ಸೋಮವಾರ, ಮೇ 23, 2022
20 °C
ಹಾಲುಮತಸ್ಥ ಸಮುದಾಯದವರಿಂದ ದೇವಿಗೆ ಪೂಜಾ ಕೈಂಕರ್ಯ; ವಿವಿಧ ಬೀದಿಗಳಲ್ಲಿ ಸಾಗಿದ ಉತ್ಸವ

ಕಿಕ್ಕೇರಮ್ಮ ರಥೋತ್ಸವದಲ್ಲಿ ಜನಸಾಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಿಕ್ಕೇರಿ: ಇಲ್ಲಿನ ಕಿಕ್ಕೇರಮ್ಮನವರ ಜಾತ್ರೆ ಸಹಸ್ರಾರು ಭಕ್ತರ ಸಂಭ್ರಮದೊಂದಿಗೆ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.

ಸಂಜೆ 5.15ಕ್ಕೆ ಹಾಲುಮತಸ್ಥ ಸಮುದಾಯದವರು ದೇವಿಗೆ ಪೂಜೆ ಸಲ್ಲಿಸುವ ಮೂಲಕ ಉತ್ಸವ ಶುರುವಾಯಿತು. ಕಿಕ್ಕೇರಮ್ಮನ ಪರವಾದ ಘೋಷಣೆಗಳು ಮೆರುಗು ನೀಡಿದವು.

ನೂತನ ರಥ ಪೂಜೆ, ಬಲಿ, ಧ್ವಜಪಟ ಪೂಜೆ, ಕಳಸ ಪೂಜಾ ವಿಧಾನಗಳು ನಡೆದವು. ಗ್ರಾಮವನ್ನು ತಳಿರು ತೋರಣ, ರಂಗೋಲಿ, ವಿದ್ಯುತ್‌ ದೀಪಗಳಿಂದ ಶೃಂಗರಿಸಲಾಗಿತ್ತು.

ಉತ್ಸವ ಮೂರ್ತಿ ಹೊಸಬೀದಿ, ರಥಬೀದಿ, ಕೆ.ಎಸ್.ನರಸಿಂಹಸ್ವಾಮಿ ಬೀದಿ, ಸುಬ್ಬರಾಯರ ಛತ್ರದ ಬೀದಿ, ಬ್ರಹ್ಮೇಶ್ವರ ದೇಗುಲ ಬೀದಿಯಲ್ಲಿ ಮಂಗಳವಾದ್ಯಗಳೊಂದಿಗೆ ಸಾಗಿತು. ಭಕ್ತರು ದೇವಿಗೆ ಹಣ್ಣು, ಕಾಯಿ ಅರ್ಪಿಸಿ, ಆರತಿ ಬೆಳಗಿದರು. ನಂತರ ದೇವಿಯನ್ನು ರಥದ ಸುತ್ತ ಪ್ರದಕ್ಷಿಣೆ ಹಾಕಿಸಿ ಮಹಾರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಮಹಾಪೂಜೆ ಸಲ್ಲಿಸಲಾಯಿತು.

ಸುತ್ತಮುತ್ತಲ ಹಳ್ಳಿಗಳಲ್ಲದೆ, ಜಿಲ್ಲೆ, ರಾಜ್ಯ, ಮುಂಬೈನಿಂದಲೂ ಬಂದಿದ್ದ ಭಕ್ತರು ದೇವಿಯ ದರ್ಶನ ಪಡೆದು ಹಣ್ಣು, ದವನ ಎಸೆದರು.

ರಥೋತ್ಸವದ ಅಂಗವಾಗಿ ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು ನೀರು ಮಜ್ಜಿಗೆ, ಪಾನಕ, ಪುಳಿಯೋಗರೆ, ಮೊಸರನ್ನ ನೀಡಿದರು. ಸಚಿವ ಕೆ.ಸಿ.ನಾರಾಯಣಗೌಡ, ಲಕ್ಷ್ಮೀಪುರ ಗ್ರಾಮದ ದೇವಿಯ ಒಕ್ಕಲಿನ ಬೂನಾಸಿ, ಕೆಂಚಮ್ಮ, ದೊಡ್ಡಹಟ್ಟಿ, ಮಾರಮ್ಮ ವಠಾರದ ಮುಖಂಡರು ಭಾಗವಹಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು