ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ಜಿಲ್ಲೆಯ ಮೊದಲ ಪಂಚಾಯಿತಿ ವೆಬ್‌ಸೈಟ್‌ ಆರಂಭ

ಎರಡು ಬಾರಿ ಗಾಂಧಿ ಪುರಸ್ಕಾರ ಪಡೆದ ನಗುವನಹಳ್ಳಿಯಲ್ಲಿ ನಡೆದ ಕಾರ್ಯಕ್ರಮ
Last Updated 1 ಜನವರಿ 2020, 12:41 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ನಗುವನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ವೆಬ್‌ಸೈಟ್‌ (http://naguvanahalligp.in) ಅನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಾಗವೇಣಿ ಬುಧವಾರ ಉದ್ಘಾಟಿಸಿದರು.

‘ಗ್ರಾಮ ಪಂಚಾಯಿತಿಯ ಸಮಗ್ರ ಮಾಹಿತಿಯನ್ನು ಒಳಗೊಂಡಿರುವ ವೆಬ್‌ಸೈಟ್‌ ಆರಂಭಿಸಲಾಗಿದೆ. ಸ್ವಂತ ವೆಬ್‌ಸೈಟ್‌ ಹೊಂದಿರುವ ಜಿಲ್ಲೆಯ ಮೊದಲ ಗ್ರಾಮ ಪಂಚಾಯಿತಿ ಇದಾಗಿದೆ. ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ, ಕೈಗೊಂಡಿರುವ ಕಾಮಗಾರಿಗಳು, ಪ್ರಗತಿಯಲ್ಲಿ ಅಭಿವೃದ್ಧಿ ಕಾರ್ಯ, ವಸತಿ ಮತ್ತು ನರೇಗಾ ಯೋಜನೆ, ಶಾಲೆಗಳು, ಅಂಗನವಾಡಿ, ಜನಸಂಖ್ಯೆ ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಗ್ರ ಮಾಹಿತಿ ಈ ವೆಬ್‌ಸೈಟ್‌ನಲ್ಲಿ ಸಿಗಲಿದೆ’ ಎಂದು ನಾಗವೇಣಿ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ್‌ ಮಾತನಾಡಿ, ‘ನಗುವನಹಳ್ಳಿ ಗ್ರಾಮ ಪಂಚಾಯಿತಿಯು ಎರಡು ಬಾರಿ ಗಾಂಧಿ ಪುರಸ್ಕಾರ ಹಾಗೂ ಒಂದು ಬಾರಿ ಸ್ವಚ್ಛ ಗ್ರಾಮ ಪುರಸ್ಕಾರ ಪಡೆದಿದ್ದು, ರಾಷ್ಟ್ರ ಪ್ರಶಸ್ತಿ ಪಡೆಯುವತ್ತ ಹೆಜ್ಜೆ ಇಟ್ಟಿದೆ. ತಾಲ್ಲೂಕಿನ ಅತ್ಯುತ್ತಮ ಗ್ರಾಮ ಪಂಚಾಯಿತಿ ಎಂದು ಹೆಸರು ಪಡೆದಿದ್ದು, ಇತರ ಪಂಚಾಯಿತಿಗಳಿಗೆ ಮಾದರಿಯಾಗಿದೆ’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶಿವಲಿಂಗಯ್ಯ, ‘ನಗುವನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯ ಸಂಪೂರ್ಣ ಸೋಲಾರ್‌ ಶಕ್ತಿ ಆಧಾರಿತ ಕಚೇರಿಯಾಗಿದೆ. ಪರಿಶಿಷ್ಟರ ಕಾಲೊನಿಗಳಿಗೆ ಸೋಲಾರ್‌ ದೀಪ ಅಳವಡಿಸಲಾಗಿದೆ. ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಿದ್ದು, ಹಸಿ ಮತ್ತು ಒಣ ಕಸ ಪ್ರತ್ಯೇಕಿಸುವ ಪ್ರಕ್ರಿಯೆ ಆರಂಭವಾಗಿದೆ. ಇ– ಗ್ರಂಥಾಲಯ ಆರಂಭಿಸಲು ಸಿದ್ಧತೆ ನಡೆದಿದೆ. ತೆರಿಗೆ ವಸೂಲಿಯಲ್ಲಿ ಶೇ 80ರಷ್ಟು ಸಾಧನೆ ಮಾಡಿದ್ದು, ತಾಲ್ಲೂಕಿನಲ್ಲಿ ಪ್ರಥಮ ಸ್ಥಾನದಲ್ಲಿದೆ’ ಎಂದು ವಿವರಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ನಂದಕುಮಾರ್‌, ‘ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಿಸಲು ವಾಹನ ಖರೀದಿಸಲಾಗಿದೆ. ಶವ ಸಾಗಿಸಲು ವಾಹನ ಖರೀದಿ ಪ್ರಯತ್ನ ನಡೆಯುತ್ತಿದೆ. ಸ್ಮಶಾನದಲ್ಲಿ ಬೆಂಚ್‌ಗಳನ್ನು ಅಳವಡಿಸಿದ್ದೇವೆ. ಪ್ಲಾಸ್ಟಿಕ್‌ ಮುಕ್ತ ಗ್ರಾಮ ಪಂಚಾಯಿತಿ ಮಾಡಲು ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.

ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎನ್‌. ಪ್ರಕಾಶ್‌, ‘ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು’ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯೋಗೇಶ್‌, ಸದಸ್ಯರಾದ ನಾಗೇಂದ್ರು, ಭಾಸ್ಕರ್‌, ಮೋಹನಕುಮಾರ್‌, ರಮೇಶ್‌, ಎನ್‌. ಯೋಗೇಶ್‌, ವಸಂತ, ವನಜಾಕ್ಷಿ, ದೇವಮ್ಮ, ಮುಖಂಡರಾದ ಎನ್‌.ವಿ. ಚಲುವರಾಜು, ವೆಂಕಟೇಶ್, ಎನ್‌. ಶಿವಸ್ವಾಮಿ, ವಾಸು, ಕೃಷ್ಣಪ್ಪ, ಜಯರಾಂ ಇದ್ದರು.

ಗ್ರಾ.ಪಂ. ಸಿಬ್ಬಂದಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT