ಚಿರತೆ ಸೆರೆ, ಪರಿಹಾರಕ್ಕಾಗಿ ಪ್ರತಿಭಟನೆ

ಕೊಪ್ಪ: ಸಮೀಪದ ಅವ್ವೇರಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಚಿರತೆಯೊಂದು ಬೋನಿಗೆ ಬಿದ್ದಿದೆ.
ಸಾಕು ಪ್ರಾಣಿಗಳನ್ನು ಚಿರತೆ ಕೊಂದು ತಿನ್ನುತ್ತಿದೆ ಎಂಬ ದೂರುಗಳು ಕೇಳಿ ಬಂದಿದ್ದರಿಂದ ಗ್ರಾಮದ ಹೊರ ವಲಯದಲ್ಲಿ ಬೋನು ಇರಿಸಿ ನಾಯಿಯನ್ನು ಕಟ್ಟಿ ಹಾಕಲಾಗಿತ್ತು. ನಾಯಿಯನ್ನು ತಿನ್ನಲು ಬಂದಿದ್ದ 1 ವರ್ಷದ ಹೆಣ್ಣು ಚಿರತೆ ಸೆರೆಯಾಗಿದೆ.
ಹಲವು ತಿಂಗಳಿಂದ ಅವ್ವೇರಹಳ್ಳಿ, ಟಿ.ಬಳ್ಳೆಕೆರೆ ಹಾಗೂ ಉಪ್ಪಾರಕೊಪ್ಪಲು ಗ್ರಾಮಗಳಲ್ಲಿ ಚಿರತೆ ಕಂಡು ಬಂದಿದ್ದರಿಂದ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದರು.
ಪ್ರತಿಭಟನೆ: ಬೋನಿಗೆ ಬಿದ್ದ ಚಿರತೆ ಯನ್ನು ಅರಣ್ಯಾಧಿಕಾರಿಗಳು ಪರಿಶೀಲಿಸಲು ಮುಂದಾದಾಗ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಚಿರತೆ ಹಾವಳಿಯಿಂದ ರೈತರ ಸಾಕು ಪ್ರಾಣಿಗಳು ಬಲಿಯಾಗಿದೆ. ಮೊದಲು ಪರಿಹಾರ ಕೊಡಿಸಿ ಚಿರತೆ ಕರೆದುಕೊಂಡು ಹೋಗಿ ಎಂದು ಒತ್ತಾಯಿಸಿದರು. ಈ ವೇಳೆ ಅಧಿಕಾರಿಗಳ ಹಾಗೂ ಗ್ರಾಮಸ್ಥರು ನಡುವೆ ಮಾತಿನ ಚಕಮಕಿ ನಡೆಯಿತು.
ತಾಲ್ಲೂಕು ಅರಣ್ಯಾಧಿಕಾರಿ ನಾಗೇಂದ್ರ ಪ್ರಸಾದ್, ಉಪ ವಲಯ ಅರಣ್ಯಾಧಿಕಾರಿ ರತ್ನಾಕರ್ ಗ್ರಾಮಸ್ಥರನ್ನು ಸಮಾಧಾನಪಡಿಸಿ ಚಿರತೆಯನ್ನು ತಾಲ್ಲೂಕು ಅರಣ್ಯಾಧಿಕಾರಿ ಕಚೇರಿಗೆ ಸಾಗಿಸಿದರು. ಮೇಲಧಿಕಾರಿಗಳ ಜತೆ ಚರ್ಚಿಸಿ ಚಿರತೆಯನ್ನು ಎಲ್ಲಿ ಬಿಡಬೇಕು ಎಂಬ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಜಗದೀಶ್, ರಾಘವೇಂದ್ರಕುಮಾರ್, ಬಳ್ಳಕೆರೆ ಗ್ರಾಮದ ನಾಗರಾಜು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.