ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಸಚಿವ ನಾರಾಯಣಗೌಡರಿಗೆ ಸಮಸ್ಯೆಗಳ ಸವಾಲು

ಜೆಡಿಎಸ್‌ ಶಾಸಕರನ್ನು ನಿರ್ವಹಿಸುವುದೇ ದೊಡ್ಡ ಪರೀಕ್ಷೆ, ಕೆ.ಆರ್‌.ಪೇಟೆಗೆ ಮಾತ್ರ ಸೀಮಿತವಾಗದಿರಿ
Last Updated 5 ಆಗಸ್ಟ್ 2021, 12:46 IST
ಅಕ್ಷರ ಗಾತ್ರ

ಮಂಡ್ಯ: ನೂತನ ಸಚಿವ ಕೆ.ಸಿ.ನಾರಾಯಣಗೌಡ ಅವರಿಗೆ ಮತ್ತೊಮ್ಮೆ ಜಿಲ್ಲಾ ಉಸ್ತುವಾರಿ ಸಿಗುವುದು ಖಚಿತವಾಗಿದೆ. ಅವರ ಮುಂದಿನ ಹಾದಿ ಹೂವಿನ ಹಾಸಿಗೆಯೇನೂ ಅಲ್ಲ, ಜಿಲ್ಲೆಯನ್ನು ಕಾಡುತ್ತಿರುವ ಸಮಸ್ಯೆಗಳನ್ನು ನಿರ್ವಹಿಸುವುದೇ ಅವರ ಮುಂದಿನ ಬಲುದೊಡ್ಡ ಸವಾಲಾಗಿದೆ.

ಎರಡು ವರ್ಷದೊಳಗೆ ವಿಧಾನಸಭಾ ಚುನಾವಣೆ ಬರುತ್ತಿರುವ ಕಾರಣ ಜಿಲ್ಲೆಯಲ್ಲಿ ಬಿಜೆಪಿ ಕಟ್ಟುವುದು ನಾರಾಯಣಗೌಡರ ಮುಂದಿರುವ ಬಹುಮುಖ್ಯವಾದ ಸವಾಲಾಗಿದೆ. ಕಳೆದ ವಿಧಾನಸಭಾ ಉಪ ಚುನಾವಣೆ ಅವಧಿಯಲ್ಲಿ ಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ವಹಿಸಿಕೊಂಡಿದ್ದರು. ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿ ಗೆದ್ದ ನಂತರ ಅದು ವಿಜಯೇಂದ್ರ ಅವರ ಗೆಲುವು ಎಂದೇ ಹೇಳಲಾಗಿತ್ತು.

ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಷ್ಟು ದಿನ ಜಿಲ್ಲೆಯಲ್ಲಿ ಕೈಗೊಳ್ಳಲಾಗುತ್ತಿದ್ದ ಪ್ರಮುಖ ನಿರ್ಧಾರಗಳ ಹಿಂದೆ ವಿಜಯೇಂದ್ರ ಅವರ ನೆರಳಿತ್ತು. ಈಗ ಯಡಿಯೂರಪ್ಪ ರಾಜೀನಾಮೆ ನೀಡಿರುವ ಕಾರಣ ವಿಜಯೇಂದ್ರ ಸರ್ಕಾರದ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ನಾರಾಯಣಗೌಡರು ಸ್ವತಂತ್ರರಾಗಿದ್ದು ಮುಂದಿನ ಸವಾಲಿನ ಹಾದಿಯನ್ನು ಅವರೊಬ್ಬರೇ ನಿರ್ವಹಣೆ ಮಾಡಬೇಕಾಗಿದೆ. ಅವರು ತಮ್ಮ ಸಾಮರ್ಥ್ಯ ತೋರಿಸಬೇಕಾದ ಸವಾಲು ಎದುರಾಗಿದೆ.

‘ನಾರಾಯಣಗೌಡರು ಕೆ.ಆರ್‌.ಪೇಟೆ ತಾಲ್ಲೂಕಿಗಷ್ಟೇ ಸೀಮಿತವಾಗಿದ್ದಾರೆ ಎಂಬ ಆರೋಪವಿದೆ. ಇನ್ನು ಮುಂದೆ ಅವರು ಎಲ್ಲಾ 7 ತಾಲ್ಲೂಕಿಗೆ ಸಚಿವರಾಗಿ ಕೆಲಸ ಮಾಡಬೇಕು. ಜಿಲ್ಲೆಯ ಸಂಪೂರ್ಣ ಆಗುಹೋಗುಗಳನ್ನು ಅರ್ಥಮಾಡಿಕೊಂಡು ಜಿಲ್ಲಾಡಳಿತಕ್ಕೆ ಚುರುಕು ನೀಡುವಂತಹ ಕೆಲಸವಾಗಬೇಕು. ಕೆಳ ಹಂತದ ಅಧಿಕಾರಿ ವರ್ಗ ನಿಂತ ನೀರಾಗಿದ್ದು ಆಡಳಿತ ಯಂತ್ರದ ವೇಗ ಹೆಚ್ಚಿಸಬೇಕು’ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

ಜೆಡಿಎಸ್‌ ಶಾಸಕರ ಸವಾಲು: ಕೆ.ಆರ್‌.ಪೇಟೆ ಹೊರತುಪಡಿಸಿ ಉಳಿದ 6 ತಾಲ್ಲೂಕುಗಳಲ್ಲಿ ಜೆಡಿಎಸ್‌ ಶಾಸಕರಿದ್ದಾರೆ. ಜೆಡಿಎಸ್‌ನ ಮೂವರು ವಿಧಾನಪರಿಷತ್‌ ಸದಸ್ಯರಿದ್ದಾರೆ. ಇವರನ್ನು ವಿಶ್ವಾಸಕ್ಕೆ ಪಡೆದು ನಿರ್ವಹಣೆ ಮಾಡುವುದು ನಾರಾಯಣಗೌಡರ ಮುಂದಿರುವ ಸವಾಲಾಗಿದೆ.

‘ಪ್ರತಿ ಸಭೆಗಳಿಗೆ ಸಂಪೂರ್ಣ ಮಾಹಿತಿಯ ಜೊತೆ ಬರುವ ಜೆಡಿಎಸ್‌ ಶಾಸಕರನ್ನು ನಿಭಾಯಿಸುವುದು ನಾರಾಯಣಗೌಡರಿಗೆ ಸುಲಭವಲ್ಲ. ನಾರಾಯಣಗೌಡರು ಕೂಡ ಸಮಗ್ರ ಮಾಹಿತಿಯೊಂದಿಗೆ ಆಡಳಿತ ಮುನ್ನಡೆಸುವುದು ಅನಿವಾರ್ಯ’ ಎಂಬ ಮಾತುಗಳು ನಿಚ್ಚಳವಾಗಿವೆ.

ಮೈಷುಗರ್‌ ಕಾರ್ಖಾನೆ ಈ ವರ್ಷವೂ ಆರಂಭವಾಗಿಲ್ಲ, ಕಾರ್ಖಾನೆ ವ್ಯಾಪ್ತಿಯ ಕಬ್ಬನ್ನು ಅನ್ಯ ಜಿಲ್ಲೆಗಳ ಕಾರ್ಖಾನೆಗಳಿಗೆ ಸಾಗಣೆ ಮಾಡಲು ಜಿಲ್ಲಾಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ. ಆದರೆ ಸಾಗಣೆ ವೆಚ್ಚವನ್ನು ಕಾರ್ಖಾನೆ ವತಿಯಿಂದಲೇ ಭರಿಸಬೇಕು ಎಂಬುದು ರೈತರ ಒತ್ತಾಯವಾಗಿದೆ. ಕಬ್ಬು, ರೈತರ ಬದುಕಾಗಿದ್ದು ರೈತರ ಹಿತ ಕಾಯಬೇಕಾದ ಜವಾಬ್ದಾರಿ ನಾರಾಯಣಗೌಡರ ಮೇಲಿದೆ.

ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದಿರುವ ಹಾಲಿಗೆ ನೀರು ಬೆರೆಸಿದ ಹಗರಣದ ತನಿಖೆಯ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಭ್ರಷ್ಟಾಚಾರ ಎಸಗಿದವರನ್ನು ಸರ್ಕಾರವೇ ರಕ್ಷಣೆ ಮಾಡುತ್ತಿದೆ ಎಂದೇ ಹೇಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನೂತನ ಜಿಲ್ಲಾ ಉಸ್ತುವಾರಿ ಸಚಿವರ ಮೇಲಿದೆ.

‘ಘಟನೆ ನಡೆದು ಮೂರು ತಿಂಗಳಾಗಿದ್ದರೂ ಪ್ರಕರಣದ ಬಗ್ಗೆ ಸ್ಪಷ್ಟತೆ ಇಲ್ಲ. ಮೈಷುಗರ್‌ ನಿಂತು ಹೋದ ಸಂದರ್ಭದಲ್ಲಿ ಹೈನುಗಾರಿಕೆ ರೈತರನ್ನು ಕೈಹಿಡಿದಿದೆ. ನಾರಾಯಣಗೌಡರು ಜಿಲ್ಲಾ ಹಾಲು ಒಕ್ಕೂಟವನ್ನು ರಕ್ಷಣೆ ಮಾಡಬೇಕು’ ಎಂದು ರೈತ ನಾಗರಾಜ್‌ ಒತ್ತಾಯಿಸಿದರು.

ವಿಶ್ವಾಸ ಪಡೆಯುವ ಸವಾಲು

ಕೆ.ಆರ್‌.ಪೇಟೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ನಂತರ ಇತರ ಕ್ಷೇತ್ರಗಳಲ್ಲಿಯೂ ಬಿಜೆಪಿಗೆ ಶಕ್ತಿ ಬಂದಂತಾಗಿದೆ. ಮುಂಬರುವ ಚುನಾವಣೆಯ ಮೇಲೆ ಕಣ್ಣಿಟ್ಟು ಕೆಲಸ ಮಾಡುತ್ತಿರುವ ಮುಖಂಡರು ಹೆಚ್ಚುತ್ತಿದ್ದಾರೆ. ಜೊತೆಗೆ ಜಿ.ಪಂ, ತಾಪಂ ಚುನಾವಣೆಯೂ ಹೊಸ್ತಿಲಲ್ಲಿರುವ ಕಾರಣ ಎಲ್ಲರನ್ನೂ ವಿಶ್ವಾಸದಿಂದ ಮುನ್ನಡೆಸುವ ಜವಾಬ್ದಾರಿ ನಾರಾಯಣಗೌಡರ ಮೇಲಿದೆ.

‘ನಾರಾಯಣಗೌಡರ ಜೊತೆ ಪಕ್ಷದ ಹಿರಿಯ ಮುಖಂಡರು ನಿಲ್ಲುತ್ತಾರೆ. ಹೀಗಾಗಿ ಅವರು ಎಲ್ಲಾ ಸವಾಲುಗಳನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ’ ಎಂದು ಬಿಜೆಪಿ ಮುಖಂಡ ಕೆ.ಎಸ್‌.ನಂಜುಂಡೇಗೌಡ ಹೇಳಿದರು.

ಜನವರಿಯಿಂದ ನಾಲೆಗೆ ನೀರಿಲ್ಲ?

ವಿಶ್ವೇಶ್ವರಯ್ಯ ನಾಲೆ ಆಧುನೀಕರಣಕ್ಕಾಗಿ ಬೇಸಿಗೆ ಬೆಳೆಗೆ ನೀರು ತಪ್ಪಿಸಲಾಗುತ್ತದೆ, ಜನವರಿಯಿಂದ ನಾಲೆಗಳಲ್ಲಿ ನೀರು ಸ್ಥಗಿತಗೊಳ್ಳಲಿದೆ ಎಂಬ ಸುದ್ದಿ ಹರಿದಾಡುತ್ತಿದ್ದು ರೈತರನ್ನು ಕಂಗೆಡಿಸಿದೆ. ಈ ವಿಚಾರದಲ್ಲಿ ಕಾವೇರಿ ನೀರಾವರಿ ನಿಗಮ ರೈತರಿಗೆ ಯಾವುದೇ ಸೂಚನೆ ನೀಡಿಲ್ಲ. ಒಂದು ವರ್ಷದ ಬೆಳೆ ಬಲಿಕೊಟ್ಟು ಕಾಮಗಾರಿ ನಡೆಸುವುದು ಬೇಡ ಎಂದೇ ರೈತರು ಒತ್ತಾಯಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಿಗಮ ಹಾಗೂ ರೈತರ ನಡುವೆ ಸಮನ್ವಯ ಸಾಧಿಸಬೇಕಾಗಿದೆ.

‘ಸಚಿವ ನಾರಾಯಣಗೌಡರು ಕಾಮಗಾರಿಯ ಬಗ್ಗೆ ಸ್ಪಷ್ಟಪಡಿಸಬೇಕು. ಕಾಮಗಾರಿ ಮಖ್ಯವೋ, ರೈತರ ಬದುಕು ಮುಖ್ಯವೋ ಎಂಬ ಬಗ್ಗೆ ತಿಳಿಸಬೇಕು. ಬೆಳೆ ಹಾಕಬೇಕೋ, ಬೇಡವೋ ಎಂಬ ಬಗ್ಗೆಯೂ ಸ್ಪಷ್ಟ ಸೂಚನೆ ನೀಡಬೇಕು’ ಎಂದು ರೈತ ಸಂಘದ ಮುಖಂಡ ಬಸವರಾಜು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT