ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಲ್ವಡಿ ಕೃಷ್ಣರಾಜ ಒಡೆಯರ್ ಪಾರ್ಕ್ | ನಿರ್ವಹಣೆ ಕೊರತೆ: ಸೊರಗಿದ ಉದ್ಯಾನ

Published : 21 ಸೆಪ್ಟೆಂಬರ್ 2024, 6:16 IST
Last Updated : 21 ಸೆಪ್ಟೆಂಬರ್ 2024, 6:16 IST
ಫಾಲೋ ಮಾಡಿ
Comments

ಮಳವಳ್ಳಿ: ಪಟ್ಟಣದ ದೊಡ್ಡಕೆರೆಯ ದಡದ ನಾಲ್ವಡಿ ಕೃಷ್ಣರಾಜ ಒಡೆಯರ್ ಪಾರ್ಕ್ ನಿರ್ವಹಣೆ ಕೊರತೆಯಿಂದ ಸೊರಗಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದ ಉದ್ಯಾನ ಇದೀಗ ಅವ್ಯವಸ್ಥೆಯ ಆಗರವಾಗಿದೆ.

2016ಕ್ಕಿಂತ ಮೊದಲು ಮಳವಳ್ಳಿ ಪಟ್ಟಣದ ದೊಡ್ಡಕೆರೆಯ ಬಯಲು ಮಲ-ಮೂತ್ರ ವಿಸರ್ಜನೆಯ ಪ್ರದೇಶವಾಗಿ ಸಾರ್ವಜನಿಕರು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ಶಾಸಕ ಪಿ.ಎಂ. ನರೇಂದ್ರಸ್ವಾಮಿ ಕಾವೇರಿ ನೀರಾವರಿ ನಿಗಮದ ಮೂಲಕ ₹5 ಕೋಟಿ ಅನುದಾನ ಬಿಡುಗಡೆ ಮಾಡಿಸಿ ಕೆರೆ ಹೂಳೆತ್ತುವ ಹಾಗೂ ಕೆರೆಯ ದಡದಲ್ಲಿ ವಾಕಿಂಗ್ ಟ್ರ್ಯಾಕ್, ಮಧ್ಯಭಾಗದ ನಡುಗಡ್ಡೆಯಲ್ಲಿ ಪಾರ್ಕ್ ನಿರ್ಮಾಣ ಮಾಡಿ ವಾಯುವಿಹಾರಿಗಳಿಗೆ ಅನುಕೂಲ ಕಲ್ಪಿಸಿದ್ದರು. ಉದ್ಯಾನದ ನಿರ್ವಹಣೆಯ ಜವಾಬ್ದಾರಿಯನ್ನು ಕಾವೇರಿ ನೀರಾವರಿ ನಿಗಮಕ್ಕೆ ವಹಿಸಲಾಗಿತ್ತು.

ಆದರೆ ನಾಲ್ಕೈದು ವರ್ಷಗಳಿಂದ ನಿರ್ವಹಣೆ ಕೊರತೆ ಎದುರಾಗಿದೆ. ನಾಲ್ಕೈದು ದಿನಗಳ ಹಿಂದಷ್ಟೇ ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ಮತ್ತು ಉಪಾಧ್ಯಕ್ಷ ಎನ್.ಬಸವರಾಜು(ಜಯಸಿಂಹ) ಅವರು ಕಾವೇರಿ ನೀರಾವರಿ ನಿಗಮದ ಸಿಬ್ಬಂದಿ ಜತೆಗೂಡಿ ವಾಕಿಂಗ್ ಟ್ರ್ಯಾಕ್‌ನ ಎರಡು ಬದಿಯಲ್ಲೂ ಗಿಡ-ಗಂಟಿಗಳನ್ನು ತೆಗೆಯಲಾಗಿದೆ. ನೆಲಹಾಸಿಗೆ ಹಾಕಿದ್ದ ಸಿಮೆಂಟ್ ಟೈಲ್ಸ್, ಎರಡು ಬದಿಯ ಸಿಮೆಂಟ್ ತಡೆಗೋಡೆಗಳೆಲ್ಲಾ ಕಿತ್ತು ಹೋಗಿವೆ. ಇಂಥ ಅವ್ಯವಸ್ಥೆಗಳನ್ನು ಸರಿಪಡಿಸುವಲ್ಲಿ ಅಧಿಕಾರಿಗಳು ಹಾಗೂ ವಿಫಲರಾಗಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಸೋಲಾರ್ ದೀಪಗಳ ಕಳವು: ‘ಪಾರ್ಕ್ ನಿರ್ಮಾಣದ ವೇಳೆ ಸುಮಾರು ₹10 ಲಕ್ಷ ವೆಚ್ಚದಲ್ಲಿ ಅಳವಡಿಸಿದ್ದ ಸುಮಾರು 95 ಸೋಲಾರ್ ದೀಪಗಳು ಸಂಪೂರ್ಣವಾಗಿ ಹಾಳಾಗಿವೆ. ಬಹುತೇಕ ಕಂಬಗಳಲ್ಲಿನ ಬ್ಯಾಟರಿ ಮತ್ತು ದೀಪಗಳನ್ನು ಕಳ್ಳರು ಕಳ್ಳತನ ಮಾಡಿದ್ದಾರೆ. ಸಂಜೆ ವೇಳೆ ವಾಯುವಿಹಾರಿಗಳಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಹಾಕಿದ್ದ ದೀಪಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಕಳ್ಳರ ಪಾಲಾಗಿದೆ. ಇದರಿಂದ ಅನೈತಿಕ ಚಟುವಟಿಕೆಗೆ ದಾರಿ ಮಾಡಿ ಕೊಟ್ಟಂತಾಗಿದೆ’ ಎಂದು ನಿವೃತ್ತ ನೌಕರ ನೀಲಕಂಠಯ್ಯ ಆರೋಪಿಸುತ್ತಾರೆ.

ಹಗ್ಗಜಗ್ಗಾಟ: ಪಾರ್ಕ್ ನಿರ್ವಹಣೆ ಸಂಬಂಧ ಕಾವೇರಿ ನೀರಾವರಿ ನಿಗಮ ಮತ್ತು ಪುರಸಭೆ ನಡುವೆ ಹಗ್ಗಜಗ್ಗಾಟ ನಡೆಯುತ್ತಿರುವುದು ಅವ್ಯವಸ್ಥೆಗೆ ಕಾರಣವಾಗಿದೆ. ಐದು ವರ್ಷಗಳಿಂದ ಪಾರ್ಕ್ ಹಸ್ತಾಂತರ ಮಾಡಿಕೊಳ್ಳುವಂತೆ ಐದಾರು ಪತ್ರ ಬರೆದರೂ ಪುರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎನ್ನುವುದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಾದ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಪುರಸಭೆ ಮುಖ್ಯಾಧಿಕಾರಿ ಎಂ.ಸಿ. ನಾಗರತ್ನ ‘ನಾನು ಬಂದ ಮೇಲೆ ಯಾವುದೇ ಪತ್ರ ಬಂದಿಲ್ಲ. ಪಾರ್ಕ್‌ನ ನ್ಯೂನತೆಗಳನ್ನು ಸರಿಪಡಿಸಿದರೆ ಅಧ್ಯಕ್ಷರೊಂದಿಗೆ ಚರ್ಚಿಸಿ ಹಸ್ತಾಂತರ ಮಾಡಿಕೊಳ್ಳುವ ಚಿಂತನೆ ನಡೆಸಲಾಗುವುದು’ ಎಂದು ಹೇಳಿದರು.

ಅಭಿವೃದ್ಧಿಗೆ ನಿರ್ಧಾರ: ‘ಈಗಾಗಲೇ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಸಭೆ ನಡೆಸಿದ್ದು, ಉದ್ಯಾನಕ್ಕೆ ಅನುದಾನ ನೀಡಿದ್ದಾರೆ. ಸದ್ಯದಲ್ಲಿಯೇ ನಾಲ್ವಡಿ ಕೃಷ್ಣರಾಜ ಒಡೆಯರ್ ಪಾರ್ಕ್‌ನ ಅವ್ಯವಸ್ಥೆ ಸರಿಪಡಿಸಿ ಮತ್ತಷ್ಟು ಅಭಿವೃದ್ಧಿಪಡಿಸಿ ಪುರಸಭೆಗೆ ಹಸ್ತಾಂತರಿಸಲಾಗುವುದು’ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ‘ಪ್ರಜಾವಾಣಿಗೆ ಮಾಹಿತಿ ನೀಡಿದರು.

ನಾನು ಅಧ್ಯಕ್ಷನಾದ ಬಳಿಕ ನಾಲ್ವಡಿ ಕೃಷ್ಣರಾಜ ಒಡೆಯರ್ ಸೇರಿದಂತೆ ಇತರೆ ಉದ್ಯಾನಗಳ ಸ್ವಚ್ಛತೆಗೆ ಆದ್ಯತೆ ನೀಡಿರುವೆ. ಕೆರೆಯ ದಡದ ಪಾರ್ಕ್ ಹಸ್ತಾಂತರ ಮಾಡಿಕೊಳ್ಳುವ ಸಂಬಂಧ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗಿದೆ.
ಪುಟ್ಟಸ್ವಾಮಿ, ಅಧ್ಯಕ್ಷ, ಮಳವಳ್ಳಿ, ಪುರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT