ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಕೆರೆಯಂಗಳಕ್ಕೆ ಮೂಲಸೌಲಭ್ಯ ಮರೀಚಿಕೆ

ಅಭಿವೃದ್ಧಿ ಕಾಣದ ವಿವೇಕಾನಂದ ನಗರ, ಕೆಎಚ್‌ಬಿ ಕಾಲೊನಿ, ಬೀಡಿ ಕಾರ್ಮಿಕರ ಬಡಾವಣೆ
ಮೋಹನ್‌ ರಾಗಿಮುದ್ದನಹಳ್ಳಿ
Published 14 ಮೇ 2024, 5:34 IST
Last Updated 14 ಮೇ 2024, 5:34 IST
ಅಕ್ಷರ ಗಾತ್ರ

ಮಂಡ್ಯ: ಮೂಲ ಸೌಲಭ್ಯಗಳಿಂದ ವಂಚಿತವಾಗಿರುವ ಕೆರೆಯಂಗಳ ಬಡಾವಣೆ ಕುರುಚಲು ಕಾಡಿನಂತಾಗಿದೆ. ಬಡಾವಣೆಯಾದ್ಯಂತ ಗಿಡಗಂಟಿ, ಮುಳ್ಳು ಬೆಳೆದು ನಿಂತಿದ್ದು ನಿವಾಸಿಗಳು ಅಪಾಯದ ನಡುವೆ ಜೀವನ ನಡೆಸುತ್ತಿದ್ದಾರೆ.

ವಿವೇಕಾನಂದ ನಗರ, ಕೆಎಚ್‌ಬಿ ಕಾಲೊನಿ, ಬೀಡಿ ಕಾರ್ಮಿಕರ ಕಾಲೊನಿ, ಮಹಾರಾಜ ನಗರ ಸೇರಿದಂತೆ ಕೆರೆಯಂಗಳ ಬಡಾವಣೆ ರೂಪಗೊಂಡಿದೆ. ಮಂಡ್ಯ ಕೆರೆಯನ್ನು ಮುಚ್ಚಿದ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗೃಹಮಂಡಳಿ, ನಗರಸಭೆಯು ಬಡಾವಣೆಯನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಿಲ್ಲ.

ಸ್ವಂತ ಸೂರಿನ ಕನಸಿನೊಂದಿಗೆ ಸಾಲ ಸೂಲ ಮಾಡಿ ನಿವೇಶನ ಖರೀದಿಸಿದ ನಿವಾಸಿಗಳು ಬಡಾವಣೆ ಅಭಿವೃದ್ಧಿಯ ನಿರೀಕ್ಷೆಯಲ್ಲೇ ಇದ್ದಾರೆ. ದಶಕಗಳು ಉರುಳಿ ಹೋಗುತ್ತಿದ್ದರೂ ಇಲ್ಲಿಯವರೆಗೆ ಬಡಾವಣೆ ಅಭಿವೃದ್ಧಿಯ ಮಾತು ಮರೀಚಿಕೆಯಾಗಿಯೇ ಉಳಿದಿದೆ.

ಬಡಾವಣೆ ಅಭಿವೃದ್ಧಿಗೊಳಿಸದಿದ್ದರೂ ನಿವಾಸಿಗಳು ನಿವೇಶನ ಖರೀದಿ ಮಾಡಿ ಮನೆ ಕಟ್ಟಿದ್ದಾರೆ. ಕೊಳಚೆ ನೀರು ಹರಿದು ಹೋಗಲು ಸಮರ್ಪಕವಾದ ಚರಂಡಿ ಸೌಲಭ್ಯವಿಲ್ಲ. ರಸ್ತೆ ದುರಸ್ತಿಯೂ ಆಗದ ಕಾರಣ ಮಳೆ ಬಂದರೆ ಇಡೀ ಬಡಾವಣೆ ಕೆಸರುಮಯವಾಗುತ್ತದೆ. ಜಾಗವನ್ನು ಎತ್ತರಿಸದೇ ಕೆರೆಯನ್ನೇ ನಿವೇಶನವಾಗಿ ಹಂಚಿಕೆ ಮಾಡಲಾಗಿದ್ದು ಈಗಲೂ ಕೆರೆಯಂತೆಯೇ ನೀರು ಸಂಗ್ರಹವಾಗುತ್ತದೆ.

ಸದ್ಯ ಈಗ ಮಳೆ ಬರುತ್ತಿದ್ದು ಎಲ್ಲೆಂದರಲ್ಲಿ ನೀರು ನಿಂತಿದೆ. ತೇವಾಂಶ ವಾತಾವರಣದಿಂದಾಗಿ ಹಾವುಗಳು ಕಾಣಿಸಿಕೊಳ್ಳುತ್ತಿದ್ದು ಜನರು ಭಯಪೀಡಿತರಾಗಿದ್ದಾರೆ. ಬೀಡಿ ಕಾರ್ಮಿಕರ ಕಾಲೊನಿಯು ಕೊಳಚೆ ಗುಂಡಿಯಂತಾಗಿದ್ದು ಜನರು ರೋಗಭೀತಿ ಅನುಭವಿಸುತ್ತಿದ್ದಾರೆ.

‘ನಿವೇಶನ ಮತ್ತು ಕಟ್ಟಿರುವ ಮನೆಗಳಿಗೆ ಕಂದಾಯ ಕಟ್ಟುತ್ತೇವೆ, ವಿದ್ಯುತ್‌ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ, ಕತ್ತಲು ಆವರಿಸಿಕೊಳ್ಳುತ್ತಿದ್ದು ರಾತ್ರಿ ಸಂಚರಿಸಲು ಭಯ ಪಡುವ ಸ್ಥಿತಿಯಿದೆ. ಅಧಿಕಾರಿಗಳು ಇತ್ತಕಡೆ ಗಮನ ಹರಿಸಿಬೇಕು’ ಎಂದು ನಿವಾಸಿಗಳಾದ ವೆಂಕಟೇಶ್, ಆನಂದ್‌, ವಿಶ್ವನಾಥ್‌ ಒತ್ತಾಯಿಸಿದರು.

‘ರಾತ್ರಿಯಾದರೆ ಸಾಕು ಮದ್ಯಪ್ರಿಯರಿಗೆ ಕೆರೆಯಂಗಳ ಸ್ವರ್ಗವಾಗಿದೆ. ಕಾಡಿನಂತೆ ಗಿಡಗಂಟೆ ಬೆಳೆದು ನಿಂತಿರುವುದರಿಂದ ಅಲ್ಲಲ್ಲಿ ಮದ್ಯಪಾನ ಮಾಡುತ್ತಾರೆ. ಕುಡಿದ ನಂತರ ಬಾಟೆಲ್‌ಗಳನ್ನು ಬಿಸಾಡಿ ಹೋಗುತ್ತಾರೆ. ಹೀಗಾದರೆ ನಾವು ಇಲ್ಲಿ ವಾಸಿಸುವುದಾದರೂ ಹೇಗೆ? ವಿದ್ಯುತ್‌ ಕಂಬಗಳಿಗೆ ಸುರಳಿ ಆಕಾರದ ಗಿಡಗಳು ಸುತ್ತಿಕೊಂಡು ಅಪಾಯದ ಸ್ಥಿತಿ ಇದೆ’ ಎಂದು ನಿವಾಸಿಗಳಾದ ಹರೀಶ್‌, ಅಜಯ್‌, ಪ್ರವೀಣ್‌ ಹೇಳಿದರು.

ನಗರಸಭೆಯಿಂದ ಎಲ್ಲ ಸೌಲಭ್ಯ ಸಿಗುತ್ತದೆ ಎಂಬುವ ನಿರೀಕ್ಷೆ ಇತ್ತು. ಆದರೆ ನಗರಸಭೆ ಅಧಿಕಾರಿಗಳು ಯಾವುದೇ ಜವಾಬ್ದಾರಿ ವಹಿಸಿಕೊಳ್ಳುತ್ತಿಲ್ಲ. ಮಂಡ್ಯ ನಗರದ ಹೃದಯ ಭಾಗದಲ್ಲಿದ್ದರೂ ಇಡೀ ಬಡಾವಣೆ ಪಾಳು ಕೊಂಪೆಯಂತಿದೆ ಎಂದು ನಿವಾಸಿಗಳು ಆರೋಪಿಸುತ್ತಾರೆ.

‘ಕೆರೆಯಂಗಳ ಬಡಾವಣೆಯನ್ನು ಪರಿಶೀಲಿಸಿ ಮೂಲ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗುವುದು. ಈ ಬಗ್ಗೆ ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ, ಗೃಹಮಂಡಳಿ ಅಧಿಕಾರಿಗಳ ಸಭೆ ನಡೆಸಲಾಗುವುದು’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.

ಕಳ್ಳಕಾಕರ ಕಾಟ

ಕೇಂದ್ರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕೆರೆಯಂಗಳ ಬಡಾವಣೆ ಇದೆ. ಇಡೀ ಬಡಾವಣೆಯಲ್ಲಿ ಸಂಜೆಯಾದರೆ ಸಾಕು ಕಳ್ಳಕಾಕರ ಭಯ ಸಾರ್ವಜನಿಕರನ್ನು ಕಾಡುತ್ತದೆ. ಮಹಿಳೆಯರ ಸರಗಳ್ಳತನದ ಜೊತೆಗೆ ಮನೆಯಲ್ಲೂ ಕಳ್ಳತನ ನಡೆಯುವ ಪ್ರಕರಣಗಳು ಆಗಾಗ ವರದಿಯಾಗುತ್ತವೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೂ ಕಳ್ಳತನ ಪ್ರಕರಣಗಳು ಕಡಿಮೆಯಾಗಿಲ್ಲ ಎಂದು ನಿವಾಸಿಗಳು ಆರೋಪಿಸುತ್ತಾರೆ. ಗಿಡಗಂಟಿಗಳ ಬಳಿ ಮದ್ಯಪಾನ ಮಾಡುವ ಜೊತೆಗೆ ಹಲವರು ಅನೈತಿಕ ಚಟುವಟಿಕೆಗಳನ್ನೂ ನಡೆಸುತ್ತಾರೆ. ರಾತ್ರಿಯ ವೇಳೆ ಪೊಲೀಸ್‌ ಬೀಟ್‌ ವ್ಯವಸ್ಥೆಯೂ ಸಮಪರ್ಕವಾಗಿ ಇಲ್ಲದ ಕಾರಣ ಕಿಡಿಗೇಡಿಗಳು ಬಡಾವಣೆಯನ್ನು ಅನೈತಿಕ ಚಟುವಟಿಕೆಗಳ ತಾಣ ಮಾಡಿಕೊಂಡಿದ್ದಾರೆ. ಮುಂದಾದರೂ ಪೊಲೀಸರು ಬಡಾವಣೆಯಲ್ಲಿ ಸರಿಯಾಗಿ ಬೀಟ್‌ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT