ಗುರುವಾರ , ಅಕ್ಟೋಬರ್ 22, 2020
22 °C
ನಗರಕ್ಕೆ ಕಾಂಗ್ರೆಸ್‌ ಮುಖಂಡರ ಭೇಟಿ, ರಾರಾಜಿಸುತ್ತಿವೆ, ಕಟೌಟ್‌, ಫ್ಲೆಕ್ಸ್‌ಗಳು

ಮಂಡ್ಯ: ಕೋವಿಡ್‌ ಭಯದಲ್ಲಿ ಕೆಪಿಸಿಸಿ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಕೋವಿಡ್‌ ಹರಡುತ್ತಿರುವ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಶನಿವಾರ ನಗರದಲ್ಲಿ ರೈತ ಸಮ್ಮೇಳನ ಆಯೋಜಿಸಿದೆ. 1,500 ರೈತರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು ಪರಸ್ಪರ ಅಂತರ ಕಾಯ್ದುಕೊಳ್ಳುವುದು ಕಾಂಗ್ರೆಸ್‌ ಕಾರ್ಯಕರ್ತರಿಗೆ ಸವಾಲಾಗಿದೆ.

ಅಂಬೇಡ್ಕರ್‌ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಸಮಾರಂಭ ನಡೆಯಲಿದ್ದು ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಕಾಂಗ್ರೆಸ್‌ ಮುಖಂಡರು ನಗರಕ್ಕೆ ಭೇಟಿ ನೀಡುತ್ತಿದ್ದಾರೆ. ಭವನದ ಮುಂದೆ ಕಾಂಗ್ರೆಸ್‌ ಮುಖಂಡರ ಫ್ಲೆಕ್ಸ್‌, ಕಟೌಟ್‌ಗಳು ರಾರಾಜಿಸುತ್ತಿದ್ದು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಮುಖಂಡರ ಶಕ್ತಿ ಪ್ರದರ್ಶನ ಎಂದೇ ಹೇಳಲಾಗುತ್ತಿದೆ. ಆದರೆ ಕೋವಿಡ್‌ ಅವಧಿಯಲ್ಲಿ ಇಂತಹ ದೊಡ್ಡ ಸಮಾವೇಶದ ಅವಶ್ಯಕತೆ ಇದೆಯೇ ಎಂದು ಕೆಲವು ಪ್ರಶ್ನೆ ಮಾಡುತ್ತಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿ ವಿರೋಧಿಸಿ ಕಾಂಗ್ರೆಸ್‌ ನಡೆಸುತ್ತಿರುವ ಹೋರಾಟದ ಭಾಗವಾಗಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇಲ್ಲಿ ಭಾಗವಹಿಸುವ ಎಲ್ಲಾ ರೈತರ ಸಹಿ ಸಂಗ್ರಹ ಮಾಡಿ ರಾಷ್ಟ್ರಪತಿಗೆ ಕಳುಹಿಸುವ ಉದ್ದೇಶ ಹೊಂದಲಾಗಿದೆ. ರೈತ ಮುಖಂಡರು ಈ ಸಂದರ್ಭದಲ್ಲಿ ವಿಚಾರ ಮಂಡಿಸಲಿದ್ದಾರೆ.

ಜಿಲ್ಲೆಯ ವಿವಿಧ ಹಳ್ಳಿಗಳಿಂದ ರೈತರನ್ನು ಕರೆತರಲಾಗುತ್ತಿದ್ದು ಅದಕ್ಕಾಗಿ  ಬಸ್‌ ವ್ಯವಸ್ಥೆ ಮಾಡಲಾಗಿದೆ. ವಾಹನದಲ್ಲಿ ಕೂಡ ಅಂತರ ಕಾಪಾಡಿಕೊಳ್ಳುವುದು ಕಾರ್ಯಕರ್ತರಿಗೆ ಸವಾಲಾಗಿದೆ.

‘ಕಾಯ್ದೆ ತಿದ್ದುಪಡಿ ವಿರುದ್ಧದ ಹೋರಾಟದಲ್ಲಿ ಅರ್ಥವಿದೆ. ಆದರೆ ಹೋರಾಟದ ಹೆಸರಿನಲ್ಲಿ ಕೋವಿಡ್‌ ಹರಡುತ್ತಿರುವ ವೇಳೆ ರೈತರನ್ನು ಕರೆತಂದು ರೋಗ ಹರಡುವಂತೆ ಮಾಡುವುದರಲ್ಲಿ ಅರ್ಥವಿಲ್ಲ. ಮುಖಂಡರಿಗೆ ಕೋವಿಡ್‌ ಬಂದರೆ ಮಣಿಪಾಲ್‌ನಂತರ ದೊಡ್ಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆದರೆ ಬಡ ರೈತರು ಕೋವಿಡ್‌ ಕೇರ್‌ ಕೇಂದ್ರಗಳಲ್ಲೇ ನರಳಬೇಕು. ಸಮಾವೇಶಕ್ಕೆ ಹೋಗಬೇಕೋ, ಬೇಡವೋ ಎಂಬ ಬಗ್ಗೆ ಭಯವಿದೆ’ ಎಂದು ಇಂಡುವಾಳು ಗ್ರಾಮದ ರೈತರೊಬ್ಬರು ಆತಂಕ ವ್ಯಕ್ತಪಡಿಸಿದರು.

‘ಸಭಾಂಗಣದ ಒಳಗೆ 750 ರೈತರನ್ನು ಕೂರಿಸಲಾಗುವುದು. ಕಾಂಗ್ರೆಸ್‌ ಕಾರ್ಯಕರ್ತರನ್ನು ಹೊರಗೆ ಹಾಕಿರುವ ಬೃಹತ್‌ ಎಲ್‌ಇಡಿ ಪರದೆ ಮುಂದೆ ಕೂರಿಸಲಾಗುವುದು. ಅಂತರ ಕಾಯ್ದುಕೊಲ್ಳಲು ಆದ್ಯತೆ ನೀಡಲಾಗುವುದು’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್‌ ಹೇಳಿದರು.

ಸ್ಥಳದಲ್ಲಿ 10 ವೈದ್ಯರ ತಂಡ

‘ಅಂಬೇಡ್ಕರ್‌ ಭವನದ ಆವರಣದಲ್ಲಿ 10 ವೈದ್ಯರ ತಂಡ ಸಮಾವೇಶಕ್ಕೆ ಬರುವ ಎಲ್ಲಾ ರೈತರ ಆರೋಗ್ಯ ತಪಾಸಣೆ ನಡೆಸಲಿದೆ‘ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದರು.

‘ಸಮ್ಮೇಳನಕ್ಕೆ ಬರುವ ಎಲ್ಲರಿಗೂ ಉಚಿತವಾಗಿ ಮಾಸ್ಕ್‌ ವಿತರಣೆ ಮಾಡಲಾಗುವುದು. ಥರ್ಮಲ್‌ ಸ್ಕ್ಯಾನರ್ ಮೂಲಕ ತಪಾಸಣೆ ಮಾಡಲಾಗುವುದು. ಸ್ಯಾನಿಟೈಸರ್‌ ವಿತರಣೆ ಮಾಡಲಾಗುವುದು. ಭವನದ ಒಳಗೆ ಇಬ್ಬರ ನಡುವೆ ಒಂದು ಸೀಟ್‌ ಖಾಲಿ ಬಿಟ್ಟು ರೈತರನ್ನು ಕೂರಿಸಲಾಗುವುದು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು