಿ.ಎಸ್‌.ಯಡಿಯೂರಪ್ಪ, ಮೊಮ್ಮಗ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲೇ ಜಿಲ್ಲೆಯ ಅಭಿವೃದ್ಧಿ ನಡೆಯಲಿದೆ ಎಂದು ನಾರಾಯಣಗೌಡರು ಮೊದಲೇ ಘೋಷಿಸಿದ್ದರು. ಮೊದಲನಿಂದಲೂ ಅಪ್ಪ–ಮಗನಿಗೆ ನಿಷ್ಠರಾಗಿದ್ದರು. ಅದು ಮತ್ತೆ ಸಚಿವ ಸ್ಥಾನ ದೊರಕುವಲ್ಲಿ ಪ್ರಮುಖ ಪಾತ್ರ ವಹಿಸಿದೆ’ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

ಸಂಭ್ರಮ: ಕೆ.ಸಿ.ನಾರಾಯಣಗೌಡರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ ನಗರದ ವಿವಿಧೆಡೆ ಬಿಜೆಪಿ ಕಾರ್ಯರ್ಕತರು, ನಾರಾಯಣಗೌಡ ಬೆಂಬಲಿಗರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕೆ.ಆರ್‌.ಪೇಟೆ ಪಟ್ಟಣದಲ್ಲೂ ಕಾರ್ಯಕರ್ತರು ಸಂಭ್ರಮ ಆಚರಿಸಿದರು.

40 ಕ್ಷೇತ್ರಗಳ ಪ್ರತಿನಿಧಿ

ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿರುವ ನಾರಾಯಣಗೌಡ ಸದ್ಯ ಉತ್ತಮ ಖಾತೆಯ ನಿರೀಕ್ಷೆಯಲ್ಲಿದ್ದಾರೆ. ಹಳೇ ಮೈಸೂರು ಭಾಗದ ಏಕೈಕೆ ಸಚಿವರಾಗಿರುವ ಅವರಿಗೆ ಉತ್ತಮ ಖಾತೆಯನ್ನೇ ಹಂಚಿಕೆ ಮಾಡುತ್ತಾರೆ ಎಂದು ಅವರ ಬೆಂಬಲಿಗರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ನಾರಾಯಣಗೌಡರು ಮೈಸೂರು ವಿಭಾಗದ 40 ವಿಧಾನಸಭಾ ಕ್ಷೇತ್ರಗಳ ಪ್ರತಿನಿಧಿಯಾಗಿದ್ದಾರೆ. ಹೀಗಾಗಿ ಉತ್ತಮ ಖಾತೆಯನ್ನೇ ನೀಡಬೇಕು ಎಂದು ಮನವಿ ಮಾಡಿದ್ದೇವೆ. ನಮ್ಮ ಬೇಡಿಕೆ ಈಡೇರುವ ವಿಶ್ವಾಸವಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜೆ.ವಿಜಯ್‌ಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT